ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸುಗೊಂಡ ಮಳೆ

ಮಂಗಳೂರು/ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಗುರುವಾರ ಮಧ್ಯಾಹ್ನದ ಬಳಿಕ ಬಿರುಸುಗೊಂಡ ಮಳೆ ಶುಕ್ರವಾರವೂ ಸುರಿದಿದೆ.
ಸುಳ್ಯ ತಾಲೂಕಿನ ವಿವಿದೆಡೆಯ ಗ್ರಾಮೀಣ ರಸ್ತೆಗೆ ಮರ ಅಡ್ಡಲಾಗಿ ಬಿದ್ದು ಸಂಚಾರ ವ್ಯತ್ಯಯಗೊಂಡಿದ್ದು ವಿದ್ಯುತ್ ಕೈಕೊಟ್ಟಿದೆ.ಹಲವೆಡೆ ನೀರು ನುಗ್ಗಿದೆ. ಶುಕ್ರವಾರ ಬೆಳಗ್ಗಿನ ಜಾವ ಸುಳ್ಯ-ಕೋಲ್ಚಾರ್-ಬಂದಡ್ಕ ರಸ್ತೆಯಲ್ಲಿ ಆಲೆಟ್ಟಿ ಗ್ರಾಮದ ಕುಂಭಕ್ಕೋಡ್ ಎಂಬಲ್ಲಿ ಬೆಳಗ್ಗಿನ ಜಾವ ಬೃಹದಾಕಾರದ ಮರ ಬಿದ್ದು ಸುಮಾರು ಮೂರು ಗಂಟೆಗೂ ಹೆಚ್ಚು ಸಮಯ ರಸ್ತೆ ತಡೆ ಉಂಟಾಯಿತು.ಬೆಳ್ಳಾರೆ-ಪೆರುವಾಜೆ ರಸ್ತೆಯಲ್ಲಿ ಗುರುವಾರ ಬೃಹದಾಕಾರದ ಮರ ಬಿದ್ದು ಕೆಲ ಕಾಲ ಸಂಚಾರಕ್ಕೆ ತೊಡಕುಂಟಾಯಿತು. ಗುರುವಾರ ರಾತ್ರಿ ತಡ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಶುಕ್ರವಾರ ಬೆಳಿಗ್ಗಿನ ವೇಳೆಗೆ ಪೆರುವಾಜೆ ಶ್ರೀ ಜಲಗುರ್ದಾ ದೇವಿ ದೇವಸ್ಥಾನದ ಒಳಗೆ ನೀರು ನುಗ್ಗಿದೆ.

ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಶೇಖಮಲೆ ಬಳಿ ಗುಡ್ಡ ಕುಸಿದು ಮನೆಗೆ ಹಾನಿಯಾದ ಘಟನೆ ಸಂಭವಿಸಿದೆ.ಪುತ್ತೂರು ನಗರದ ಹಾರಾಡಿಯ ನೇತಾಜಿ ರಸ್ತೆ ಮುಂಭಾಗದಲ್ಲಿ ಮಳೆ ನೀರು ಶೇಖರಣೆಗೊಂಡು ಸಮಸ್ಯೆಯಾಗಿದೆ. ಬೆಟ್ಟಂಪಾಡಿಯಲ್ಲಿ ಮನೆಗೆ ಮರ ಬಿದ್ದು ಹಾನಿಯಾಗಿದೆ. ವಿಟ್ಲ ಕಸಬಾ ಗ್ರಾಮದಲ್ಲಿ ಧರೆ ಕುಸಿತವಾಗಿ ಮನೆಗೆ ಹಾನಿಯಾಗಿದೆ. ವಿಟ್ಲ ಕಸಬಾ ಗ್ರಾಮದ ಪಳಿಕೆ ಅನ್ನಮೂಲೆ ಹರೀಶ್ ಪೂಜಾರಿ ಎಂಬವರಿಗೆ ಸೇರಿದ ಮನೆಯ ಆವರಣ ಗೋಡೆಯು ರಾತ್ರಿ ಸುರಿದ ಮಳೆಗೆ ಜರಿದು ಹತ್ತಿರದ ಮನೆಗೆ ಬಿದ್ದು, ಶೀಟ್ ಹಾಸಿದ್ದು ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲೂ ಮಳೆ:

ಕುಕ್ಕೆ ಸುಬ್ರಹ್ಮಣ್ಯದಲ್ಲೂ ಮಳೆಯ ಅಬ್ಬರ ಹೆಚ್ಚಾಗಿದ್ದು ಘಟ್ಟ ಪ್ರದೇಶದಲ್ಲಿ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಗುರುವಾರ ರಾತ್ರಿಯಿಂದ ಸುರಿದ ಮಳೆಗೆ ಕುಮಾರಧಾರಾ ಸ್ನಾನಘಟ್ಟವು ಭಾಗಶಃ ಮುಳುಗಿದೆ. ನೀರಿನ ಹರಿವು ಹೆಚ್ಚಳದಿಂದಾಗಿ ದಡದಲ್ಲಿಯೇ ತೀರ್ಥ ಸ್ನಾನ ಮಾಡಬೇಕು.ಯಾರೂ ಕೂಡಾ ನದಿಗೆ ಇಳಿಯಬಾರದು ಎಂದು ಸುಬ್ರಹ್ಮಣ್ಯ ಪೋಲೀಸರು ಭಕ್ತರಿಗೆ ಸೂಚನೆ ನೀಡಿದ್ದಾರೆ.

 

LEAVE A REPLY