ಉತ್ತರಾಖಂಡದ ಆಗಸದಲ್ಲಿ ಕಾಣಿಸಿಕೊಂಡ ಚೀನಾ ಮಿಲಿಟರಿ ಹೆಲಿಕಾಪ್ಟರ್

ಹೊಸದಿಲ್ಲಿ: ಭಾರತೀಯ ವಾಯು ಪ್ರದೇಶವನ್ನು ಉಲ್ಲಂಘಿಸಿ ಚೀನಾದ ಸೇನಾ ಹೆಲಿಕಾಪ್ಟರ್, ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ಬಾರಾಹೋತಿ ಪ್ರದೇಶದ ಆಗಸದಲ್ಲಿ ಸುತ್ತು ಹೊಡೆದಿದ್ದು, ಮತ್ತೊಮ್ಮೆ ತನ್ನ ಉದ್ಧಟತನವನ್ನು ‘ಡ್ರ್ಯಾಗನ್’ ಸೋಮವಾರ ಪ್ರದರ್ಶಿಸಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಚೀನಾ, ಭಾರತೀಯ ವಾಯು ಪ್ರದೇಶದಲ್ಲಿ ಹಾರಾಟ ನಡೆಸಿದ ನಾಲ್ಕನೇ ಪ್ರಕರಣ ಇದಾಗಿದೆ.
ಮಾ. ೮ರಂದು ಚೀನದ ಎರಡು ಹೆಲಿಕಾಪ್ಟರ್‌ಗಳು ಲಡ್ಡಾಕ್‌ನಲ್ಲಿ ಬೆಳಗ್ಗೆ ೮.೫೫ರ ಹೊತ್ತಿಗೆ ಆಗಸದಲ್ಲಿ ಸುತ್ತು ಹೊಡೆದಿದ್ದವು. ಮಾ.೧೦ರಂದು ಚೀನಾದ ಮೂರು ಹೆಲಿಕಾಪ್ಟರ್‌ಗಳು ಬಾರಾಹೋತಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದವು. ಗಡಿ ನಿಯಂತ್ರಣ ರೇಖೆ ದಾಟಿ ಬಂದ ಈ ಮಿಲಿಟರಿ ಹೆಲಿಕಾಪ್ಟರ್‌ಗಳು ಸುಮಾರು ೪ ಕಿ.ಮೀ. ಭಾರತೀಯ ಭೂಭಾಗವನ್ನು ಅತಿಕ್ರಮಿಸಿದ್ದವಲ್ಲದೆ, ಸುಮಾರು ಐದು ನಿಮಿಷ ಆಗಸದಲ್ಲಿ ಸುತ್ತು ಹೊಡೆದಿದ್ದವು. ಅದಾದ ಬಳಿಕ ಲಡ್ಡಾಕ್ ಪ್ರದೇಶದಲ್ಲೂ ಚೀನೀ ಹೆಲಿಕಾಪ್ಟರ್‌ಗಳು ಕಾಣಿಸಿಕೊಂಡಿತ್ತು. ಇದಕ್ಕೂ ಮುನ್ನ ಒಂದು ಸುಮಾರು ೧೯ ಕಿ.ಮೀ. ನಷ್ಟು ಭಾರತೀಯ ಭೂಪ್ರದೇಶವನ್ನು ಅತಿಕ್ರಮಿಸಿ ಚೀನಾ ಹೆಲಿಕಾಪ್ಟರ್, ಲಡ್ಡಾಕ್‌ನ ಡೆಸ್ಪಾಂಗ್ ಮತ್ತು ಟ್ರಿಗ್ ಹೈವೇ ಆಗಸದಲ್ಲಿ ಸುತ್ತು ಹೊಡೆದಿತ್ತು.

LEAVE A REPLY