ಅಧಿಕಾರಿಗಳಿಗೆ ಎಸಿಬಿ ಶಾಕ್: ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ದಾಳಿ

ಮಂಗಳೂರು/ಬೆಳಗಾವಿ/ವಿಜಯಪುರ: ರಾಜ್ಯದ ಹಲವೆಡೆಗಳಲ್ಲಿ ಇಂದು ದಿಢೀರ್ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ!
ಮಂಗಳೂರು, ಬೆಳಗಾವಿ, ವಿಜಯಪುರ, ಧಾರವಾಡ, ಕೋಲಾರ, ಚಿಕ್ಕಮಗಳೂರು, ತುಮಕೂರು ಮೊದಲಾದೆಡೆಗಳಲ್ಲಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಎಸಿಬಿ, ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ತನಿಖೆಯಲ್ಲಿ ತೊಡಗಿದೆ.
ಮಂಗಳೂರಿನ ಕುಂಟಿಕಾನದಲ್ಲಿರುವ ಅಬಕಾರಿ ಡಿವೈಎಸ್ಪಿ ಮನೆಗೆ ಶುಕ್ರವಾರ ಎಸಿಬಿ ದಾಳಿ ನಡೆದಿದೆ. ಉಡುಪಿ ಅಬಕಾರಿ ಡಿವೈಎಸ್ಪಿ ವಿನೋದ್ ಮನೆಗೆ ಎಸಿಬಿ ಎಸ್ಪಿ ಶೃತಿ ನೇತೃತ್ವದಲ್ಲಿ ದಾಳಿ ನಡೆದಿದೆ. ಬೆಳಿಗ್ಗೆ ದಾಳಿ ನಡೆಸಿರುವ ಸುಮಾರು ೩೫ ಅಧಿಕಾರಿಗಳು ಮನೆಯಲ್ಲಿ ತಪಾಸಣೆ ಆರಂಭಿಸಿದ್ದಾರೆ. ಮನೆಯ ಸುತ್ತ ಭದ್ರತೆ ಒದಗಿಸಲಾಗಿದೆ
ಬೆಳಗಾವಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನ ಅಧಿಕಾರಿ ರಾಜಶ್ರೀ ಜೈನಾಪುರೆ ಮನೆ ಸೇರಿ ಅವರಿಗೆ ಸಂಬಂಧಿಸಿದ ಆರು ಕಡೆ ದಾಳಿ ನಡೆಸಲಾಗಿದೆ. ಎಸಿಬಿ ಎಸ್ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ತುಮಕೂರಲ್ಲಿ ಕಡೂರು ತಾಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಮನೆ ಮೇಲೆ ಕೂಡಾ ಎಸಿಬಿ ದಾಳಿ ನಡೆದಿದೆ. ಬೆಳಗಾವಿ ಕುವೆಂಪು ನಗರದ ನಿವಾಸ, ಹುಬ್ಬಳ್ಳಿ ಪತಿ ನಿವಾಸ, ಜೈನಾಪುರೆ ಆಪ್ತರ ಮನೆಗಳು ಹಾಗೂ ಅವರ ಸ್ವಂತ ಊರಾದ ವಿಜಯಪುರದ ನಿವಾಸ ಮತ್ತು ಅವರ ಸರ್ಕಾರಿ ಕಚೇರಿ ಮೇಲೆ ದಾಳಿ ನಡೆಸಿರುವ ಎಸಿಪಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ತಿಪಟೂರಿನ ವಿದ್ಯಾನಗರದ ನಿವಾಸದ ಮೇಲೆ ಎಸಿಬಿ ಡಿವೈಎಸ್ಪಿ ಮೋಹನ್ ನೇತೃತ್ವದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಕೋಲಾರ ಜಿಲ್ಲೆ ಮುಳಬಾಗಿಲು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಎಇಇ ಅಪ್ಪಿರೆಡ್ಡಿ ಮನೆ ಮೇಲೆ ಕೂಡಾ ಎಸಿಬಿ ದಾಳಿ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

LEAVE A REPLY