ಭರದಿಂದ ಸಾಗಿದೆ ಶಿರಾಡಿಯಲ್ಲಿ ರೈಲು ಹಳಿ ದುರಸ್ತಿ ಕಾರ್ಯ

ಸುಬ್ರಹ್ಮಣ್ಯ: ಅತಿವೃಷ್ಠಿಯಿಂದ ಅಲ್ಲಲ್ಲಿ ಭಾರೀ ಗುಡ್ಡ ಕುಸಿತ ಉಂಟಾಗಿ ಮಂಗಳೂರು – ಬೆಂಗಳೂರು ರೈಲು ಸಂಚಾರಕ್ಕೆ ತಡೆಯುಂಟಾಗಿತ್ತು. ಸುಬ್ರಹ್ಮಣ್ಯ ರೋಡ್ ನೆಟ್ಟಣದಿಂದ ಸಕಲೇಶಪುರದ ನಡುವಣ ಎಡಕುಮೇರಿ, ಕೊಡಗರವಳ್ಳಿ ಪ್ರದೇಶದಲ್ಲಿ ಸುಮಾರು 20 ಕಡೆಗಳಲ್ಲಿ ಹಳಿಗಳಿಗೆ ಗುಡ್ಡ ಕುಸಿದು ಬಿದ್ದು  ಒಂದು ತಿಂಗಳಿನಿಂದ ಈ ಹಳಿಯಲ್ಲಿ ರೈಲು ಸಂಚರಿಸಿಲ್ಲ. ಇದೀಗ ಹಳಿಯ ಮೇಲಿದ್ದ ಮಣ್ಣು ತೆರವು ಕಾರ್ಯ ಭರದಿಂದ ನಡೆಯುತ್ತಿದೆ.

ಹಳಿ ಮೇಲೆ ಬಿದ್ದ ಮಣ್ಣಿನ ತೆರವು ಕಾರ್ಯ ಭರದಿಂದ ನಡೆಯುತ್ತಿದ್ದು ಸಿರಿಬಾಗಿಲು ಸಮೀಪ ಕೊಡವರಹಳ್ಳಿ ಬಳಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಜರಿತವಾಗಿತ್ತು. ಈ ಸ್ಥಳದಲ್ಲಿ ಮಾತ್ರ ಈಗ ಕಾಮಗಾರಿ ನಡೆಯುತ್ತಿದೆ. ಸಕಲೇಶಪುರ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದ ನಡುವೆ ಭೂಕುಸಿತ ಸಂಭವಿಸಿತ್ತು. ಬೃಹತ್ ಗಾತ್ರದ ಬಂಡೆಕಲ್ಲು, ಮಣ್ಣು ಹಳಿ ಮೇಲೆ ಅಲ್ಲಲ್ಲಿ ಬಿದ್ದು ಅನಾಹುತ ಸೃಷ್ಟಿಸಿತ್ತು. ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದ ಸಿರಿಬಾಗಿಲು ಮಾರ್ಗ 86 ರ ಬಳಿ ಗುಡ್ಡ ಜರಿದು ಮಣ್ಣು ಬಂಡೆಕಲ್ಲು ರೈಲು ಟೆನಲ್ ಮೇಲೆ ಬಿದ್ದಿತ್ತು. ಇದರಿಂದ 170 ಮೀ ಉದ್ದದ ಟೆನಲ್ ಸಂಪೂರ್ಣ ಮಣ್ಣಿನಡಿ ಸಿಲುಕಿ ಮುಚ್ಚಿತ್ತು.ಇಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸುಮಾರು 13 ಹಿಟಾಚಿಗಳು ಕಳೆದ ಒಂದು ತಿಂಗಳಿಂದ ನಿರಂತರ ಹಗಲು ರಾತ್ರಿ ಪಾಳಿಯಲ್ಲಿ ಹಳಿ ಮೇಲೆ ಬಿದ್ದ ಮಣ್ಣು ತೆರವು ಕಾರ್ಯದಲ್ಲಿ ತೊಡಗಿವೆ. ಸ್ಥಳದಲ್ಲಿ ರೈಲ್ವೆ ಅಧಿಕಾರಿಗಳು, ಸಿಬಂದಿಗಳು ತಾತ್ಕಾಲಿಕ ಟೆಂಟ್ ನಿರ್ಮಿಸಿ ವಾಸವಿದ್ದಾರೆ.

ಸಿರಿಬಾಗಿಲು ಹೊರತು ಪಡಿಸಿ. ಉಳಿದ ಎಲ್ಲ ಕಡೆ ತೆರವು ಪೂರ್ತಿಯಾಗಿ ರೈಲು ಓಡಾಟಕ್ಕೆ ಮಾರ್ಗ ಸಿದ್ಧವಾಗಿದೆ. ಸಿರಿಬಾಗಿಲಿನ ಕೊಡವರಹಳ್ಳಿಯಲ್ಲಿ ಮತ್ತೆ ಗುಡ್ಡ ಕುಸಿಯುತ್ತಿರುವುದು ಕಾಮಗಾರಿಗೆ ಅಡ್ಡಿಯಾಗಿದೆ. ಒಂದೆಡೆ ಟೆನಲ್ ಮೇಲೆ ಬಿದ್ದ ಮಣ್ಣು ತೆರವು ಕಾರ್ಯ ನಡೆಸುತ್ತಿದ್ದಂತೆ ಇನ್ನೊಂದು ಕಡೆ ಗುಡ್ಡ ಜರಿಯುತ್ತಿದೆ.

15ದಿನಗಳಲ್ಲಿ ಸಂಚಾರ ಸಾಧ್ಯತೆ:

ಸಿರಿಬಾಗಿಲು ಬಳಿ ಮಣ್ಣು ತೆರವು ಕಾರ್ಯ ಪೂರ್ಣವಾದ ಬಳಿಕ ಕೆಟ್ಟು ಹೋದ ಸ್ಲೀಪರ್ ಗಳ ಮರುಜೋಡಣೆ, ಕ್ಲಿಪ್ ಬಿಗಿಗೊಳಿಸುವುದು ಮಾರ್ಗದ ಇತರೆ ದೋಷಗಳ ಪರಿಶೀಲನೆ ನಡೆದು ಬಳಿಕ ರೈಲ್ವೆ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಮಾರ್ಗದ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲನೆ ನಡೆಸಿ ಮಾರ್ಗದಲ್ಲಿ ರೈಲು ಓಡಾಟ ನಡೆಸಲು ಸೂಕ್ತವೇ ಎಂಬ ನಿರ್ಧಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ ಬಳಿಕವಷ್ಟೆ ಈ ಮಾರ್ಗದಲ್ಲಿ ರೈಲು ಓಡಾಟ ಪುನಾರರಂಭಗೊಳ್ಳಲಿದೆ. ಮುಂದಿನ ಹದಿನೈದು ದಿನಗಳಲ್ಲಿ ಮಾರ್ಗ ರೈಲು ಓಡಾಟಕ್ಕೆ ಸಿದ್ಧವಾಗುವ ಸಾಧ್ಯತೆ ಇದೆ.

LEAVE A REPLY