ಮಡಿಕೇರಿಯಲ್ಲಿ ವನ್ಯಜೀವಿಗಳ ಹಾವಳಿ : ಪರಿಹಾರ ಸೂತ್ರಕ್ಕೆ ಆಗ್ರಹಿಸಿ ಪ್ರತಿಭಟನೆ

ಮಡಿಕೇರಿ:ಜಿಲ್ಲೆಯಲ್ಲಿ ನಿರಂತರವಾಗಿ ಕಾಡಾನೆ ಸಹಿತ ವನ್ಯ ಜೀವಿಗಳ ಹಾವಳಿಯಿಂದ ಬೆಳೆ ಹಾನಿಯೊಂದಿಗೆ ಜೀವಹಾನಿ ಸಂಭವಿಸುತ್ತಿದ್ದರೂ, ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸುವಲ್ಲಿ ಅರಣ್ಯ ಇಲಾಖೆ ವಿಫಲ ವಾಗಿದೆ ಎಂದು ಆರೋಪಿಸಿ ಬೆಳೆಗಾರರು ಹಾಗೂ ಕಾರ್ಮಿಕರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ರೈತ ಸಂಘದ ಜಿಲ್ಲಾ ಘಟಕ, ಜಿಲ್ಲಾ ರೈತರು ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿ, ಸಿಪಿಎಂ, ದಲಿತ ಸಂಘರ್ಷ ಸಮಿತಿ, ಯುಕೋ, ಕಾರ್ಮಿಕ ಸಂಘಟನೆಗಳು ಒಗ್ಗೂಡಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಅರಣ್ಯ ಭವನದ ಮುಂಭಾಗ ಘೋಷಣೆಗಳ ಸಹಿತ ಪ್ರತಿಭಟನೆ ನಡೆಸಿದವು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮನು ಸೋಮಯ್ಯ, ಹೋರಾಟ ಸಮಿತಿಯ ಅಧ್ಯಕ್ಷ ಪ್ರವೀಣ್ ಬೋಪಯ್ಯ ಮುಂದಾಳತ್ವದಲ್ಲಿ ಶುಕ್ರವಾರ ಬೆಳಗ್ಗೆ ನಗರದ ಗಾಂಧಿ ಮೈದಾನದಿಂದ ಅರಣ್ಯ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಸುತ್ತೋಲೆಗೆ ಅಗ್ನಿ: ಕಾಡಾನೆ ಸಹಿತ ವನ್ಯ ಜೀವಿಗಳ ಹಾವಳಿಯಿಂದ ಉಂಟಾಗುತ್ತಿ ರುವ ಕೃಷಿ ಹಾನಿ, ಜೀವ ಹಾನಿಗೆ ಸಂಬಂಧಿಸಿದಂತೆ ನೀಡಬೇಕಾಗಿರುವ ಪರಿಹಾರ ಕುರಿತ ಅರಣ್ಯ ಇಲಾಖೆಯ ಸುತ್ತೋಲೆ ಅವೈಜ್ಞಾನಿಕವೆಂದು ಆರೋಪಿಸಿದ ಪ್ರತಿಭಟನಾಕಾರರು, ಸುತ್ತೋಲೆಯ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಗೆಡಹಿದರು.
ಈ ಸಂದರ್ಭ ಮಾತನಾಡಿದ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಮನು ಸೋಮಯ್ಯ, ವನ್ಯ ಜೀವಿಗಳ ಹಾವಳಿಯಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದಲ್ಲಿ ನೀಡುತ್ತಿರುವ ೫ ಲಕ್ಷ ರೂ. ಪರಿಹಾರ ಧನವನ್ನು ೩೦ ಲಕ್ಷ ರೂ.ಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಕಳೆದ ನಾಲ್ಕೂವರೆ ವರ್ಷಗಳ ರಾಜ್ಯ ಸರಕಾರದ ಆಡಳಿತದ ಅವಧಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದ ೩೮ ಜೀವ ಹಾನಿ ಪ್ರಕರಣಗಳು ನಡೆದಿದ್ದರೂ, ಸೂಕ್ತ ಕ್ರಮಕೈಗೊಳ್ಳದ ಸಿಎಂ ಕೊಡಗನ್ನು ಅನಾಥವನ್ನಾಗಿ ಮಾಡಿರುವುದಾಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಆರೋಪಿಸಿದರು.

LEAVE A REPLY