ಹೊಟ್ಟೆಕಿಚ್ಚು , ಅಸೂಯೆ ನಮ್ಮ ಸಹದ್ಯೋಗಿಗಳು, ಸಹಪಾಠಿಗಳು, ಚಿರಪರಿಚಿತರ ಮೇಲೆ ಹೆಚ್ಚು!

  • ಡಾ. ಕರವೀರಪ್ರಭು ಕ್ಯಾಲಕೊಂಡ

ನಾವು ಈ ಪ್ರಪಂಚದಲ್ಲಿ ಬದುಕಿ ಉಳಿಯುವುದು ತೀರಾ ಅಲ್ಪ ಅವ ಮಾತ್ರವಾದರಿಂದ ಬದುಕನ್ನು ಸಂತಸದಲ್ಲಿ ಬೆಳೆಯುವ ಬಗೆ ಹೇಗೆ? ಹುಟ್ಟಿದ ಮಗುವಿನಲ್ಲಿ ಏನು ನಗು, ಏನು ಸಂತಸ, ಹಸಿದರೆ ಮಾತ್ರ ಅಳುವುದು ಇಲ್ಲವೇ ಚೀರುವುದು. ಆದರೆ, ಬೆಳೆಯುತ್ತಾ ಹೋದಂತೆ ಈ ಮುಗ್ಧ ನಿಷ್ಕಳಂಕ ಸಂತೋಷನ್ನು ಕಳೆದುಕೊಳ್ಳುವ ಹಲವಾರು ವಿಧಾನಗಳನ್ನು ಕರಗತ ಮಾಡಿಕೊಳ್ಳುತ್ತೇವೆ. ಈ ದಿಸೆಯಲ್ಲಿ ಇಂಗ್ಲೆಂಡಿನ ತತ್ವಜ್ಞಾನಿ ಬರ್ಟ್ರೆಂಡ್ ರಸೆಲ್ ಹೇಳಿದ ಮಾತೊಂದು ಗಮನಾರ್ಹ. ನಿಮ್ಮ ಆಲೋಚನಾ ಶಕ್ತಿಯನ್ನು ಹೊಟ್ಟೆಕಿಚ್ಚು ಬದಲಾಯಿಸುತ್ತದೆ. ನೀವು ನಿಮ್ಮಲ್ಲಿರುವ ಗುಣ, ಸಂಪತ್ತುಗಳಿಂದ ಸಂತೋಷ ಪಡುವ ಬದಲಾಗಿ, ನಿಮ್ಮಲ್ಲಿರದ ಹಾಗೂ ಬೇರೆಯವರಲ್ಲಿರುವ ಗುಣ ಸಂಪತ್ತುಗಳನ್ನು ಆಶಿಸಿ ದುಃಖ ಪಡುತ್ತೀರಿ. ಇದೇ ಜೀವನದ ದುಃಖದ ಮೂಲ.
ಅಸೂಯೆ ಎಂಬ ಅಜಾತಶತ್ರು:
ಸಾಮಾನ್ಯವಾಗಿ ಈ ಹೊಟ್ಟೆಕಿಚ್ಚು ಅಥವಾ ಅಸೂಯೆ ನಮ್ಮ ಸಹದ್ಯೋಗಿ ಗಳು, ಸಹಪಾಠಿಗಳು ಹಾಗೂ ಚಿರಪರಿಚಿತರ ಮೇಲೆ ಹೆಚ್ಚು. ವೈದ್ಯರಿಗೆ ವೈದ್ಯರ ಮೇಲೆ, ಮೇಲೆ, ರಾಜಕಾರಣಿಗಳಿಗೆ ರಾಜಕಾರಣಿಗಳ ಮೇಲೆ ಅಸೂಯೆ ಹೆಚ್ಚು. ನಮ್ಮ ಸಹೋದ್ಯೋಗಿಗಳ ಮೇಲೋ, ನೆರೆಮನೆಯವರ ಮೇಲೋ ಯಾವಾಗಲೂ ತಿಳಿದೋ ತಿಳಿಯದೆಯೋ ಹೊಟ್ಟೆಕಿಚ್ಚಿನಿಂದ ನಮ್ಮ ವೈಯಕ್ತಿಕ ಸಂತೋಷವನ್ನು ಕಳೆದುಕೊಳ್ಳುತ್ತೇವೆ.
ಯಾವುದಾದರೊಂದು ಚಹಾಕೂಟವೋ, ಸತ್ಕಾರ ಕೂಟದಲ್ಲೋ, ಬೀಳ್ಕೊಡುವ ಸಭೆ, ಸಮಾರಂಭದಲ್ಲೋ ನಾವು ಜೊತೆಗೂಡಿದಾಗ, ಮದುವೆ ಮಂಜಿಗಳಲ್ಲಿ ಭೇಟಿಯಾಗಿ ಹರಟುವಾಗ ಆಗುವ ಸಾಮಾನ್ಯ ಮಾತು ವೃತ್ತಿ ಬಾಂಧವರನ್ನು ಹಿಂದಿನಿಂದ ಹೀಯಾಳಿಸುವುದು. ಡಾಕ್ಟರರ ವೃತ್ತಿ, ವಕೀಲರ ವೃತ್ತಿ, ಉದ್ಯೋಗಪತಿಗಳ ವೃತ್ತಿ ಇತ್ಯಾದಿ. ಈ ಹೊಟ್ಟೆ ಕಿಚ್ಚು ಎಂಬ ಕಾಯಿಲೆ ಎಲ್ಲರನ್ನು ಕಾಡ್ಗಿಚ್ಚಿನಂತೆ ಸುಡುವುದು ಸತ್ಯ. ಇದನ್ನು ತಪ್ಪಿಸಿಕೊಳ್ಳುವುದಕ್ಕೆ ಬಹಳ ಪ್ರಯತ್ನಬೇಕು. ಯಾರು ಇದನ್ನು ಮೆಟ್ಟಿ ನಿಲ್ಲುತ್ತಾರೋ ಅವರು ನಿಜವಾಗಿ ಜೀವನವನ್ನು ಸಂತೋಷದಲ್ಲಿ ಕಳೆಯುತ್ತಾರೆ.
ಆದರೆ, ಇದನ್ನು ಸಾಸಲು ಬಹಳ ದೊಡ್ಡ ಯುದ್ಧವನ್ನೇ ಸಾರಬೇಕಾಗುತ್ತದೆ. ಯಾರ ಮೇಲೆ? ನಮ್ಮ ಮನಸ್ಸಿನಲ್ಲಿ ತಳವೂರಿರುವ ಶತ್ರುಗಳಾದ ಕೋಪ, ಗರ್ವ, ಅಸೂಯೆ, ಹೊಟ್ಟೆಕಿಚ್ಚು, ಪೈಪೋಟಿ ಹಾಗೂ ದರ್ಪಗಳ ಮೇಲೆ ನಮ್ಮ ಯುದ್ಧ ದಿನಾ ನಡೆಯಬೇಕು. ನಮ್ಮಲ್ಲಿ ಹೊಟ್ಟೆಕಿಚ್ಚು ತೊಲಗಿದರೆ ಮಾನಸಿಕ ನೆಮ್ಮದಿ ನಮಗೆ ತಾನಾಗಿಯೇ ಬರುವುದು. ಹೊಟ್ಟೆಕಿಚ್ಚನ್ನು ಗೆದ್ದ ವ್ಯಕ್ತಿಯ ಮೇಲೆ ಬೇಕಾದರೆ ಹೊಟ್ಟೆಕಿಚ್ಚು ಪಡಿರಿ. ಹೊಟ್ಟೆಕಿಚ್ಚನ್ನು ಗೆದ್ದವರಿಗೆ ರಕ್ತದೊತ್ತಡ ಇಲ್ಲ. ಹೃದಯಾಘಾತವಿಲ್ಲ. ಮಧುಮೇಹವಿಲ್ಲ. ಮಾತ್ರವಲ್ಲ, ಈ ಎಲ್ಲ ಕಾಯಿಲೆಗಳಿದ್ದರೂ, ಬದುಕಿನಲ್ಲಿ ಉಳಿದ ವರ್ಷಗಳನ್ನಾತ ಸಂತೋಷದಿಂದ ಕಳೆದು ಸದಾ ಆನಂದದ ಜೀವನವನ್ನು ಕಳೆಯುವುದಂತೂ ಖಂಡಿತ.
ನಮ್ಮ ಇಂದಿನ ವಿದ್ಯಾಭ್ಯಾಸ ಪದ್ಧತಿ ಎಳೆ ವಯಸ್ಸಿನ ಮುದ್ದು ಮಕ್ಕಳ ಮೇಲೆ ಹೂಮನಸ್ಸುಗಳಲ್ಲಿ ಇಂತಹ ಶತ್ರುಗಳನ್ನು ಬಿತ್ತಿ ಅವುಗಳಿಗೆ ಬೇಕಾದ ಪೌಷ್ಟಿಕ ಆಹಾರವನ್ನು ಕೊಟ್ಟು ಬೆಳೆಸುತ್ತಿರುವುದು ಬಹಳ ದುಃಖದ ಸಂಗತಿ. ಪ್ರಾಥಮಿಕ ವಿದ್ಯಾಭ್ಯಾಸದ ಹಂತದಿಂದಲೇ ರ್‍ಯಾಂಕಿನ ಗೀಳು ಎಳೆಯ ಮಕ್ಕಳನ್ನು ಕಾಡುತ್ತದೆ. ರ್‍ಯಾಂಕು, ಮಾರ್ಕು, ಜೀವನದ ಸ್ಥಾನಮಾನ ಇತ್ಯಾದಿಗಳು ಮನಸ್ಸಿನಲ್ಲಿ ಆನಂದವನ್ನು ತೊಲಗಿಸಿ, ಹೊಟ್ಟೆಕಿಚ್ಚನ್ನು ಬೆಳೆಸುತ್ತವೆ. ಪಾಶ್ಚಾತ್ಯ ಪದ್ಧತಿಯ ಸ್ಪರ್ಧೆ ಈ ದಿಸೆಯಲ್ಲಿ ಮುಂಚೂಣಿಯಲ್ಲಿದೆ. ನಾನು ಮೇಲು ತಾನು ಮೇಲು ಎಂಬುದು ನಮ್ಮ ಜೀವನದ ವೇದವಾಕ್ಯವಾಗಿದೆ.
ನಮ್ಮ ಮನಸ್ಸನ್ನು ನಾವು ಆಳವಾಗಿ ವಿಶ್ಲೇಷಿಸಿ ನೋಡಿದರೆ ಎಷ್ಟೋ ಸಂದರ್ಭಗಳಲ್ಲಿ ನಮಗೆ ದುಃಖ ತರುವ ವಿಷಯಗಳು ಬಲು ಕ್ಷುಲಕವೆಂಬುದು ಅಳಿಯಲು ಕಷ್ಟವಿಲ್ಲ. ನೆರೆಮನೆಯವನಿಗೆ ನಮ್ಮ ಮನೆಗಿಂತ ದೊಡ್ಡಮನೆ, ಒಳ್ಳೆಯ ಕಾರು, ಸುಂದರ ಮಡದಿ, ಹೆಚ್ಚು ಅಂಕ ಪಡೆದು ರ್‍ಯಾಂಕ್ ಪಡೆಯುವ ಮಕ್ಕಳು ಇದ್ದರೆ ಅವರ ಮೇಲಿನ ಅಸೂಯೆಯೇ ನಮ್ಮ ದೈನಂದಿನ ಜೀವನದಲ್ಲಿ ದುಃಖದ ಮೂಲವಾಗುತ್ತದೆ.
ನಮಗಿಂತ ಹೆಚ್ಚು ಕಷ್ಟದಲ್ಲಿರುವವ ರನ್ನು ನಮಗಿಂತ ಕೆಳಗಿರುವವರನ್ನು ನೋಡಿ ತಿಳಿಯುವ ಯತ್ನ ಮಾಡಬೇಕು. ಫ್ರೆಂಚ್ ತತ್ವಜಾನಿಯೊಬ್ಬರ ಮಾತು ಇಲ್ಲಿ ಪ್ರಸ್ತುತ.ಕಾಲಿನಲ್ಲಿ ನೋವಿದವನೊಬ್ಬ ಕಾಲೇ ಇಲ್ಲದ ಹೆಳವನನ್ನು ನೋಡಿದ ನಂತರ ತನ್ನ ಕಾಲಿನ ನೋವನ್ನು ಮರೆತನಂತೆ. ಮನಸ್ಸಿನ ಸಂತೋಷವೇ ದೇಹದ ಆರೋಗ್ಯದ ಮೂಲ! ನಾವು ಎಷ್ಟೇ ಬುದ್ಧಿವಂತರಿರಲಿ, ಐಶ್ವರ್ಯವಂತರಿರಲಿ, ಬಲಾಢ್ಯರಿರಲಿ, ಲೋಕದಲ್ಲಿ ನಮಗಿಂತ ಮೇಲೆ ಯಾರಾದರೊಬ್ಬರಿರುವುದು ಖಂಡಿತ. ಇತ್ತೀಚಿನ ಸಮೀಕ್ಷೆಗಳೆಲ್ಲವೂ ಮನಸ್ಸಿನ ಅಶಾಂತಿಗಳಾದ ಅಭಿಲಾಷೆ, ಗರ್ವ, ಅಹಂಕಾರ, ನಿರಾಶೆ, ಹೊಟ್ಟೆಕಿಚ್ಚು, ಜಿಗುಪ್ಸೆ ಹಾಗೂ ಬೇರೆಯವರು ಹಾಳಾಗಿ ಹೋಗಬೇಕೆಂಬ ಹಂಬಲಗಳೇ ಹೃದಯಾಘಾತ, ಕ್ಯಾನ್ಸರ್, ಪಾರ್ಶ್ವ ವಾಯು, ಮಧುಮೇಹ ಹಾಗೂ ರಕ್ತದ ಒತ್ತಡಗಳಿಗೆ ಮುಖ್ಯ ಕಾರಣಗಳು ಎಂಬುದನ್ನು ತಿಳಿಸಿವೆ.
ನಮ್ಮ ಮನಸ್ಸಿನಲ್ಲಿ ಹುಟ್ಟುವ ಪ್ರತಿ ಆಸೆಗಳೂ ದೇಹದಲ್ಲಿ ರಾಸಾಯನಿಕ ಪದಾರ್ಥಗಳಾಗಿ ಮಾರ್ಪಡುತ್ತವೆ. ಈ ರಾಸಾಯನಿಕಗಳು ಆರೋಗ್ಯಕ್ಕೆ ಮಾರಕ ಯಾ ಪ್ರಚೋದಕಗಳಾಗಿರುವುದೂ ಸತ್ಯ. ಸಂತೋಷ, ಪರರ ಸೇವೆ ಹಾಗೂ ಸರ್ವಭೂತ ಪ್ರೀತಿಗಳು ಆರೋಗ್ಯವರ್ಧಕ. ನಕಾರಾತ್ಮಕ ಚಿಂತನೆಗಳಾದ ಗರ್ವ, ಅಹಂಕಾರ, ಹೊಟ್ಟೆಕಿಚ್ಚು, ಜಿಗುಪ್ಸೆ ಹಾಗೂ ಪರರ ಮೇಲಿನ ದ್ವೇಷಗಳು ಆರೋಗ್ಯವನ್ನು ನಾಶ ಮಾಡುವ ರಾಸಾಯನಿಕ ಪದಾರ್ಥಗಳು ಮಾರ್ಪಟ್ಟು ದೇಹದ ಸರ್ವ ಅಂಗಗಳಲ್ಲಿಯೂ ತಮ್ಮ ರಾಕ್ಷಸೀ ಶಕ್ತಿಯನ್ನು ತೋರದಿರುವುದಿಲ್ಲ.
ಅಸೂಯೆ, ಹೊಟ್ಟೆಕಿಚ್ಚು ಮನುಷ್ಯನ ಮೂಲಭೂತ ಭಾವನೆಗಳಲ್ಲಿ ಒಂದೆಂದು ಮನೋವಿಜ್ಞಾನವೂ ಹೇಳುತ್ತದೆ. ಪ್ರಾಣಿ ಗಳು, ಸಣ್ಣ ಮಕ್ಕಳೂ ಈ ಭಾವನೆಗೆ ಹೊರತಲ್ಲ. ಆದ್ದರಿಂದ ನಮ್ಮಲ್ಲಿ ಹೊಟ್ಟೆಕಿಚ್ಚು ಭಾವ ಇರುವುದು ತಪ್ಪಲ್ಲ. ಆ ಭಾವವನ್ನು ಮೆಚ್ಚಿ, ಅದನ್ನೊಂದು ಮೆಟ್ಟಿಲಾಗಿ ಮಾಡಿಕೊಳ್ಳಬೇಕು. ಹೊಟ್ಟೆಕಿಚ್ಚು ಹೆಚ್ಚಿದಾಗ ಮನಸ್ಸು ಅಸ್ವಸ್ಥವಾಗುತ್ತದೆ. ಹೊಟ್ಟೆಕಿಚ್ಚನ್ನು ನಾವು ನಿಯಂತ್ರಿಸದಿದ್ದರೆ, ಅದು ನಮ್ಮನ್ನು ನಿಯಂತ್ರಿಸುತ್ತದೆ. ಹೊಟ್ಟೆಕಿಚ್ಚು ಹುಟ್ಟುವುದು ಸಹಜವೇ ಇರಬಹುದು. ಆದರೆ ಅದನ್ನು ಬೆಳಸದೆ ಇರುವುದರಲ್ಲಿ ವ್ಯಕ್ತಿತ್ವದ ಘನತೆಯಿದೆ. ವಯಸ್ಸು, ಅನುಭವ, ಆಲೋಚನೆಗಳು ಬೆಳೆದಂತೆ ವ್ಯಕ್ತಿತ್ವವೂ ಮಾಗಬೇಕು.
ಕೀಳಿರಿಮೆ ಮತ್ತು ಆತ್ಮವಿಶ್ವಾಸದ ಕೊರತೆಗಳು ಹೊಟ್ಟೆಕಿಚ್ಚಿಗೆ ತಾಯ್ನೆಲವಿದ್ದ ಹಾಗೆ. ಇನ್ನೊಬ್ಬರಂತೆ ಸಾಸುತ್ತೇನೆ ಎಂಬ ಆತ್ಮವಿಶ್ವಾಸ ಮತ್ತು ಛಲಗಾರಿಕೆ ಬದುಕಿನಲ್ಲಿ ಇದ್ದಾಗ ಹೊಟ್ಟೆಕಿಚ್ಚನ್ನು ಸವಾಲಾಗಿ ಮಾರ್ಪಡಿಸಿಕೊಳ್ಳಬಹುದು. ನಮ್ಮ ಇತಿಮಿತಿಗಳನ್ನು ಒಪ್ಪಿಕೊಳ್ಳುವುದು ಮತ್ತು ಇನ್ನೊಬ್ಬರ ಸಾಮರ್ಥ್ಯವನ್ನು ಗೌರವಿಸುವುದು ಇವೆರಡನ್ನೂ ಕಲಿತಾಗ ಹೊಟ್ಟೆಕಿಚ್ಚನ್ನು ಹತೋಟಿಯಲ್ಲಿ ಇಟ್ಟುಕೊಳ್ಳ ಬಹುದು. ಒಟ್ಟಿನಲ್ಲಿ ಹೊಟ್ಟೆಕಿಚ್ಚಿಗೆ ಹಚ್ಚಿ ಕಿಚ್ಚು. ಇದು ಆರೋಗ್ಯಕ್ಕೆ ಪೂರಕ. ರಾಸಾಯನಿಕಗಳ ಉತ್ಪತ್ತಿಗೆ ನಾಂದಿ ಹಾಡುವುದು. ಇದೇ ಮನಸ್ಸಿನ ಆರೋಗ್ಯದ ಮಂದಾರ. ದೈಹಿಕ ಆರೋಗ್ಯಕ್ಕೂ ಆಧಾರ.

LEAVE A REPLY