ತರಕಾರಿ ರಸಕ್ಕೆ ರುಚಿ ಬರಿಸಲು ಉಪ್ಪು ಸೇವಿಸಬಹುದೆ?

  • ಪ್ರಹ್ಲಾದ್

ಆಮ್ಲೀಯ ಪರಿಶುಭ್ರತೆ (ಅಸಿಡಿಟಿ ಕ್ಲೆನ್ಸ್) ಮಾಡಿಕೊಳ್ಳುವ ಸಮಯದಲ್ಲಿನ ಸಂದೇಹಗಳು ಮತ್ತು ಅವುಗಳಿಗೆ ಪರಿಹಾರವೇನು ಎಂಬುದನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದೇವೆ.
ಸಂದೇಹ : ತರಕಾರಿ ರಸಕ್ಕೆ ರುಚಿ ಬರಿಸಲು ಉಪ್ಪು ಸೇವಿಸಬಹುದೆ?
ಪರಿಹಾರ: ಹೆಚ್ಚು ರುಚಿ ಕೊಡುವ ಉಪ್ಪೇ ನಮ್ಮ ಎಲ್ಲ ರೋಗಗಳು ದೇಹಕ್ಕೆ, ಮನಸ್ಸಿಗೆ ಒಕ್ಕರಿಸಲು ರಹದಾರಿ. ಉಪ್ಪಿಗೆ ರಕ್ತವನ್ನು ದಪ್ಪಗಾಗಿಸುವ ಗುಣವಿದೆ. ನೀರನ್ನು ಹಿಡಿದಿಡುವ ಶಕ್ತಿಯಿದೆ. ನಮ್ಮ ಮೂತ್ರಪಿಂಡಗಳು, ಮೇದೋಜೀರಕ ಗ್ರಂಥಿ, ನರಮಂಡಲ, ಹೃದಯ, ಯಕೃತ್ತನ್ನು ಸರ್ವನಾಶ ಮಾಡುವ ಅದ್ಭುತ ಋಣಾತ್ಮಕ ಗುಣವಿದೆ. ಹಾಗಂತ ಉಪ್ಪೇ ಬೇಡವೆಂದೇನೂ ಇಲ್ಲ. ನಮ್ಮ ದೇಹಕ್ಕೆ ಉಪ್ಪಿನ ಅವಶ್ಯಕತೆ ಇರುವುದು ಕೇವಲ ಅರ್ಧ ಗ್ರಾಂ ಮಾತ್ರ. ಆದರೆ ನಾವಿಂದು ಸುಮಾರು ೧೫ ರಿಂದ ೨೦ ಗ್ರಾಂ ಉಪ್ಪು ಸೇವಿಸುತ್ತಿದ್ದೇವೆ. ಇದರಿಂದ ಇಂದಿನ ಜನಾಂಗ ಸಾರಾಸಗಟಾಗಿ ಅನೇಕ ವಿಧ ಖಾಯಿಲೆಗಳಿಂದ ನರಳುವಂತಾಗಿರುವುದು ನೀವೇ ಕಣ್ಣಾರೆ ನೋಡುತ್ತಿದ್ದೀರಿ ಮತ್ತು ಕೆಲವರು ಅನುಭವಿಸುತ್ತಿದ್ದೀರಿ. ಹಾಗಾಗಿ ಉಪ್ಪನ್ನು ಈ ರಸದಲ್ಲಿ ಬೆರೆಸಿದರೆ ನಿಮಗೆ ಹಾನಿಯಾಗುವುದೇ ಹೊರತು ಲಾಭವಾಗದು.
ಸಂದೇಹ : ಈ ರಸಕ್ಕೆ ನಿಂಬೆರಸ ಸೇರಿಸಬಹುದೆ?
ಪರಿಹಾರ: ಅವಶ್ಯವಾಗಿ ಸೇರಿಸಿ. ಯಾರು ಪ್ರತಿನಿತ್ಯ ಒಂದು ಅಥವಾ ಎರಡು ನಿಂಬೆಹಣ್ಣನ್ನು ಸೇವಿಸುತ್ತಾರೋ ಅವರಿಗೆ ಅರ್ಬುದ ರೋಗವೇ ಕಾಡದು. ಬೀಜವಿಲ್ಲದೆ ರಸ ಮಾತ್ರ ತೆಗೆದು ಬಳಸಿ. ಇದೊಂದು ಪ್ರಾಕೃತಿಕ ಖಿಮೋಥೇರಪಿಯಿದ್ದಂತೆ. ಯಾವುದೇ ಕ್ಯಾನ್ಸರ್ ಕಣಗಳು ಬದುಕುಳಿಯಲು ಸಾಧ್ಯವಿಲ್ಲ. ಇದ್ದರೂ ಅವು ದುರಸ್ತಿಯಾಗಿಬಿಡುತ್ತವೆ. ಬೆಳಿಗ್ಗೆ ಎದ್ದ ನಂತರ ನೀರಿಗೆ ನಿಂಬೆ ರಸ ಹಾಕಿ ಕುಡಿದರೆ ನಮ್ಮ ದೇಹ ತಕ್ಷಣ ಕ್ಷಾರೀಯವಾಗಿಬಿಡುತ್ತದೆ. ಎಷ್ಟೋ ಸಂಶೋಧನೆಗಳು ಇದನ್ನು ಸಾರಿ ಸಾರಿ ಹೇಳುತ್ತಿವೆ. ನಿಂಬೆಹಣ್ಣಿಗಿಂತ ಬೆಟ್ಟದ ನೆಲ್ಲಿಕಾಯಿ ಇನ್ನೂ ಒಳ್ಳೆಯದು. ಸಿಕ್ಕ ಪಕ್ಷದಲ್ಲಿ ನೆಲ್ಲಿಕಾಯಿ ಈ ತರಕಾರಿ ರಸದಲ್ಲಿ ಬಳಸಿ.
ಸಂದೇಹ : ಎಲ್ಲೂ ನೀವು ಟೊಮಾಟೋವನ್ನು ಹೇಳೇ ಇಲ್ಲವಲ್ಲ?
ಪರಿಹಾರ: ಟೊಮಾಟೋದಲ್ಲಿ ಸಾವಯವ ರೀತಿಯಲ್ಲಿ ಬೆಳೆದಿದ್ದರೂ ಕೂಡಾ ಸ್ವಲ್ಪವಾದರೂ ಸೀಸವಿರುತ್ತದೆ. ಅದನ್ನು ಪ್ರತಿನಿತ್ಯ ಉಪಯೋಗಿಸುವುದರಿಂದ ಮಿದುಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಅದರ ಸೇವನೆ ನಾನು ಎಲ್ಲೂ ಹೇಳಿಲ್ಲ. ಎಂದಾದರೂ ಚಿಕಿತ್ಸೆಗಾಗಿ ನೀವು ಸೇವಿಸಲು ಅಥವಾ ಮನೆಯಿಂದ ಹೊರಗೆ ತೆರಳಿದಾಗ ವಿರಳವಾಗಿ ಸೇವಿಸಬಹುದು. ಪ್ರತಿನಿತ್ಯ ಅದರಿಂದ ದೂರವಿರಿ. ಹುಳಿಗಾಗಿ ನಿಂಬೆಹಣ್ಣು, ಪುನರ್ಪುಳಿ, ಹುಣಸೆಚಿಗುರು, ಹುಣಸೆಕಾಯಿ, ಮಾವಿನಕಾಯಿಯಂತಹ ಆರೋಗ್ಯಕರವಾದ ಹುಳಿ ಹಿತಮಿತವಾಗಿ ಬಳಸಿದರೆ ಆರೋಗ್ಯಕ್ಕೆ ಪೂರಕ.
ಸಂದೇಹ : ಆಮ್ಲೀಯತೆ ಪರಿಶುಭ್ರತೆ ಮಾಡಿಕೊಳ್ಳುವಾಗ ನಾನು ಜಸ್ತಿ ಗ್ಯಾಸ್ ಹೊರಹಾಕುತ್ತಿದ್ದೇನೆ. ಇದರಿಂದ ಏನೂ ತೊಂದರೆ ಇಲ್ಲವೆ?
ಪರಿಹಾರ: ಕೆಲವೊಂದು ತರಕಾರಿಗಳು ಹೊಟ್ಟೆಯಲ್ಲಿ ಹೆಚ್ಚು ಗ್ಯಾಸ್ ಉತ್ಪತ್ತಿ ಮಾಡುವ ಗುಣ ಹೊಂದಿವೆ. ಅಂತಹ ತರಕಾರಿಗಳನ್ನು ನಿಮ್ಮ ಸದ್ಯದ ಆಹಾರ ಪದ್ಧತಿಯಿಂದ ದೂರವಿಡಿ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಹೂಕೋಸು, ಮೂಲಂಗಿ, ಬೀನ್ಸ್. ಕೆಲವರಿಗೆ ಕೆಲವು ದಿನಗಳ ಕಾಲ ಗ್ಯಾಸ್ ಟ್ರಬಲ್ ಕಾಡುವುದು ಸಹಜ ಆದರೆ ಕೆಲವು ದಿನಗಳಲ್ಲಿ ಇದು ತನ್ನಿಂತಾನೇ ದೂರವಾಗುವುದು ಖಂಡಿತ. ಈ ವಿಚಾರವಾಗಿ ಹೆಚ್ಚು ಚಿಂತೆಗೊಳಗಾಗಬೇಡಿ.
ಸಂದೇಹ : ಬಿಳಿಸಕ್ಕರೆ ಒಳ್ಳೆಯದಲ್ಲ ಅಂತ ಕೇಳಿದ್ದೇನೆ. ಆದರೆ ಸಾವಯವ ಬೆಲ್ಲವಂತೂ ಒಳ್ಳೆಯದೇ ತಾನೆ. ರುಚಿಗಾಗಿ ಅದನ್ನು ಬೆರೆಸಿಕೊಳ್ಳಬಹುದೇ?
ಪರಿಹಾರ: ಈಗ ತಿಳಿಸಿದ ತರಕಾರಿಗಳೆಲ್ಲವೂ ಪ್ರಾಕೃತಿಕ ಆಗಿರುವಂಥವುಗಳೇ. ಆದರೆ ಬೆಲ್ಲ ತಯಾರಿಸಲು ಕಬ್ಬನ್ನು ಕುದಿಸಿರುತ್ತಾರೆ. ಹಾಗಾಗಿ ಇದರ ಜೊತೆ ಅದು ಹೊಂದಾಣಿಕೆಯಾಗದು. ರುಚಿಗಾಗಿ ನೀವು ಜೇನುತುಪ್ಪ ಬೆರೆಸಿಕೊಳ್ಳಬಹುದು. ಆದರೆ ಕೆಲವೊಂದು ತರಕಾರಿ ರಸಗಳಲ್ಲಿ ನಾನು ಮೂಲಂಗಿ ಬಳಸಿ ಅಂತ ಹೇಳಿದ್ದ ಪಕ್ಷದಲ್ಲಿ ಅದರ ಜೊತೆ ಜೇನುತುಪ್ಪ ಬೆರೆಸಬಾರದು. ಏಕೆಂದರೆ ಅದು ವಿರೋಧವಾಗುತ್ತದೆ ಮತ್ತು ನಿಧಾನವಿಷವಾಗುತ್ತದೆ.

LEAVE A REPLY