ಚೀನಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ : ಕ್ವಾರ್ಟರ್‌ಗೆ ಸಿಂಧು, ಸೈನಾ ಔಟ್

ಪುಝೌ: ಹಾಲಿ ಚಾಂಪಿಯನ್ ಪಿ.ವಿ. ಸಿಂಧು ಇಲ್ಲಿ ನಡೆಯುತ್ತಿರುವ ಚೀನಾ ಓಪನ್ ಸೂಪರ್ ಸೀರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಆದರೆ ಇತ್ತೀಚೆಗಷ್ಟೇ ರಾಷ್ಟ್ರೀಯ ಚಾಂಪಿಯನ್‌ಷಿಪ್ ಪಟ್ಟ ಗೆದ್ದಿದ್ದ ಸೈನಾ ನೆಹ್ವಾಲ್ ಮತ್ತು ಎಚ್.ಎಸ್. ಪ್ರಣಾಯ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಇದರಿಂದಾಗಿ ಟೂರ್ನಿಯಲ್ಲಿ ಉಳಿದಿರುವ ಭಾರತದ ಏಕೈಕ ಸ್ಪರ್ಧಿ, ವಿಶ್ವದ ಎರಡನೇ ರ್‍ಯಾಂಕ್ ಆಟಗಾರ್ತಿ ಸಿಂಧು ಆಗಿದ್ದಾರೆ. ಸಿಂಧು ೨೧-೧೫, ೨೧-೧೩ ರಿಂದ ಎದುರಾಳಿ, ೧೦೪ ನೇ ರ್‍ಯಾಂಕ್ ಆಟಗಾರ್ತಿ, ಚೀನಾದ ಹನ್ ಯುಯಿ ಅವರನ್ನು ಪರಾಭವ ಗೊಳಿಸಿ ಮುಂದಿನ ಸುತ್ತು ತಲುಪಿದರು. ಏಕಪಕ್ಷೀಯವಾಗಿದ್ದ ಸಿಂಗಲ್ಸ್ ಪಂದ್ಯ ಕೇವಲ ೪೦ ನಿಮಿಷದಲ್ಲಿ ಅಂತ್ಯಕಂಡಿತು.
ಒಲಿಂಪಿಕ್ ಬೆಳ್ಳಿಯ ಪದಕ ವಿಜೇತೆ ಸಿಂಧು ಶುಕ್ರವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಹತಾ ಸುತ್ತಿನಿಂದ ಬಂದಿರುವ ಚೀನಾದ ಮತ್ತೊಬ್ಬ ಆಟಗಾರ್ತಿ ಗಯೊ ಫಂಗ್ಜಿ ಅವರನ್ನು ಎದುರಿಸಲಿದ್ದಾರೆ.
ಯಮಗುಚಿ ವಿರುದ್ಧದ ಪಂದ್ಯ ಸೈನಾಗೆ ಸದಾ ಸವಾಲಿನದಾಗಿರುತ್ತದೆ. ಪರಸ್ಪರ ಎದುರಿಸಿರುವ ದಾಖಲೆಯಲ್ಲಿ ಎದುರಾಳಿ ಹೆಚ್ಚು ಗೆಲುವು ಪಡೆದಿರುವುದು ಭಾರತದ ಆಟಗಾರ್ತಿ ಒತ್ತಡಕ್ಕೆ ಸಿಲುಕುವಂತೆ ಮಾಡುತ್ತದೆ. ಇಂದಿನ ಪಂದ್ಯಕ್ಕೆ ಮೊದಲು ಸೈನಾ-ಯಮಗುಚಿ ಮೂರು ಬಾರಿ ಪರಸ್ಪರ ಎದುರಾಗಿದ್ದರು. ಮೂರೂ ಬಾರಿ ಜಪಾನಿ ಆಟಗಾರ್ತಿ ಗೆದ್ದಿದ್ದರು. ಇಂದೂ ಅದೇ ಪರಿಸ್ಥಿತಿ ಮೂಡಿತು.
ಪ್ರಸ್ತುತ ವರ್ಷ ಯಮಗುಚಿ ವಿರುದ್ಧ ಸೈನಾ ನೆಹ್ವಾಲ್ ಒಂದೇ ತಿಂಗಳಲ್ಲಿ ಅನುಭವಿಸಿದ ಮೂರನೇ ಸೋಲು ಹಾಗೂ ಒಟ್ಟಾರೆ ನಾಲ್ಕನೇ ಪರಾಭವ ಆಗಿದೆ.
ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ಇಲ್ಲಿ ೨೦೧೪ ರಲ್ಲಿ ಪ್ರಶಸ್ತಿ ಗೆದ್ದಿದ್ದರು.
ಮೊದಲ ಗೇಮ್‌ನಲ್ಲಿ ೧೧-೯ ರ ಅಲ್ಪ ಮುನ್ನಡೆ ಆಕೆ ಹೊಂದಿದ್ದರು. ಆದರೆ ದಿಟ್ಟ ಆಟವಾಡಿದ ಯಮಗುಚಿ ಅಂತಿಮವಾಗಿ ಗೇಮನ್ನು ೨೧-೧೮ ರಿಂದ ತಮ್ಮದಾಗಿಸಿ ಕೊಂಡರು. ಹಿಂದೆ ಬಿದ್ದ ಸೈನಾ ಆಟ ಹಳಿತಪ್ಪಿತು. ಪಂದ್ಯದಲ್ಲಿ ಹಿಡಿತ ಸಾಧಿಸುವ ಯತ್ನ ಮಾಡಲಿಲ್ಲ. ಇದರಿಂದಾಗಿ ಎದುರಾಳಿ ಸ್ಪಷ್ಟ ಮೇಲುಗೈ ಸಾಧಿಸಿದರು. ಪಂದ್ಯ ೩೭ ನಿಮಿಷದಲ್ಲಿ ಪೂರ್ಣಗೊಂಡಿತು.
ಪುರುಷರ ವಿಭಾಗದಲ್ಲಿ ಪ್ರಣಾಯ್ ದಿಟ್ಟ ಹೋರಾಟ ನೀಡಿಯೂ ಸೋಲನುಭವಿಸಿದರು.

LEAVE A REPLY