ಲೈಂಗಿಕ ಹಗರಣ: ಕಾಂಗ್ರೆಸ್ ನಿಲುವೇನು?

ಕೇರಳದ ಕುಖ್ಯಾತ ಬಹುಕೋಟಿ ರೂ.ಗಳ ಸೋಲಾರ್ ಹಗರಣದ ಮರುತನಿಖೆಗೆ ಆದೇಶ ನೀಡಲಾಗಿದೆ. ಇದೊಂದು ಆರ್ಥಿಕ ಹಗರಣವೂ ಲೈಂಗಿಕ ಹಗರಣವೂ ಆಗಿರುವುದಷ್ಟೇ ಅಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ಹೊಂದಿರುವ ಕೇರಳದ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್  ಅವರ ಹೆಸರೂ ಇದರಲ್ಲಿ ಸೇರಿರುವುದು ಕಾಂಗ್ರೆಸಿಗೆ ಈಗ ನುಂಗಲಾರದ ಬಿಸಿ ತುಪ್ಪವಾಗಿದೆ.
ತನಗೆ ವೇಣುಗೋಪಾಲ್ ಮತ್ತಿತರರು ಲೈಂಗಿಕ ಕಿರುಕುಳ ನೀಡಿರುವುದಾಗಿ ಸೋಲಾರ್ ಪ್ಯಾನೆಲ್‌ನ ಸವಿತಾ ನಾಯರ್ ಆರೋಪಿಸಿದ್ದಾರೆ. ಮಾತ್ರವಲ್ಲ ಈ ಸಂಬಂಧದ  ತನಿಖಾ ತಂಡವೂ ಈ ಹಗರಣದಲ್ಲಿ  ವೇಣುಗೋಪಾಲ್ ಪಾತ್ರ ಇರುವುದನ್ನು ದೃಢಪಡಿಸಿದೆ. ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ಅವರ ವಿರುದ್ಧವೂ ಇಂತಹುದೇ ಆರೋಪವಿದೆ. ಕಾಂಗ್ರೆಸ್ ಕೇರಳದಲ್ಲಿ ಅಧಿಕಾರದಲ್ಲಿದ್ದಾಗ ಏನೆಲ್ಲ ದ್ರಾವಿಡ ಪ್ರಾಣಾಯಾಮ ನಡೆಸಿ ಈ ಹಗರಣದ ಬಗ್ಗೆ ಸೂಕ್ತ ತನಿಖೆಯಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಈಗ ತನಿಖೆಗೆ ಕೇರಳ ಸರಕಾರ ಆದೇಶವಿತ್ತಿದೆ. ‘ಇದು ಕಮ್ಯುನಿಸ್ಟರೊಂದಿಗೆ ಕಾಂಗ್ರೆಸ್ ನಡೆಸುತ್ತಿದ್ದ ಅಡ್ಜಸ್ಟ್‌ಮೆಂಟ್ ರಾಜಕೀಯಕ್ಕೆ ಸಿಕ್ಕಿದ ಫಲವಾಗಿದ್ದು,  ಕಾಂಗ್ರೆಸ್ ಅದನ್ನೀಗ ಅನುಭವಿಸಬೇಕಾಗಿ ಬಂದಿದೆ ಎಂದು ಕೇರಳದ ಕೆಲವು ಕಾಂಗ್ರೆಸ್ ನಾಯಕರೇ ಹೇಳುತ್ತಿರುವುದು ಕಾಂಗ್ರೆಸ್ ಪಾಲಿಗೆ ಇನ್ನಷ್ಟು ಮುಜುಗರ ತಂದಿದೆ.
ಗಮನಾರ್ಹವೆಂದರೆ, ಇಂತಹ ತನಿಖೆಗೆ ಆಧಾರವಾಗಿರುವುದು ಹಿಂದಿನ ಕಾಂಗ್ರೆಸ್ ಸರಕಾರವೇ ನೇಮಿಸಿದ ನ್ಯಾ.ಶಿವರಂಜನ್ ಆಯೋಗದ ವರದಿ. ಕರ್ನಾಟಕದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ಮುಂದಿಟ್ಟುಕೊಂಡು ತಮ್ಮ  ಹಾಗೂ  ಕಾಂಗ್ರೆಸ್ ಸರಕಾರ ವಿರುದ್ಧದ ಎಲ್ಲ ಗಂಭೀರ ಆರೋಪಗಳನ್ನೂ ಚಾಪೆಯಡಿಗೆ ತಳ್ಳುತ್ತಾ, ಉಡಾಫೆ ಹೇಳಿಕೆಗಳ ಮೂಲಕ ದಾರ್ಷ್ಟ್ಯ ಪ್ರದರ್ಶಿಸುತ್ತಾ , ಪ್ರತಿಪಕ್ಷ ನಾಯಕರ ವಿರುದ್ಧ ಎಸಿಬಿಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ.ಭ್ರಷ್ಟಾಚಾರ ನಿಗ್ರಹ ದಳವೀಗ ರಾಜ್ಯ ಕಾಂಗ್ರೆಸ್ ಪಾಲಿಗೆ ಭ್ರಷ್ಟಾಚಾರ ರಕ್ಷಣಾ ದಳವಾಗಿ ಬಿಟ್ಟಿದೆ ಎಂಬ ಟೀಕೆಗಳು ಸರ್ವತ್ರ ಕೇಳಿಬರುತ್ತಿವೆ.   ಹಗರಣಕ್ಕೆ ಸಂಬಂಧಿಸಿ ಯಾವುದೇ ಹೇಳಿಕೆ ನೀಡದಂತೆ ಕಾಂಗ್ರೆಸ್ ಹೈಕಮಾಂಡ್ ಕೇರಳ ಕಾಂಗ್ರೆಸ್ ನಾಯಕರಿಗೆ ಸೂಚಿಸಿರುವುದು ಕುತೂಹಲ ಮೂಡಿಸಿದೆ. ಈ ಹಗರಣಕ್ಕೆ ಕೇರಳ ಕಾಂಗ್ರೆಸ್ ನಾಯಕರು ಎಷ್ಟು ಹೊಣೆಗಾರರೋ , ಕೇಂದ್ರ ಕಾಂಗ್ರೆಸ್ ನಾಯಕತ್ವವೂ ಅಷ್ಟೇ ಹೊಣೆ ಹೊರಬೇಕೆಂಬ ಮಾತು ಕೇಳಿಬಂದಿರುವುದು ಕಾಂಗ್ರೆಸ್ ಹೈಕಮಾಂಡಿಗೂ ಪೇಚು ತಂದಿದೆ. ಚುನಾವಣೆ ಎದುರಾಗಿರುವಾಗ ಪ್ರತಿಪಕ್ಷಗಳ ವಿವೇಕಹೀನ ಗೊಂದಲವನ್ನು ಲಾಭವಾಗಿ ಪರಿವರ್ತಿಸಿಕೊಳ್ಳುವ ಸಿದ್ದರಾಮಯ್ಯ ತಂತ್ರಕ್ಕೆ ವೇಣುಗೋಪಾಲ್ ಪ್ರಕರಣ ದೊಡ್ಡ ಹೊಡೆತ ನೀಡಿದೆ.ಈಗ ಕಾಂಗ್ರೆಸ್ ಈ ವಿಷಯದಲ್ಲಿ ಸುಲಭದಲ್ಲಿ ನುಣುಚಿಕೊಂಡು ಪಾರಾಗಲು ಸಾಧ್ಯವಿಲ್ಲ.

LEAVE A REPLY