ಅಂಧರ ವಿಶ್ವಕಪ್‌ನಲ್ಲೂ ಪಾರಮ್ಯ ಮೆರೆದ ಭಾರತ: ಭಾರತ ವಿಶ್ವ ಚಾಂಪಿಯನ್

ಹೊಸದಿಲ್ಲಿ: ಸುನಿಲ್ ರಮೇಶ್ ಅವರ ಅತ್ಯದ್ಭುತ ೯೩ ರನ್‌ಗಳ ಆಟದಿಂದಾಗಿ ಭಾರತ ತಂಡ ಅಂಧರ ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ನೆರವಾಗಿದೆ. ಯುಎಇನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ರೋಚಕ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ೨ ವಿಕೆಟ್‌ಗಳಿಂದ ಸೋಲಿಸುವ ಮೂಲಕ ಮತ್ತೊಮ್ಮೆ ಅಂಧರ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನಿಗದಿತ ೪೦ ಓವರ್‌ಗಳಲ್ಲಿ ೩೦೮ ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ಪಡೆದ ಭಾರತ ತಂಡ ಮೊದಲ ಆಕ್ರಮಣಕಾರಿಯಾಗಿಯೇ ಆಟವನ್ನು ಆರಂಭಿಸಿತ್ತು. ಕೇವಲ ೧೫ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೧೧೧ ರನ್ ಬಾರಿಸಿತು.
ಆದರೆ ಆ ಬಳಿಕ ಭಾರತ ತಂಡ ಬೇಗನೆ ೨ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿಕೊಂಡಿತು. ೨ ರನೌಟ್
ಗಳಿಂದ ಭಾರತ ಒತ್ತಡಕ್ಕೆ ಸಿಲುಕಿತು. ೧೬ನೇ ಓವರ್ ಬಳಿಕ ಭಾರತದ ಸ್ಕೋರ್ ೩ ವಿಕೆಟ್ ನಷ್ಟಕ್ಕೆ ೧೧೬. ೧೬ನೇ ಓವರ್ ಪಂದ್ಯದ ಗತಿಯನ್ನು ಬದಲಿಸಿತು.
೬೨ ರನ್ ಬಾರಿಸಿದ ನಾಯಕ ಅಜಯ್ ತಿವಾರಿ ಹಾಗೂ ಸುನಿಲ್ ರಮೇಶ್ ಜೊತೆಯಾದರು. ಅವರು ಜವಾಬ್ದಾರಿಯುತ ಆಟವನ್ನು ಪ್ರದರ್ಶಿಸಿದರು. ಇದರಿಂದ ೨೫ ಓವರ್‌ಗಳಲ್ಲಿ ಭಾರತದ ಸ್ಕೋರ್ ೩ ವಿಕೆಟ್ ನಷ್ಟಕ್ಕೆ ೧೯೦. ಭಾರತ ೩೫ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೨೭೧ ಎಂಬ ಸ್ಥಿತಿಯಲ್ಲಿ ಸುನಿಲ್ ರಮೇಶ್ ಅವರ ವಿಕೆಟ್ ಕಳೆದುಕೊಂಡಿತು. ರಮೇಶ್ ವಿಕೆಟನ್ನು ಆಮಿರ್ ಇಶ್ಫಾಕ್ ಪಡೆದರು.
ಭಾರತ ತಂಡ ಇನ್ನೇನು ಕೊನೆಯ ಹಂತಕ್ಕೆ ಬಂದು ಪಂದ್ಯವನ್ನು ಗೆಲ್ಲುತ್ತಿದೆ ಎಂಬ ಪರಿಸ್ಥಿತಿಯಲ್ಲಿ ನಾಯಕ ಅಜಯ್ ತಿವಾರಿ ವಿಕೆಟ್ ಕಳೆದುಕೊಂಡಿತು. ಅದರ ಜೊತೆ ಆ ಬಳಿಕ ಆತುರದಿಂದ ಮತ್ತೆರಡು ವಿಕೆಟ್ ಉದುರಿದವು. ಕೊನೆಯಲ್ಲಿ ಭಾರತ ತಂಡ ಪಂದ್ಯವನ್ನು ರೋಚಕ ೨ ವಿಕೆಟ್‌ಗಳಿಂದ ಗೆದ್ದುಕೊಂಡಿತು.
ಹಾಲಿ ಚಾಂಪಿಯನ್ ಭಾರತ ತಂಡ ಪಾಕಿಸ್ತಾನ ತಂಡವನ್ನು ಜ.೧೩ರಂದು ನಡೆದ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ೭ ವಿಕೆಟ್‌ಗಳಿಂದ ಸೋಲಿಸಿತ್ತು.
ಪಾಕಿಸ್ತಾನದ ಬೃಹತ್ ಮೊತ್ತ:
ಬದರ್ ಮುನೀರ್ ಅವರ ಉತ್ತಮ ಅರ್ಧ ಶತಕದ ನೆರವಿನಿಂದ ಪಾಕಿಸ್ತಾನ ನಿಗದಿತ ೪೦ ಓವರ್‌ಗಳಲ್ಲಿ ೮ ವಿಕೆಟ್‌ಗಳ ನಷ್ಟಕ್ಕೆ ೩೦೭ ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಆ ಮೂಲಕ ೫ನೇ ಅಂಧರ ವಿಶ್ವಕಪ್ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತಕ್ಕೆ ಬೃಹತ್ ಮೊತ್ತದ ಗುರಿಯನ್ನು ನೀಡಿತು. ರಿಯಾಸತ್ ಖಾನ್ ಹಾಗೂ ನಾಯಕ ನಾಸಿರ್ ಅಲಿ ಕೂಡ ಉತ್ತಮವಾದ ಆಟದ ಪ್ರದರ್ಶನ ನೀಡಿದರು. ರಿಯಾಸತ್ ೪೮ ರನ್ ಹೊಡೆದರೆ, ನಾಯಕ ನಾಸಿರ್ ೪೭ ರನ್ ಹೊಡೆದರು. ಇಬ್ಬರೂ ಅರ್ಧಶತಕದಿಂದ ವಂಚಿತರಾದರು. ಟಾಸ್ ಗೆದ್ದು ಪಾಕಿಸ್ತಾನಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದ ಭಾರತ ತಂಡದ ಮುಂದೆ ಬೃಹತ್ ಸವಾಲು ಎದುರಾಯಿತು. ಪಾಕಿಸ್ತಾನ ಕೇವಲ ೨೭ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೨೦೦ ರನ್‌ಗಳ ಗಡಿಯನ್ನು ದಾಟಿತ್ತು.

 

LEAVE A REPLY