ದ್ರೌಪದಿ: ಧರ್ಮದ ಹಾದಿಯ ಕುಲುಮೆ

 • ಅಕ್ಷತಾ ಬಜಪೆ

  ಹಿಂದಿನ ಕಾಲದಲ್ಲಿ eನ ವೇದ-ಉಪನಿಷತ್ತುಗಳಲ್ಲಿ ಸಂಗ್ರಹವಾಗಿರುತ್ತಿತ್ತು. ಕಾಲ ಉರುಳಿದಂತೆ ಮನುಷ್ಯನ ಶೃದ್ಧೆ, ಯೋಚನಾಶಕ್ತಿ ಮೊದಲಿನಷ್ಟು ತೀಕ್ಷ್ಣವಾಗಿ ಉಳಿಯಲಿಲ್ಲ. ಹೀಗಾಗಿ ಪುರಾಣಗಳ ರಚನೆಯಾಯಿತು. ರಾಮಾಯಣ ಮಹಾಭಾರತದಂತಹ ಜಗತ್ತಿನ ಶ್ರೇಷ್ಠ ಗ್ರಂಥಗಳು ಅಂದು ನಡೆದು ಹೋದ ಘಟನೆಗಳ ಆಧಾರದ ಮೇಲೆ ನಿಂತಿದೆ ಎನ್ನುವುದೂ ನಮಗೆ ಗೊತ್ತಿದೆ.
  ಅದೇನೇ ಇರಲಿ, ಇಂದಿಗೂ ನಮಗೆ ಮಹಾಭಾರತದಂತಹ ಕಾವ್ಯ ಸಿಗುವುದಿಲ್ಲ. ಅದರಲ್ಲಿನ ಕಾಣದ ವ್ಯಕ್ತಿತ್ವವಿಲ್ಲ. ಅದರಲ್ಲಿ ಕಾಣದ ಸಮಸ್ಯೆಗಳು, ಅದರಲ್ಲಿ ಕಾಣದ ಯೋಚನೆಗಳು, ಮಲ್ಯಗಳು ಇಂದಿಗೂ ಜಗತ್ತಿನಲ್ಲಿ ಇಲ್ಲ.
  ಕೃಷ್ಣ ಸೂತ್ರಧಾರನಾಗಿದ್ದರೂ ಅದು ಪಾಂಡವರ ಕಥೆ. ಪಾಂಡವರ ಪತ್ನಿಯಾಗಿದ್ದ ದ್ರೌಪದಿ ಇಂದಿಗೂ ಜನಸಾಮಾನ್ಯರಿಗೆ ಅರ್ಥವಾಗದ ವ್ಯಕ್ತಿತ್ವ. ಆಕೆಯ ಬದುಕು ನಮಗೆ ಕಾಣುವಷ್ಟು ಸುಲಲಿತವಾಗಿರಲಿಲ್ಲ. ಪ್ರತೀ ಹೆಣ್ಣು ಮಗಳಿಗೂ ಈಕೆಯ ಬದುಕು ಆಕಾಶದಲ್ಲಿನ ನಕ್ಷತ್ರದಂತೆ. ದ್ರೌಪದಿ ಇಂದಿಗೂ ಭರತ ಭೂಮಿ ಕಂಡ ಶ್ರೇಷ್ಠ ಸ್ತ್ರೀ ಯತ್ನಗಳಲ್ಲಿ ಮೊದಲನೆಯವಳಾಗಿ ಕಾಣುತ್ತಾಳೆ. ಆದರೆ ಆಕೆಯ ಬದುಕು ಒಬ್ಬ ತಪಸ್ವಿನಿಯ ಬದುಕಿಗಿಂತ ಬಲು ಕಠಿಣವಾಗಿತ್ತು ಅನ್ನುವುದು ಮೇಲ್ನೋಟಕ್ಕೆ ಕಾಣದು. ದ್ರೌಪದಿ ದ್ರುಪದ ರಾಜನ ಮಗಳು. ಹಲವಾರು ವರುಷಗಳ ಕಾಲ ಪುತ್ರಸಂತಾನವಿಲ್ಲದೆ ನೊಂದಿದ್ದ ದ್ರುಪದ ಋಷಿಗಳ ಸಲಹೆಯಂತೆ ಮಹಾಯಜ್ಞವೊಂದನ್ನು ನಡೆಸುತ್ತಾನೆ. ತನ್ನ ರಾಜ್ಯವನ್ನು ಮುಂದೆ ಆಳಬಲ್ಲ ಪುತ್ರನ ಅಪೇಕ್ಷೆಯಲ್ಲಿದ್ದ ದ್ರುಪದನಿಗೆ ಅಗ್ನಿಯಲ್ಲಿ ಉದಿಸಿದ ಹೆಣ್ಣು ಮಗಳನ್ನು ಕಂಡು ಸಹಿಸಲಸಾಧ್ಯವಾದ ಕೋಪ ಬರುತ್ತದೆ. ಹುಟ್ಟಿದಾಕ್ಷಣ ಈತನ ಕೋಪಕ್ಕೆ ಗುರಿಯಾದ ದ್ರೌಪದಿ ಆಗಲೇ ಕಣ್ಣೀರಿಡುತ್ತಾಳೆ. ರಾಜ ಈಕೆಯನ್ನು ಪುತ್ರಿಯಾಗಿ ಸ್ವೀಕರಿಸಲೂ ಒಪ್ಪುವುದಿಲ್ಲ. ಪುತ್ರನ ಅಪೇಕ್ಷೆಯಲ್ಲಿದ್ದ ದ್ರುಪದನಿಗೆ ಈಕೆ ಹೆಣ್ಣು ಮಗಳೆಂಬ ತಿರಸ್ಕಾರ ಭಾವ. ಈ ನೋವು ಆಕೆಯನ್ನು ಬಹಳ ಕಾಲದವರೆಗೂ ಕಾಡುತ್ತದೆ. ತಂದೆ ಈಕೆಯನ್ನು ಮಗಳಾಗಿ ಸ್ವೀಕರಿಸಲು ತಾನೇ ಶಸ್ತ್ರ ಹಿಡಿದು ರಾಜ್ಯ ರಕ್ಷಿಸಬೇಕಾಯಿತು.
  ಹುಟ್ಟಿದಂದಿನಿಂದ ಹೋರಾಟ ಮಾಡುತ್ತಲೇ ಜೀವನ ಕಳೆದ ದ್ರೌಪದಿಯ ವಿವಾಹ ಮತ್ತು ಅನಂತರದ ಕಥೆ ನಮ್ಮಂತಹ ಸಾಮಾನ್ಯರ ಊಹೆಗೂ ನಿಲುಕದ ಬಿರುಗಾಳಿ. ಆಕೆ ಐವರು ಪಾಂಡವರನ್ನು ವರಿಸಿದ್ದು ನಮಗೆ ಗೊತ್ತಿದೆ. ಆದರೆ ಇದರ ಹಿಂದಿರುವ ಕಥೆ ನಮಗೆ ಆಶ್ಚರ್ಯ ತರುತ್ತದೆ. ಆಕೆ ಹಿಂದಿನ ಜನ್ಮದಲ್ಲಿ ಒಬ್ಬ ಬ್ರಾಹ್ಮಣ ಕನ್ಯೆಯಾಗಿದ್ದಳು. ತನಗೆ ಸರ್ವಶ್ರೇಷ್ಠನಾದ ಪತಿ ಬೇಕೆಂದು ಶಿವನನ್ನು ಕುರಿತಾಗಿ ತಪಸ್ಸು ಮಾಡಿದಳು. ಈಕೆಯ ಗಾಢ ತಪಸ್ಸಿಗೆ ಒಲಿದ ಶಿವನಲ್ಲಿ ಈಕೆ ನನಗೆ ಶ್ರೇಷ್ಟ ಧನುರ್ಧಾರಿ ಪತಿಯನ್ನು ಕರುಣಿಸು ಎಂದಳು. ಶಿವ ದೇವರು ತಥಾಸ್ತು ಎಂದರು. ಮತ್ತೆ ನನಗೆ ಧರ್ಮವಂತ ಪತಿಯನ್ನು ಕರುಣಿಸು ಎಂದಳು. ಶಿವದೇವ ತಥಾಸ್ತು ಎಂದರು. ಹೀಗೆ ಆಕೆ ೫ ಬಾರಿ ಕೇಳಿದಳು. ಶಿವ ಐದೂ ಬಾರಿ ತಥಾಸ್ತು ಎಂದ. ಆಮೇಲೆ ಆಕೆ ಕೇಳಿದ ವರಗಳ ಪರಿಣಾಮವೇನು ಎಂದು ಆಕೆಗೆ ಅರಿವಾಯಿತು. ಆದರೇನು ಮಾಡಲು ಸಾದ್ಯ. ಆಕೆ ಅಲ್ಲಿಯೇ ಶಿವನಲ್ಲಿ ಅಂಗಳಾಚುತ್ತಾಳೆ. ಐದು ಪತಿಯರೊಂದಿಗೆ ತಾನು ಹೇಗೆ ಬಾಳಲಿ ಎಂದು ಹಲುಬುತ್ತಾಳೆ. ಆಗ ಶಿವ ಕನಿಕರಿಸಿ ಹೆದರಬೇಡ. ನೀನು ಐವರು ಪತಿಯರನ್ನು ಹೊಂದುವುದು ವಿನಿಯಮ. ಆದರೆ ನೀನೆಂದೂ ಲೋಕಾಪವಾದಕ್ಕೆ ಗುರಿಯಾಗಲಾರೆ. ನಿನ್ನ ಪಾತಿವೃತ್ಯವನ್ನು ಉಳಿಸಿಕೊಳ್ಳುವೆ ಎಂದು ಭರವಸೆ ನೀಡಿ ಮಾಯವಾಗುತ್ತಾನೆ.
  ಇನ್ನು ಆಕೆಯನ್ನು ಅರ್ಜುನ ಸ್ವಯಂವರದಲ್ಲಿ ಗೆದ್ದುಕೊಂಡು ಅವರ ಜೋಪಡಿಗೆ ಬಂದಾಗ ಕುಂತಿ ತಿರುಗೆ ನೋಡದೇನೇ ತಂದಿರುವ ಭಿಕ್ಷೆಯನ್ನು ಐವರೂ ಹಂಚಿಕೊಳ್ಳಿ ಎಂದು ಆದೇಶಿಸುತ್ತಾಳೆ. ಆಮೇಲೆ ಎಲ್ಲರೂ ಕಂಗಾಲಾದಾಗ ಅರ್ಜುನನ ಸಹೋದರರು ತಾವು ಸನ್ಯಾಸ ಸ್ವೀಕಾರ ಮಾಡುವ ಯೋಚನೆ ಮಾಡುತ್ತಾರೆ. ಆಗ ತನ್ನ ಕಾರಣದಿಂದ ಈ ರೀತಿ ಆಗದಿರಲಿ ಎಂದು ಈಕೆ ಕುಂತಿಯ ಆದೇಶದಂತೆ ಆಕೆ ಐವರನ್ನೂ ವರಿಸುತ್ತಾಳೆ.
  ಆದರೆ ಒಬ್ಬ ಹೆಣ್ಣು ಮಗಳು ಐವರೊಂದಿಗೆ ಬಾಳುವುದು ಸುಲಭವೇ? ಆಕೆ ಐವರಿಗೂ ನ್ಯಾಯ ಒದಗಿಸುವುದು ಅಷ್ಟು ಸುಲಭವಲ್ಲ. ಆದರೆ ಆಕೆ ತನ್ನ ಬದುಕನ್ನು ತಪಸ್ಸು ಆಗಿಸಿಕೊಳ್ಳುತ್ತಾಳೆ. ಒಂದು ವರುಷ ಒಬ್ಬನಿಗೆ ಪತ್ನಿಯಾಗಿದ್ದು ಮುಂದಿನ ಬಾರಿ ಇನ್ನೊಬ್ಬನ ಬಳಿ ಹೋಗುವಾಗ ಅಗ್ನಿಯಿಂದ ಶುದ್ಧಳಾಗಿ ಮತ್ತೆ ಹೋಗುವ ನಿಯಮ ಮಾಡಿಕೊಳ್ಳುತ್ತಾಳೆ. ತನ್ನ ಇಡೀ ಜೀವನ ಇದೇ ತಪಸ್ಸಿನಲ್ಲಿ ಕಳೆಯುತ್ತಾಳೆ. ಪಾಂಡವರ ಸುಖಕ್ಕಾಗಿ, ಅವರ ಆದರ್ಶಗಳಿಗಾಗಿ ತಾನು ತನ್ನ ಜೀವನವನ್ನು ತಪಸ್ಸು ಮಾಡಿಕೊಂಡ ಆಕೆಗೆ ಮತ್ತೂ ಕಣ್ಣೀರು ತಪ್ಪಲಿಲ್ಲ. ದ್ಯೂತ ಸಭೆಯಲ್ಲಿ ಆಕೆಗಾದ ಅವಮಾನ ಆಕೆಯಲ್ಲಿನ ಮಾನವೀಯತೆಯನ್ನು ಸಾಯುವಂತೆ ಮಾಡಿತ್ತು. ಆದರೂ ಕೃಷ್ಣನ ಸಲಹೆಯಂತೆ ಆಕೆ ಎಲ್ಲವನ್ನೂ ನುಂಗಿಕೊಳ್ಳಬೇಕಾಯಿತು.
  ದ್ಯೂತದ ಮೋಸದ ಆಟದಲ್ಲಿ ತನ್ನನ್ನು, ತನ್ನ ಸೋದರರನ್ನು ಅಂದರೆ ದ್ರೌಪದಿಯ ಇತರ ಗಂಡಂದಿರನ್ನು, ಕೊನೆಗೆ ಆಕೆಯನ್ನೂ ಸೋತ ಯುಷ್ಟರ ಧರ್ಮದ ಪರವಾಗಿ ನಿಂತ. ತಾನು ಧರ್ಮವನ್ನು ಮೀರಲಾರೆ ಎಂದು ಆಕೆಯನ್ನೂ ಪಣಕ್ಕಿಟ್ಟ. ಆದರೆ ದುಶ್ಯಾಸನ ಆಕೆಯನ್ನು ಆಸ್ಥಾನದ, ದ್ಯೂತದ ನಿಯಮ ಮೀರಿ ಎಳೆದುಕೊಂಡು ಬಂದಾಗ ಯಾವ ಧರ್ಮವೂ ಆಕೆಯನ್ನು ಕಾಪಾಡಲಿಲ್ಲ. ಆಕೆ ಅದೇ ದ್ಯೂತಸಭೆಯಲ್ಲಿ ಎಲ್ಲರಲ್ಲೂ ನ್ಯಾಯಕ್ಕಾಗಿ ಅಂಗಲಾಚುತ್ತಾಳೆ. ಆಕೆಯ ಮಾತುಗಳು ಧರ್ಮದ ಮರ್ಮವನ್ನು ಅಣಕಿಸುತ್ತಿದ್ದವು.
  ಆಕೆ ಕೇಳುತ್ತಾಳೆ ಸುಧರ್ಮ ಸಭೆಯಲ್ಲಿರುವ ಭೀಷ್ಮ, ದ್ರೋಣಾದಿ ಎಲ್ಲ ಆಚಾರ್ಯರೇ ಇಲ್ಲಿ ನಡೆಯುತ್ತಿರುವ ಅನ್ಯಾಯಕ್ಕಿಂತ ನಿಮಗೆ ಹಸ್ತಿನಾಪುರದ ಸಿಂಹಾಸನದ ಉಪ್ಪಿನ ಋಣ ಹೆಚ್ಚಾ ಯಿತೇ? ಎಲ್ಲರೂ ಉಪಸ್ಥಿತರಿರುವ ಈ ಸಭೆಯಲ್ಲಿ ನನ್ನನ್ನು ಹೇಗೆ ಪಣಕ್ಕಿಟ್ಟಿರಿ. ದೃತರಾಷ್ಟ್ರ ರಾಜನಿಗೆ ಕುರುವಂಶದ ಕುಲವಧುವಿನ ಮಾನಕ್ಕಿಂತ ಪುತ್ರಪ್ರೇಮ ಹೆಚ್ಚಾಯಿತೇ? ಇಲ್ಲಿರುವ ಕಾನೂನು ಕಟ್ಟಳೆಗಳು ನಿಮ್ಮ ಯುವರಾಜನನ್ನು ತಡೆಯಲಾಗದಷ್ಟು ಬಲಹೀನವೇ ವಿಧುರರೇ? ಇಲ್ಲಿರುವ ಸಭೆ ಹೇಗೆ ಸಹಿಸಿಕೊಂಡಿತು ಈ ಮೋಸದಾಟವನ್ನು? ಏಕೆ ಮಹಾರಾಣಿ ಗಾಂಧಾರಿಗೆ ಈ ಮಾಹಿತಿ ಕೊಟ್ಟಿಲ್ಲ?
  ಅಷ್ಟಕ್ಕೂ ನಾನು ಯುಷ್ಟಿರನ ಧರ್ಮ ಪತ್ನಿ. ಅಂದ ಮೇಲೆ ಅವರ ಸರ್ವ ಸಂಪತ್ತಿನ ಮೇಲೆ ನನ್ನದೂ ಅಷ್ಟೇ ಅಕಾರವಿದೆ. ನನ್ನ ಅನುಮತಿ ಇಲ್ಲದೇ ಇದನ್ನು ಪಣಕ್ಕಿಟ್ಟದ್ದು ತಪ್ಪು. ಹಾಗಾಗಿ ಈ ಆಟದಲ್ಲಿ ಅರ್ಥವಿಲ್ಲ ತಾನೇ? ಅಷ್ಟಕ್ಕೂ ಧರ್ಮರಾಯ ತನ್ನನ್ನು ತಾನು ಸೋತ ಮೇಲೆ ನನ್ನನ್ನು ಪಣಕ್ಕಿಡುವ ಅಕಾರ ಇರುವುದಿಲ್ಲ. ಹಾಗಾಗಿ ನನ್ನನ್ನು ದ್ಯೂತದಲ್ಲಿ ಗೆಲ್ಲುವ ಪ್ರಶ್ನೆಯೇ ಬರುವುದಿಲ್ಲ. ಹೀಗೆ ಪರಿಪರಿಯಾಗಿ ವಾದ ಮುಂದಿಟ್ಟರೂ ಧರ್ಮಸಭೆ ಈಕೆಗಾದ ಅನ್ಯಾಯ ವನ್ನು ಪ್ರತಿಭಟಿಸುವ ಮನಸ್ಸು ಮಾಡುವುದಿಲ್ಲ.
  ಆಕೆ ವಿಶ್ವದಲ್ಲಿ ಶ್ರೇಷ್ಠರು, ವೀರರು ಎನಿಕೊಂಡಂತಹ ೫ ಜನ ಪತಿಯರನ್ನು ಹೊಂದಿದ್ದೂ, ಅವರ ಸಮ್ಮುಖದ ಆಕೆಯ ವಸ್ತ್ರಾಪರಣ ನಡೆಯುತು. ಅದೂ ಆಕೆ ತಪಸ್ಸು ಮಾಡಿ, ವರಪಡೆದು ಪಡೆದ ಪತಿಯರು ಆಕೆಯ ಶೀಲ ರಕ್ಷಿಸಲಾರದೇ ಹೋದರು. ಇಂದ್ರಪ್ರಸ್ಥ ದ ಸಾಮ್ರಾಜ್ಞಿಗೆ ತನ್ನ ಆಸ್ಥಾನದಲ್ಲಿಯೇ ಇಂತಹ ಘೋರ ಅನ್ಯಾಯವಾಯಿತು. ಇವೆಲ್ಲವೂ ನಡೆದದ್ದು ಧರ್ಮದ ಹೆಸರಿನಲ್ಲಿ ಎನ್ನುವುದೇ ಮಹಾನ್ ದುರಂತ.
  ಇಂತಹ ಘನಘೋರ ಅವಮಾನದ ಮಧ್ಯೆಯೂ ಆಕೆ ಎಲ್ಲ ನೋವು, ಎಲ್ಲ ಅಪಮಾನವನ್ನು ನುಂಗಿ ಸುಮ್ಮನಿರಬೇಕಾಯಿತು. ಅಂದು ಹರಡಿದ ಆಕೆಯ ಮುಡಿಯನ್ನು ವರುಷಗಳ ಕಾಲ ಆಕೆ ಕಟ್ಟಲೇ ಇಲ್ಲ. ಈ ಕಹಿ ನೆನಪಿನ ಜೊತೆಗೆ ಕುರುಕ್ಷೇತ್ರ ಸಂಗ್ರಾಮದ ಕೊನೆಯ ದಿನದವರೆಗೂ ಬದುಕಿದಳು. ತನ್ನದೇ ಆಸ್ಥಾನದಲ್ಲಿ ವಸ್ತ್ರಾಪಹರಣಕ್ಕೊಳಗಾಗಿ ಪೂರ್ಣ ಕುಸಿದರೂ ಆಕೆ ಶಾಪ ಕೊಡಲಾಗಲಿಲ್ಲ ತನ್ನ ಸಿಟ್ಟನ್ನು ಶಮನಿಸಿಕೊಳ್ಳಲಾಗಲಿಲ್ಲ. ಮತ್ತೆ ಮೋಸದ ಬಲೆಗೆ ಬಿದ್ದು ತನ್ನ ಐವರು ಪುತ್ರರನ್ನೂ ಒಂದೇ ಬಾರಿಗೆ ಕಳೆದುಕೊಂಡಳು. ಹೀಗೆ ಸಾಲು ಸಾಲು ತ್ಯಾಗ-ಬಲಿದಾನಗಳನ್ನು ಮಾಡಿ ತನ್ನನ್ನು ತಾನು ಸವೆಸಿಕೊಂಡು ಬದುಕಿದಳು. ಅಗ್ನಿಯ ಪುತ್ರಿಗೂ ತನ್ನೊಡಲಿನ ಅಗ್ನಿಯೊಂದಿಗೆ ಬದುಕುವ ಅನಿವಾರ್ಯತೆ ಸೃಷ್ಟಿ ಮಾಡಿತ್ತೇ ಸಮಾಜ. ಇದೇ ಕಾರಣಕ್ಕೋ ಏನೋ ಆಕೆ ರಾಣಿಯಾಗಿ, ಐವರ ಪತ್ನಿಯಾಗಿ ಕಾಣುವುದಕ್ಕಿಂತ ಹೆಚ್ಚಾಗಿ ಒಬ್ಬ ಶ್ರೇಷ್ಠ ಸ್ತ್ರೀ ರತ್ನವಾಗಿ ಕಾಣುತ್ತಾಳೆ. ಇಂದಿಗೂ ನಮ್ಮ ಸಮಾಜದಲ್ಲಿ ಹೆಣ್ಣು ಮಗಳು ಸಮಾಜದಲ್ಲಿ ಧರ್ಮವೆಂಬ ಅಡಕತ್ತರಿಯಲ್ಲಿ, ಸಿಲುಕಿ ತಾವು ಸವೆದು ಸಮಾಜದ ಸ್ವಾಸ್ಥ್ಯ ಉಳಿಸುವುದನ್ನು ಕಾಣುತ್ತೇವೆ. ಅಂದು ಧರ್ಮದ ಹೆಸರಿನಲ್ಲಿ ಸಮಾಜ ಹೆಣ್ಣು ಮಗಳ ತಾಳ್ಮೆಯನ್ನು ಪರೀಕ್ಷಿಸಿದರೆ ಇಂದು ಸಂಪ್ರಾದಾಯಗಳ ಬೇಲಿಯಲ್ಲಿ ನಡೆಯುತ್ತಿದೆ. ಅಂದು ಆಕೆ ಸಿಡಿದಿದ್ದರೆ ಬಹುಶಃ ಸಮಾಜ ಇಂದು ಆಕೆಯನ್ನು ಈ ಪರಿ ಗೌರವಿಸುತ್ತಿರಲಿಲ್ಲವೇನೋ? ಇಂದಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಹೆಣ್ಣು ಮಕ್ಕಳ ತಾಳ್ಮೆ ಯೇ ಆಕೆಯ ಅತಿ ದೊಡ್ಡ ಭೂಷಣ. ಹಾಗೆಂದು ಅದು ಆಕೆಯ ಬಲಹೀನತೆ ಎಂದು ಸಮಾಜ ಅಂದುಕೊಳ್ಳದಿದ್ದರೆ ಆಕೆ ಭೂಮಿ ತಾಯಿಯಷ್ಟೇ ಶಾಂತಳಾಗಿರುತ್ತಾಳೆ ಎನ್ನುವುದು ಸತ್ಯ. ಆದರೆ ಇದು ನ್ಯಾಯವೇ ಎನ್ನುವುದು ಬಲು ದೊಡ್ಡ ಜಿeಸೆ.

 

LEAVE A REPLY