ಈ ದೌರ್ಜನ್ಯಕ್ಕೆ ಎಲ್ಲಿದೆ ಪರಿಹಾರ? ಯಾವ ಕಾನೂನು ಸಹಕರಿಸುತ್ತದೆ?

  • ಚಂದ್ರಶೇಖರ ದಾಮ್ಲೆ
ನಾನು ಇಲ್ಲಿ ಮೂರು ಆಂಗ್ಲ ಪದಗಳನ್ನೇ ಬಳಸಿದ್ದೇನೆ. ಏಕೆಂದರೆ ನಾನು ಪ್ರಸ್ತಾಪಿಸಲಿರುವ ವಿಷಯವು  ಸಮಾಜದಲ್ಲಿ ಚರ್ಚಿತವಾಗುವುದೇ ಈ ಪದಗಳಲ್ಲಿ.  ಇಂದಿನ ದಿನಗಳಲ್ಲಿ ಮದುವೆಗಳ ಅದ್ದೂರಿ ನಿಶ್ಚಿತಾರ್ಥಗಳು ಕಲ್ಯಾಣ ಮಂಟಪ ಅಥವಾ ಸಭಾಭವನಗಳಲ್ಲಿ ಆಗುತ್ತವೆ. ಸುಮಾರಾಗಿ ಮದುವೆಗೆ ಮಾಡುವಂತಹ ಸಿದ್ಧತೆಗಳಾಗುತ್ತವೆ. ಅಬ್ಬರ ಆಡಂಬರಗಳಿರುತ್ತವೆ. ಇನ್ನೂರು ಮುನ್ನೂರು ಆಹ್ವಾನಿತರು ಬಂದು ನಿಶ್ಚಿತಾರ್ಥಕ್ಕೆ ಸಾಕ್ಷಿಗಳಾಗುತ್ತಾರೆ. ಸಾಂಪ್ರದಾಯಿಕ ವೀಳ್ಯ ವಿನಿಮಯ, ಗುರುಹಿರಿಯರಿದ್ದು ಮದುವೆಯ ದಿನ ಮತ್ತು ಮುಹೂರ್ತ ನಿರ್ಣಯ, ಆಮಂತ್ರಣ ಬರೆಯುವುದು, ಅದನ್ನು ಎಲ್ಲರೂ ಸಾಕ್ಷಿಯಾಗಿದ್ದು ಪುರೋಹಿತರು ಓದುವುದು, ಹುಡುಗ ಮತ್ತು ಹುಡುಗಿ ಹಾರ ಹಾಕಿ ಅಕ್ಕಪಕ್ಕ ನಿಲ್ಲುವುದು, ಆಹ್ವಾನಿತರು ಅವರಿಗೆ ಶುಭಾಶಯ ಹೇಳುವುದು, ಫೊಟೋಗ್ರಾಫಿ ಮತ್ತು ವೀಡಿಯೋಗಳಲ್ಲಿ ಚಿತ್ರೀಕರಣ, ಭರ್ಜರಿ ಭೋಜನ ಮುಂತಾಗಿ ಅದ್ದೂರಿ ಎಂಗೇಜ್ ಮೆಂಟ್  ಕಾರ್ಯಕ್ರಮ ನಡೆಯುತ್ತದೆ. ಗಂಡು ಮತ್ತು ಹೆಣ್ಣು ಪರಸ್ಪರ ಫೇಸ್‌ಬುಕ್‌ಗಳಲ್ಲಿ ತಮ್ಮ ಜೋಡಿ ಫೋಟೋಗಳನ್ನು ಹಾಕಿಕೊಳ್ಳುತ್ತಾರೆ. ‘ಐ ಯಮ್ ಎಂಗೇಜ್‌ಡ್’ ಎಂತ ಹೇಳಿಕೊಳ್ಳುತ್ತಾರೆ. ಇದಕ್ಕೆಲ್ಲ ನಿಶ್ಚಿತಾರ್ಥದ ಕಾರ್ಯಕ್ರಮದ ಬಳಿಕ ಅಧಿಕೃತ ಪರವಾನಗಿ ಸಿಕ್ಕಿದಂತಾಗುತ್ತದೆ. ಇಂಟರ್‌ನೆಟ್ ಹಾಗೂ ವಾಟ್ಸ್‌ಅಪ್‌ಗಳು ಸುಪುಷ್ಟವಾಗಿ ಬಳಕೆಯಾಗುತ್ತವೆ. ಹೀಗೆ ವಿವಾಹ ನಿಶ್ಚಯವಾದದ್ದು ಜಗಜ್ಜಾಹೀರಾಗುತ್ತದೆ. ಇದಾಗಿ ನಿಶ್ಚೈಸಿದ ದಿನ ಮತ್ತು ಮುಹೂರ್ತದಲ್ಲಿ ಮದುವೆ ನಡೆದರೆ ಅದು ಚೆಂದ. ಬಹುತೇಕ ಹಾಗೇ ಆಗುತ್ತದೆ. ಆದರೆ ಮಧ್ಯದಲ್ಲೇ ಘಟಸ್ಫೋಟವಾಗಿ ಹೊಸದಾಗಿ ಕುಡಿಯೊಡೆದ ಸಂಬಂಧಗಳು ಕಡಿಯಲ್ಪಡುವ ಘಟನೆಗಳು ಕೆಲವಾದರೂ ಜರಗುತ್ತಿರುವುದು ಅಘಾತಕಾರಿಯಾಗಿದೆ.
ಮದುವೆ ನಿಶ್ವಯವಾಗುವಾಗಲೇ ಸಾಮಾನ್ಯವಾಗಿ ಕೊಡುಕೊಳ್ಳುವಿಕೆಯ, ವರದಕ್ಷಿಣೆ ಉಡುಗೊರೆಗಳ, ಪ್ರಯಾಣ ವೆಚ್ಚಗಳ, ಔತಣ ಹಾಗೂ ಅದ್ದೂರಿತನಗಳ, ಆಮಂತ್ರಿಸಲಿರುವ ಬಂಧುಗಳ ಸಂಖ್ಯೆ ಹಾಗೂ ಸತ್ಕಾರಗಳ ಕುರಿತಾಗಿ ಕೂಲಂಕಶವಾಗಿ ಚರ್ಚೆಯಾಗಿ ನಿರ್ಣಯಗಳನ್ನು ಮಾಡಿ ಆಗಿರುತ್ತದೆ. ಒಮ್ಮೆ ಆಗಿರುವ ನಿರ್ಧಾರಗಳನ್ನು ಯಾರೂ ತಪ್ಪಿಸುವಂತಿಲ್ಲ;  ಹೊಸ ಅಪೇಕ್ಷೆಗಳ    ಒತ್ತಡ ಹಾಕುವಂತಿಲ್ಲ. ಸಾಮಾನ್ಯವಾಗಿ ಗಂಡಿನ ಕಡೆಯವರು ವರದಕ್ಷಿಣೆಯ ಭಾಗವಾಗಿ ಹೊಸ ಡಿಮಾಂಡ್‌ಗಳನ್ನು ಇಡುವುದು ಮತ್ತು ಹೆಣ್ಣಿನ ಕಡೆಯವರು ಸಂಬಂಧ ಕೆಡಬಾರದೆಂದು ಇಂತಹ ಡಿಮಾಂಡ್‌ಗಳಿಗೆ ಒಪ್ಪುತ್ತ ಹೋದಂತೆ ಅಪೇಕ್ಷೆಗಳ ಪ್ರಮಾಣ ಹೆಚ್ಚುತ್ತದೆ. ಅದು ಅತಿಯಾಗದೆ ಮಿತಿಯಲ್ಲಿದ್ದರೆ ವಿವಾಹ ನಡೆದು ಬಿಡುತ್ತದೆ. ಆದರೆ ಅದೇ ಅತಿಯಾದರೆ ಅದು  ಭವಿಷ್ಯದಲ್ಲಿ ವಿವಾಹದ ನಂತರವೂ ತಡೆಯಲಾಗದ ಕಿರುಕುಳವಾಗುತ್ತದೆ. ಈ ಬಗೆಯ ಕಿರುಕುಳವು ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಹೇತುವಾಗುತ್ತದೆ. ಹೆಣ್ಣು ಹೆತ್ತವರು ಮಾರ್ಯಾದೆಯ ಪರದೆಯ ಹಿಂದೆ ಅವಿತರೆ ಸಂಕಷ್ಟ ತಪ್ಪಿದ್ದಲ್ಲ. ಇಂತಹ ಅರಿವು ಸಮಾಜದಲ್ಲಿ ನಿತ್ಯ ಜರಗುವ ವಿದ್ಯಮಾನಗಳಿಂದ ಅರಿತಿದ್ದರೂ ಅನೇಕ ಹೆತ್ತವರೂ ಅವರ ಹೆಣ್ಮಕ್ಕಳೂ ಈ ದುರಂತಕ್ಕೆ ಬಲಿಯಾಗುತ್ತಿದ್ದಾರೆ. ವಿವಾಹ ಮಂಟಪಕ್ಕೆ ಎರಡೂ  ಕಡೆಯ ದಿಬ್ಬಣಗಳು ಬಂದ ಬಳಿಕವೂ ‘ಅದು ಸರಿಯಾಗಿಲ್ಲ, ಇದು ಸಾಕಾಗಲಿಲ್ಲ’ ಎಂಬ ಕೊಂಕು ತೆಗೆದು ಮದುವೆಯಾಗುವುದಿಲ್ಲವೆಂದು ಬ್ಲಾಕ್‌ಮೇಲ್ ಮಾಡಿದ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ವಧು ಮತ್ತು ಹೆಣ್ಣಿನ ಕಡೆಯವರು ಮಾನಸಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಈ ದೌರ್ಜನ್ಯಕ್ಕೆ ಎಲ್ಲಿದೆ ಪರಿಹಾರ? ಯಾವ ಕಾನೂನು ಸಹಕರಿಸುತ್ತದೆ?
ಎಂಗೇಜ್‌ಮೆಂಟ್ ಎಂಬ ಪರಸ್ಪರ ಒಪ್ಪಿಗೆಯ ಕಾರ್ಯಕ್ರಮದಲ್ಲಿ ಪೂರ್ಣ ಸಹಕರಿಸುತ್ತ ಭಾಗವಹಿಸುವ ವರ ಮತ್ತು ವಧು ಹಿರಿಯರ ಅನುಮತಿಯೊಂದಿಗೆ ನೂತನ ಗೆಳೆಯ ಗೆಳತಿಯರಾಗುತ್ತಾರೆ. ಆದರೆ ಅವರು ಈ ಕಾರ್ಯಕ್ರಮದ  ಪೂರ್ವದಲ್ಲೇ ತಮ್ಮ ಖಾಸಾ ಗೆಳತಿ ಅಥವಾ ಗೆಳೆಯನನ್ನು ಹೊಂದಿದ್ದು ಆ ವಿಚಾರವನ್ನು ಮುಚ್ಚಿಟ್ಟಿದ್ದರೆ ಆಗ ಆಗುವ ಸಮಸ್ಯೆ ಅತಿ ಗಂಭೀರವಾದದ್ದು. ವಿವಾಹ ನಿಶ್ಚಯದ ಬಳಿಕ ಹಳೆಯ ಗೆಳತಿ ಮಧ್ಯ ಪ್ರವೇಶಿಸಿ ವಿವಾಹಕ್ಕೆ ಮೊದಲೇ ಅಥವಾ ಅದೇ ದಿನ ವಿವಾಹವನ್ನು ನಿಲ್ಲಿಸುವ ಪ್ರಕರಣಗಳು ಆಗಾಗ ಕೇಳಿ ಬರುತ್ತವೆ. ಆಗ ವಧುವಿಗಾಗುವ ಆಘಾತ ಅಪಾರವಾದದ್ದು. ಆಕೆ ಅದನ್ನು ಸಹಿಸಿಕೊಳ್ಳುವುದು ಅನಿವಾರ್ಯ ಹೌದು, ಆದರೆ ಈ ಮಾನಸಿಕ ದುಷ್ಕೃತ್ಯ ಮಾಡಿದ ವರನು ಯಾವುದೇ ಶಿಕ್ಷೆ ಇಲ್ಲದೆ ಪಾರಾಗುವುದು ಎಂತಹ ನ್ಯಾಯ? ಅದೇ ರೀತಿ ಇಂದಿನ ದಿನಗಳಲ್ಲಿ ವಿವಾಹ ನಿಶ್ಚಯಕ್ಕೆ ಹೆತ್ತವರು ಹವಣಿಸುವಾಗ ಬಾಯಿ ಮುಚ್ಚಿ ಕುಳಿತ ವಧುವಿಗೆ ಆಮೇಲೆ ಗೆಳೆಯನೊಬ್ಬ ಇರುವುದು ಪತ್ತೆಯಾದಾಗ ಮದುವೆಯ ಕನಸು ಕಾಣುತ್ತಿದ್ದ ವರ ಕೂಡಾ ಮಾನಸಿಕ ದುಷ್ಕೃತ್ಯಕ್ಕೆ ಒಳಗಾಗುತ್ತಾನೆ. ಇಂತಹ ಪ್ರಕರಣಗಳಲ್ಲಿ ನಡೆಯಬೇಕಿದ್ದ ವಿವಾಹ ರದ್ದಾಗುತ್ತದೆ. ಒಮ್ಮೆ ಆತಂಕಗಳಾದರೂ ದುಷ್ಕೃತ್ಯ ಎಸಗಿದ ವರನಾಗಲೀ ವಧುವಾಗಲೀ ತಮ್ಮ ಆಯ್ಕೆಯ  ಸಂಗಾತಿಗಳನ್ನು ಪಡೆಯುತ್ತಾರೆ. ಆದರೆ ಎಂಗೇಜ್‌ಮೆಂಟ್‌ಗೆ ಒಮ್ಮೆ ಒಳಗಾಗಿ ಪರಸ್ಪರ ಅರಿತುಕೊಳ್ಳುವ ನೆಪದಲ್ಲಿ ಅನೇಕ ವಿಚಾರಗಳನ್ನು ಜಾಲತಾಣಗಳ ಮೂಲಕ ಹಂಚಿಕೊಂಡು ಮನಸ್ಸನ್ನು ಅರ್ಪಿಸಿದ ವ್ಯಕ್ತಿ ಢೋಂಗಿ ಮಾಡಿದ್ದಾರೆಂದು ಅರಿತಾಗ ಆಗುವ
ಹರ್ಟ್‌ಗೆ ನ್ಯಾಯದಾನದ ಯಾವ ಪರಿಹಾರವೂ ಇಲ್ಲ. ಬದಲಾಗಿ ಕಾಲವೇ ಇದನ್ನು ಮರೆಯುವಂತೆ ಮಾಡುತ್ತದೆ ಎಂಬುದೇ ಉಳಿದಿರುವ ದಾರಿ. ಇದು ಸರಿಯೇ?
 ಮದುವೆಗೆ ಮೊದಲು ನಿಶ್ಚಿತಾರ್ಥ ಎನ್ನುವುದು ಹಿಂದಿನಿಂದಲೂ ಇದ್ದ ಕ್ರಮ. ಈಗ ಅದನ್ನೇ ಎಂಗೇಜ್‌ಮೆಂಟ್ ಎನ್ನಲಾಗುತ್ತದೆ. ಆದರೆ ಮಾತಾಡಲಿರುವ ವಿಷಯಗಳು ಖಾಸಗಿ ಮಾತುಕತೆಗಳಲ್ಲಿ ಮುಗಿದು ಎಂಗೇಜ್‌ಮೆಂಟ್‌ನ ದಿನದಂದು ಸಂಭ್ರಮದ ಆಚರಣೆ ಮಾತ್ರ ಇರುತ್ತದೆ. ದೊಡ್ಡವರ ಎಂಗೇಜ್‌ಮೆಂಟ್‌ನ ಖರ್ಚು ಸಾಧಾರಣದವರ ಮದುವೆ ಖರ್ಚಿಗಿಂತಲೂ ಹೆಚ್ಚು ಇರುತ್ತದೆ. ಆದರೆ ಅಂತಹ ಎಂಗೇಜ್‌ಮೆಂಟ್ ಕೂಡಾ ಕಟ್ ಆಗುತ್ತದೆ. ಮದುವೆಯ ಹುಡುಗ ಹುಡುಗಿ ಮಧ್ಯೆ ದಿನಾಲೂ ಪೋನ್ ಸಂಭಾಷಣೆ ನಡೆಯುತ್ತದೆ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಹುಡುಗನ ಕೈಯಿಂದ ಪಕ್ಕದಲ್ಲಿದ್ದ ಹುಡುಗಿ ಮಾತಾಡಿ “ನಾನೇ ಇವನನ್ನು ಮದುವೆಯಾಗೋದು, ನೀನು ಹೇಗೆ ಮದುವೆಯಾಗ್ತೀಯಾ? ನಾವು ಮೊದಲೇ ಕಮಿಟ್ ಆಗಿದ್ದೇವೆ” ಎನ್ನುತ್ತಾಳೆ. ಆಗ ಈ ಹುಡುಗಿಗೆ ಬರಸಿಡಿಲು ಬಡಿದಂತಾಗದಿದ್ದೀತೆ? ಇದು ಆ ಹುಡುಗನ ಅಪ್ಪ-ಅಮ್ಮನಿಗೂ ಗೌರವದ ಸಂಗತಿಯಲ್ಲವಾದರೂ ಮಾನಹಾನಿ ಮತ್ತು ಮನಸ್ಸಿಗೆ ಗ್ಲಾನಿ ಆಗುವುದು ಹೆಣ್ಣಿಗೂ ಆಕೆಯ ಹೆತ್ತವರಿಗೆ ತಾನೇ? ಇದಕ್ಕೆ ವಿರುದ್ಧವಾದ ಘಟನೆ ಹೀಗಿದೆ. ಎಂಗೇಜ್‌ಮೆಂಟ್ ಮುಗಿದ ಕೆಲವೇ ದಿನಗಳಲ್ಲಿ ಹುಡುಗಿ “ತನಗೆ ಈ ಮದುವೆ ಬೇಡ” ಎಂದು ಬಿಟ್ಟಳು. ಆಕೆಯ ಹೆತ್ತವರಿಗೆ ದಿಗ್ಭ್ರಾಂತಿಯಾದರೂ ಹುಡುಗನ ಕಡೆಯವರಿಗೆ ತಿಳಿಸದೆ ನಿರ್ವಾಹವಿರಲಿಲ್ಲ. ಆಕೆ ಮಹಾನಗರದಲ್ಲಿ ಕಲಿಯುವುದಕ್ಕಾಗಿ ಹೋದವಳು ಹೆತ್ತವರಿಗೂ ತಿಳಿಸದೆ ಯಾರೊಂದಿಗೋ ಲಿವಿಂಗ್ ಟುಗೆದರ್  ಆರಂಭಿಸಿದ್ದಳು. ಮದುವೆ ಸಮಾರಂಭದ ಏರ್ಪಾಡುಗಳು ಸ್ಥಗಿತಗೊಂಡುವು. ಆ ಹುಡುಗನಿಗೆ ಬೇರೆ ಸಂಬಂಧ ದೊರಕಿರಬಹುದು. ಆದರೆ ವಿದ್ಯಾವಂತ ಯುವಕ -ಯುವತಿಯರಿಗೆ ಎಂಗೇಜ್‌ಮೆಂಟ್‌ಗೆ ಮೊದಲೇ ಹೆತ್ತವರಿಗೆ ತಮ್ಮ ಬದುಕಿನ ಆಯ್ಕೆಗಳ ಬಗ್ಗೆ ತಿಳಿಸಲು ಏನು ಅಡ್ಡಿ? ಅದೆಷ್ಟೋ ಮಂದಿ ಬಂಧುಗಳು ಸಮಯ ಮಾಡಿಕೊಂಡು ಬಂದು ಭಾಗವಹಿಸಿದ್ದಕ್ಕೆ ಏನು ಬೆಲೆ?  ಕಲ್ಯಾಣ ಮಂಟಪ ನಿಗದಿ ಪಡಿಸಿದ್ದಕ್ಕೆ ನೀಡಿದ ಮುಂಗಡ ಸಿಕ್ಕದಿರಬಹುದು. ಆದರೆ ಜೀವನ ಸಂಗಾತಿಯಾಗಲಿರುವವರ, ಹೆತ್ತವರ, ಹಾಗೂ ಹಿತೈಷಿ ಬಂಧುಗಳ ಮನಸ್ಸನ್ನು ಮುರಿಯುವುದೆಂದರೆ ಅದು
ಲೆಕ್ಕಕ್ಕೇ ಇಲ್ಲದಂತೆ ವರ್ತಿಸುವ ಬುದ್ಧಿ ವಿದ್ಯಾವಂತರಿಗೆ ಹೇಗೆ ಬರುತ್ತದೆ? ಇದಕ್ಕೆ ಪರಿಹಾರವೆಂದರೆ ಎಂಗೇಜ್‌ಮೆಂಟ್ ಆದ ಬಳಿಕ ವಿವಾಹಕ್ಕೆ ತಪ್ಪಿದರೆ ಅದು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿ ಶಿಕ್ಷಿಸುವ ಕಾನೂನು ಬರಬೇಕು.
ಒಳ್ಳೆಯ ನಿರ್ಣಯ!

LEAVE A REPLY