ಚಾರ್ಮಾಡಿ ಘಾಟಿಯಲ್ಲಿ ಆತಂಕದಲ್ಲೇ ಆರಂಭಗೊಂಡ ವಾಹನ ಸಂಚಾರ

ಮಂಗಳೂರು/ಚಾರ್ಮಾಡಿ : ಭಾರೀ ಮಳೆಯ ಕಾರಣದಿಂದ ಚಾರ್ಮಾಡಿ ಘಾಟಿಯಲ್ಲಿ ಭೂಕುಸಿತ ಉಂಟಾಗಿದ್ದು ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ. ಆದರೂ ಮತ್ತೆ ಕುಸಿಯುವ ಭೀತಿ ಇದ್ದು ವಾಹನ ಸಂಚಾರ ಆತಂಕಿತವಾಗಿದೆ. ಭೂಕುಸಿತದ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಳ್ತಂಗಡಿ ಪೊಲೀಸರು ಘಾಟಿ ನಡುವೆ ಸಿಕ್ಕಿಕೊಂಡಿರುವ ಪ್ರಯಾಣಿಕರಿಗೆ ಬಿಸ್ಕೆಟ್ , ನೀರು ವಿತರಣೆ ಮಾಡಿದರು.

ನಿನ್ನೆ ಇಡೀ ದಿನ ಸುರಿದ ಮಳೆಗೆ ಚಾರ್ಮಾಡಿ ಘಾಟಿಯ 2 ಮತ್ತು 3 ನೇ ತಿರುವಿನಲ್ಲಿ ಸಹಿತ ವಿವಿದೆಡೆ ಭೂಕುಸಿತ ಉಂಟಾಗಿತ್ತು. ಹೀಗಾಗಿ ಇಡೀ ಘಾಟಿಯಲ್ಲಿ ಸುಮಾರು 1500 ರಷ್ಟು ಪ್ರಯಾಣಿಕರು ಸಿಲುಕಿ ಹಾಕಿಕೊಂಡಿದ್ದು 200 ಕ್ಕೂ ಅಧಿಕ ವಾಹನಗಳು ಬಾಕಿಯಾಗಿದ್ದವು. ಇಡೀ ರಾತ್ರಿ ಘಾಟಿಯಲ್ಲೇ ಕಾಲ ಕಳೆದಿದ್ದ ಪ್ರಯಾಣಿಕರಿಗೆ ಬೆಳ್ತಂಗಡಿ ಪೊಲೀಸರು ಬಿಸ್ಕೆಟ್ , ನೀರು ವಿತರಣೆ ಮಾಡಿದರು. ಇದರ ಜೊತೆಗೆ ಬೆಳ್ತಂಗಡಿ ಪೊಲೀಸರು ಕೂಡಾ ಸ್ಥಳದಲ್ಲಿದ್ದು ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು.

ಘಟನಾ ಸ್ಥಳಕ್ಕ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಹರೀಶ್ ಪೂಂಜಾ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿಗೊಂದಿಗೆ ಮಾತುಕತೆ ನಡೆಸಿ ತಕ್ಷಣವೇ ವಾಹನ ಸಂಚಾರಕ್ಕೆ ಬೇಕಾದ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು. ಸದ್ಯ ವಾಹನ ಸಂಚಾರಕ್ಕೆ ಚಾರ್ಮಾಡಿ ಘಾಟಿ ತೆರವಾದರೂ ಸುಗಮ ಸಂಚಾರ ಆತಂಕದಲ್ಲೇ ಇದೆ. ಮತ್ತೆ ಮತ್ತೆ ಕುಸಿತವಾಗುತ್ತಿದೆ.

LEAVE A REPLY