ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟಕ್ಕೆ ಕೊಕ್: ಅನಾಥಾಲಯಕ್ಕೆ ಸಂದಾಯವಾಗಲಿದೆ ಖರ್ಚಿನ ಹಣ

ನವದೆಹಲಿ: ಅಬ್ದುಲ್ ಕಲಾಂ ಅವರ ಹಾದಿಯಲ್ಲಿಯೇ ಹೆಜ್ಜೆಯಿಟ್ಟಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮುಸ್ಲಿಮರ ಪವಿತ್ರ ರಂಜಾನ್ ಪ್ರಯುಕ್ತ ಏರ್ಪಡಿಸುತ್ತಿದ್ದ ಇಫ್ತಾರ್ ಕೂಟವನ್ನು ರಾಷ್ಟ್ರಪತಿ ಭವನದಲ್ಲಿ ರದ್ದುಪಡಿಸಿ, ಇದಕ್ಕೆ ತಗಲುತ್ತಿದ್ದ ಖರ್ಚು-ವೆಚ್ಚದ ಹಣವನ್ನು ಅನಾಥಾಶ್ರಮಗಳಿಗೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ.
ಇದುವರೆಗೂ ರಂಜಾನ್ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ಹಬ್ಬದ ಹಿಂದಿನ ದಿನ ಗಣ್ಯರಿಗೆ ಇಫ್ತಿಯಾರ್ ಕೂಟವನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಎಲ್ಲ ರಾಷ್ಟ್ರೀಯ ಪಕ್ಷಗಳ ನಾಯಕರು, ಮುಸ್ಲಿಂ -ಧಾರ್ಮಿಕ ಸಂಘಟನೆಗಳ ಮುಖಂಡರು ಈ ಕೂಟದಲ್ಲಿ ಭಾಗವಹಿಸಿ ರಂಜಾನ್‌ಗೆ ಶುಭ ಕೋರಿ ಸಾಮೂಹಿಕ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಹಿಂದೆ ರಾಷ್ಟ್ರಪತಿ ಅಬ್ದುಲ್ ಕಲಾಂ ಕೂಡ ರಾಷ್ಟ್ರಪತಿ ಭವನದಲ್ಲಿ ಇಫ್ತಿಯಾರ್ ಕೂಟವನ್ನು ರದ್ದುಪಡಿಸಿ ಇದಕ್ಕೆ ತಗಲುತ್ತಿದ್ದ ಖರ್ಚು-ವೆಚ್ಚದ ಹಣವನ್ನು ಅನಾಥಾಶ್ರಮಗಳಿಗೆ ನೀಡಿ ಮಾನವೀಯತೆ ಮೆರೆದಿದ್ದರು.
ಸಾಮಾನ್ಯವಾಗಿ ಇಫ್ತಾರ್ ಕೂಟಕ್ಕೆ ಕೇಂದ್ರ ಸರ್ಕಾರವೇ ಹಣವನ್ನು ಬಿಡುಗಡೆ ಮಾಡುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇದಕ್ಕೆ ಕೆಲ ವರ್ಷಗಳಿಂದ ಇತಿಶ್ರೀ ಹಾಡಿದ್ದರಲ್ಲದೆ, ಖುದ್ದು ಪ್ರಧಾನಿಯೇ ಈ ಹಿಂದೆ ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗಿರಲಿಲ್ಲ. ಅಬ್ದುಲ್ ಕಲಾಂ ಅವರು ಐದು ವರ್ಷ ರಾಷ್ಟ್ರಪತಿ ಆಗಿದ್ದ ಸಂದರ್ಭದಲ್ಲಿ ಐದು ವರ್ಷವೂ ಇಫ್ತಾರ್ ಕೂಟ ನಡೆಸಿರಲಿಲ್ಲ. ಬಳಿಕ ಬಂದ ಪ್ರತಿಭಾ ಪಾಟೀಲ್ ಹಾಗೂ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಇಫ್ತಿಯಾರ್ ಕೂಟವನ್ನು ಏರ್ಪಡಿಸಿದ್ದರು.

LEAVE A REPLY