ಮಂಗಳೂರು ಮಳೆ: ಸಂತ್ರಸ್ತರಿಗೆ ಸಂಘನಿಕೇತನದಲ್ಲಿ ‘ಸಂಘ’ಟಿತ ರಕ್ಷಣೆ

 • ಹರೀಶ ಕುಲ್ಕುಂದ
  ಮಂಗಳೂರು: ನೆರೆಯಲ್ಲಿ ಸಿಲುಕಿದವರ ರಕ್ಷಣೆ… ಸಂತ್ರಸ್ತರಿಗೆ ಸಂಘನಿಕೇತನದಲ್ಲಿ ವಸತಿ… ಮಳೆಗೆ ಒದ್ದೆಯಾದವರಿಗೆ ಬೆಚ್ಚನೆಯ ಉಡುಪು..ಹಸಿದ ಹೊಟ್ಟೆಗೆ ಆಹಾರ…
  ಮಂಗಳೂರಿನಲ್ಲಿ ಮಂಗಳವಾರ ಸುರಿದ ಮಹಾಮಳೆ ಸಂತ್ರಸ್ತರ ನೆರವಿಗೆ ಮೊದಲು ಧಾವಿಸಿದ್ದು ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರ ಸಂಘಟನೆಗಳ ಕಾರ್ಯಕರ್ತರು. ಮಹಾಮಳೆಗೆ ಮಂಗಳೂರಿನ ಪರಿಸ್ಥಿತಿ ಬಿಗಡಾಯಿಸುತ್ತಲೇ ಫೀಲ್ಡ್‌ಗೆ ಇಳಿದ ೧೦೦೦ಕ್ಕೂ ಅಧಿಕ ಕಾರ್ಯಕರ್ತರು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಸಂತ್ರಸ್ತರನ್ನು ಸಂತೈಸಿದರು. ನೆರೆ ನೀರಿನಲ್ಲಿ ಸಿಲುಕಿಕೊಂಡವರನ್ನು ಬೋಟ್ ಮೂಲಕ ರಕ್ಷಿಸಿದರು. ಮನೆ ಕಳೆದುಕೊಂಡವರನ್ನು, ನೆರೆ ನೀರು ಮನೆಗೆ ನುಗ್ಗಿ ವಾಸ್ತವ್ಯ ಸಾಧ್ಯವಾಗದ ಮನೆಗಳ ಸದಸ್ಯರನ್ನು, ಮಳೆಗೆ ಸಿಲುಕಿ ಮನೆಗೆ ತೆರಳಲಾಗದವರನ್ನು ಸಂಘನಿಕೇತನಕ್ಕೆ ಕರೆತಂದು ವಸತಿ ಕಲ್ಪಿಸಿದ ಬಳಿಕವೇ ಕಾರ್ಯಕರ್ತರು ವಿಶ್ರಾಂತಿ ಪಡೆದದ್ದು. ಮಂಗಳೂರಿನ ಬಗ್ಗೆ, ಸಂಘಪರಿವಾರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದವರಿಗೆ ಮಂಗಳವಾರ ಕಾರ್ಯಕರ್ತರು ನೀಡಿದ ಸ್ವಾರ್ಥ, ಪಕ್ಷ, ಜಾತಿ, ಧರ್ಮ ಬೇಧ ರಹಿತ ಸೇವೆ ತಕ್ಕ ಉತ್ತರ ನೀಡಿದೆ. ಆರ್‌ಎಸ್‌ಎಸ್ ಕಾರ್ಯಕರ್ತರ ದಿಟ್ಟತನ, ಸೇವಾಕಾರ್ಯ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
  ಮಂಗಳವಾರ ಬೆಳಗ್ಗೆ ಮಳೆ ಬಿರುಸುಗೊಂಡು ಕೃತಕ ನೆರೆ ಸೃಷ್ಟಿಯಾಗುತ್ತಲೇ ಸಂಘದ ಕಾರ್ಯಕರ್ತರು ಹಿಂದೆ ಮುಂದೆ ನೋಡದೆ ರಕ್ಷಣಾ ಕಾರ್ಯಕ್ಕೆ ಮುಂದಾದರು. ಸರಕಾರ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಈ ಬಗ್ಗೆ ಯೋಚನೆ ಮಾಡುವ ಮುನ್ನವೇ ಸಂಘದ ಕಾರ್ಯಕರ್ತರು ತಮ್ಮ ಕರ್ತವ್ಯ ಎಂಬ ನೆಲೆಯಲ್ಲಿ ಸಂತ್ರಸ್ತರ ರಕ್ಷಣಾ ಕಾರ್ಯ ನಡೆಸಿದ್ದಾರೆ. ಆ ಮೂಲಕ ಸಂಘ ಎಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
  ಆರ್‌ಎಸ್‌ಎಸ್ ಕಾರ್ಯಾಲಯ ಸಂಘನಿಕೇತನದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿ ಎಲ್ಲೆಲ್ಲಿ ತೊಂದರೆ ಆಗಿದೆ ಎಂಬ ಮಾಹಿತಿ ಪಡೆದು ಕ್ಷಿಪ್ರವಾಗಿ ೧೫ರಿಂದ ೨೦ ಮಂದಿ ಕಾರ್ಯಕರ್ತರ ತಂಡವನ್ನು ಆಯಾ ಸ್ಥಳಗಳಿಗೆ ಕಳುಹಿಸಲಾಗಿದೆ. ಪ್ರತಿ ವಾರ್ಡ್‌ಗೆ ೨೦ ಮಂದಿ ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು. ಮನಪಾ ವ್ಯಾಪ್ತಿಯಲ್ಲಿ ನಾಲ್ಕು ವಲಯ ಗುರುತಿಸಿ, ಪ್ರತಿ ವಲಯಕ್ಕೆ ಒಬ್ಬ ಮುಖ್ಯಸ್ಥನನ್ನು ನೇಮಿಸಿ ಕಾರ್ಯಾಚರಣೆ ನಡೆಸಲಾಯಿತು. ೧೫೦ಕ್ಕೂ ಅಧಿಕ ಮಂದಿ ಕಾರ್ಯಕರ್ತರ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಒಟ್ಟು ಒಂದು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
  ಹಾನಿಗೊಳಗಾದ ಮನೆ, ಸ್ವತ್ತುಗಳ ನಷ್ಟ ಭರಿಸಲು, ಮನೆಗಳ ಪುನರ್‌ನಿರ್ಮಾಣಕ್ಕೂ ಆರ್‌ಎಸ್‌ಎಸ್ ಯೋಜನೆ ಹಾಕಿಕೊಂಡಿದೆ. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಹಾರದ ಭರವಸೆ ಒದಗಿಸಿದ್ದಾರೆ.
  500 ಮಂದಿಗೆ ಊಟ
  ಸೋಮವಾರ ರಾತ್ರಿ ಸಂಘನಿಕೇತನದಲ್ಲಿ ವಾಸ್ತವ್ಯವಿದ್ದವರ ಸಹಿತ ನಗರದ ವಿವಿದೆಢೆ ಮಳೆ ಸಂತ್ರಸ್ತರಾದ ೫೦೦ ಮಂದಿಗೆ ಸಂಘ ಪರಿವಾರ ಕಾರ್ಯಕರ್ತರು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಊಟ ಪೂರೈಸಿದ್ದಾರೆ. ಅತ್ತಾವರ ಶಾಲೆಯಲ್ಲಿದ್ದ ೬೫ ಮಂದಿ, ಅಳಕೆ ಪರಿಸರದ ೧೧೦ ಜನರಿಗೆ, ಬಿಜೈ ಕಾಪಿಕಾಡ್ ಶಾಲೆಯಲ್ಲಿದ್ದ ೬೨ ಮಂದಿಗೆ, ಜಪ್ಪಿನಮೊಗರುವಿನ ೨೨ ಮಂದಿಗೆ, ಜಪ್ಪಿನಮೊಗರಿವಿನ ಸಭಾಭವನವೊಂದರಲ್ಲಿದ್ದ ೭೦ ಮಂದಿಗೆ, ನಗರದ ಇತರ ವಿವಿಧ ಪ್ರದೇಶಗಳ ೨೬೦ ಸಹಿತ ಒಟ್ಟು ೫೦೦ಕ್ಕೂ ಅಧಿಕ ಮಂದಿಗೆ ಊಟ ಹಂಚಿಕೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಉಪ್ಪಿಟ್ಟು ಅವಲಕ್ಕಿ ನೀಡಲಾಗಿದೆ. ನಗರದ ದೇವಸ್ಥಾನಗಳು, ಕ್ಯಾಟರಿಂಗ್ ಉದ್ಯಮಿಗಳು, ಸಂಘ ಸಂಸ್ಥೆಗಳು ಸಂಘನಿಕೇತನಕ್ಕೆ ಊಟ, ಸಾರು, ಸಾಂಬಾರು, ಪಲ್ಯ, ಹಾಲು ನೀಡಿ ಸಹಕರಿಸಿದ್ದವು.
  120 ಮಂದಿಗೆ ವಸತಿ
  ಸೋಮವಾರ ರಾತ್ರಿ ಆರ್‌ಎಸ್‌ಎಸ್ ಕಾರ್ಯಾಲಯ ಸಂಘನಿಕೇತನದಲ್ಲಿ ನಗರದ ವಿವಿಧೆಡೆಯ ಸಂತ್ರಸ್ತ ೨೪ ಕುಟುಂಬಗಳ ೧೨೦ ಮಂದಿ ಉಳಿದುಕೊಂಡಿದ್ದಾರೆ. ಬಿಜೈ ಆನೆಗುಂಡಿ, ಪಾಂಡೇಶ್ವರ ಶಿವನಗರ, ಕಾಪಿಕಾಡ್, ಜಪ್ಪಿನಮೊಗರು ಪ್ರದೇಶದ ಸಂತ್ರಸ್ತರು ಸಂಘದ ಆತಿಥ್ಯ ಪಡೆದರು. ಪುರುಷ ಮತ್ತು ಮಹಿಳೆಯರಿಗೆ ವಾಸ್ತವ್ಯಕ್ಕೆ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ನಾನಕ್ಕೆ ವ್ಯವಸ್ಥೆಯಿತ್ತು. ನೆಲಕ್ಕೆ ಹಾಸಲು ಜಮಕಾನ, ಮಳೆಗೆ ಒದ್ದೆಯಾಗಿದ್ದವರಿಗೆ ಹೊಸ ಬೆಡ್‌ಶೀಟ್, ಸೀರೆ, ಲುಂಗಿ, ಟವೆಲ್, ಇತರ ವಸ್ತ್ರಗಳನ್ನು ಉಚಿತವಾಗಿ ನೀಡಲಾಯಿತು. ಅವೆಲ್ಲವನ್ನೂ ಕಾರ್ಯಕರ್ತರು ೧.೨೫ ಲಕ್ಷ ರೂ. ವೆಚ್ಚದಲ್ಲಿ ಒದಗಿಸಿದ್ದರು. ಹೊಸ ವಸ್ತ್ರಗಳನ್ನು ಸಂತ್ರಸ್ತರಿಗೇ ನೀಡಲಾಗಿದೆ. ಅಗತ್ಯವಿದ್ದರಿಗೆ ವೈದ್ಯಕೀಯ ನೆರವು ನೀಡಲಾಯಿತು.

LEAVE A REPLY