ಕಾಂಗ್ರೆಸ್ ಉದ್ದೇಶಕ್ಕೆ ಸರಕಾರಿ ಕಾರ್ಯಕ್ರಮ: ಸಿಎಂ ವಿರುದ್ಧ ಕೇಸು ದಾಖಲಿಸಲು ಅನುಮತಿಗೆ ಮನವಿ

ಮಂಗಳೂರು: ಸರಕಾರಿ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಉದ್ದೇಶಕ್ಕೆ ಬಳಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮೂವರು ಸಚಿವರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಮಂಗಳೂರಿನ ಸಾಮಾಜಿಕ ಕಾರ್ಯಕರ್ತರೊಬ್ಬರು ರಾಜ್ಯಪಾಲರಿಗೆ ದಾಖಲೆ ಸಹಿತ ಮನವಿ ಸಲ್ಲಿಸಿದ್ದಾರೆ.
ಸಿಎಂ ಮತ್ತು ಸಚಿವರ ದಕ್ಷಿಣ ಕನ್ನಡ ಭೇಟಿ ಸಂದರ್ಭ ಸರಕಾರಿ ಸಮಾರಂಭ ಆಯೋಜಿಸಿ ಅದನ್ನು ಕಾಂಗ್ರೆಸ್ ಪಕ್ಷದ ಉದ್ದೇಶಕ್ಕೆ ಬಳಸಿಕೊಂಡ ಬಗ್ಗೆ ಸಿಆರ್‌ಪಿಸಿ ಸೆಕ್ಷನ್ ೧೯೭ರ ಅಡಿ ಸ್ವಯಂ ಆಗಿ ಪ್ರಕರಣ ದಾಖಲಿಸಬೇಕು. ಇಲ್ಲವಾದಲ್ಲಿ ಕೇಸು ದಾಖಲಿಸಲು ತನಗೆ ಅನುಮತಿ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಕಾರ್ಯದರ್ಶಿ ಶಶಿಧರ ಶೆಟ್ಟಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ಸಿಎಂ ಮತ್ತು ಸಚಿವರ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿದರೆ ಸಾರ್ವಜನಿಕರ ತೆರಿಗೆಯ ಹಣ ಮತ್ತು ಅಧಿಕಾರ ದುರುಪಯೋಗಪಡಿಸಿದ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿ.ಕೆ. ಶಿವಕುಮಾರ್, ರಮಾನಾಥ ರೈ, ಯು.ಟಿ. ಖಾದರ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಲಿದೆ. ಇದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇವರೆಲ್ಲರಿಗೆ ಕಂಟಕವಾಗುವ ಸಾಧ್ಯತೆಯಿದೆ.
೨೦೧೭ ಅ.೨೨ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದ.ಕ.ಜಿಲ್ಲೆಯಲ್ಲಿ ವಿವಿಧ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ವೇಳೆ ಪ್ರತಿ ಸರಕಾರಿ ಕಾರ್ಯಕ್ರಮಗಳಲ್ಲೂ ಸರಕಾರದ ಸಾಧನೆ ಹೇಳುವುದರ ಜತೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದ್ದರು. ಈ ಮೂಲಕ ಸರಕಾರಿ ಸಮಾರಂಭವನ್ನು ರಾಜಕೀಯ ಉದ್ದೇಶಕ್ಕೆ ಬಳಸಿದ್ದರು ಎನ್ನುವುದು ಸಾಮಾಜಿಕ ಕಾರ್ಯಕರ್ತ ಶಶಿಧರ ಶೆಟ್ಟಿ ಅವರ ಆರೋಪ.
ಸರ್ಕಾರಿ ಕಾರ್ಯಕ್ರಮಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಗೆ ಆಯಾ ಇಲಾಖೆಗಳ ಅನುದಾನ ಬಳಸಿಕೊಳ್ಳಲಾಗಿದೆ. ಜನರ ತೆರಿಗೆ ಹಣದಿಂದ ನಡೆಸಿದ ಈ ಕಾರ್ಯಕ್ರಮದಲ್ಲಿ ಜವಾಬ್ದಾರಿಯುತ ಜನಪ್ರತಿನಿಧಿಗಳು ರಾಜಕೀಯ ಭಾಷಣ ಮಾಡಿದ್ದಾರೆ. ತಮ್ಮ ಪಕ್ಷವನ್ನು ಹೊಗಳಿದ್ದಲ್ಲದೆ, ಇನ್ನೊಂದು ಪಕ್ಷವನ್ನು
ಟೀಕಿಸಲು ಈ ವೇದಿಕೆ ಬಳಸಿಕೊಂಡಿದ್ದಾರೆ. ಇದರ ವಿವರವನ್ನು ಮಾಹಿತಿ ಹಕ್ಕಿನಡಿ ಪಡೆದುಕೊಂಡಿದ್ದು, ಒಂದು ದಿನದ ಕಾರ್ಯಕ್ರಮಕ್ಕೆ ಸುಮಾರು ೬೫ ಲಕ್ಷ ರೂ. ವಿನಿಯೋಗಿಸಿರುವ ಬಗ್ಗೆ ಮೂರು ಇಲಾಖೆಗಳು ದಾಖಲೆ ಒದಗಿಸಿವೆ. ಉಳಿದ ಇಲಾಖೆಗಳ ಖರ್ಚುವೆಚ್ಚದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಹೀಗಿರುವಾಗ ಪಕ್ಷದ
ಪ್ರಚಾರವನ್ನು ಪಕ್ಷದ ವೇದಿಕೆಯಲ್ಲಿ ಮಾಡುವುದರ ಬದಲು ಸರಕಾರಿ ಕಾರ್ಯಕ್ರಮಗಳಲ್ಲಿ ಬಳಸಿಕೊಂಡಿರುವುದು ಸರಿಯಲ್ಲ. ಇದು ಕೇವಲ ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳಿಗೆ ಹಾಗೂ ಅಧಿಕಾರಿಗಳಿಗೂ ಅನ್ವಯವಾಗುತ್ತದೆ ಎಂದು ಶಶಿಧರ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದು ಆರಂಭ ಮಾತ್ರ. ಇನ್ನು ಮುಂದೆ ಯಾರೇ ಆಗಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದರೆ ದಾಖಲೆ ಸಮೇತ ಕ್ರಿಮಿನಲ್ ಕೇಸು ದಾಖಲಿಸುತ್ತೇವೆ. ವಿವಿಧ ಇಲಾಖೆಗಳು ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಖರ್ಚು ಮಾಡಿದ ದಾಖಲೆ, ಭಾಷಣದ ಸಿಡಿ, ಪತ್ರಿಕಾ ವರದಿಯನ್ನು ರಾಜ್ಯಪಾಲರಿಗೆ ನೀಡಲಾಗಿದೆ. ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಪ್ರಯಾಣದ ವೆಚ್ಚವನ್ನು ರಾಜಭವನವೇ ಪಡೆದುಕೊಳ್ಳಬೇಕು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಎರಡನೇ ಬಾರಿ ಮುಖ್ಯಮಂತ್ರಿ ದ.ಕ. ಪ್ರವಾಸದ ವೇಳೆ ರಾಜಕೀಯ ಮಾತನಾಡಿದ್ದರೆ, ಆ ಬಗ್ಗೆಯೂ ದೂರು ದಾಖಲಿಸಲಾಗುವುದು ಎಂದರು.

 

LEAVE A REPLY