ಮೈತ್ರಿ ಪ್ರಶ್ನೆಯೇ ಇಲ್ಲ, ಸ್ವಂತ ಬಲದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ: ಗೌಡ್ರು

ಹಾಸನ: ಜೆಡಿಎಸ್ ಸ್ವಂತ ಬಲದ ಮೇಲೆ ಸರಕಾರ ರಚನೆ ಮಾಡಲಿದೆ. ಯಾವ ಪಕ್ಷದೊಂದಿಗೂ ಮೈತ್ರಿ ಪ್ರಶ್ನೆಯೇ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ, ಜಿಲ್ಲೆಗೆ ಭಾರೀ ಅನ್ಯಾಯವಾಗಿದೆ. ೧೯೯೪ರಲ್ಲಿ ೧೧೩ ಸ್ಥಾನಗಳನ್ನು ಪಡೆದು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲಾಗಿತ್ತು. ಅದೇ ರೀತಿ ಈ ಬಾರಿಯೂ ಸಹ ಪಕ್ಷ ಬಹುಮತದಿಂದ ಸರ್ಕಾರ ರಚನೆ ಮಾಡುವುದು ನಿಶ್ಚಿತ ಎಂದು ಹೇಳಿದರು.
ಸಮೀಕ್ಷೆ ಬಗ್ಗೆ ನಂಬಿಕೆ ಇಲ್ಲ!
ಸಿ ಫೋರ್ ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಜನರ ವಿಶ್ವಾಸ ನಮ್ಮ ಮೇಲಿದೆ. ಅಧಿಕಾರ ಹಿಡಿಯುವುದು ನಾವೇ ಎಂದು ವಿಶ್ವಾಸ ವ್ಯಕ್ತಪಡಿಸಿದ ಗೌಡ್ರು, ಜಿಲ್ಲೆಗೆ ಐಐಟಿ ಮತ್ತು ವಿಮಾನ ನಿಲ್ದಾಣ ಸ್ಥಾಪನೆಗೆ ಬಹಳಷ್ಟು ಶ್ರಮ ಪಟ್ಟಿದ್ದೆ ಎಂದು ನೆನಪಿಸಿಕೊಂಡರು.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುತ್ತಾರೆ. ಜನತೆ ಅವರ ಮೇಲೆ ಭಾರೀ ವಿಶ್ವಾಸವಿಟ್ಟುಕೊಂಡಿದ್ದಾರೆ. ಇದು ಮಗನ ಮೇಲಿನ ಮಮಕಾರದ ಮಾತಲ್ಲ, ಜನರು ಬುದ್ಧಿವಂತರಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತು ಹೋಗಿದ್ದು, ಹಾಗಾಗಿ ಈ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್‌ನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದರು.

LEAVE A REPLY