ಶಿರಾಡಿಯಲ್ಲಿ ರೈಲು ಹಳಿಗೆ ಮಣ್ಣು ಕುಸಿತ : ಸಂಚಾರ ಸ್ಥಗಿತ

ಪುತ್ತೂರು/ಶಿರಾಡಿ: ಕಳೆದ 3 ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಯ ಕಾರಣದಿಂದ ಮಂಗಳೂರು-ಹಾಸನ ರೈಲು ಮಾರ್ಗದ  ಎಡಕುಮೇರಿ-ದೋಣಿಗಲ್ ರೈಲು ನಿಲ್ದಾಣದ ನಡುವಣ ರೈಲ್ವೇ ಹಳಿಯಲ್ಲಿ ಮೂರು ಕಡೆ ಗುಡ್ಡೆಯ ಮಣ್ಣು ಕುಸಿದು ಬಿದ್ದ ಪರಿಣಾಮ ಸುಬ್ರಹ್ಮಣ್ಯ ರಸ್ತೆ-ಸಕಲೇಶಪುರ ನಡುವಣ ರೈಲು ಮಾರ್ಗದಲ್ಲಿನ ರೈಲು ಸಂಚಾರ ಸ್ಥಗಿತಗೊಂಡಿದೆ.
ಸೋಮವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ರಾತ್ರಿ ರೈಲು ಈ ಭಾಗವನ್ನು ದಾಟಿದ ಕಾರಣ ರಾತ್ರಿ ರೈಲಿನ ಮಂಗಳೂರು ಯಾನಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ಎಡಕುಮೇರಿ ರೈಲು ನಿಲ್ದಾಣದ ಮುಂದಿನ ನಿಲ್ದಾಣವಾದ ಕಡಗರಹಳ್ಳ ರೈಲು ನಿಲ್ದಾಣದ ಬಳಿ, ಕಡಗರಹಳ್ಳ ರೈಲು ನಿಲ್ದಾಣ ಮತ್ತು ದೋಣಿಗಲ್ ರೈಲು ನಿಲ್ದಾಣದ ನಡುವಣ ಮೂರು ಕಡೆ ಗುಡ್ಡೆಯ ಮಣ್ಣು ಕುಸಿದು ರೈಲ್ವೇ ಹಳಿಗೆ ಬಿದ್ದಿದೆ. ರೈಲ್ವೇ ಇಲಾಖೆಯ ಸಕಲೇಶಪುರ ವಿಭಾಗದ ಸಿವಿಲ್ ಇಂಜಿನಿಯರ್ ಮತ್ತು ಸಿಬಂದಿ ಸ್ಥಳಕ್ಕೆ ಜೆಸಿಬಿ ಮತ್ತು ಕ್ರೇನ್ ಮೂಲಕ ಆಗಮಿಸಿ ಸಮರೋಪಾದಿಯಲ್ಲಿ ಮಣ್ಣು ತೆರವು ಕೆಲಸ ಮಾಡುತ್ತಿದ್ದಾರೆ.

LEAVE A REPLY