ಮೂರು ದಿನಗಳ ಹೆಲಿ ಟೂರಿಸಂಗೆ ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಚಾಲನೆ

ಉಡುಪಿ: ಮಲ್ಪೆ, ಮಣಿಪಾಲ, ಉಡುಪಿ ಆಸುಪಾಸಿನ ವಿವಿಧ ಸ್ಥಳಗಳನ್ನು ವೈಮಾನಿಕವಾಗಿ ವೀಕ್ಷಿಸುವ ಆದಿ ಉಡುಪಿ ಹೆಲಿಪ್ಯಾಡ್‌ನಿಂದ ನಡೆಯುವ ಮೂರು ದಿನಗಳ ಹೆಲಿ ಟೂರಿಸಂಗೆ ಹೆಲಿಪ್ಯಾಡ್‌ನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು ಸುಮಾರು ೧೫ ನಿಮಿಷಗಳ ಕಾಲ ದೀರ್ಘ ಹೋರಾಟ ನಡೆಸಿ, ಹೆಲಿ ಟೂರಿಸಂಗೆ ಚಾಲನೆ ನೀಡಿದರು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅನೇಕ ಸುಂದರ ರಮಣೀಯ ಸ್ಥಳಗಳಿವೆ. ಇವುಗಳನ್ನು ಹೆಲಿಕಾಪ್ಟರ್ ಮೂಲಕ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು, ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಬಹುದು. ಈ ೩ ಜಿಲ್ಲೆಗಳ ನಡುವೆ ಹೆಲಿ ಟೂರಿಸಂ ಆರಂಭಿಸಿ, ಉಡುಪಿಯನ್ನು ಕೇಂದ್ರಸ್ಥಳ ಮಾಡಬೇಕು ಎಂದು ಹೇಳಿದರು.
ಹೆಲಿ ಟೂರಿಸಂ ಆಯೋಜಕ ಸುದೇಶ್ ಶೆಟ್ಟಿ ಮಾತನಾಡಿ, ಉಡುಪಿಯಲ್ಲಿ ಜ. ೧೧ರಿಂದ ೧೩ರ ವರೆಗೆ ಹೆಲಿ ಟೂರಿಸಂ ನಡೆಯಲಿದೆ. ಇದರಲ್ಲಿ ೮ ನಿಮಿಷದ ಸಾಮಾನ್ಯ ಹಾರಾಟ, ೧೦ ನಿಮಿಷದ ಅಡ್ವೆಂಚರ್ ಹಾರಾಟ ಮತ್ತು ೧೩ ನಿಮಿಷಗಳ ದೀರ್ಘ ಹಾರಾಟದ ಪ್ಯಾಕೇಜ್‌ಗಳಿವೆ. ಮೊಬೈಲ್ ಸಂಖ್ಯೆ ೯೭೪೧೨೪೮೭೧೬ ಮತ್ತು ೯೭೪೧೨೪೯೨೩೮ ನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಅದಲ್ಲದೇ ಆದಿ ಉಡುಪಿ ಹೆಲಿಪ್ಯಾಡ್ ಬಳಿ ಸ್ಥಳದಲ್ಲೇ ಬುಕ್ಕಿಂಗ್ ಅವಕಾಶವಿದೆ. ಒಮ್ಮೆ ೬ ಮಂದಿ ಹಾರಾಟ ನಡೆಸಬಹುದಾಗಿದೆ, ೨ ವರ್ಷದೊಳಗಿನ ಮಕ್ಕಳಿಗೆ ಉಚಿತ. ಉಡುಪಿಯಲ್ಲಿ ೪ನೇ ವರ್ಷ ಈ ಕಾರ್ಯಕ್ರಮ ಆಯೋಜಿಸಿದ್ದು, ಪ್ರತಿ ಬಾರಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಚಿಪ್ಸನ್ ಏವಿಯೇಷನ್ ಸಂಸ್ಥೆಯ ಪೈಲೆಟ್ ರಮೇಶ್ ಭೂಮಿನಾಥ್ ಮಾತನಾಡಿ, ಸಾರ್ವಜನಿಕರು ಹೆಲಿ ಕ್ಯಾಪ್ಟರ್ ಹಾರಾಟದ ಅನುಭವವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

LEAVE A REPLY