ಎಲ್ಲದಕ್ಕೂ ಸೈ ಮದ್ದಳೆ ವಾದಕ ವೇಷಧಾರಿ  ಪಕಳಕುಂಜ ಶ್ಯಾಮ ಭಟ್

  • ಎಲ್.ಎನ್.ಭಟ್ ಮಳಿ
    ಹವ್ಯಾಸಿ ಯಕ್ಷಗಾನ ಕಲಾವಿದ, ಮದ್ದಳೆ ವಾದಕ, ಯಕ್ಷಗಾನ ವೇಷಧಾರಿ ಪಕಳಕುಂಜ ಶ್ಯಾಮ ಭಟ್ಟರು ಅನುಭವಿ ಅರ್ಥಧಾರಿ. ಹವ್ಯಾಸಿಯಾಗಿ ಯಕ್ಷಗಾನ ರಂಗದಲ್ಲಿ, ತಾಳಮದ್ದಳೆಯಲ್ಲಿ ನಾಲ್ಕುದಶಕಗಳಿಂದ ಸೇವಾ ನಿರತರು. 32 ವರ್ಷಗಳ ಕಾಲ ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ವಿಜನ ಮತ್ತು ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಶ್ಯಾಮ ಭಟ್ಟರು ವಿಜನ ಪದವೀಧರರು. ರಾಜಕೀಯ ಶಾಸ್ತ್ರದ ಸ್ನಾತಕೋತ್ತರ ಪದವಿಯನ್ನು ಪಡೆದವರು. ಬಂಟ್ವಾಳ ತಾಲೂಕಿನ ಪಕಳಕುಂಜ ಇವರ ಹುಟ್ಟೂರು. ಅಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸ. ಬಳಿಕ ಅಳಿಕೆಯ ಸತ್ಯಸಾಯಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಜನೆ. ಅಜ್ಜ ಪಕಳಕುಂಜ ಶಂಭಟ್ ಅರ್ಥಧಾರಿ, ಮದ್ದಳೆ ವಾದಕರು. ತಂದೆ ನಾರಾಯಣ ಭಟ್ ಕಲಾವಿದ, ಅರ್ಥಧಾರಿ. ವಂಶಾನುಗತ ಕಲಾಸಕ್ತಿ ಪರಿಸರವೂ ಯಕ್ಷಗಾನೀಯ. ಇವೆಲ್ಲದರಿಂದ ಶ್ಯಾಮ ಭಟ್ಟರಿಗೆ ಬಾಲ್ಯದಲ್ಲೇ ಕಲಾಸಕ್ತಿ. ಮದ್ಲೆಗಾರರಾದ ಕುದ್ರೆಕೋಡ್ಲು ರಾಮ ಭಟ್ಟರು ಇವರ ಯಕ್ಷಗಾನ ಗುರುಗಳು. ವಿದ್ಯಾರ್ಥಿದೆಸೆಯಲ್ಲಿ ಯಕ್ಷಗಾನದಲ್ಲಿ ಪಾಲ್ಗೊಳ್ಳುವಿಕೆ. ಪುತ್ತೂರು, ಮಂಗಳೂರುಗಳಲ್ಲಿ ಕಾಲೇಜು ವಿದ್ಯಾಭ್ಯಾಸ ಪೂರೈಸಿದ ನಂತರ ವಿಟ್ಲದಲ್ಲಿ ಅಧ್ಯಾಪಕರಾಗಿ, ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರಾಗಿ ತೊಡಗಿಸಿಕೊಂಡರು. ಶ್ರೀರಾಮ, ಶೂರ್ಪನಖಿ, ಲಕ್ಷ್ಮಣ, ವಾಲಿ, ಸುಗ್ರೀವ, ಅತಿಕಾಯ, ಇಂದ್ರಜಿತು, ರಾವಣ, ಶ್ರೀಕೃಷ್ಣ, ಬಲರಾಮ, ಕೌರವ, ಕರ್ಣ, ಅರ್ಜುನ, ಶಲ್ಯ ಇತ್ಯಾದಿ ಪಾತ್ರಗಳನ್ನು ಸೂಕ್ತವಾದ ಅರ್ಥಗಾರಿಕೆಯಿಂದ ನಿರ್ವಹಿಸುವ ಸಮರ್ಥ ಅರ್ಥಧಾರಿ. ಪೌರಾಣಿಕ ಪ್ರe, ಪ್ರಸಂಗಾಶಯ, ಪ್ರತ್ಯುತ್ಪನ್ನ ಮತಿತ್ವ, ಸಂದರ್ಭಾನು ಸಾರ ಶಿಸ್ತುಬದ್ಧವಾದ ವಿನೋದ ಇತ್ಯಾದಿ ಗುಣಗಳು ಇವರ ಅರ್ಥಗಾರಿಕೆ ಯಲ್ಲಿವೆ. ಸೂಕ್ತ ಸಂಭಾಷಣೆ, ನಾಯಕ ಪಾತ್ರಕ್ಕೆ ಬೇಕಾದ ಸ್ವರಭಾರದ ಮಾತು ಗಾರಿಕೆ, ಭಾವನಾತ್ಮಕ ಪಾತ್ರ ನಿರ್ವಹಣೆ, ಸಹ ಕಲಾವಿದರು, ಸಹ ಅರ್ಥ ಧಾರಿಗಳೊಂದಿಗೆ ಪೂರಕವಾಗಿ ಸ್ಪಂದಿಸುತ್ತ ತಾಳಮದ್ದಳೆಯನ್ನು ಯಶಸ್ಸಿನತ್ತ ಕೊಂಡೊಯ್ಯುವ ಉತ್ತಮ ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್. ಹಿರಿಯ, ಕಿರಿಯ ಕಲಾವಿದರುಗಳೊಂದಿಗೆ ಸಕ್ರಿಯವಾಗಿ ಪಾಲ್ಗೊಳ್ಳುವ ಸ್ನೇಹಮಯಿ ಕಲಾವಿದರು ಇವರು. ಈಗಿನ ಪ್ರಸಿದ್ಧ ಅರ್ಥಧಾರಿಗಳಾದ ಕುಂಬ್ಳೆ ಸುಂದರ ರಾವ್, ಡಾ.ಎಂ.ಪ್ರಭಾಕರ ಜೋಷಿ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಬರೆ ಕೇಶವ ಭಟ್, ವಿಟ್ಲ ಶಂಭು ಶರ್ಮ, ಜಬ್ಬರ್ ಸುಮೆ, ರಾಧಾಕೃಷ್ಣ ಕಲ್ಚಾರ್ ಮೆದಲಾದವರೊಂದಿಗೆ ಶ್ಯಾಮ ಭಟ್ಟರು ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದಾರೆ.
    ಕಲಾಪೋಷಕ 
    ವಿಟ್ಲದಲ್ಲಿ ಅಧ್ಯಾಪಕರಾಗಿರುವ ವೇಳೆಯಲ್ಲಿ ಶಾಲಾ ವಾರ್ಷಿಕೋತ್ಸವಕ್ಕೆ ವಿದ್ಯಾರ್ಥಿಗಳಿಗೆ ಯಕ್ಷಗಾನಕ್ಕೆ ಪ್ರೋನೀಡಿದ ಕಲಾಪೋಷಕರು. ವಿಟ್ಲ ಶಾಲೆಯಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರಿಂದ ಹರಿಕಥೆಯನ್ನು ಏರ್ಪಡಿಸಿದ ಕಲಾ ಸಂಘಟಕ. ವಿಜನ ಮತ್ತು ಇಂಗ್ಲಿಷ್ ಬೋಧನೆಯಲ್ಲಿ ವಿದ್ಯಾರ್ಥಿಗಳಿಂದ ಮೆಚ್ಚುಗೆ ಗಳಿಸಿದ ಯೋಗ್ಯ ಅಧ್ಯಾಪಕ. ಅಧ್ಯಾಪಕರ ಯಕ್ಷಗಾನದಲ್ಲಿ ಪ್ರಮುಖ ವೇಷ ಮಾಡಿ ರಂಜಿಸಿದ್ದಾರೆ. ದಮಯಂತಿ ಪುನಃ ಸ್ವಯಂವರ, ಇಂದ್ರಜಿತು ಕಾಳಗ, ಕರ್ಣಾರ್ಜುನ ಇತ್ಯಾದಿ ಕೆಲವಾರು ಪ್ರಸಂಗಗಳನ್ನು ವಿವಿಧ ಸಂದರ್ಭದಲ್ಲಿ ವಿಟ್ಲದ ಅಧ್ಯಾಪಕ ಕಲಾವಿದರು ಪ್ರದರ್ಶಿಸಿದ್ದರು. ಹಲವಾರು ಯಕ್ಷಗಾನ ಬಯಲಾಟಗಳಲ್ಲಿಯೂ ಹವ್ಯಾಸಿ ಕಲಾವಿದರಾಗಿ ಭಾಗವಹಿಸುತ್ತಿದ್ದಾರೆ. ಹವ್ಯಾಸಿ ಕಲಾವಿದ, ಹಿಂದಿ ವಿದ್ವಾನ್ ಅಂಗ್ರಿ ಶಂಕರ ಭಟ್, ಸಂಸ್ಕೃತ ವಿದ್ವಾನ್ ಬಳ್ಳ ಶಂಕರ ನಾರಾಯಣ ಭಟ್ ಮೆದಲಾದ ಅಧ್ಯಾಪಕರು ಇವರಿಗೆ ಉತ್ತೇಜನ ನೀಡಿದ್ದಾರೆ. ಕಲ್ಯಾಟೆ ಸುಬ್ರಾಯ ಭಟ್ ಮತ್ತು ಚಣಿಲ ಸುಬ್ರಹ್ಮಣ್ಯ ಭಟ್ಟರೂ ಶ್ಯಾಮ ಭಟ್ಟರ ಕಲಾ ಚಟುವಟಿಕೆಗಳಿಗೆ ಕೈ ಜೋಡಿಸಿದ್ದಾರೆ. ಮುಳಿಯ ಗೋವಿಂದ ಭಟ್ ಬಳಗದ ಮಂಗಳೂರು ಆಕಾಶವಾಣಿ ತಾಳಮದ್ದಳೆಯಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಇವರು ಪಾಲ್ಗೊಂಡಿದ್ದಾರೆ. ಪ್ರಸ್ತುತ ಚಣಿಲ ಸುಬ್ರಹ್ಮಣ್ಯ ಭಟ್ ತಂಡದ ಆಕಾಶವಾಣಿ ತಾಳಮದ್ದಳೆಯಲ್ಲಿ ಭಾಗವಹಿಸುತ್ತಿರುವ ಶ್ಯಾಮ ಭಟ್ಟರಿಗೆ ಆಕಾಶವಾಣಿ ಕಲಾವಿದರಾಗಿ ೨೫ ವರ್ಷಗಳ ಅನುಭವವಿದೆ. ೧೯೮೦ರ ದಶಕದಲ್ಲಿ ತರುಣ ಕಲಾವಿದರಾಗಿದ್ದ ಶ್ಯಾಮ ಭಟ್ಟರು ಶೇಣಿ ಗೋಪಾಲೃಷ್ಣ ಭಟ್, ದೇರಾಜೆ ಸೀತಾರಾಮಯ್ಯ,  ವಿಟ್ಲ ಗೋಪಾಲಕೃಷ್ಣ ಜೋಷಿ ಅವರುಗಳೊಂದಿಗೆ ಯಕ್ಷಗಾನ ತಾಳಮದ್ದಳೆಯ ಧ್ವನಿ ಸುರುಳಿಯಲ್ಲಿ ಅರ್ಥಧಾರಿಯಾಗಿ ಪಾಲ್ಗೊಂಡಿದ್ದಾರೆ. ವಿಟ್ಲ, ಪುತ್ತೂರು, ಪೆರ್ಲ, ಕಾಸರಗೋಡು, ಬೆಂಗಳೂರು, ಮಂಗಳೂರು, ಕಟೀಲು, ಸುಬ್ರಹ್ಮಣ್ಯ, ಉಡುಪಿ ಶ್ರೀಕೃಷ್ಣ ಮಠ ಮೆದಲಾದೆಡೆಗಳಲ್ಲಿ ಅರ್ಥಧಾರಿಯಾಗಿ ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ ಮುಂಬೈಯಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಸಂಯೋಜಿಸಿದ ೯ ದಿನಗಳ ತಾಳಮದ್ದಳೆ ಕೂಟದಲ್ಲಿ ಇವರು ಭಾಗವಹಿಸಿದ್ದಾರೆ. ಈ ತಂಡದಲ್ಲಿ ಆಜೇರು ಶ್ರೀಪತಿ ನಾಯಕ್, ಕಾವ್ಯಶ್ರೀ ಆಜೇರು, ಪ್ರಶಾಂತ್ ಶೆಟ್ಟಿ ವಗೆನಾಡು ಹಿಮ್ಮೇಳದಲ್ಲಿ ಹಾಗೂ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಹರೀಶ್ ಬೊಳಂತಿ ಮೆಗರು, ದಿನೇಶ್ ಶೆಟ್ಟಿ ಕಾವಳಕಟ್ಟೆ, ಶೇಣಿ ವೇಣುಗೋಪಾಲ ಭಟ್ ಅವರುಗಳು ಅರ್ಥಧಾರಿಗಳಾಗಿದ್ದರು. ಮಧೂರಿನ ಉಳಿಯ ಧನ್ವಂತರಿ ಯಕ್ಷಕಲಾ ಸಂಘದವರು ಬೆಳ್ಳಿಹಬ್ಬದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ತಾಳಮದ್ದಳೆ ಸ್ಪರ್ಧೆಯಲ್ಲಿ ವಿಟ್ಲದ ಯಕ್ಷಸಿಂಧೂರ ಪ್ರತಿಷ್ಠಾನ ಈ ತಂಡದಲ್ಲಿ ಪಕಳಕುಂಜರು ತಾಳಮದ್ದಳೆ ಸ್ಪರ್ಧೆಯಲ್ಲಿ ಭಾಗವಹಿಸಿ ತಂಡಕ್ಕೆ ಪ್ರಥಮ ಬಹುಮಾನ ದೊರಕಿತ್ತು. ಪಕಳಕುಂಜ ಶ್ಯಾಮ ಭಟ್ಟರು ಪುರುಷಾಮೃಗ ಪ್ರಸಂಗದ ಭೀಮನ ಪಾತ್ರ ನಿರ್ವಹಿಸಿ ವಿಶೇಷ ವೈಯಕ್ತಿಕ ಬಹುಮಾನದೊಂದಿಗೆ ಶ್ರೇಷ್ಠ ಅರ್ಥಧಾರಿಯಾಗಿ ಗುರುತಿಸಿಕೊಂಡಿದ್ದಾರೆ. ನಾಟಕಗಳ ರಚನೆಗಾರರಾಗಿಯೂ ಇವರು ಕ್ರಿಯಾಶೀಲರು. ‘ಯಾರು ಹಿತವರು ನಿನಗೆ’, ‘ನಾಟಕದೊಳಗಿನ ನಾಟಕ’ ಇವೆರದು ಪ್ರಕಟಿತ ನಾಟಕಗಳು. ಅಪ್ರಕಟಿತ ೧೨ ನಾಟಕಗಳನ್ನು ರಚಿಸಿದ್ದಾರೆ. ವಿಟ್ಲ ಪರಿಸರದಲ್ಲಿ ಕೆಲವಾರು ಕಲಾವಿವರ ಸಂಮಾನಗಳಲ್ಲಿ ಅಭಿನಂದನಾ ಭಾಷಣ ನಿರ್ವಹಿಸಿದ್ದಾರೆ. ಪುತ್ತೂರಿನಲ್ಲಿ ನಡೆದ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನದಲ್ಲಿ ಸಂಮಾನ ಪಡೆದಿದ್ದಾರೆ. ಸುಬ್ರಹ್ಮಣ್ಯದಲ್ಲಿ ಸಂಪುಟ ನರಸಿಂಹ ಸ್ವಾಮಿ ಮಠದಿಂದ ಸಂಮಾನ ನಡೆದಿದೆ. ವಿದ್ವಾನ್ ಕುಕ್ಕಿಲ ಶಂಕರ ಭಟ್ಟರಿಂದ ಮೃದಂಗ ವಾದನವನ್ನು ಅಭ್ಯಾಸ ಮಾಡಿದ ಇವರು ಕಲಾ ಸಾಧಕರು. ಅಳಿಕೆಯ ನಿವಾಸಿಯಾಗಿರುವ ೬೬ರ ಹರೆಯದ ಶ್ಯಾಮ ಭಟ್ಟರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಒಳಗೊಂಡಿದ್ದಾರೆ.

 

LEAVE A REPLY