ಜನೋಪಕಾರಿ, ಪಶುಪಕ್ಷಿ ಪ್ರೇಮಿ , ಉತ್ತಮ ಯೋಗಿ ಸೌಭರಿ ಮಹರ್ಷಿಗಳು

  • ಡಾ. ಹೇಮಲತಾ ಎಸ್.

ಸೌಭರಿ ಮಹರ್ಷಿಗಳು ಋಗ್ವೇದ ಶಾಖೆಗೆ ಸೇರಿದವರು. ಮಹಾ ತಪಸ್ವಿಗಳಾದ ಅವರು ಒಮ್ಮೆ ಹನ್ನೆರಡು ವರ್ಷಗಳ ಕಾಲ ನೀರಿನಲ್ಲಿ ಮುಳುಗಿ ತಪಸ್ಸು ಮಾಡುತ್ತಿದ್ದರು. ಅವರು ತಪಸ್ಸು ಮಾಡುತ್ತಿದ್ದ ಸರೋವರದಲ್ಲಿ ‘ಸಂಮದ’ ಎಂಬ ಮಹಾಶರೀರಿಯಾದ ಮತ್ಸ್ಯರಾಜನು ತನ್ನ ಹೆಂಡತಿ, ಮರಿಗಳೊಡನೆ ವಾಸವಾಗಿದ್ದನು. ಆ ಮೀನಿನ ಮಕ್ಕಳು, ಪೌತ್ರರು, ಪೌವಿತ್ರರು ಎಲ್ಲರೂ ಹಿಂದೆ, ಮುಂದೆ ಈಜುತ್ತ ಅತಿ ಸಂತೋಷದಿಂದ ವಿಹರಿಸುತ್ತಿದ್ದವು. ಮತ್ಸ್ಯರಾಜನು ಅವರ ಮಧ್ಯೆ ಆನಂದದಿಂದ ಕಾಲಕಳೆಯುತ್ತಿದ್ದನು.
ಇದನ್ನು ಪ್ರತಿದಿನವೂ ನೋಡುತ್ತಿದ್ದ ಸೌಭರಿ ಮುನಿಯು ಮನಸ್ಸಿನಲ್ಲಿಯೇ- ‘ಈ ಮೀನು ನಿಜಕ್ಕೂ ಧನ್ಯವಾದುದು. ಕೀಳು ಜನ್ಮದಲ್ಲಿ ಜನಿಸಿದ್ದರೂ ತನ್ನ ಸಂಸಾರದೊಂದಿಗೆ ಆನಂದವಾಗಿ ಕ್ರೀಡಿಸುತ್ತ ಮಹರ್ಷಿಯಾದ ನನ್ನ ಮನಸ್ಸನ್ನು ವಿಚಲಿತಗೊಳಿಸುತ್ತಿದೆ’ ಹೀಗೆಂದು ಯೋಚಿಸುತ್ತ, ತಾನೂ ಮಕ್ಕಳೊಡನೆ ಹೀಗೆಯೇ ರಮಿಸಬೇಕೆಂದು ಚಿಂತಿಸಿದನು. ಈ ರೀತಿಯ ಕಾಮನೆಯು ಮನಸ್ಸನ್ನು ತುಂಬಿಕೊಂಡ ಕೂಡಲೇ ಅವನು ನೀರಿನಿಂದ ಹೊರಕ್ಕೆ ಬಂದನು. ಸಂತತಿಗಾಗಿ ಗೃಹಸ್ಥನಾಗಬೇಕೆಂದು ಬಯಸಿ, ಕನ್ಯೆಯನ್ನು ಗ್ರಹಣ ಮಾಡುವ ಸಲುವಾಗಿ ಮಾಂಧಾತ ಮಹಾರಾಜನ ಅರಮನೆಗೆ ಬಂದನು. ಸೌಭರಿಯ ಆಗಮನದ ಸುದ್ದಿಯನ್ನು ಕೇಳಿದ ಕೂಡಲೇ ರಾಜನು ಎದ್ದು ಬಂದು ಮುನಿಯನ್ನು ಎದುರುಗೊಂಡು ಸ್ವಾಗತಿಸಿ, ಅರ್ಘ್ಯಪಾದ್ಯಾದಿಗಳಿಂದ ಸತ್ಕರಿಸಿದನು. ಸೌಭರಿಯು ರಾಜನು ನೀಡಿದ ಪೂಜೆಯನ್ನು ಸ್ವೀಕರಿಸಿ, ಆಸನದಲ್ಲಿ ಕುಳಿತುಕೊಂಡು, ತಾನು ಕನ್ಯಾರ್ಥಿಯಾಗಿ ರಾಜನ ಬಳಿಗೆ ಬಂದಿರುವುದಾಗಿ ತಿಳಿಸಿದನು. ರಾಜನಿಗೆ ಐವತ್ತು ಮಂದಿ ಹೆಣ್ಣು ಮಕ್ಕಳಿದ್ದರು. ಅವರಲ್ಲಿ ಯಾರಾದರೂ ಒಬ್ಬಳನ್ನು ತನಗೆ ವಿವಾಹ ಮಾಡಿಕೊಡಬೇಕೆಂದು ಮುನಿಯು ರಾಜನನ್ನು ಕೇಳಿದನು. ರಾಜನ ಮನೆಯಿಂದ ನಿರಾಶನಾಗಿ ಬರಿಗೈಯಲ್ಲಿ ಹಿಂದಿರುಗುವುದು ಇಬ್ಬರಿಗೂ ಶ್ರೇಯಸ್ಕರವಲ್ಲವೆಂದು ಎಚ್ಚರಿಸಿದನು.
ಸೌಭರಿಯು ಹೀಗೆ ಹೇಳಿದುದನ್ನು ಕೇಳಿ ರಾಜನು ಚಿಂತಾಕ್ರಾಂತನಾದನು. ವೃದ್ಧಾಪ್ಯದಿಂದ ಕೃಶನಾಗಿದ್ದ ಅವನಿಗೆ ಮಗಳನ್ನು ಕೊಡುವುದು ಅವನಿಗೆ ಇಷ್ಟವಿರಲಿಲ್ಲ. ಅವನ ಪ್ರಾರ್ಥನೆಯನ್ನು ನಿರಾಕರಿಸಿದರೆ ಮುನಿಯು ಶಾಪಕೊಡಬಹುದೆಂಬ ಭಯ. ಸ್ವಲ್ಪ ಹೊತ್ತು ಚಿಂತಿಸಿ ರಾಜನು- ‘ಉತ್ತಮ ಕುಲದಲ್ಲಿ ಜನಿಸಿದ ಯಾವ ವರನನ್ನು ಕನ್ಯೆಯು ಇಷ್ಟ ಪಡುತ್ತಾಳೆಯೋ ಅವನಿಗೆ ವಿವಾಹ ಮಾಡಿಕೊಡುವುದು ನಮ್ಮ ಸಂಪ್ರದಾಯ. ಇಂಥ ಪರಿಸ್ಥಿತಿಯಲ್ಲಿ ನಾನೇನು ಮಾಡಬೇಕೋ ಅಪ್ಪಣೆ ಕೊಡಿ’ ಎಂದನು.
ಇಂತಹ ಹಣ್ಣು ಹಣ್ಣು ಮುದುಕನನ್ನು ಯಾವ ಕನ್ಯೆಯೂ ವರಿಸುವುದಿಲ್ಲ. ಕನ್ಯೆಯರೇ ತಿರಸ್ಕರಿಸಿಬಿಟ್ಟರೆ ತನ್ನ ತಪ್ಪೇನೂ ಇರುವುದಿಲ್ಲ ಎಂದು ಆ ರಾಜನ ಆಲೋಚನೆಯಾಗಿತ್ತು. ಸೌಭರಿಗೆ ಅವನ ಮಾತಿನ ಅರ್ಥ ಹೊಳೆಯಿತು. ಕೂಡಲೇ ಮುನಿಯು- ‘ಹಾಗಾದರೆ, ಅಂತಃಪುರದ ದ್ವಾರಪಾಲಕನಿಗೆ ನನ್ನನ್ನು ಒಳಗೆ ಬಿಡುವಂತೆ ಆದೇಶಿಸು. ನಿನ್ನ ಪುತ್ರಿಯರಲ್ಲಿ ಯಾರಾದರೂ ನನ್ನನ್ನು ವರಿಸಿದರೆ ನಾವು ಅವಳನ್ನು ವಿವಾಹವಾಗುವೆನು’ ಎಂದನು. ಗತ್ಯಂತರವಿಲ್ಲದೆ ರಾಜನು ಮುನಿಯನ್ನು ಅಂತಃಪುರಕ್ಕೆ ಕರೆದುಕೊಂಡು ಹೋಗುವಂತೆ ದ್ವಾರಪಾಲಕರಿಗೆ ಆದೇಶಿಸಿದನು.
ಮನಿಯು ಅಂತಃಪುರವನ್ನು ಪ್ರವೇಶಿಸುವಾಗ ತನ್ನ ಯೋಗಶಕ್ತಿಯಿಂದ ರಮಣೀಯವಾದ ರೂಪವನ್ನು ಧರಿಸಿದನು. ದ್ವಾರಪಾಲಕನು ಕನ್ಯೆಯರಿಗೆ ರಾಜನ ಆದೇಶವನ್ನು ಶ್ರುತಪಡಿಸಿದನು. ಅದನ್ನು ಕೇಳಿ ಮತ್ತು ಮುನಿಯನ್ನು ನೋಡಿ, ಎಲ್ಲ ಐವತ್ತು ಕುಮಾರಿಯರೂ ಆ ಬ್ರಹ್ಮರ್ಷಿಯಲ್ಲಿ ಮೋಹಿತರಾದರು. ಅವರು ಪರಸ್ಪರ, ನಾನು ಈತನನ್ನು ವರಿಸುತ್ತೇನೆ, ನಿನ್ನದು ವ್ಯರ್ಥ ಪ್ರಯುತ್ನ, ಈತನು ನಿನಗೆ ಯೋಗ್ಯನಲ್ಲ, ನನಗೆ ಪತಿಯಾಗಲೆಂದೇ ಬ್ರಹ್ಮನು ಈ ವರನನ್ನು ಸೃಷ್ಟಿಸಿದ್ದಾನೆ, ನೀನು ಸುಮ್ಮನೆ ಇಲ್ಲಿಂದ ಹೊರಟುಹೋಗು ಎಂದು ಮುಂತಾಗಿ ಕಲಹದಲ್ಲಿ ತೊಡಗಿದರು. ಒಬ್ಬಳು, ನಾನು ಇವನನ್ನು ಮೊದಲು ನೋಡಿದೆ, ನಾನೇ ಇವನನ್ನು ವಿವಾಹವಾಗಬೇಕು ಎಂದು ಹೇಳಿದರೆ, ಇನ್ನೊಬ್ಬಳು, ನಾನೇ ಇವನನ್ನು ಮೊದಲು ಮನಸಾ ವರಿಸಿಬಿಟ್ಟಿದ್ದೇನೆ ಎಂದು ಹೇಳುವಳು. ಹೀಗೆ ಆ ರಾಜಪುತ್ರಿಯರಲ್ಲಿ ಜಗಳವೇ ಆರಂಭವಾಯಿತು. ಎಲ್ಲ ಕನ್ಯೆಯರೂ ತಾವು ಮನಃಪೂರ್ವಕವಾಗಿ ಈ ಮುನಿಯನ್ನು ವರಿಸಿರುವುದಾಗಿ ಹೇಳತೊಡಗಿದರು. ಅಂತಃಪುರದ ಕಂಚುಕಿಯು ಈ ವಾರ್ತೆಯನ್ನು ರಾಜನ ಬಳಿಗೆ ಹೋಗಿ ಅರುಹಿದನು. ರಾಜನಿಗೆ ಈಗ ಮುನಿಯ ಮಹಿಮೆಯನ್ನು ಕಂಡು ಭಯವೂ, ಆಶ್ಚರ್ಯವೂ ಏಕಕಾಲದಲ್ಲಿ ಉಂಟಾಯಿತು. ಕೊಟ್ಟ ಮಾತಿಗೆ ಕಟ್ಟು ಬಿದ್ದ ರಾಜನು ತನ್ನ ಐವತ್ತೂ ಕುಮಾರಿಯರನ್ನು ಮುನಿಗೆ ಧಾರೆ ಎರೆದುಕೊಟ್ಟನು.
ವಿವಾಹದ ನಂತರ ಸೌಭರಿ ಮಹರ್ಷಿಯು ಎಲ್ಲ ರಾಜಪುತ್ರಿಯರನ್ನು ತನ್ನ ಆಶ್ರಮಕ್ಕೆ ಕರೆದುಕೊಂಡು ಹೋದನು. ಅಲ್ಲಿ ವಿಶ್ವಕರ್ಮನನ್ನು ಆಹ್ವಾನಿಸಿ, ಎಲ್ಲ ರಾಜಕುಮಾರಿಯರಿಗೂ ಪ್ರತ್ಯೇಕವಾದ ಭವನಗಳನ್ನು ನಿರ್ಮಿಸಿಕೊಟ್ಟನು. ಒಂದೊಂದು ಭವನವೂ ಸಮಸ್ತ ಭೋಗವಸ್ತುಗಳಿಂದ ಪೂರ್ಣವಾಗಿದ್ದಿತು. ಬೇಕಾದಷ್ಟು ಜನ ಭೃತ್ಸರು ಸದಾ ಸೇವೆಗೆ ಸಿದ್ಧರಾಗಿರುತ್ತಿದ್ದರು. ರಾಜಕುಮಾರಿಯರು ತಮ್ಮ ತಮ್ಮ ಭವನಗಳಲ್ಲಿ ತಮಗೆ ಇಷ್ಟಬಂದಂತೆ ಸಂತೋಷವಾಗಿ ಇರುತ್ತಿದ್ದರು.
ಇತ್ತ ಮಾಂಧಾತ ರಾಜನಿಗೆ ತನ್ನ ಪುತ್ರಿಯರನ್ನು ಅನ್ಯಾಯವಾಗಿ ವೃದ್ಧನೊಬ್ಬನಿಗೆ ಕೊಟ್ಟನೆಂದು ಚಿಂತೆ ಕಾಡತೊಡಗಿತು. ಅವರೆಲ್ಲ ಕಾಡಿನಲ್ಲಿ ಎಷ್ಟು ಕಷ್ಟ ಪಡುತ್ತಿದ್ದಾರೊ ಎಂದು ಪ್ರತಿದಿನವೂ ದುಃಖಿಸುತ್ತಿದ್ದನು. ಕಡೆಗೊಂದು ದಿನ ತಾನೇ ಹೋಗಿ ನೋಡಿ ಬರೋಣವೆಂದು ಆಶ್ರಮಕ್ಕೆ ಹೊರಟನು. ಅಲ್ಲಿ ಹೊಗಿ ನೋಡಿದರೆ ರಮಣೀಯವಾದ ಉಪವನಗಳು, ಜಲಾಶಯಗಳು, ಪ್ರಾಸಾದಗಳು ತನ್ನ ನಗರವನ್ನು ಮೀರಿಸಿ ಕಂಗೊಳಿಸುತ್ತಿದ್ದವು. ರಾಜನು ಅವುಗಳಲ್ಲಿ ಒಂದು ಪ್ರಾಸದವನ್ನು ಪ್ರವೇಶಿಸಿದನು. ಅಲ್ಲಿ ತನ್ನ ಮಗಳನ್ನು ಕಂಡು ಪ್ರೀತನಾಗಿ, ಪೀಠದ ಮೇಲೆ ಆಸೀನನಾದನು. ನಂತರ ತನ್ನ ಮಗಳನ್ನು- ‘ವತ್ಸೇ, ನೀನು ಇಲ್ಲಿ ಸುಖವಾಗಿ ಇರುವೆಯಾ? ಮಹರ್ಷಿಯು ನಿನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆಯೇ? ನಿನಗೆ ತವರಿನ ನೆನಪು ಬಾರದೇ?’ ಎಂದು ಪ್ರಶ್ನಿಸಿದನು. ಅದಕ್ಕೆ ರಾಜಕುಮಾರಿ- ಅಪ್ಪಾ, ಈ ಪ್ರಾಸಾದವು ಸೊಗಸಾಗಿದೆ. ನನ್ನ ಜೀವನವು ಎಲ್ಲ ಸುಖ ಸಂಪತ್ತುಗಳಿಂದ ಕೂಡಿದೆ. ತಮ್ಮ ಆರ್ಶೀವಾದದಿಮದ ಎಲ್ಲವೂ ಸುಖಮಯವಾಗಿದೆ. ಆದರೂ ನನಗೆ ಒಂದು ದುಃಖದ ಕಾರಣವಿದೆ. ಅದೇನೆಂದರೆ ನನ್ನ ಪತಿದೇವರು ಸದಾಕಾಲವೂ ನನ್ನ ಅರಮನೆಯಲ್ಲಿಯೇ ಇರುತ್ತಾರೆ. ನನ್ನ ಅಕ್ಕ, ತಂಗಿಯರಿಗೆ ಇದರಿಂದ ದುಃಖವಾಗುತ್ತಿರಬಹುದೆಂಬುದೇ ನನ್ನ ದುಃಖಕ್ಕೆ ಕಾರಣ ಎಂದಳು.
ರಾಜನು ಮುಂದೆ ಇನ್ನೊಂದು ಭವನಕ್ಕೆ ಹೋದನು. ಅಲ್ಲಿಯೂ ರಾಜಕುಮಾರಿ ತಾನು ಸುಖವಾಗಿರುವೆನೆಂದೂ, ತನ್ನ ಪತಿ ಯಾವಾಗಲೂ ಇಲ್ಲಿಯೇ ಇರುವನೆಂದೂ ಹೇಳಿದಳು. ಹೀಗೆಯೇ ರಾಜನು ಪ್ರತಿಭವನಕ್ಕೂ ತೆರಳಿ ಇದೇ ಉತ್ತರವನ್ನು ಪಡೆದನು. ಅನಂದಿತನಾದ ರಾಜನು ಸೌಭರಿಯ ಅಗಾಧ ತಪಃ ಪ್ರಭಾವದಿಂದ ವಿಸ್ಮಿತನೂ ಆದನು. ಹಾಗೆಯೇ ಉಪವನಕ್ಕೆ ಬರಲು, ಅಲ್ಲಿ ಸೌಭರಿಯು ತನ್ನ ಪಾಡಿಗೆ ತಾನು ಏಕಾಂತದಲ್ಲಿ ಧ್ಯಾನಮಗ್ನನಾಗಿದ್ದನು. ಅವನನ್ನು ಕಂಡು ರಾಜನು- ಭಗವಾನ್, ತಮ್ಮ ಯೋಗ ಸಿದ್ಧಿಯ ಅದ್ಭುತ ಪ್ರಭಾವವನ್ನು ನೋಡಿದೆನು. ತಮ್ಮನ್ನು ಹಿಂದೆ ಕಡೆಗಣಿಸಿದುದಕ್ಕಾಗಿ ನನ್ನನ್ನು ಕ್ಷಮಿಸಿ ಎಂದು ಪ್ರಾರ್ಥಿಸಿ, ಅವರಿಂದ ಬೀಳ್ಕೊಂಡು ತನ್ನ ಅರಮನೆಗೆ ಹೊರಟುಹೋದನು.
ಕಾಲಕ್ರಮೇಣ ಸೌಭರಿಗೆ ಆ ರಾಜಕುಮಾರಿಯರಲ್ಲಿ ಪುತ್ರ, ಪೌತ್ರರು ಜನಿಸಿದರು. ಹೀಗೆಯೇ ಮುಂದುವರಿದರೆ, ಕಾಲಕ್ರಮೇಣ ಮನೋಭಿಲಾಷೆಗಳು ಪ್ರವರ್ಧಮಾನವಾಗುವುದೆಂದು ಮಹರ್ಷಿಗಳು ಮನಗಂಡು, ವಿಷಯ ಸುಖದ ಹಂಗನ್ನು ತೊರೆದು, ತನ್ನ ಶ್ರೇಯಸ್ಸನ್ನು ಕಂಡುಕೊಳ್ಳಲು ನಿರ್ಧರಿಸಿದನು. ಹೀಗೆ ಯೋಚಿಸಿ ಸೌಭರಿಯು ಪುತ್ರ, ಗೃಹಾದಿಗಳನ್ನು ತೊರೆದು, ಪತ್ನಿಯರೊಂದಿಗೆ ವಾನಪಸ್ರಸ್ಥಾಶ್ರಮವನ್ನು ಕೈಗೊಂಡನು. ತನ್ನ ಸಮಸ್ತ ಪಾಪಗಳನ್ನು ಅನುಷ್ಠಾನದಿಂದ ದೂರ ಮಾಡಿಕೊಂಡು ಕೊನೆಯಲ್ಲಿ ಅಹವನೀಯಾದಿ ಅಗ್ನಿಗಳನ್ನು ತನ್ನಲ್ಲಿ ಸಮಾರೋಪಿಸಿಕೊಂಡು ಸಂನ್ಯಾಸಿಯಾದನು. ಎಲ್ಲ ಕರ್ಮಗಳನ್ನು ಭಗವಂತನಿಗೆ ಸಮರ್ಪಿಸಿ, ವಿಕಾರರಹಿತವಾದ ಶಾಶ್ವತಪದವಿಯನ್ನು ಹೊಂದಿದನು.
ಭಾಗವತದಲ್ಲಿ ಸೌಭರಿ ಮುನಿಗಳ ಮತ್ತೊಂದು ಆಶ್ಚರ್ಯಕರ ವೃತ್ತಾಂತ ಬರುತ್ತದೆ. ಒಮ್ಮೆ ಈ ಮುನಿಗಳು ಯಮುನಾ ನದಿಯ ತೀರದಲ್ಲಿ ತಪಸ್ಸು ಮಾಡುತ್ತಿದ್ದರು. ಆ ನದಿಯಲ್ಲಿದ್ದ ಮೀನುಗಳನ್ನು ಗರುಡನು ಕೊಂದು ತಿಂದು ಬಿಡುತ್ತಿದ್ದನು. ಮೀನುಗಳಿಗೂ ಸೌಭರಿಗೂ ನಾವು ಹಿಂದೆಯೇ ನೋಡಿರುವಂತೆ ಬಹಳ ಸ್ನೇಹ ಮತ್ತು ಪ್ರೀತಿಗಳಿದ್ದವು. ಮೀನುಗಳಿಗೆ ಉಂಟಾಗುತ್ತಿರುವ ತೊಂದರೆಯನ್ನು ಗಮನಿಸಿ ಸೌಭರಿಯು ಗರುಡನನ್ನು ಆಕ್ಷೇಪಿಸಿದರು. ಪದೆ ಪದೇ ಎಚ್ಚರಿಸಿದರೂ ಗರುಡನು ಕೇಳಲಿಲ್ಲ. ಕುಪಿತರಾದ ಮಹರ್ಷಿಗಳು, ಈ ಜಲಾಶ್ರಯದಲ್ಲಿರುವ ಜಲಚರಗಳನ್ನು ತಿಂದರೆ ನೀನು ಕೂಡಲೇ ಮೃತನಾಗುವೆ ಎಂದು ಶಾಪ ಕೊಟ್ಟರು. ಆ ನಂತರ ಗರುಡನ ಕಾಟದಿಂದ ಮುಕ್ತವಾಗಿ ಆ ಜಲಾಶ್ರಯದಲ್ಲಿ ಜಲಚರಗಳು ಸಂತೋಷದಿಂದ ಇರತೊಡಗಿದವು.
ಗರುಡನು ಆಹಾರಕ್ಕಾಗಿ ಬೇರೆಯ ಸ್ಥಳವನ್ನು ಆರಿಸಬೇಕಾಯಿತು. ಇದೇ ಸಮಯದಲ್ಲಿ ಲೋಕಕ್ಕೆ ಸರ್ಪಗಳ ಬಾಧೆ ಅಕವಾಯಿತು. ಜನರೆಲ್ಲರೂ ಸೇರಿ ಸರ್ಪಗಳ ಜೊತೆ ಒಪ್ಪಂದ ಮಾಡಿಕೊಂಡರು. ಅದೇನೆಂದರೆ ಪ್ರತಿ ಅಮಾವಾಸ್ಯೆಯ ದಿನ ಸಮಸ್ತ ಭಕ್ಷ್ಯಗಳನ್ನು ಸರ್ಪಗಳಿಗೆ ಒದಗಿಸಿ ಕೊಡುವುದಾಗಿಯೂ ಸರ್ಪಗಳು ಅದರಿಂದ ತೃಪ್ತಿ ಹೊಂದಿ, ಜನರನ್ನು ಕಚ್ಚದೇ ಇರಬೇಕೆಂಬುದಾಗಿತ್ತು. ಅದರಂತೆ ಸರ್ಪಗಳೂ ಕೂಡ ಜನರಿಂದ ಬಂದ ಉಪಾಹಾರದಲ್ಲಿ ಸ್ವಲ್ಪವನ್ನು ಗರುಡನಿಗೆ ಒಪ್ಪಿಸಿ, ಜನರನ್ನು ಕಚ್ಚದೇ ನಿಶ್ಚಿಂತವಾಗಿ ಇರತೊಡಗಿದವು. ಇದರಿಂದ ಗರುಡನಿಗೂ ಹಿಂಸೆ ಇಲ್ಲದೆ ಆಹಾರ ಸಿಕ್ಕಿತು. ಆದರೆ ಕಾಳಿಂಗ ಸರ್ಪ ಮಾತ್ರ ಅಹಂಕಾರದಿಂದ ಗರುಡನಿಗೆ ಪಾಲನ್ನು ಕೊಡುತ್ತಿರಲಿಲ್ಲ. ಗರುಡನು ಕುಪಿತನಾಗಿ ಕಾಳಿಂಗ ಸರ್ಪದ ತಲೆಯ ಮೇಲೆ ತನ್ನ ರೆಕ್ಕೆಯಿಂದ ಪ್ರಹಾರ ಮಾಡಿದನು. ಒಡನೆಯೇ ಒಂದೇ ಪ್ರಹಾರಕ್ಕೆ ಕಾಳಿಂಗ ಸರ್ಪದ ಅಹಂಕಾರ ಅಡಗಿಹೋಯಿತು. ಈಗ ಅವನು ಗರುಡನು ಬಾರದ ಜಾಗವನ್ನು ಅರಸಬೇಕಾಯಿತು. ಯಮನು ನದಿಯ ಮಡುವಿಗೆ ಸೌಭರಿಯು ಕೊಟ್ಟಿದ್ದ ಶಾಪದ ವಿಚಾರ ಅವನಿಗೆ ತಿಳಿದಿತ್ತು. ಆ ಧೈರ್ಯದಿಂದಲೇ ಅವನು ಮಡುವನ್ನು ಸೇರಿ, ಗೋಕುಲದ ನಿವಾಸಿಗಳಿಗೆ ತೊಂದರೆ ಕೊಡತೊಡಗಿದನು. ಮುಂದೆ ಕೃಷ್ಣನು ಈ ಕಾಳಿಂಗ ಸರ್ಪವನ್ನು ಮರ್ದಿಸಿ ಮತ್ತೆ ಅಲ್ಲಿಂದ ಮೊದಲಿನ ಜಾಗಕ್ಕೆ ಕಳಿಸಿಕೊಟ್ಟನು.
ಹೀಗೆ ಸೌಭರಿ ಮಹರ್ಷಿಗಳು ಜನೋಪಕಾರಿಗಳೂ, ಪಶುಪಕ್ಷಿಗಳನ್ನು ಪ್ರೀತಿಸುತ್ತಿದ್ದವರೂ, ಉತ್ತಮ ಯೋಗಿಗಳೂ ಆಗಿದ್ದರು.

LEAVE A REPLY