ಶಿರಾಡಿ ಘಾಟಿ ರಸ್ತೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧ ಸಡಿಲಿಸಲು ಒತ್ತಾಯ

ಗುಂಡ್ಯ(ಪುತ್ತೂರು): ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿ ರಸ್ತೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ಹೇರಲಾಗಿರುವ ನಿಷೇಧವನ್ನು ಸಡಿಲಿಸಿ ಬಸ್ ಮತ್ತು 6 ಚಕ್ರದ ಲಾರಿಗಳ ಸಂಚಾರ ಮುಕ್ತಗೊಳಿಸುವಂತೆ ಸರಕಾರವನ್ನು ಆಗ್ರಹಿಸಿ ಗುಂಡ್ಯದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಶಿರಾಡಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ   ಕಳೆದ 9 ತಿಂಗಳಿನಿಂದ ನಾನಾ ಕಾರಣಗಳನ್ನು ಮುಂದಿಟ್ಟು ಶಿರಾಡಿ ಘಾಟಿ ರಸ್ತೆಯನ್ನು ಮುಚ್ಚಿರುವುದರಿಂದ ದ.ಕ. ಜಿಲ್ಲೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ. ಆದ ಕಾರಣ ತಕ್ಷಣದಿಂದಲೇ ರಸ್ತೆಯಲ್ಲಿ ಕನಿಷ್ಠ ಬಸ್ ಮತ್ತು 6 ಚಕ್ರದ ಲಾರಿಗಳ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ,  ಶಿರಾಡಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸದಸ್ಯರುಗಳಾದ ದಾಮೋದರ್ ಗುಂಡ್ಯ, ಸುಭಾಶ್ ಗುಂಡ್ಯ, ಯತೀಶ್ ಗುಂಡ್ಯ, ಸೂರ್ಯನಾರಾಯಣ ಶಿಶಿಲ, ಸುಧೀರ್ ಕುಮಾರ್ ಅರಸಿನಮಕ್ಕಿ, ಲಾರಿ ಚಾಲಕ-ಮಾಲಕರಾದ ಶರೀಫ್ ಬಿ.ಸಿ.ರೋಡು, ಮಹಮ್ಮದ್ ಅಲ್ತಾಫ್, ಅಶ್ರಫ್, ಮಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY