ರಾಷ್ಟ್ರಪಿತ ಮಹಾತ್ಮಗಾಂಧಿ ಹತ್ಯೆ ಮರು ವಿಚಾರಣೆ: ಮನವಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಹತ್ಯೆ ಬಗ್ಗೆ ಮರು ತನಿಖೆ ನಡೆಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಮುಂಬೈ ಮೂಲದ ಅಭಿನವ್ ಭಾರತ್ ಚಾರಿಟಬಲ್ ಟ್ರಸ್ಟ್‌ನ ವಿಶ್ವಸ್ಥರಾದ ಪಂಕಜ್ ಪಡ್ನಾವಿಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ ಮತ್ತು ಎಲ್. ನಾಗೇಶ್ವರ ರಾವ್ ಅವರನ್ನು ಒಳಗೊಂಡ ಪೀಠ ಈ ಮನವಿಯನ್ನು ತಳ್ಳಿ ಹಾಕಿದೆ.
ಗಾಂಧಿ ಹತ್ಯೆ ಪ್ರಕರಣದ ಬಗ್ಗೆ ಮರು ತನಿಖೆ ನಡೆಸುವಂತೆ ಕೋರಿರುವ ಅರ್ಜಿಯು ಶೈಕ್ಷಣಿಕ ಸಂಶೋಧನೆ ಆಧಾರಿತವಾಗಿದೆ. ಹಲವಾರು ವರ್ಷಗಳ ಹಿಂದೆ ನಡೆದ ಈ ಘಟನೆ ಬಗ್ಗೆ ಮತ್ತೆ ತನಿಖೆ ನಡೆಸಲು ಇದೊಂದೇ ಆಧಾರವಾಗುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.
ಗಲ್ಲು ಶಿಕ್ಷೆಗೆ ವಿಧಿಸಲ್ಪಟ್ಟ ಗಾಂಧಿ ಹಂತಕರಾದ ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಅಪ್ಟೆ ಅವರನ್ನು ವಿವಿಧ ನ್ಯಾಯಾಲಯಗಳು ಮೂರು ಗುಂಡುಗಳ ಸಿದ್ಧಾಂತ ಮೇಲೆ ಶಿಕ್ಷೆ ವಿಧಿಸಿವೆ. ಆದರೆ ಗೋಡ್ಸೆ ಅಲ್ಲದೇ ಬೇರೊಬ್ಬನಿಂದ ನಾಲ್ಕನೇ ಗುಂಡು ಹಾರಿಸಲಾಗಿದೆಯೇ ಎಂಬ ಅನುಮಾನಗಳ ಬಗ್ಗೆ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಪಂಕಜ್ ತಮ್ಮ ಮನವಿಯಲ್ಲಿ ಕೋರಿದ್ದರು.

LEAVE A REPLY