ಉತ್ತರ ಪ್ರದೇಶ, ಬಿಹಾರ ಉಪಚುನಾವಣೆ: ಎಸ್ಪಿ, ಜೆಆರ್‌ಡಿ ಮೇಲುಗೈ

ಲಖನೌ/ಪಾಟ್ನಾ: ಉತ್ತರ ಪ್ರದೇಶದ ಎರಡು ಲೋಕಸಭಾ ಸ್ಥಾನಗಳು ಹಾಗೂ ಬಿಹಾರದ ಒಂದು ಲೋಕಸಭಾ ಸ್ಥಾನ ಹಾಗೂ ಎರಡು ವಿಧಾನಸಭಾ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಆರ್‌ಜೆಡಿ ಗೆಲುವು ಸಾಧಿಸಿವೆ. ಬಿಹಾರದ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದುಕೊಂಡಿದೆ.
ಉತ್ತರಪ್ರದೇಶದ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ.
ಬುಧವಾರ ಫಲಿತಾಂಶ ಹೊರಬಿದ್ದಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಐದು ಬಾರಿ ಪ್ರತಿನಿಧಿಸಿದ್ದ ಗೋರಖ್‌ಪುರದಲ್ಲಿ ಸಮಾಜವಾದಿ ಪಕ್ಷದ ಪ್ರವೀಣ್ ಕುಮಾರ್ ನಿಶಾದ್ ಗೆಲುವು ದಾಖಲಿಸಿದ್ದಾರೆ. ಗೆಲುವಿನ ಮತದ ಅಂತರ ೨೧,೮೮೧. ಬಿಜೆಪಿ ಅಭ್ಯರ್ಥಿ ಉಪೇಂದ್ರ ದತ್ ಶುಕ್ಲಾ ಅವರು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಇನ್ನು ಫಲ್ಪುರ್ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ನಾಗೇಂದ್ರ ಪ್ರತಾಪ್, ಬಿಜೆಪಿ ಅಭ್ಯರ್ಥಿ ಕೌಶಲೇಂದ್ರ ಸಿಂಗ್ ವಿರುದ್ಧ ೫೯,೪೬೦ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಬಿಹಾರದ ಅರೆರಿಯಾ ಲೋಕಸಭಾ ಕ್ಷೇತ್ರದಲ್ಲಿ ಆರ್‌ಜೆಡಿ ಅಭ್ಯರ್ಥಿ ಸರ್ಫರಾಜ್ ಅಲಂ, ಬಿಜೆಪಿ ಅಭ್ಯರ್ಥಿ ಪ್ರದೀಪ್ ಸಿಂಗ್ ವಿರುದ್ಧ ೬೩ ಸಾವಿರ ಮತಗಳ ಅಂತರದಲ್ಲಿ ಜಯ ದಾಖಲಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರಿಂದ ತೆರವಾಗಿದ್ದ ಗೋರಖ್ ಪುರ್ ಮತ್ತು ಫುಲ್ಪುರ್ ಲೋಕಸಭಾ ಸ್ಥಾನಗಳಿಗೆ ಕಳೆದ ಭಾನುವಾರ ಉಪ ಚುನಾವಣೆ ನಡೆದಿತ್ತು. ಬಿಎಸ್ಪಿ, ಎಸ್ಪಿಗೆ ಹಠಾತ್ ಬೆಂಬಲ ಘೋಷಿಸಿದ್ದರಿಂದ ಬಿಜೆಪಿಯ ರಾಜಕೀಯ ಲೆಕ್ಕಚಾರ ಬುಡಮೇಲುಗೊಂಡಿದೆ.

LEAVE A REPLY