ಭಗವಂತ ಬೇರೆಯಲ್ಲ, ಭಕ್ತ ಬೇರೆಯಲ್ಲ, ಭಕ್ತನಲ್ಲಿಯೇ ಭಗವಂತನನ್ನು ಕಾಣುವುದು ನಮ್ಮ ಸಂಸ್ಕೃತಿ

  • ವಿ.ಬಿ.ಕುಳಮರ್ವ, ಕುಂಬಳೆ

ಯಾಸಾ ಪದ್ಮಾಸನಸ್ಥಾ ವಿಪುಲ ಕಟಿತಟಿ ಪದ್ಮ ಪತ್ರಾಯ ತಾಕ್ಷೀ
ಗಂಭೀರಾವರ್ತನಾಭಿ ಸ್ತನ ಭರ ನಮಿತ ಶುಭ್ರ ವಸ್ತ್ರೋತ್ತರಿಯಾ ಐ
ಲಕ್ಷ್ಮೀ ರ್ದಿವೈಃ ಗಜೇಂದ್ರೈಃ ಮಣಿಗಣ ಖಚಿತೈಃ ಸ್ಥಾಪಿತಾ ಹೇಮ ಕುಂಭೈಃ
ನಿತ್ಯಂಸಾ ಪದ್ಮಹಸ್ತಾ ಮಮವಸತು ಗೃಹೇ ಸರ್ವಮಾಂಗಲ್ಯ್ಯುಕ್ತಾ ಐಐ
ಶುದ್ಧ ಲಕ್ಷ್ಮೀಃ ಮೋಕ್ಷ ಲಕ್ಷ್ಮೀಃ ಜಯಲಕ್ಷ್ಮೀಃ ಸರಸ್ವತೀ
ಶ್ರೀಲಕ್ಷ್ಮೀಃ ವರಲಕ್ಷ್ಮೀಶ್ಚ ಪ್ರಸನ್ನ ಮಮ ಸರ್ವದಾ ಐಐ

ಭಗವಂತ ಬೇರೆಯಲ್ಲ, ಭಕ್ತ ಬೇರೆಯಲ್ಲ. ಭಕ್ತನಲ್ಲಿಯೇ ಭಗವಂತನನ್ನು ಕಾಣುವುದು ನಮ್ಮ ಸಂಸ್ಕೃತಿ.ಭಗವಂತನ ದಿವ್ಯಾನುಗ್ರಹಕ್ಕೆ ಪಾತ್ರನಾದ ಭಕ್ತನಿಗೂ ಭಗವಂತನಿಗೂ ಭೇದವಿಲ್ಲ. ಭಗವದ್ಭಕ್ತೆಯರಾದ ಮಾತೆಯರು ಸಾಕ್ಷಾತ್ ದೈವ ಸ್ವರೂಪರು.ಅಂತಹ ಮಾತೆಯರು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಲಕ್ಷ್ಮೀ ದೇವಿಯನ್ನು ಪೂಜಿಸಿ ,ಪ್ರಾರ್ಥಿಸಿ ಪುನೀತೆಯರಾಗುವ ಶುಭದಿನವೇ ಶ್ರಾವಣಮಾಸದ ಎರಡನೇ ಶುಕ್ರವಾರ. ಆ ದಿನ ಹಬ್ಬದ ಸಡಗರ ಎಲ್ಲೆಲ್ಲೂ ಕಂಡುಬರುತ್ತದೆ. ಮಹಿಳೆಯರೆಲ್ಲ ಭಕ್ತಿಭಾವನೆಯಿಂದ ಒಟ್ಟಾಗಿ ಒಂದೆಡೆ ಸೇರಿ ಇಷ್ಟಾರ್ಥ ಸಿದ್ಧಿಗಾಗಿ ಲಕ್ಷ್ಮೀ ದೇವಿಯನ್ನು ಆರಾಸಿ ಶುದ್ಧಾತ್ಮರಾಗಿ ಜನ್ಮಸಾರ್ಥಕ್ಯ ಮಾಡಿಕೊಳ್ಳುವ ಪರ್ವಕಾಲ.
ಪ್ರತಿಯೊಬ್ಬ ವ್ಯಕ್ತಿಯೂ ಸಂಪತ್ತನ್ನು ಬಯಸುತ್ತಾನೆ. ಜೀವನ ನಿರ್ವಹಣೆಗೆ ಅದರ ಯಶಸ್ಸಿಗೆ ಸಂಪತ್ತು ಬೇಕೇ ಬೇಕು. ಸಂಪತ್ತಿನ ಅದೇವತೆಯಾದ ಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ಸತ್ ಸಂಕಲ್ಪ ಬದ್ಧರಾಗಿ ವ್ರತಾಚರಣೆಯನ್ನು ಮಾಡಬೇಕು.ನಮ್ಮ ಪುರಾಣಗಳಲ್ಲಿ ಸ್ತುತಿಸಲ್ಪಟ್ಟ ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಧೈರ್ಯಲಕ್ಷ್ಮಿ, ಸಂತಾನಲಕ್ಷ್ಮಿ, ಭಾಗ್ಯಲಕ್ಷ್ಮಿ, ವಿಜಯಲಕ್ಷ್ಮಿ, ವಿದ್ಯಾಲಕ್ಷ್ಮಿ, ಮೋಕ್ಷಲಕ್ಷ್ಮಿಯರೆನ್ನುವ ಅಷ್ಟ ಲಕ್ಷ್ಮಿಯರಲ್ಲಿ ಧನಲಕ್ಷ್ಮಿಗೆ ಅಗ್ರಸ್ಥಾನ.
ಜೀವನ ನಿರ್ವಹಣೆಗೆ ಅತ್ಯಂತ ಅವಶ್ಯವಾದ ಧನಕ್ಕೆ ಅದೇವತೆಯಾದ ಲಕ್ಷ್ಮಿಯ ಅನುಗ್ರಹ ಪಡೆಯಲು ಹಲವಾರು ಪೂಜೆ, ವ್ರತಗಳನ್ನು ನಮ್ಮ ಗ್ರಂಥಗಳಲ್ಲಿ ಸೂಚಿಸಲಾಗಿದೆ.ಅವುಗಳಲ್ಲಿ ಶ್ರಾವಣಮಾಸದಲ್ಲಿ ಬರುವ ಎರಡನೇ ಶುಕ್ರವಾರವು ಬಹಳ ಪ್ರಾಮುಖ್ಯವಾದುದು. ಸಂಪತ್ತು ಶುಕ್ರವಾರ, ವರಮಹಾಲಕ್ಷ್ಮೀ ವ್ರತ ಎಂಬ ಹೆಸರುಗಳಿಂದಲೂ ಆ ದಿನವನ್ನು ಕೊಂಡಾಡಿ ವಿಶೇಷ ಹಬ್ಬವನ್ನು ಆಚರಿಸುವ ಸಂಪ್ರದಾಯ ಇಂದು ಭಾರತದ ಎಲ್ಲೆಡೆ ಕಂಡುಬರುತ್ತಿದೆ. ಇದು ಮಹಿಳೆಯರೇ ಆಚರಿಸುವ ವ್ರತ.
ತಮ್ಮ ಪತಿಯ ಆಯುಷ್ಯದ ವರ್ಧನೆಗಾಗಿ ಮಾತ್ರವಲ್ಲ ಸಂಸಾರದಲ್ಲಿ ಸುಖ, ಸಂಪತ್ತು, ನೆಮ್ಮದಿ ಸದಾಕಾಲ ತುಂಬಿರಲೆಂದು ಆಶಿಸಿ ಮಹಿಳೆಯರು ಈ ವ್ರತವನ್ನಾಚರಿಸುತ್ತಾರೆ.ಅಂದು ಮನೆಯನ್ನು ಶುಭ್ರವಾಗಿ ಶುದ್ಧಗೊಳಿಸಿ ತಳಿರು ತೋರಣಗಳಿಂದ ಅಲಂಕರಿಸುವುದಲ್ಲದೆ ಬಾಗಿಲುಗಳ ಮುಂದೆ ರಂಗೋಲಿ ಬರೆದು ಹೂಗಳನ್ನಿರಿಸಿ ಭಕ್ತಿ ಪರವಶರಾಗಿ ನಮಸ್ಕರಿಸುತ್ತಾರೆ. ಇಡಿ ದಿನ ಉಪವಾಸವಿದ್ದು, ಸಂಧ್ಯಾ ಸಮಯದ ಪರ್ವಕಾಲದಲ್ಲಿ ಪೂಜೆಯನ್ನು ಕೈಗೊಳ್ಳುತ್ತಾರೆ. ಶಾಸ್ತ್ರೋಕ್ತವಾಗಿ ಕಲಶ ಪ್ರತಿಷ್ಠೆ ಮಾಡಿ ದೇವಿಯನ್ನು ಪ್ರತಿಷ್ಠಾಪಿಸಿ ನೈವೇದ್ಯಾದಿಗಳನ್ನು ಸಮರ್ಪಿಸಿ ಕೃತಾರ್ಥರಾಗುತ್ತಾರೆ. ಕಡಲೆಯಿಂದ ಮಾಡಿದ ವಿಶೇಷ ಬಗೆಯ ಪದಾರ್ಥ ದೇವಿಗೆ ಅತ್ಯಂತ ಪ್ರಿಯವೆಂದು ನಂಬಿಕೆ. ವ್ರತಾಚರಣೆಯ ಸಂದರ್ಭ ಐವರು ಸುಮಂಗಲಿಯರನ್ನು ಕರೆದು ಕುಳ್ಳಿರಿಸಿ ಅವರನ್ನು ಪೂಜಿಸಿ, ಅವರಿಗೆ ಬಾಗಿನವೆಂದು ಬಾಳೆಯೆಲೆಯಲ್ಲಿ ಅಕ್ಕಿ, ತೆಂಗಿನಕಾಯಿ, ಅರಿಷಿಣ, ಕುಂಕುಮ, ಮಣ್ಣಿನ ಬಳೆ ಹಾಗೂ ಹೂವನ್ನಿರಿಸಿ ಭಕ್ತಿಪೂರ್ವಕ ಸಮರ್ಪಿಸಲಾಗುತ್ತದೆ.
ಸಾಧಾರಣವಾಗಿ ೧೬ವರ್ಷಗಳ ಕಾಲ ಈ ವ್ರತವನ್ನಾಚರಿಸಿ ಉದ್ಯಾಪನೆ ಮಾಡುವುದು ಸಂಪ್ರದಾಯ. ೨೧ವರ್ಷ ಪರ್ಯಂತ ವ್ರತವನ್ನಾಚರಿಸುವ ಪದ್ಧತಿಯೂ ಇದೆ.ವ್ರತದ ಉದ್ಯಾಪನೆಯಾದ ಮರುವರ್ಷದಿಂದ ಪುನಃ ವ್ರತವನ್ನಾಚರಿಸುವ ಪದ್ಧತಿಯ ಬಗ್ಗೆ ವಿವರಗಳೇನೂ ಕಂಡುಬರುವುದಿಲ್ಲವಾದರೂ ಸಾಂಕೇತಿಕವಾಗಿ ಸರಳ ವಿಧಾನದಿಂದ ಆಚರಿಸಬಹುದೆಂದು ವೈದಿಕ ವಿದ್ವಾಂಸರ ಅಭಿಮತ.ಉದ್ಯಾಪನೆ ಎನ್ನುವುದು ವ್ರತದ ಪರಿಪೂರ್ಣ ಫಲಾಪೇಕ್ಷೆಗಾಗಿ ಸಿದ್ಧಿಪಡೆದುಕೊಳ್ಳುವ ವೈದಿಕ ವಿಧಾನ.ಆಚರಿಸಿದ ವ್ರತದ ಸಂಪೂರ್ಣ ಫಲ ಸಾಧಕಿಗೆ ಸಿಗಬೇಕಾದರೆ ವ್ರತದ ಉದ್ಯಾಪನೆ ಅನಿವಾರ್ಯ.
ಲಕ್ಷ್ಮಿಯೆಂದರೆ ಸಂಪತ್ತಿನ ಅದೇವತೆಯೆಂಬುದು ಪೌರಾಣಿಕ ಕಲ್ಪನೆಯಾಗಿದೆ.ಆಕೆ ‘ಶಂ’ರೂಪೆ ಅಥವಾ ‘ಶ್ರೀ’ರೂಪೆ. ಶ್ರೀಸೂಕ್ತದಲ್ಲಿ ಆ ತಾಯಿಯ ಮಹಿಮೆಯನ್ನು ವಿದ್ವಾಂಸರು ಕೊಂಡಾಡಿದ್ದಾರೆ. ಅಂತಹ ಲಕ್ಷ್ಮೀ ದೇವಿ ಸಾಕ್ಷಾತ್ ಶ್ರೀಮನ್ನಾರಾಯಣನ ಅರ್ಧಾಂಗಿ. ಲಕ್ಷ್ಮೀ ದೇವಿಯ ಜನನದ ಕುರಿತು ಪೌರಾಣಿಕ ಹಿನ್ನೆಲೆ ಹೀಗಿದೆ :
ಹಿಂದೆ ದೇವಾಸುರರು ಅಮೃತವನ್ನು ಪಡೆಯುವ ಉದ್ದೇಶದಿಂದ ಕ್ಷೀರಸಾಗರವನ್ನು ಮಥನ ಮಾಡುತ್ತಾರೆ.ಮಂದರ ಪರ್ವತವನ್ನೇ ಕಡೆಗೋಲನ್ನಾಗಿ ಮಾಡಿ ಆದಿಶೇಷನನ್ನೇ ಹಗ್ಗವನ್ನಾಗಿಸಿ ಸಮುದ್ರ ಮಥನವನ್ನು ಮಾಡಿದರು. ಆ ಸಂದರ್ಭ ಮಂದರ ಪರ್ವತವು ಮುಳುಗಲು ತೊಡಗಿತು.ಆಗ ಮಹಾವಿಷ್ಣು ಕೂರ್ಮಾವತಾರವನ್ನು ತಾಳಿ ಅದನ್ನು ಆಧರಿಸಿದ. ಅನಂತರ ಮಥನವು ಮುಂದುವರಿಯುತ್ತದೆ. ಆಗ ಮೊದಲಿಗೆ ಬಂದುದು ಹಾಲಾಹಲ ವಿಷ.ಅದರ ಧಗೆಯನ್ನು ತಾಳರಾರದೆ ಎಲ್ಲರೂ ಬೊಬ್ಬಿಡಲು ಪರಮಶಿವನು ಅದನ್ನು ನುಂಗಿ ನೀಲಕಂಠನಾಗುತ್ತಾನೆ. ಅನಂತರ ಕ್ಷೀರ ಸಾಗರ ಮಥನವು ನಿರಾತಂಕವಾಗಿ ಮುಂದುವರಿಯಲು ಕಲ್ಪವೃಕ್ಷ, ಕಾಮಧೇನು, ಲಕ್ಷ್ಮೀದೇವಿ…ಹೀಗೆ ಒಂದೊಂದಾಗಿ ಹಲವು ಅಮೂಲ್ಯ ನಿಗಳು ಹುಟ್ಟುಬಂದವು. ಕೊನೆಗೆ ಬಂದುದು ಅಮೃತ.
‘ಲಕ್ಷ್ಮೀ ಕ್ಷೀರ ಸಮುದ್ರ ರಾಜತನಯಾಂ, ಶ್ರೀರಂಗಧಾಮೇಶ್ವರೀಂ, ದಾಸೀಭೂತ ಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಾಂ’-ಶ್ರೀಸೂಕ್ತದಲ್ಲಿ ಕಂಡುಬರುವ ಈ ಸೂಕ್ತಿಯನ್ನು ಗಮನಿಸಬಹುದು. ಈ ಲಕ್ಷ್ಮೀದೇವಿಯನ್ನು ಶ್ರೀಮಹಾವಿಷ್ಣುವು ಸ್ವೀಕರಿಸಿ ಲಕ್ಷ್ಮೀನಾರಾಯಣನೆಂಬ ನಾಮಾಂಕಿತವನ್ನು ಪಡೆದನೆಂಬುದು ಪ್ರತೀತಿ.
ಅಂತಹ ಲಕ್ಷ್ಮೀ ದೇವಿಯ ಪೂಜೆಯನ್ನು ವರಮಹಾಲಕ್ಷ್ಮೀ ಪೂಜೆಯೆಂಬ ಹೆಸರಿನಿಂದ ಪ್ರತಿವರ್ಷ ಶ್ರಾವಣ ಮಾಸದ ಎರಡನೇ ಶುಕ್ರವಾರದ ಶುಭಗಳಿಗೆಯಲ್ಲಿ ನೆರವೇರಿಸುತ್ತೇವೆ. ಕೌಟುಂಬಿಕ ಕ್ಷೇಮ, ಅಭ್ಯುದಯ, ಧೈರ್ಯ, ಸ್ಥೈರ್ಯ, ಆಯುರಾರೋಗ್ಯ ಮತ್ತು ಅಷ್ಟೈಶ್ವರ್ಯಗಳ ವೃದ್ಧಿಗಾಗಿ ದೇವಿಯನ್ನು ಪೂಜಿಸಿ ಬೇಡಿಕೊಳ್ಳುತ್ತೇವೆ.ನಮಗೆ ಬರುವ ದುರಿತಗಳ ನಿವಾರಣೆಗಾಗಿ ಆ ತಾಯಿಗೆ ಮೊರೆಯಿಡುತ್ತೇವೆ. ನಮ್ಮ ಭಕ್ತಿಗೆ ಆ ಲಕ್ಷ್ಮೀ ದೇವಿ ಪ್ರಸನ್ನಳಾಗಿ ನಮ್ಮ ಅಭೀಷ್ಟಗಳನ್ನು ಈಡೇರಿಸಿ ಸಕಲ ಸಂಪತ್ತುಗಳನ್ನೂ ನಮಗೆ ಕರುಣಿಸುವಳು. ಇದು ನಮ್ಮ ನಂಬಿಕೆ. ನಂಬಿದಲ್ಲಿ ಇಂಬು ಇದ್ದೇ ಇದೆ.
ಮಹಾಲಕ್ಷ್ಮಿಯು ಇಡಿ ಜಗತ್ತಿಗೆ ಮಹಾತಾಯಿಯಾಗಿರುವವಳು. ಆಕೆಗೆ ರೂಪ ಹಲವು. ನಾವು ಹಲವು. ಆಕೆಯ ಶ್ರೀರೂಪವನ್ನು ಭೂಮಿಯೆಂದು ಕರೆಯುತ್ತಾರೆ.ತಾಳ್ಮೆ, ಸಹನೆ, ಕ್ಷಮೆಯ ಪ್ರತೀಕ ಅದು. ಶ್ರೀರೂಪವು ಭೌತಿಕ ಸಂಪತ್ತಿಗೆ ಅದೈವ. ಇನ್ನೊಂದು ಲಕ್ಷ್ಮೀ ರೂಪವು ನಾರಾಯಣನ ಸೇವೆಯಲ್ಲಿ ನಿರತಳಾಗಿದ್ದು ಆತನ ಅಭಿನ್ನ ಅಂಗವಾಗಿರುವಳು. ಮಹಾಲಕ್ಷ್ಮಿಯ ಕೈಯ್ಯಲ್ಲಿ ಕಮಲ ಹೂವಿದೆ. ಆ ತಾವರೆಯು ಧನ ಸಂಪತ್ತಿನ ದ್ಯೋತಕವಾಗಿದೆ.ಅಂತಹ ಮಹಾಲಕ್ಷ್ಮಿಯು ಶ್ರೀಮನ್ನಾರಾಯಣನ ಪತ್ನಿಯಾದುದರ ಕುರಿತು ಪೌರಾಣಿಕ ಉಲ್ಲೇಖವೊಂದಿದೆ.
ಭೃಗುವಿನ ಪತ್ನಿಯಾದ ಖ್ಯಾತಿಯ ಗರ್ಭದಿಂದ ಅತ್ಯಂತ ಸುಂದರವಾದ ಕನ್ಯೆಯೊಬ್ಬಳು ಜನಿಸಿ ಬಂದಳು. ಸಮಸ್ತ ಶುಭಲಕ್ಷಣಗಳಿಂದ ಕೂಡಿದ್ದ ಆಕೆಗೆ ಲಕ್ಷ್ಮೀ ಎಂದು ಹೆಸರಿಡಲಾಯಿತು.ಭೃಗುವಿನ ಮಗಳಾದ ಕಾರಣ ಭಾರ್ಗವಿ ಎಂಬ ಹೆಸರೂ ಬಂತು. ಅವಳು ದೊಡ್ಡವಳಾದ ಮೇಲೆ ನಾರಾಯಣನ ಗುಣ ವರ್ಣನೆ ಕೇಳಿದಾಗ ಮನದಲ್ಲೇ ಪತಿಯ ರೂಪವನ್ನು ಕಲ್ಪಿಸಿ ಅವನನ್ನು ಪಡೆಯಲು ಸಮುದ್ರ ತೀರದಲ್ಲಿ ತಪಸ್ಸು ಮಾಡಿದಳು.ಈ ಘೋರ ತಪಸ್ಸಿನಿಂದ ದೇವರಾಜನಾದ ಇಂದ್ರನು ಆನಂದಿತನಾಗಿ ನಾರಾಯಣನ ರೂಪದಲ್ಲಿ ಆಕೆಯ ಮುಂದೆ ಹೋಗಿ ನಿಂತನು. ಆಗ ಲಕ್ಷ್ಮಿಗೆ ಸಂಶಯ ಬಂದು ವಿಶ್ವರೂಪ ತೋರಿಸುವಂತೆ ಹೇಳಿದಳು. ದೇವೇಂದ್ರನು ವಿಶ್ವರೂಪ ತೋರಿಸಲು ಅಸಮರ್ಥನಾಗಿ ನಾಚಿಕೆಯಿಂದ ಕೂಡಿದವನಾಗಿ ಹಿಂತಿರುಗಿ ಹೋದನು.ಕೊನೆಗೆ ನಾರಾಯಣನು ಅವಳ ಮುಂದೆ ಹೋಗಿ ನಿಂತು ವಿಶ್ವರೂಪ ದರ್ಶನ ಮಾಡಿಸಿ ಅವಳ ಇಚ್ಛೆಯಂತೆ ವರಿಸಿದನು.ಅಂತಹ ಲಕ್ಷ್ಮೀ ದೇವಿಯು ಸತೀತ್ವದ ಮೂರ್ತರೂಪ. ಆದುದರಿಂದ ಸತಿಸ್ವಾಯರಿಗೆ ಗೃಹಲಕ್ಷ್ಮಿಯೆಂದು ಹೇಳುವುದು ರೂಢಿಯಲ್ಲಿ ಬಂತು.
ಪ್ರಾಚೀನ ಕಾಲದಲ್ಲಿ ಒಮ್ಮೆ ದೂರ್ವಾಸ ಮುನಿಯು ವೈಕುಂಠದಿಂದ ಕೈಲಾಸಕ್ಕೆ ಹೊರಟಿದ್ದನು. ಮಾರ್ಗ ಮಧ್ಯದಲ್ಲಿ ದೇವೇಂದ್ರನು ದೂರ್ವಾಸನನ್ನೂ ಆತನ ಶಿಷ್ಯರನ್ನೂ ಸ್ವಾಗತಿಸಿ ಸತ್ಕರಿಸಿದನು. ಇದರಿಂದ ಸಂಪ್ರೀತನಾದ ದೂರ್ವಾಸನು ಭಗವಾನ್ ವಿಷ್ಣುವು ತನಗೆ ಅರ್ಪಿಸಿದ ಪಾರಿಜಾತದ ಮಾಲೆಯನ್ನು ಇಂದ್ರನಿಗಿತ್ತನು. ಅಹಂಕಾರಿಯಾದ ದೇವೇಂದ್ರನು ಆ ಪುಷ್ಪಮಾಲೆಯನ್ನು ತಾನು ಧರಿಸಿಕೊಳ್ಳದೆ ಐರಾವತದ ಮಸ್ತಕದ ಮೇಲಿರಿಸಿದನು. ಅದರ ಸ್ಪರ್ಷವಾದೊಡನೆ ಆನೆ ವಿಶೇಷ ಗುಣ, ರೂಪ, ತೇಜಸ್ಸುಗಳಿಂದ ಕೂಡಿ ಘೋರಾರಣ್ಯಕ್ಕೆ ಓಡಿಹೋಯಿತು. ಇಂದ್ರನು ಪುಷ್ಪಮಾಲೆಯನ್ನು ತಿರಸ್ಕರಿಸಿದ್ದನ್ನು ಕಂಡು ದೂರ್ವಾಸರಿಗೆ ಕೋಪ ಬಂದು ಕೆರಳಿ ಎಲೈ ದೇವೇಂದ್ರನೇ ಅಹಂಕಾರದಿಂದ ಮತ್ತನಾದ ನೀನು ನಿನಗಾರಿ ಕೊಟ್ಟ ಮಾಲೆಯನ್ನು ತಿರಸ್ಕರಿಸಿ ಅವಮಾನಿಸಿದೆ. ವಿಷ್ಣುವಿಗೆ ಅರ್ಪಿತವಾದ ನೈವೇದ್ಯ, ಫಲ, ಪುಷ್ಪ ಮೊದಲಾದವು ದೊರೆತರೆ ಅವುಗಳನ್ನು ಸ್ವಂತ ಉಪಯೋಗಿಸಬೇಕು. ನೀನು ಭಗವಂತನ ಪ್ರಸಾದ ರೂಪವಾದ ಪಾರಿಜಾತವನ್ನು ತಿರಸ್ಕರಿಸಿರುವೆ. ಆದುದರಿಂದ ನಿನ್ನ ರಾಜ್ಯಲಕ್ಷ್ಮಿಯು ನಿನ್ನಿಂದ ತೊಲಗುವಳು ಎಂದು ಶಾಪವಿತ್ತನು.ಇಂದ್ರನು ದೂರ್ವಾಸರ ಕಾಲುಗಳನ್ನು ಹಿಡಿದು, “ನೀನು ಕೊಟ್ಟ ಶಾಪ ಉಚಿತವಾದುದು. ನಾನು ಹೋದ ಸಂಪತ್ತನ್ನು ಕೇಳುವುದಿಲ್ಲ ;ನನಗೆ ಜ್ಞಾನೋಪದೇಶ ಮಾಡು” ಎಂದು ಕೇಳಿಕೊಂಡನು. “ದೇವರಾಜನಾದ ಇಂದ್ರನೇ ,ಸಂಪತ್ತೆಂಬುದು ರಾಗದ್ವೇಷಗಳನ್ನುಂಟು ಮಾಡುತ್ತದೆ. ಸಂಪತ್ತುಳ್ಳವನು ಮದಿರಾಮತ್ತನಂತೆ ವರ್ತಿಸುವನು. ಅವನಿಗೆ ಸತ್ಯದ ಮಾರ್ಗವು ಗೋಚರಿಸುವುದಿಲ್ಲ. ನೀನು ಪುಷ್ಪಮಾಲೆಯನ್ನು ಐರಾವತದ ಮಸ್ತಕದ ಮೇಲಿರಿಸಿದ್ದು ನಿನ್ನ ಅಹಂಕಾರವನ್ನು ತೋರಿಸುತ್ತದೆ. ಆದುದರಿಂದಲೇ ನಿನಗೆ ಶಾಪ ಕೊಟ್ಟಿರುವೆನು”ಎಂದು ಹೇಳಿ ದೂರ್ವಾಸರು ಹೊರಟುಹೋದರು.
ಇಂದ್ರನು ಅನಂತರ ಅಮರಾವತಿಗೆ ಬಂದನು. ಆಗ ಅಲ್ಲಿ ತುಂಬಿದ್ದ ರಾಕ್ಷಸರನ್ನು ಕಂಡು ಭಯವಿಹ್ವಲನಾಗಿ ಗುರುಗಳಾದ ಬೃಹಸ್ಪತಿಯ ಬಳಿಗೋಡಿ ತನ್ನನ್ನು ರಕ್ಷಿಸುವಂತೆ ಬೇಡಿಕೊಂಡನು. ಬೃಹಸ್ಪತಿಗೆ ಶಿಷ್ಯನನ್ನು ಬಿಡಲಾಗುವುದಿಲ್ಲವಷ್ಟೇ !ಆದುದರಿಂದ ಬೃಹಸ್ಪತಿಯು ಇಂದ್ರನೊಡನೆ ಬ್ರಹ್ಮನ ಬಳಿಗೆ ಹೋದನು.ವಿಷಯವನ್ನು ಬ್ರಹ್ಮನಿಗೆ ಅರುಹಿದನು. ಆಗ ಬ್ರಹ್ಮನು ಅವರಿಬ್ಬರನ್ನೂ ಕರೆದುಕೊಂಡು ಶ್ರೀಹರಿಯಲ್ಲಿಗೆ ಹೋದನು. ವಿಷಯವನ್ನರಿತ ಶ್ರೀಹರಿ ನಾನು ಕೊಟ್ಟ ಪ್ರಸಾದವನ್ನು ನೀನು ತಿರಸ್ಕರಿಸಿದ್ದರಿಂದ ಮಹಾಲಕ್ಷ್ಮಿಯು ಕ್ರುದ್ಧಳಾಗಿದ್ದಾಳೆ. ಆದರೂ ನೀನು ಅವಳ ಉಪಾಸನೆ ಮಾಡಿ ಪ್ರಸನ್ನಗೊಳಿಸು ಎಂದನನು. ಅಂತೆಯೇ ದೇವೇಂದ್ರನು ಲಕ್ಷ್ಮಿಯ ಉಪಾಸನೆ ಮಾಡಿ ಶಾಪವನ್ನು ಕಳೆದುಕೊಂಡನು.
ಸಂಪತ್ತಿನ ಅದೇವತೆಯಾದ ಧನಲಕ್ಷ್ಮಿಯೇ ಸಾಕ್ಷಾತ್ ವರಮಹಾಲಕ್ಷ್ಮಿ ಆಕೆಯ ವ್ರತವನ್ನಾಚರಿಸುವ ದಿನ ವೈಶ್ಯರಿಗೆ ಇನ್ನೂ ಪವಿತ್ರ ದಿನ. ಅವರು ಕಲಶದಲ್ಲಿ ಲಕ್ಷ್ಮಿಯನ್ನು ಆವಾಹನೆ ಮಾಡಿ ಕಲ್ಪೋಕ್ತ ಪ್ರಕಾರ ಪೂಜೆ ಮಾಡಿ ಬರಿಹಸ್ತದಲ್ಲಿ ದಾರ ಕಟ್ಟಿಕೊಂಡು ತುಪ್ಪದಿಂದ ಮಾಡಿದ ಭಕ್ಷ್ಯಗಳನ್ನು ನಿವೇದನೆ ಮಾಡುವರು. ಬ್ರಾಹ್ಮಣರಿಗೆ ದಕ್ಷಿಣೆ ತಾಂಬೂಲಗಳೊಂದಿಗೆ ಭಕ್ಷ್ಯಗಳನ್ನು ಬಾಗಿನವಾಗಿ ಕೊಟ್ಟು ನಮಸ್ಕರಿಸುವರು. ಲಕ್ಷ್ಮೀ ಸಹಸ್ರ ನಾಮಾವಳಿಯೊಂದಿಗೆ ಅರ್ಚಿಸಿ ಲಕ್ಷ್ಮಿಯನ್ನು ಆಭರಣ, ವಸ್ತ್ರಗಳಿಂದ ಅಲಂಕರಿಸುವರು.
ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ ಸಾಧನೆಗಾಗಿ ವ್ರತವನ್ನಾಚರಿಸಿ ಲಕ್ಷ್ಮೀ ಪೂಜೆ ಕೈಗೊಳ್ಳುತ್ತಾರೆ.ನಮ್ಮ ಪರಮಗುರಿ ಮೋಕ್ಷವಾಗಿರಬೇಕು. ಆದರೆ ಅದಕ್ಕೆ ಪೂರ್ವಭಾವಿಯಾಗಿರುವ ಧರ್ಮ, ಅರ್ಥ, ಕಾಮಗಳ ಸೋಪಾನಗಳನ್ನೇರಬೇಕಾಗಿದೆ.ಧರ್ಮ ಮಾರ್ಗದಿಂದಲೇ ಅರ್ಥ ಸಂಪಾದನೆ ಮಾಡಬೇಕು.ಅದರಿಂದಲೇ ನಮ್ಮ ಐಹಿಕ ಕಾಮನೆಗಳನ್ನು ಪೂರೈಸಿಕೊಳ್ಳಬೇಕು. ಆ ಮೂಲಕ ಮೋಕ್ಷ ಸಾಧನೆಗೆ ಅನುವಾಗಬೇಕು. ಎಲ್ಲ ಒಂದಕ್ಕೊಂದು ಪೂರಕವಾಗಿದ್ದರೆ ಬಾಳು ಬಂಗಾರವಾಗುವುದರಲ್ಲಿ ಸಂಶಯವಿಲ್ಲ. ವರಮಹಾಲಕ್ಷ್ಮೀ ವ್ರತವನ್ನು ನಿಷ್ಠೆಯಿಂದ ಶ್ರದ್ಧಾ ಭಕ್ತಿ ಪುರಸ್ಸರವಾಗಿ ಕೈಗೊಳ್ಳುವ ಮಹಿಳೆಯರ ಸಕಲ ಇಷ್ಟಾರ್ಥಗಳೂ ಸಿದ್ಧಿಸಿ ಅವರ ಬದುಕು ಸಾರ್ಥಕವಾಗುತ್ತದೆ.

ವಿ.ಬಿ.ಕುಳಮರ್ವ, ಕುಂಬಳೆ
‘ಶ್ರೀನಿ’ನಾರಾಯಣ ಮಂಗಲ
ಕುಂಬಳೆ-೬೭೧೩೨೧
ಕಾಸರಗೋಡು

LEAVE A REPLY