ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ : ವಾಹನ ಸಂಚಾರ ಸಂಪೂರ್ಣ ಬಂದ್

ಬೆಳ್ತಂಗಡಿ/ಚಾರ್ಮಾಡಿ: ಭಾರೀ ಮಳೆಯ ಕಾರಣದಿಂದ ಚಾರ್ಮಾಡಿ ಘಾಟಿಯ ವಿವಿದೆಡೆ ಗುಡ್ಡ ಕುಸಿತವಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಗುಡ್ಡ ಕುಸಿತದ ಪರಿಣಾಮವಾಗಿ ಇಡೀ ರಾತ್ರಿ ಪ್ರಯಾಣಿಕರು ಚಾರ್ಮಾಡಿ ಘಾಟಿಯಲ್ಲೇ ಕಳೆಯುವಂತಾಗಿದೆ.

ಮಂಗಳೂರು ಬೆಂಗಳೂರು ಸಂಪರ್ಕ ರಸ್ತೆಯಾಗಿದ್ದ ಚಾರ್ಮಾಡಿ ಘಾಟಿಯ ಕನಿಷ್ಠ 8 ಕಡೆ ಭೂಕುಸಿತವಾಗಿ ಚಾರ್ಮಾಡಿ – ಕೊಟ್ಟಿಗೆಹಾರ ನಡುವಿನ  ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ಇಡೀ ರಾತ್ರಿ ಘಾಟಿಯಲ್ಲೇ ಕಾಲ ಕಳೆದ ಪ್ರಯಾಣಿಕರಿಗೆ ಈಗ ಆಹಾರದ ಸಮಸ್ಯೆಯೂ ಕಾಡಿದೆ. ಈಗಾಗಲೇ ಘಾಟಿಯಲ್ಲಿ ಬಿದ್ದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಈ ನಡುವೆ ಮಂಗಳೂರು-ಹಾಸನ ರೈಲು ಮಾರ್ಗದ  ಎಡಕುಮೇರಿ-ದೋಣಿಗಲ್ ರೈಲು ನಿಲ್ದಾಣದ ನಡುವಣ ರೈಲ್ವೇ ಹಳಿಯಲ್ಲಿ ಮೂರು ಕಡೆ ಗುಡ್ಡೆಯ ಮಣ್ಣು ಕುಸಿದು ಬಿದ್ದ ಪರಿಣಾಮ ಸುಬ್ರಹ್ಮಣ್ಯ ರಸ್ತೆ-ಸಕಲೇಶಪುರ ನಡುವಣ ರೈಲು ಮಾರ್ಗದಲ್ಲಿನ ರೈಲು ಸಂಚಾರ ಸ್ಥಗಿತಗೊಂಡಿದೆ.ಈಗಲೂ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಸಕಲೇಶಪುರ ತಾಲೂಕ ಹೊಂಗಡಹಳ್ಳ ಬಳಿಯೂ ಭೂಕುಸಿತವಾಗಿದ್ದ ವಾಹನ ಸಂಚಾರ ಸ್ಥಗಿತಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆಯ ಅಬ್ಬರ ಕಂಡುಬಂದಿದೆ. ಕುಮಾರಧಾರಾ ನದಿಯ ನೀರಿನ ಮಟ್ಟ ಏರಿಕೆಯಾಗಿ  ಕುಕ್ಕೆ ಸುಬ್ರಹ್ಮಣ್ಯದ ಸ್ನಾನ ಘಟ್ಟವೂ ಜಲಾವೃತವಾಗಿದೆ.

LEAVE A REPLY