ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಂತ್ರಿ ಬದಲಾವಣೆಗೆ ಹೈಕೋರ್ಟ್ ತಡೆಯಾಜ್ಞೆ

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಂತ್ರಿಗಳಾಗಿದ್ದ ಕುಂಟಾರು ರವೀಶ ತಂತ್ರಿ ಅವರ ಬದಲಾವಣೆಗೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಕೆ.ಮುಖರ್ಜಿ ಮತ್ತು ದಿನೇಶ್ ಕುಮಾರ್ ಇವರನ್ನೊಳಗೊಂಡ ಪೀಠ ಗುರುವಾರ ತಡೆಯಾಜ್ಞೆ ನೀಡಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಉತ್ಸವದ ಸಂದರ್ಭ ಕುಂಟಾರು ರವೀಶ ತಂತ್ರಿ ಅವರು ಕಳೆದ ಕೆಲವು ವರ್ಷಗಳಿಂದ ತಂತ್ರಿಗಳಾಗಿ ಸೇವೆ ಮಾಡುತ್ತಿದ್ದರು. ಆದರೆ ಇದೀಗ ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಕುಂಟಾರು ರವೀಶ ತಂತ್ರಿ ಅವರನ್ನು ಬದಲಾಯಿಸಲು ನಿರ್ಣಯ ಮಾಡಿತ್ತು, ಅಲ್ಲದೆ ಅವರ ಬದಲಾಗಿ
ಕೆಮ್ಮಿಂಜೆ ಕಾರ್ತಿಕ ತಂತ್ರಿ ಅವರನ್ನು ದೇವಾಲಯದ ಮುಂದಿನ ತಂತ್ರಿ ಎಂದು ನಿರ್ಣಯ ಕೈಗೊಂಡಿತ್ತು. ಇದೀಗ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕೈಗೊಂಡ ಈ ಎರಡೂ ನಿರ್ಣಯಕ್ಕೆ  ಮಾನ್ಯ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಕುಂಟಾರು ರವೀಶ ತಂತ್ರಿ ಅವರು ಕಳೆದ ಬಾರಿಯ ಕೇರಳ ವಿಧಾನಸಭಾ ಚುನಾವಣೆಯ ಸಂದರ್ಭ ಬಿಜೆಪಿಯಿಂದ ಸ್ಫರ್ಧೆ ಮಾಡಿದ್ದರು. ಇದೇ ನೆಪದಲ್ಲಿ ಬೇರೆ ಕಾರಣ ನೀಡಿ ತಂತ್ರಿಗಳ ಬದಲಾವಣೆ ಮಾಡಿದೆ ಎಂದು ಆರೋಪ ಭಕ್ತರಿಂದ ಬಂದಿದ್ದು.
ತಂತ್ರಿಗಳ ಬದಲಾವಣೆಗೆ ಆಕ್ಷೇಪವಲ್ಲ, ಆದರೆ ಗೌರವಪೂರ್ವಕವಾಗಿರುವ ಈ ಹುದ್ದೆಯಿಂದ ಯಾರನ್ನೇ ಬದಲಾಯಿಸುವ ಸಂದರ್ಭ ಅತ್ಯಂತ ಗೌರವದಿಂದ ಈ ಕೆಲಸ ಮಾಡಬೇಕು ಎಂದು ಭಕ್ತರು ಒತ್ತಾಯಿಸಿದ್ದರು.
ಎಪ್ರಿಲ್ ೧೦ ರಿಂದ  ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಡೆಯಲಿದೆ.

LEAVE A REPLY