ನ. 24 ರಿಂದ 26 :ಏಷ್ಯಾ ಪೆಸಿಫಿಕ್ ಕಾರ್ ರ್‍ಯಾಲಿಯ ಅಂತಿಮ ಸ್ಪರ್ಧೆಗೆ ಸಜ್ಜು

ಚಿಕ್ಕಮಗಳೂರು: ಪ್ರಪಂಚದ ರ್‍ಯಾಲಿ ಭೂಪಟದಲ್ಲಿ ಪ್ರತಿಷ್ಠೆಯ ಸ್ಥಾನ ಗಿಟ್ಟಿಸಿರುವ ಕಾಫಿ ಕಣಿವೆ ಚಿಕ್ಕಮಗಳೂರು ಏಷ್ಯಾ ಫೆಸಿಫಿಕ್ ಕಾರ್ ರ್‍ಯಾಲಿಯ ಪ್ರಶಸ್ತಿ ನಿರ್ಧರಿಸುವ ಅಂತಿಮ ಸುತ್ತಿನ ಸ್ಪರ್ಧೆಗೆ ಸಜಗಿದೆ.
ನ.೨೪ರಿಂದ ೨೬ರವರೆಗೆ ನಡೆಯುವ ಎಪಿಆರ್‌ಸಿ ಕಾಫಿ ಡೇ ರ್‍ಯಾಲಿ ನಡೆಯಲಿದೆ. ೫ನೇ ಹಾಗೂ ಕೊನೆಯ ಸುತ್ತಿನ ರ್‍ಯಾಲಿ ಇದಾಗಿದ್ದು ಈ ವರ್ಷದ ಚಾಂಪಿಯನ್‌ಷಿಪ್ ಯಾರ ಮುಡಿಗೆ ಎನ್ನುವುದನ್ನು ನಿರ್ಧರಿಸಲಿದೆ.
ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ರ್‍ಯಾಲಿಪಟು, ಹಾಲಿ ಚಾಂಪಿಯನ್ ಭಾರತದ ಗೌರವ್ ಗಿಲ್ ಹಾಗೂ ನಾರ್ವೆ ದೇಶದ ಚಾಲಕ ಓಲೆಕ್ರಿಶ್ಟಿಯನ್ ನಡುವೆ ತೀವ್ರ ಪೈಪೋಟಿ ಇದ್ದು, ಟ್ರೋಫಿ ಎತ್ತಿಹಿಡಿಯುವವರಾರು ಎನ್ನುವುದು ನ.೨೬ ರಂದು ಸಂಜೆ ನಿರ್ಧಾರವಾಗಲಿದೆ.
ಗೌರವ್ ಗಿಲ್ ಮತ್ತು ಓಲೆಕ್ರಿಶ್ಟಿಯನ್ ಇಬ್ಬರು ಟೀಂ ಎಂಆರ್‌ಎಫ್ ಅನ್ನು ಪ್ರತಿನಿಧಿಸುತ್ತಿದ್ದು ಇಬ್ಬರಲ್ಲಿ ಯಾರೇ ಗೆದ್ದರೂ ಎಂಆರ್‌ಎಫ್ ಸಂಸ್ಥೆಗೆ ಪ್ರತಿಷ್ಠೆ ತಂದುಕೊಡಲಿದೆ. ಎಪಿಆರ್‌ಸಿ ರ್‍ಯಾಲಿ ಪ್ರತಿ ವರ್ಷ ೬ ಸುತ್ತುಗಳಲ್ಲಿ ನಡೆಯುತ್ತದೆ. ಆದರೆ ಈ ವರ್ಷ ಚೀನಾ ತನ್ನ ದೇಶದಲ್ಲಿ ನಡೆಯಬೇಕಿದ್ದ ರ್‍ಯಾಲಿಯನ್ನು ರದ್ದು ಮಾಡಿದ ಹಿನ್ನೆಲೆಯಲ್ಲಿ ಐದು ಸುತ್ತಿಗೆ ಮೊಟಕುಗೊಂಡಿದೆ.
ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಮಲೇಷಿಯಾ ಮತ್ತು ಜಪಾನ್ ದೇಶಗಳಲ್ಲಿ ಎಪಿಆರ್‌ಸಿ ರ್‍ಯಾಲಿಯ ನಾಲ್ಕು ಸುತ್ತುಗಳೂ ಈ ವರ್ಷ ನಡೆದು ಮುಕ್ತಾಯಗೊಂಡಿದ್ದು, ಹಾಲಿ ಛಾಂಪಿಯನ್ ಹಾಗೂ ಟೀಂ ಎಂಆರ್‌ಎಫ್‌ನ ಗೌರವ್ ಗಿಲ್ ಒಟ್ಟು ೧೩೬ ಅಂಕಗಳನ್ನು ಕ್ರೂಢೀಕರಿಸಿದ್ದಾರೆ. ತಂಡದ ಇನ್ನೋರ್ವ ಚಾಲಕ ಓಲೆಕ್ರಿಶ್ಟಿಯನ್ ಗೌರವ್ ಗಿಲ್‌ಗಿಂತ ಕೇವಲ ೬ ಪಾಯಿಂಟ್‌ಗಳ ಹಿನ್ನೆಡೆಯಲ್ಲಿರುವ ಕಾರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಂತಿಮ ಸುತ್ತಿನ ಎಪಿಆರ್‌ಸಿ ರ್‍ಯಾಲಿ ತೀವ್ರ ಕುತೂಹಲ ಕೆರಳಿಸಿದೆ.
ಕಳೆದ ವರ್ಷ ೨೦೧೬ರ ಋತುವಿನಲ್ಲಿ ನಡೆದ ಎಲ್ಲಾ ಆರು ಸುತ್ತುಗಳನ್ನು ಗೆದ್ದು ಏಕಪಕ್ಷೀಯವಾಗಿ ಎಪಿಆರ್‌ಸಿ ಛಾಂಪಿಯನ್ ಪ್ರಶಸ್ತಿಯನ್ನು ತಮ್ಮ ಮಡಿಲಿಗೇರಿಸಿ ಸಂಭ್ರಮಿಸಿದ್ದ ಗೌರವ್ ಗಿಲ್ ಈ ವರ್ಷ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ತೀವ್ರ ಒತ್ತಡದಲ್ಲಿದ್ದಾರೆ.
ಇತ್ತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳಲು ಓಲೆಕ್ರಿಶ್ಟಿಯನ್ ತಮ್ಮ ಎಲ್ಲಾ ಚಾಲನಾ ಕೌಶಲ್ಯವನ್ನು ಹೊರಗೆ ಹಚ್ಚಲು ಸಿದ್ಧವಾಗಿದ್ದಾರೆ.
ಪ್ರಶಸ್ತಿ ನಿರ್ಧರಿಸಿರುವ ಈ ಅಂತಿಮ ಸುತ್ತಿನ ಎಪಿಆರ್‌ಸಿ ರ್‍ಯಾಲಿ ಮನೆಯಂಗಳದಲ್ಲೇ ನಡೆಯುತ್ತಿರುವುದರ ಜೊತೆಗೆ ತವರಿನ ಪ್ರೇಕ್ಷಕರ ಬೆಂಬಲ ಗೌರವ್ ಗಿಲ್‌ಗೆ ಅನುಕೂಲಕರವಾಗಿ ಪರಿಣಾಮಿಸಿದೆ. ಗೌರವ್ ಗಿಲ್ ತಮ್ಮ ನೆಚ್ಚಿನ ಸ್ಕೋಡಾ ಫ್ಯಾಬಿಯಾ ಆರ್-೫ ಕಾರ್‌ನಲ್ಲಿ ತಮ್ಮ ನೆಚ್ಚಿನ ಎಂಆರ್‌ಎಫ್ ಟೈರ್‌ನೊಂದಿಗೆ ಪ್ರಶಸ್ತಿ ಉಳಿಸಿಕೊಳ್ಳಲು ಕಣಕ್ಕೆ ಇಳಿದಿದ್ದಾರೆ. ಇವರ ಪ್ರತಿಸ್ಪರ್ಧಿ ನಾರ್ವೆಯ ಓಲೆಕ್ರಿಶ್ಟಿಯನ್ ಕೂಡಾ ಇದೇ ವಾಹನ ವನ್ನು ಬಳಸುತ್ತಿರುವುದು ವಿಶೇಷ.

LEAVE A REPLY