ಬೋಧ್‌ಗಯಾ ಸರಣಿ ಸ್ಫೋಟ ಪ್ರಕರಣ: ಐವರು ಐಎಂ ಉಗ್ರರಿಗೆ ಜೀವಾವಧಿ ಸಜೆ

ಪಾಟ್ನಾ: ಬೋಧ್‌ಗಯಾ ಸರಣಿ ಸ್ಫೋಟ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದ್ದೀನ್(ಐಎಂ) ಉಗ್ರಗಾಮಿ ಸಂಘಟನೆಯ ಐವರು ಭಯೋತ್ಪಾದಕರಿಗೆ ವಿಶೇಷ ಎನ್‌ಐಎ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ.
ಭಾರತೀಯ ದಂಡ ಸಂಹಿತೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆ ಹಾಗೂ ಸ್ಪೋಟಕಗಳ ಅಧಿನಿಯಮದ ವಿವಿಧ ಸೆಕ್ಷನ್‌ಗಳ ಅನ್ವಯ ಇಮ್ತಿಯಾಜ್ ಅನ್ಸಾರಿ, ಹೈದರ್ ಅಲಿ, ಮುಜಿಬ್ ಉಲ್ಲಾ ಒಮರ್ ಸಿದ್ದಿಖಿ ಹಾಗೂ ಅಜರುದ್ದೀನ್ ಖುರೇಷಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಬಿಹಾರದ ಪ್ರಸಿದ್ಧ ಯಾತ್ರಾ ಸ್ಥಳ ಬೋಧ್‌ಗಯಾದಲ್ಲಿ ಜುಲೈ ೭, ೨೦೧೩ರಂದು ಬೆಳಗ್ಗೆ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಈ ದಾಳಿಯಲ್ಲಿ ಬೌದ್ಧ ಬಿಕ್ಕುಗಳೂ ಸೇರಿದಂತೆ ಅನೇಕರು ಗಾಯಗೊಂಡಿದ್ದರು.
ಪ್ರಕರಣದ ಕುರಿತಂತೆ ವಿಚಾರಣೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ವಿಶೇಷ ನ್ಯಾಯಾಧೀಶರಾದ ಮನೋಜ್ ಕುಮಾರ್ ಸಿನ್ಹಾ ಅವರು ಐವರು ಉಗ್ರರಿಗೆ ಆಜೀವ ಶಿಕ್ಷೆ ತೀರ್ಪು ಪ್ರಕಟಿಸಿದರು.

LEAVE A REPLY