ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಸ್.ಆರ್. ಪಾಟೀಲ್ ರಾಜೀನಾಮೆ: ಕೈಪಾಳಯದಲ್ಲಿ ಹೊಸ ಕಂಪನ!

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಅವರು ತಮ್ಮ ಕಾರ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆಗೆ ಸಲ್ಲಿಸಿದ್ದಾರೆ.
ದಿಢೀರ್ ನಡೆದಿರುವ ಈ ರಾಜಕೀಯ ಬೆಳವಣಿಗೆ ಪಕ್ಷದಲ್ಲಿ ಹೊಸ ತಲ್ಲಣಮೂಡಿಸಿದೆ.
ಕಾಂಗ್ರೆಸ್‌ನ ಹಿರಿಯ ಮುಖಂಡರು, ಉತ್ತರ ಕರ್ನಾಟಕದ ಪ್ರಭಾವಿ ನಾಯಕರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರೂ ಆದ ಎಸ್.ಆರ್.ಪಾಟೀಲ್ ಅವರು ಸಚಿವಾಕಾಂಕ್ಷಿಯಾಗಿದ್ದರು. ಅವರನ್ನು ಇತ್ತೀಚೆಗೆ ಕಡೆಗಣಿಸಲಾಗಿತ್ತು. ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ಯಾವುದೇ ಸಭೆಗಳಲ್ಲಿ ಅವರಿಗೆ ಪ್ರಾತಿನಿಧ್ಯ ನೀಡಿರಲಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ನಿನ್ನೆ ನಡೆದ ಪದಾಧಿಕಾರಿಗಳ ಸಭೆಯಲ್ಲೂ ಅವರು ಪಾಲ್ಗೊಂಡಿರಲಿಲ್ಲ. ಚುನಾವಣಾ ಫಲಿತಾಂಶ ಬಂದ ನಂತರ ನಡೆದ ಹಲವಾರು ಸಭೆಗಳಲ್ಲೂ ಕೂಡ ಎಸ್.ಆರ್.ಪಾಟೀಲ್ ಅವರು ಭಾಗವಹಿಸಿರಲಿಲ್ಲ. ಮೇ ೨೫ರಂದೇ ರಾಹುಲ್‌ಗಾಂಧಿ ಅವರಿಗೆ ಈ-ಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಇತ್ತೀಚಿನ ಪಕ್ಷದ ಬೆಳವಣಿಗೆಗಳಿಂದ ಅವರು ಬೇಸತ್ತಿದ್ದರು ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷ ಕೇವಲ ೭೮ ಸ್ಥಾನಗಳನ್ನು ಪಡೆದು ೩೮ ಸ್ಥಾನ ಪಡೆದ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದು ಮೈತ್ರಿ ಸರ್ಕಾರ ರಚನೆಯಾಗಿ ನೂತನ ಸಚಿವ ಸಂಪುಟ ಬುಧವಾರ ಅಸ್ತಿತ್ವಕ್ಕೆ ಬರುತ್ತಿರುವ ಸಂದರ್ಭದಲ್ಲೇಈ ಬೆಳವಣಿಗೆ ಕುತೂಹಲ ಮೂಡಿಸಿದೆ.

LEAVE A REPLY