ಕುಂಟಾರು ತಂತ್ರಿಗಳಿಗೆ ಪುತ್ತೂರು ದೇವಸ್ಥಾನದಿಂದ ಆಮಂತ್ರಣ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿ ಬದಲಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಬಳಿಕ ಇದೀಗ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಅಧಿಕಾರಿಗಳು ಕುಂಟಾರು ರವೀಶ ತಂತ್ರಿ ಅವರ ಮನೆಗೆ  ಶುಕ್ರವಾರ ಸಂಜೆ ತೆರಳಿ ವಾರ್ಷಿಕ ಜಾತ್ರಾ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಗೌರವಪೂರ್ವಕವಾಗಿ ನೀಡಿ  ಜಾತ್ರಾ ಉತ್ಸವ ನಡೆಸಿಕೊಡಲು ಮನವಿ ಮಾಡಿದ್ದಾರೆ.

ತಂತ್ರಿ ಬದಲಾವಣೆ ಹಿನ್ನೆಲೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಡೆಯ ಬಗ್ಗೆ ಭಕ್ತರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ಯಾವುದೇ ಸಮಾಲೋಚನೆ ಮಾಡದೇ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಹಾಗೂ ತಂತ್ರಿ ಸ್ಥಾನವು  ಅತ್ಯಂತ ಗೌರವಪೂರ್ವಕವಾದ ಸ್ಥಾನವಾಗಿದ್ದು, ಏಕಾಏಕಿ ಬದಲಾವಣೆ ಮಾಡುವುದು ಸರಿಯಲ್ಲ ಎಂದು ಭಕ್ತಾದಿಗಳು ದೂರಿದ್ದರು. ಇದಕ್ಕಾಗಿ ಪ್ರತಿಭಟನೆ ನಡೆಸಲೂ ಸಿದ್ದತೆ ನಡೆಸಿದ್ದರು. ಈ ನಡುವೆ ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ತಂತ್ರಿ ಬದಲಾವಣೆಗೆ ತಡೆಯಾಜ್ಞೆ ನೀಡಿತ್ತು.

ಇದೀಗ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಕುಂಟಾರು ರವೀಶ ತಂತ್ರಿ ಅವರ ಮನೆಗೆ ತೆರಳಿ ವಾರ್ಷಿಕ ಜಾತ್ರಾ ಕಾರ್ಯಕ್ರಮಕ್ಕೆ ಗೌರವಪೂರ್ವಕವಾಗಿ ಆಹ್ವಾನ ಮಾಡಿದ್ದಾರೆ.

ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY