40 ಡಿಗ್ರಿಗೇರಿದೆ ಈಗ ಉಷ್ಣಾಂಶ : ಕೇರಳದಲ್ಲಿ ಏರಲಿದೆ ಇನ್ನಷ್ಟು ಬಿಸಿಲ ಝಳ

ಕಾಞಂಗಾಡು: ಕೇರಳದಲ್ಲಿ ಮುಂದಿನ ದಿನಗಳಲ್ಲಿ ಉಷ್ಣಾಂಶ ಇನ್ನಷ್ಟು ಏರಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕೇರಳದಲ್ಲಿ ತಾಪಮಾನ ಮಟ್ಟ ಮತ್ತಷ್ಟು ಹೆಚ್ಚಾಗಲಿದೆ. ಇಂದಿನಿಂದ ಮುಂದಿನ ಮೂರು ದಿನಗಳಲ್ಲಿ ತಾಪಮಾನದಲ್ಲಿ ೪ರಿಂದ ೧೦ ಡಿಗ್ರಿ ತನಕ ಹೆಚ್ಚಾಗಲಿದೆ. ಆ ಹಿನ್ನೆಲೆಯಲ್ಲಿ ಗರಿಷ್ಠ ಜಾಗ್ರತೆ ಪಾಲಿಸಬೇಕೆಂದು ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ.
ಕೇಂದ್ರ ಹವಾಮಾನ ಇಲಾಖೆ ನೀಡಿರುವ ಇಂತಹ ಮುನ್ನೆಚ್ಚರಿಕೆಯ ನಿರ್ದೇಶದಿಂದಾಗಿ ಅಗತ್ಯದ ಮುಂಜಾಗ್ರತಾ ಕ್ರಮ ಕೈಗೊಳ್ಳಲು ರಾಜ್ಯ ಸರಕಾರವು ಎಲ್ಲಾ ಜಿಲ್ಲೆಗಳ ಪ್ರಾಕೃತಿಕ ದುರಂತ ನಿರ್ವಹಣಾ ವಿಭಾಗದ ಉಪಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ಈ ಮಧ್ಯೆ ರಾಜ್ಯದಲ್ಲಿ ಉಷ್ಣಾಂಶ ಈಗ ೪೦ ಡಿಗ್ರಿಗೇರಿದೆ. ಇದು ವರ್ಷದಲ್ಲಿ ಅತಿ ಹೆಚ್ಚು ದಾಖಲಾದ ತಾಪಮಾನ ಮಟ್ಟವಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪಾಲ್ಘಾಟ್ ಜಿಲ್ಲೆಯಲ್ಲಿ ಇತರ ಜಿಲ್ಲೆಗಳಿಗಿಂತ ಉಷ್ಣಾಂಶ ಅತಿ ಹೆಚ್ಚಾಗಿದೆ. ಕೇರಳದಲ್ಲಿ ಕಳೆದ ೩೦ ವರ್ಷಗಳಿಂದ ತಾಪಮಾನ ಹೆಚ್ಚಾಗುತ್ತಾ ಸಾಗತೊಡಗಿದೆ. ಅದರಿಂದಾಗಿ ಬಿಸಿಲ ಝಳ ಹೆಚ್ಚಾಗಿ ಸುಟ್ಟ ಗಾಯಗಳೂ ಉಂಟಾಗುತ್ತಿವೆ. ಈ ನಿಟ್ಟಿನಲ್ಲಿ ಮಧ್ಯಾಹ್ನದ ವೇಳೆ ಮನೆಯಿಂದ ಹೊರಗಡೆ ಬಿಸಿಲಲ್ಲಿ ಕೆಲಸ ಮಾಡುವುದಕ್ಕೆ ನಿಯಂತ್ರಣ ಹೇರಬೇಕೆಂದು ಇಲಾಖೆಯು ಸಲಹೆ ನೀಡಿದೆ.

LEAVE A REPLY