ಬೆಳ್ಳಿ ಪರದೆಯ ಮೇಲೆ ಬಂಗಾರದ ರಾಜಕುಮಾರ

ದೊಡ್ಮನೆ ಹುಡುಗ ಚಿತ್ರದ ನಂತರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಚಿತ್ರ ರಾಜಕುಮಾರ ಇಂದು ತೆರೆಗೆ ಬರುತ್ತಿದೆ. ಈಗಾಗಲೇ ಟ್ರೇಲರ್‌ಗಳು ಮತ್ತು ಹಾಡುಗಳ ಮೂಲಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸದ್ಯದ ಮಟ್ಟಿಗೆ ಹೈ ವೋಲ್ಟೇಜ್ ಸಿನಿಮಾ ಎಂದೇ ಬಿಂಬಿತವಾಗಿರುವ ರಾಜಕುಮಾರ ಕನ್ನಡ ಚಿತ್ರಪ್ರೇಮಿಗಳಿಗೆ, ಅದರಲ್ಲೂ ಪುನೀತ್ ರಾಜಕುಮಾರ್ ಫ್ಯಾನ್ಸ್‌ಗೆ ಮುಂಬರುವ ಯುಗಾದಿ ಖುಷಿಯನ್ನು ಡಬಲ್ ಮಾಡುವುದಂತೂ ಗ್ಯಾರೆಂಟಿ.
ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದ ರಾಜಕುಮಾರ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ಗಳು ಸಹಜವಾಗಿಯೇ ರಾಜಕುಮಾರನ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಲತಾಣದಲ್ಲಿ ರಾಜಕುಮಾರ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸುಮಾರು ೧೫ ದಿನಗಳಲ್ಲಿ ಚಿತ್ರದ ಟ್ರೇಲರ್‌ನ್ನು ಒಂದೂವರೆ ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇನ್ನು ಪುನೀತ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾದ ಅಪ್ಪು ಡ್ಯಾನ್ಸ್ ಟೀಸರ್ ಕೇವಲ ಎರಡೇ ದಿನಗಳಲ್ಲಿ ಎಂಟು ಲಕ್ಷಕ್ಕು ಹೆಚ್ಚು ಮಂದಿ ವೀಕ್ಷಿಸಿzರೆ.
ಚಿತ್ರತಂಡದ ಮೂಲಗಳ ಪ್ರಕಾರ ರಾಜಕುಮಾರ ಕರ್ನಾಟಕದಾದ್ಯಂತ ಸುಮಾರು ೩೫೦ಕ್ಕೂ ಅಕ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ತೆರೆ ಕಾಣುತ್ತಿದೆ. ಬೆಂಗಳೂರಿನ ಬಹುತೇಕ ಎ ಮಲ್ಟಿಪ್ಲೆಕ್ಸ್‌ಗಳಲ್ಲಿ ರಾಜಕುಮಾರ ಚಿತ್ರದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದ್ದು, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲೂ ರಾಜಕುಮಾರನ ಆಗಮನಕ್ಕೆ ಅದ್ದೂರಿ ತಯಾರಿ ನಡೆದಿದೆ. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ರಾಜಕುಮಾರನ ರಿಲೀಸ್‌ಗೆ ಭರ್ಜರಿ ಸಿದ್ಧತೆ ನಡೆದಿದೆ.
ಕರ್ನಾಟಕದಲ್ಲಿ ಚಿತ್ರ ಬಿಡುಗಡೆಯಾದ ಎರಡು ದಿನಗಳ ನಂತರ ವಿದೇಶಗಳಲ್ಲೂ ಚಿತ್ರದ ರಿಲೀಸ್‌ಗೆ ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ, ಅದಕ್ಕೂ ಭರದ ಸಿದ್ದತೆ ಮಾಡಿಕೊಂಡಿದೆ. ಇದೇ ಮಾರ್ಚ್ ೨೯ ರಂದು ರಾಜಕುಮಾರ ಸಿಂಗಾಪೂರ , ಅಮರಿಕಾಗಳಲ್ಲಿ ರಿಲೀಸ್ ಆಗಲಿದೆ, ಏಪ್ರಿಲ್ ೧ರಂದು ಕೆನಡಾದಲ್ಲಿ ಹಾಗೂ ಎಪ್ರಿಲ್ ೭ ರಂದು ಲಂಡನ್‌ನಲ್ಲಿ ರಿಲೀಸ್ ಆಗಲಿದೆ.
ದೊಡ್ಮನೆ ಹುಡುಗ ಚಿತ್ರ ಪುನೀತ್ ರಾಜಕುಮಾರ್ ಅವರಿಗೆ ನಿರೀಕ್ಷಿತ ಗೆಲವು ತಂದುಕೊಡುವಲ್ಲಿ ವಿಫಲವಾದ್ದರಿಂದ, ಸಹಜವಾಗಿಯೇ ರಾಜಕುಮಾರ ಚಿತ್ರದ ಮೇಲೆ ನಿರೀಕ್ಷೆ ಕೊಂಚ ಹೆಚ್ಚಾಗಿಯೇ ಇದೆ. ದೊಡ್ಡ ಬಜೆಟ್, ಬಹುದೊಡ್ಡ ತಾರಾಬಳಗ, ರಿಚ್ ಮೇಕಿಂಗ್ ಹೀಗೆ ಹಲವು ವಿಶೇಷತೆಗಳಿಂದ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ರಾಜಕುಮಾರ ತೆರೆಮೇಲೆ ಎಷ್ಟರ ಮಟ್ಟಿಗೆ ಕಮಾಲ್ ಮಾಡಲಿದ್ದಾನೆ ಎಂಬುದು ಇದೇ ವಾರಾಂತ್ಯಕ್ಕೆ ಗೊತ್ತಾಗಲಿದೆ.
ರಾಜಕುಮಾರ ಚಿತ್ರದಲ್ಲಿ ಪುನೀತ್ ರಾಜಕುಮಾರ್‌ಗೆ ನಾಯಕಿಯಾಗಿ ಪ್ರಿಯಾ ಆನಂದ್ ಜೊತೆಯಾಗಿದ್ದಾರೆ. ಉಳಿದಂತೆ ತಮಿಳು ನಟ ಶರತ್ ಕುಮಾರ್, ಬಹುಭಾಷಾ ನಟ ಪ್ರಕಾಶ್ ರೈ, ಅನಂತ ನಾಗ್, ರಂಗಾಯಣ ರಘು, ದತ್ತಣ್ಣ, ಅಚ್ಯುತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ ಚಿತ್ರಾ ಶೆಣೈ, ವಿಜಯಲಕ್ಷ್ಮೀ ಸಿಂಗ್, ವೆಂಕಟರಾವ್ ಹಾಗೂ ಮಾಸ್ತಿಗುಡಿ ಚಿತ್ರದ ಕ್ಲೆ ಮ್ಯಾಕ್ಸ್ ದುರಂತದಲ್ಲಿ ಸಾವನ್ನಪ್ಪಿದ ಖಳನಟ ಅನಿಲ್ ಸೇರಿದಂತೆ ಹಲವರ ತಾರಾಗಣ ಚಿತ್ರದಲ್ಲಿದೆ. ಚಿತ್ರಕ್ಕೆ ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ, ವಿಜಯ ಅವರ ಸಾಹಸ ನಿರ್ದೇಶನವಿದೆ. ಚಿತ್ರದ ಹಾಡುಗಳಿಗೆ ಹರ್ಷ, ಜನಿ ಅವರ ನೃತ್ಯ ಸಂಯೋಜನೆಯಿದೆ.
ಈ ಹಿಂದೆ ಪುನೀತ್ ಅಭಿನಯದ ನಿನ್ನಿಂದಲೇ.. ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದ ಯುವ ನಿರ್ದೇಶಕ ಸಂತೋಷ್ ಆನಂದರಾಮ್ ರಾಜಕುಮಾರ ಚಿತ್ರವನ್ನು ನಿರ್ದೇಶನ ಮಾಡಿzರೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತವಿದ್ದು, ನಿರ್ದೇಶಕ ಸಂತೋಷ್ ಆನಂದರಾಮ್, ಯೋಗರಾಜ್ ಭಟ್ ಮತ್ತು ಜಯಂತ ಕಾಯ್ಕಿಣಿ ಸಾಹಿತ್ಯವನ್ನು ರಚಿಸಿದ್ದಾರೆ.

LEAVE A REPLY