ಮಕ್ಕಳ ಸಾಹಿತಿ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ನಿಧನ

ಪುತ್ತೂರು: ರಂಗನಟನಾಗಿ, ಸಾಹಿತಿಯಾಗಿ, ಹಾಡುಗಾರನಾಗಿ ಕನ್ನಡ ನಾಡಿನ ವಿವಿಧ ಶಾಲಾ-ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ 16,000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿ ಮಕ್ಕಳ ಪ್ರೀತಿಯ ಸುಬ್ಬಜ್ಜನೆಂದೇ ಹೆಸರುವಾಸಿಯಾಗಿದ್ದ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ (85) ಅವರು ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಾಲ್ಮರದಲ್ಲಿ ವಾಸವಾಗಿದ್ದ ಬೆಂಡರವಾಡಿ ಸುಬ್ರಹ್ಮಣ್ಯ ಅವರು 50 ವರ್ಷಗಳ ಕಾಲ ಕನ್ನಡ ಸಾಹಿತ್ಯದ ಮೇರು ವ್ಯಕ್ತಿಗಳಾದ ಕೈಲಾಸಂ, ರಾಜರತ್ನಂ, ಕುವೆಂಪು, ಬೇಂದ್ರೆ ಮುಂತಾದವರ ಹಾಡುಗಳನ್ನು ಕರ್ನಾಟಕದ ಹಲವು ಜಿಲ್ಲೆಗಳ ಶಾಲೆ ಶಾಲೆಗಳಿಗೆ ತೆರಳಿ ಕನ್ನಡ ಸಾಹಿತ್ಯಕ್ಕೆ ಧ್ವನಿ ನೀಡಿದ್ದರು. 18 ಮಕ್ಕಳ ಗೀತೆಗಳ ಕಿರು ಹೊತ್ತಗೆಯನ್ನು ತಾವೇ ಬರೆದು ಪ್ರಕಟಿಸಿದ ಹೆಗ್ಗಳಿಗೆ ಬೆಂಡರವಾಡಿಯವರದು.
ದೇರಾಜೆ ಪ್ರಶಸ್ತಿ, ಅಳಿಕೆ ಬಾಲಕೃಷ್ಣ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಬೆಂಡರವಾಡಿಯವರಿಗೆ ನೀಡಿ ಗೌರವಿಸಲಾಗಿದೆ. ಪುತ್ತೂರು ತಾಲೂಕು 2ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಇವರ ಪಾಲಿಗೆ ಒದಗಿ ಬಂದಿತ್ತು.
ಮೃತರು ಪತ್ನಿ, ಮಕ್ಕಳು, ಮೊಮ್ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

LEAVE A REPLY