ಹೊಸ ಹುರುಪಿನ ಸಿನಿಮಾ

ಪ್ರೇಕ್ಷಕರು ಸಿನಿಮಾದಲ್ಲಿ ಹಲವು ಅಂಶಗಳನ್ನು ಹುಡುಕಿಕೊಂಡು ಥಿಯೇಟರ್‌ಗೆ ಬರುತ್ತಾರೆ. ಒಬ್ಬೊಬ್ಬರಿಗೆ ಚಿತ್ರದ ಮೇಲೆ ಒಂದೊಂದು ನಿರೀಕ್ಷೆಗಳಿರುತ್ತದೆ. ಕೆಲವು ಪ್ರೇಕ್ಷಕರು ಬಯಸಿದ ಎಲ್ಲಾ ಸಂಗತಿಗಳನ್ನು ನೀಡಿ ಅವರಿಗೆ ಮೆಚ್ಚುಗೆಯಾಗುತ್ತವೆ. ಅಂತಹ ಸಿನಿಮಾಗಳನ್ನು ಜನರು ಬಹುಕಾಲ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಅಂತಹ ಸಿನಿಮಾಗಳಲ್ಲಿ ಒಂದಾಗುವ ಭರವಸೆ ಕನ್ನಡಕ್ಕಾಗಿ ಒಂದನ್ನು ಒತ್ತಿ… ಚಿತ್ರದ ಮೇಲಿದೆ ಎಂದು ಮಾತಿಗಿಳಿದವರು ಸದ್ಯದ ಬಹುಬೇಡಿಕೆಯ ಹಾಸ್ಯನಟ ಚಿಕ್ಕಣ್ಣ.
ಕನ್ನಡಕ್ಕಾಗಿ ಒಂದನ್ನು ಒತ್ತಿ… ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿರುವ ಹಾಸ್ಯನಟ ಚಿಕ್ಕಣ್ಣ ಚಿತ್ರದಲ್ಲಿ ತಮ್ಮ ಪಾತ್ರ ಮತ್ತು ಚಿತ್ರತಂಡದ ಬಗ್ಗೆ ಮಾತನಾಡಿದರು. ಬಹುತೇಕ ತೆರೆಹಿಂದೆ ಮತ್ತು ತೆರೆ ಮುಂದೆ ಹೊಸ ಪ್ರತಿಭೆಗಳೇ ಸೇರಿ ಮಾಡಿದ ಸಿನಿಮಾವಿದು ಎನ್ನುವ ಚಿಕ್ಕಣ್ಣ ಚಿತ್ರತಂಡದ ಪರಿಶ್ರಮ, ಹೊಸತನದಲ್ಲಿ ಸಿನಿಮಾವನ್ನು ತೋರಿಸಬೇಕೆಂಬ ಅವರ ಹಂಬಲ ಸಿನಿಮಾದ ಮೇಲೆ ತನಗೆ ನಿರೀಕ್ಷೆ ಮೂಡಿಸುವಂತೆ ಮಾಡಿದೆ ಎನ್ನುತ್ತಾರೆ. ಸಿನಿಮಾವೆಂದ ಮೇಲೆ ಒಂದೊಳ್ಳೆ ಕಥೆಯಿರಬೇಕು. ಅದು ಈ ಚಿತ್ರದಲ್ಲಿದೆ ಎನ್ನುವ ಚಿಕ್ಕಣ್ಣ, ಎಲ್ಲಾವರ್ಗದ ಪ್ರೇಕ್ಷಕರನ್ನು ಹಿಡಿದು ಕೂರಿಸಬಲ್ಲಂಥ ಚಿತ್ರಕಥೆಯನ್ನು ನಿರ್ದೇಶಕ ಕುಶಾಲ್ ಬರೆದಿದ್ದಾರೆ. ಅದನ್ನು ಪ್ರೇಕ್ಷಕರ ಮನಮುಟ್ಟುವ ರೀತಿಯಲ್ಲಿ ತೆರೆಮೇಲೆ ತಂದಿದ್ದಾರೆ ಎಂಬ ನಂಬಿಕೆ ತನ್ನದು. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿರುವ ಚಿತ್ರ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬಂದು ರಂಜಿಸಲಿದೆ ಎನ್ನುತ್ತಾರೆ.
ಇನ್ನು ಚಿತ್ರದ ಬಗ್ಗೆ ಮಾತಿಗಿಳಿದ ಮತ್ತೊಬ್ಬ ನಟ ರಂಗಾಯಣ ರಘು, ಕನ್ನಡಕ್ಕಾಗಿ ಒಂದನ್ನು ಒತ್ತಿ… ಸಿನಿಮಾದಲ್ಲಿ ತನ್ನ ಪಾತ್ರದ ಶೂಟಿಂಗ್ ಇದ್ದಿದ್ದು ಬಹಳ ಕಡಿಮೆ ದಿನಗಳು. ಚಿತ್ರದಲ್ಲಿ ನಾನು ಚಿಕ್ಕಣ್ಣನ ತಂದೆಯ ಪಾತ್ರವನ್ನು ನಿರ್ವಹಿಸಿದ್ದೇನೆ. ಹೊಸ ಹುಡುಗರ, ಹೊಸ ತಂಡದ ಹುರುಪು ನೋಡಿ ನಾನು ಬೆರಗಾದೆ ಎನ್ನುತ್ತಾರೆ. ಸಿನಿಮಾದ ಟೈಟಲ್ ಪ್ರೇಕ್ಷಕರನ್ನು ಸೆಳೆಯುತ್ತದೆ. ಸಿನಿಮಾದಲ್ಲಿ ಏನಿದೆ, ಏನು ಸಬ್ಜೆಕ್ಟ್ ಅಂಥ ಎಲ್ಲರೂ ಕೇಳುತ್ತಿದ್ದಾರೆ. ಅಂತಿಮವಾಗಿ ನಾವೇನೇ ಹೇಳಿದರೂ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಬೇಕು. ಮನರಂಜಿಸುವಂತಿರಬೇಕು ಇದು ಅಂತಹ ಸಿನಿಮಾವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಚಾಮುಂಡೇಶ್ವರಿ ಸಿನಿ ಕಂಬೈನ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗುತ್ತಿರುವ ಕನ್ನಡಕ್ಕಾಗಿ ಒಂದನ್ನು ಒತ್ತಿ… ಚಿತ್ರಕ್ಕೆ ರಂಜಿತ್ ಗೌಡ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ರಿಷಿಕೇಶ್ ಮತ್ತು ಕಾರ್ತಿಕ್ ಜೆ.ಕಿರಣ್ ಅವರ ಛಾಯಾಗ್ರಾಹಣ, ಅರ್ಜುನ್ ಕಿಟ್ಟು ಸಂಕಲನವಿದೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದ್ದು, ಕುಶಾಲ್, ಯೋಗರಾಜ್‌ಭಟ್, ಜಯಂತ್ ಕಾಯ್ಕಿಣಿ, ಸಿಂಪಲ್ ಸುನಿ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಚಿತ್ರಕ್ಕೆ ಯುವ ನಿರ್ದೇಶಕ ಕುಶಾಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಪ್ರಮುಖ ತಾರಾಗಣದಲ್ಲಿ ಅವಿನಾಶ್, ಕೃಷಿ ತಾಪಂಡ, ಚಿಕ್ಕಣ್ಣ, ದತ್ತಣ್ಣ, ರಂಗಾಯಣ ರಘು, ಮಿಮಿಕ್ರಿ ಗೋಪಿ, ಶ್ರೀನಿವಾಸ ಮೇಷ್ಟ್ರು, ನಾಗರಾಜ್‌ಮೂರ್ತಿ, ಜಯಶ್ರೀ, ಎಂ.ಎಸ್. ಉಮೇಶ್, ಸುಚೇಂದ್ರ ಪ್ರಸಾದ್, ಡಾ. ಕಿಂಗ್‌ಮೋಹನ್ ಮುಂತಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಇದೇ ತಿಂಗಳ ಅಂತ್ಯದೊಳಗೆ ಕನ್ನಡಕ್ಕಾಗಿ ಒಂದನ್ನು ಒತ್ತಿ.., ಚಿತ್ರದ ಟೀಸರ್‌ಗಳನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ, ಏಪ್ರಿಲ್ ತಿಂಗಳಿನಲ್ಲಿ ಚಿತ್ರದ ಆಡಿಯೋವನ್ನು ಹೊರತರುವ ಪ್ಲಾನ್ ಮಾಡಿಕೊಂಡಿದೆ. ಮುಂದಿನ ಮೇ ತಿಂಗಳಿನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ.

LEAVE A REPLY