ಪ್ರತೀಕಾರಕ್ಕೆ ಸಜ್ಜಾದ 250 ಉಗ್ರರು: ಕಣಿವೆ ರಾಜ್ಯ, ದೇಶದೆಲ್ಲೆಡೆ ಕಟ್ಟೆಚ್ಚರ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಗೆ ತತ್ತರಿಸಿರುವ ಉಗ್ರರು ಈಗ ಪ್ರತೀಕಾರವಾಗಿ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಸಜ್ಜಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ಈ ಉಗ್ರರಿಗೆ ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರ ಗುಂಪು ನೆರವು ನೀಡಲಿದೆ ಎಂದು ವರದಿ ಹೇಳಿದ್ದು, ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿಯೂ ಭದ್ರತೆ ಹೆಚ್ಚಿಸಲಾಗಿದೆ.
ಕಳೆದ ಒಂದು ವಾರದಿಂದ ಸರಕಾರ ಉಗ್ರರ ವಿರುದ್ಧ ಆಲ್‌ಔಟ್ ಕಾರ್ಯಾಚರಣೆ ತೀವ್ರಗೊಳಿಸಿದೆ. ಮೂರು ದಿನಗಳ ಹಿಂದೆ ಇಸ್ಲಾಮಿಕ್ ಸ್ಟೇಟ್ ಜಮ್ಮು ಅಂಡ್ ಕಾಶ್ಮೀರ್ ಮುಖಂಡ ದಾವೂದ್ ಸೇರಿದಂತೆ ನಾಲ್ವರು ಉಗ್ರಗಾಮಿಗಳನ್ನು ಯೋಧರು ಹೊಡೆದುರುಳಿಸಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿ ದೇಶದೊಳಗೆ ನುಗ್ಗಲು ೨50ಕ್ಕೂ ಹೆಚ್ಚು ಉಗ್ರರು ಸಜ್ಜಾಗಿದ್ದು, ಈಗಾಗಲೇ ಪೂರ್ವ ತಯಾರಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ವರದಿ ಲಭ್ಯವಾಗಿದೆ.
ಈಬಗ್ಗೆ ಕಾಶ್ಮೀರದ ಗಡಿ ಜಿಲ್ಲೆ ಬಾರಾಮುಲ್ಲಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉನ್ನತ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಎ.ಕೆ. ಭಟ್, ಕಾಶ್ಮೀರ ಕಣಿವೆಯಲ್ಲಿ ಉಗ್ರರು ಸಕ್ರಿಯರಾಗಿದ್ದಾರೆ. ಅಲ್ಲದೇ ಗಡಿ ನಿಯಂತ್ರಣ ರೇಖೆ ಮೂಲಕ ದೇಶದೊಳಗೆ ನುಸುಳಿ ವಿಧ್ವಂಸಕ ಕೃತ್ಯಗಳನ್ನು ಎಸೆಗಲು ೩೦ ತಂಡಗಳ ಒಟ್ಟು ೨೭೫ ಉಗ್ರರು ಸಜ್ಜಾಗಿದ್ದಾರೆ ಎಂದು ಹೇಳಿದ್ದಾರೆ.

LEAVE A REPLY