ಕೋಪ ಬಿಡುವುದರ ಬದಲು, ಧ್ಯಾನವನ್ನೇ ಬಿಡುವ ಹಾಗಾಗುವುದು ಏಕೆ?

 • ಡಾ. ಕೆ.ಎಸ್. ಪವಿತ್ರ
  ಡಾಕ್ಟ್ರೇ ನನಗೆ ತುಂಬಾ ಸಿಟ್ಟು ಬರ್‍ತಿತ್ತು. ಅದಕ್ಕೇ ಯಾರೋ ಹೇಳಿದ್ರು. ಸ್ವಲ್ಪ ಧ್ಯಾನ ಮಾಡಿ ದಿನಾ, ಸಿಟ್ಟೆಲ್ಲಾ ಕಡಿಮೆಯಾಗುತ್ತೆ ಅಂತ. ಆರೋಗ್ಯಕ್ಕೂ ಒಳ್ಳೇದು. ಸರಿ, ಧ್ಯಾನ ಮಾಡೋಕ್ಕೆ ಶುರು ಮಾಡ್ದೆ. ಬೆಳಿಗ್ಗೆ ಎದ್ದು ಧ್ಯಾನಕ್ಕೆ ಅಂತ ಕೂತ್ರೆ ಒಂದೋ ನಿದ್ದೆ ಬಂದು ಬಿಡೋದು, ಇಲ್ಲ ಮನಸ್ಸು ಸುತ್ತಮುತ್ತ ಏನು ನಡೆದ್ರೂ ಅದರ ಕಡೆಗೆ ಓಡೋದು. ಸರಿ, ಮನೇಲಿ ಹೀಗಾಗುತ್ತೆ, ಕ್ಲಾಸಿಗೆ ಸೇರೋಣ ಅಂಥ ಹೋಗಿ ಧ್ಯಾನ-ಯೋಗದ ಕ್ಲಾಸಿಗೆ ಸೇರ್‍ದೆ. ಅಲ್ಲೂ ಅಷ್ಟೇ. ಅವರು ಹೇಳಿದ್ದೆಲ್ಲ ನನಗೆ ಅರ್ಥವಾಗ್ತಿತ್ತು. ಆದರೆ ಏಕಾಗ್ರತೆ? ಬೇರೆಯವರೆಲ್ಲಾ ತಮಗೆ ಧ್ಯಾನದಲ್ಲಿ ಚೆನ್ನಾಗಿ ಏಕಾಗ್ರತೆ ಬರುತ್ತೆ ಅಂತೇನೋ ಹೇಳ್ತಿದ್ರು. ಆದರೆ ನನಗೇನು ಅವರ ಮನಸ್ಸು ಹೊಕ್ಕು ನೋಡೋಕ್ಕೆ ಆಗುತ್ಯೆ?! ಒಟ್ಟಿನಲ್ಲಿ ಸಿಟ್ಟು ಕಡಿಮೆಯಾಗಲೇ ಇಲ್ಲ!
  ‘ಧ್ಯಾನ’ ಅಥವಾ ‘meditation’ ಎಂಬ ಪದವನ್ನು ಗೂಗಲ್‌ನಲ್ಲಿ ಕ್ಲಿಕ್ಕಿಸಿದರೆ 22 ಮಿಲಿಯನ್‌ಗಟ್ಟಲೆ ಸೈಟುಗಳು 0.49 ಸೆಕೆಂಡುಗಳಲ್ಲಿ ತೆರೆದುಕೊಳ್ಳುತ್ತವೆ. ಹೇಗೆ ಧ್ಯಾನ ಮಾಡಬೇಕು, ಏಕೆ ಮಾಡಬೇಕು, ಧ್ಯಾನದಿಂದ ಏನು ಉಪಯೋಗ, ಏನು ಅಡ್ಡ ಪರಿಣಾಮ ಇವೆಲ್ಲದರ ಬಗೆಗೂ ಮಾಹಿತಿಯ ಮಹಾಪೂರ ಇಲ್ಲಿ ಸಿಕ್ಕುತ್ತದೆ. ಆದರೆ ಇವೆಲ್ಲ ಮಾಹಿತಿಯ ನಡುವೆಯೂ ‘ಧ್ಯಾನ’ ನಾವಂದುಕೊಂಡಷ್ಟು ಉಪಯುಕ್ತವಾಗದಿರುವುದು ಏಕೆ? ಕೋಪ ಹೋಗಲಾಡಿಸಿಕೊಳ್ಳಬೇಕೆಂದು ಧ್ಯಾನದ ಮೊರೆ ಹೋಗುವ ಮೇಲೆ ಹೇಳಿದಂತ ವ್ಯಕ್ತಿಗಳು ಕೋಪವನ್ನು ಬಿಡುವುದರ ಬದಲು, ಧ್ಯಾನವನ್ನೇ ಬಿಡುವ ಹಾಗಾಗುವುದು ಏಕೆ?
  ಏಕಾಗ್ರತೆ ಎಂಬುದು ಸುಲಭ ವಸ್ತುವಲ್ಲ. ಯಾವುದೇ ವಿಷಯದ ಬಗ್ಗೆ ಏಕಾಗ್ರತೆ ಸಾಸಬೇಕೆಂದಾಗ ಉದಾಹರಣೆಗೆ ಈ ಲೇಖನ ಓದುವಾಗ ಅಥವಾ ಭಾಷಣ ಕೇಳುವಾಗ ಒಂದು ನಿರ್ದಿಷ್ಟ ಹಂತದ ನಂತರ ಹಗಲುಗನಸಿಗೆ ಜರುವುದು ಅಥವಾ ಕೈಯಲ್ಲಿರುವ ಮೊಬೈಲ್ ಅನ್ನು ಒಮ್ಮೆ ಪರೀಕ್ಷಿಸುವುದು ಸಾಮಾನ್ಯ ಪ್ರವೃತ್ತಿ. ಇಂದಿನ ಆಧುನಿಕ ಜಗತ್ತಿನಲ್ಲಂತೂ ಕೆಲವು ನಿಮಿಷಗಳ ಏಕಾಗ್ರತೆಯೂ ನಮಗೆ ಕಷ್ಟವೇ.
  ಏಕಾಗ್ರತೆ ಏಕೆ ನಮಗೆ ಕಷ್ಟವೆಂಬುದನ್ನು ಅರಿಯಲು ನಾವು ನಮ್ಮ ಮಿದುಳಿನತ್ತ ಗಮನಹರಿಸಬೇಕು. ನಮ್ಮ ಮಿದುಳು Reward based learning process ಬಹುಮಾನಾಧಾರಿತ ಕಲಿಕೆಯ ಪ್ರಕ್ರಿಯೆಯೊಂದನ್ನು ಅನುಸರಿಸುತ್ತದೆ. ಸರಳವಾಗಿ ಹೇಳುವುದಾದರೆ ಹಸಿವಾದಾಗ ಆಹಾರ ಬೇಕೆನ್ನುವಂತೆ. ಆ ಆಹಾರ ರುಚಿಯಾಗಿದ್ದರೆ ಮಿದುಳು ಅದನ್ನು ನೆನಪಿಡುತ್ತದೆ. ಆ ನೆನಪು ಒಂದು ಪ್ರಕ್ರಿಯೆಯಾಗಿ ಪುನರಾವರ್ತನೆಯಾಗುತ್ತದೆ. ಆಹಾರ ನೋಡು, ತಿನ್ನು, ರುಚಿಯಿಂದ ತೃಪ್ತಿ ಇವು ಕಾರಣ – ನಡವಳಿಕೆ – ತೃಪ್ತಿಯ ಭಾವನೆಯಾಗಿ ಒಂದು ಸರಣಿಯಾಗುತ್ತದೆ. ಮೂಲಭೂತ ಹಸಿವಿನಂತೆಯೇ, ನಮ್ಮ ಮೂಲಭೂತ ಭಾವನೆಗಳು. ಇಲ್ಲಿ ಉಂಟಾಗುವ ಪ್ರಕ್ರಿಯೆಯೂ ಇದೇ ತತ್ತ್ವವನ್ನು ಆಧರಿಸಿದ್ದು. ಧೂಮಪಾನ-ಮದ್ಯವ್ಯಸನ ಎಲ್ಲಕ್ಕೂ ಅಷ್ಟೆ. ‘ಬಹುಮಾನ’ದ ರೂಪದಲ್ಲಿ ನಮಗೆ ಮಾನಸಿಕ ತೃಪ್ತಿಯೊಂದು ದೊರೆಯುತ್ತಿದ್ದರೆ ತನ್ನಿಂತಾನೇ ಆ ಕ್ರಿಯೆಯಲ್ಲಿ ಏಕಾಗ್ರತೆ ಮೂಡುತ್ತದೆ. ಅದನ್ನು ನಾವು ಮುಂದುವರಿಸುತ್ತೇವೆ.
  ‘ಧ್ಯಾನ’ ವನ್ನು ನಾವು ಸಾಮಾನ್ಯವಾಗಿ ಪರಿಭಾವಿಸುವುದು ಹೇಗೆ? ನಿಮ್ಮ ಕಣ್ಣ ಮುಂದೆ ‘ಧ್ಯಾನ’ ಎಂದಾಕ್ಷಣ ಬರುವ ಚಿತ್ರ ಏನು? ಒಂದು ಪ್ರಶಾಂತ ಕೊಠಡಿ, ಒಂದು ಜಮಖಾನ, ಕಣ್ಣುಮುಚ್ಚಿ ಕುಳಿತುಕೊಳ್ಳುವುದು. ಯೋಗದ ಅಂಗವಾದ ಧ್ಯಾನದ ಸ್ಥಿತಿ ಕಲಿಕೆಯಲ್ಲಿ ಬರುವಂಥದ್ದು. ಸಾಕಷ್ಟು ತಡವಾಗಿ. ದೇಹದ ಸ್ತರದಲ್ಲಿ ಸಾಧನೆ ಆರಂಭವಾಗಿ, ಪರಿಣತಿ ಸಾಸಿದ ನಂತರವೇ ಧ್ಯಾನ. ನಮಗೆ ಅಷ್ಟೆಲ್ಲಾ ಸಮಯವಿಲ್ಲ. ಆದರೂ ಧ್ಯಾನದಿಂದ ಆಗುವ ಉಪಯೋಗ ಬೇಕೇ ಬೇಕು ಎಂದರೆ? ಆಗ ನಾವು ಮಾಡಬೇಕಾದ್ದು ಯಾವುದಾದರೊಂದು ಮನಸ್ಸಿಗೆ ಸಂತೋಷ ನೀಡುವ, ಆರೋಗ್ಯಕರವಾದ ಚಟುವಟಿಕೆಯಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವ ಪ್ರಯತ್ನ ಮಾಡುವುದು. ಅದು ಓದುವುದು, ಕವಿತೆ ಬರೆಯುವುದು, ನೃತ್ಯ, ಸಂಗೀತ, ಆಟ, ಈಜು ಯಾವುದೂ ಆಗಬಹುದು. ಇಲ್ಲಿ ‘ಧ್ಯಾನಿಸಲು’ ನಮಗೆ ಒಂದು ವಸ್ತುವಿದೆ. ಹಾಗಾಗಿ ಏಕಾಗ್ರತೆ ಸುಲಭ. ಹಾಗಿದ್ದರೆ ಕುಡಿಯಬಹುದೆ? ನಿರಂತರವಾಗಿ ಟಿ.ವಿ. ನೋಡಬಹುದೇ ಅಥವಾ ವೀಡಿಯೋಗೇಮ್ ಆಡಬಹುದು ಅಥವಾ ವಾಟ್ಸ್ ಆಪ್‌ನಲ್ಲಿ ಹುದುಗಬಹುದೇ? ಇವೂ ‘ನಿರಂತರ ಏಕಾಗ್ರತೆ’ ಯಲ್ಲಿಯೂ ನಡೆಯುವುದರಿಂದ ‘ಧ್ಯಾನ’ವೇ ಆಗಿಬಿಡುತ್ತವೆಯೇ?!. ಮನಸ್ಸಿನೊಂದಿಗಿನ ಸಂವಾದ, ಒಳಹೋಗುವಿಕೆ ಇವುಗಳಲ್ಲಿ ಸಾಧ್ಯವಿಲ್ಲದ್ದರಿಂದ ಇವ್ಯಾವುವೂ ‘ಧ್ಯಾನ’ ಎನಿಸಿಕೊಳ್ಳುವುದಿಲ್ಲ. ಓದು, ನೃತ್ಯ, ಸಂಗೀತ ಇತ್ಯಾದಿಗಳಲ್ಲಿ ಚಟುವಟಿಕೆಗಳಲ್ಲಿ ಮೊದಲು ದೈಹಿಕ ಹಂತದಲ್ಲಿ ಚಟುವಟಿಕೆ ಆರಂಭವಾದರೂ ಕ್ರಮೇಣ ಮಾನಸಿಕವಾಗಿ ಏಕಾಗ್ರತೆ, ಮನಸ್ಸಿನೊಡಗಿನ ಸಂವಾದ ಸುಲಭವಾಗುತ್ತದೆ ಎಂಬುದು ಗಮನಾರ್ಹ.
  ಹಾಗೊಮ್ಮೆ ಇಲ್ಲ, ನಾವು ಕುಳಿತೇ ‘ಧ್ಯಾನ’ ಮಾಡುತ್ತೇವೆ. ಏಕಾಗ್ರತೆಯನ್ನು ಸಾಸಲು ಪ್ರಯತ್ನಿಸಿಯೇ ತೀರುತ್ತೇವೆ ಎನ್ನೋಣ. ಆಗ ನಮ್ಮ ಗುರಿ ಮೊದಲಿಗೇ ಏಕಾಗ್ರತೆಯನ್ನು ಸಾಸುವುದೆಂದಾದರೆ ವೈಫಲ್ಯ ಕಟ್ಟಿಟ್ಟ ಬುತ್ತಿ. ಅದರ ಬದಲು ಮನಸ್ಸಿನ ಬಗೆಗೆ, ಅದರ ಭಾವನೆಗಳ ಬಗ್ಗೆ, ನಡೆದ ಘಟನೆಗಳ ಬಗ್ಗೆ ಕುತೂಹಲದಿಂದ ನೋಡುವ ಸಮಯವಾಗಿ ಪ್ರಯತ್ನಿಸಿ. ಕುತೂಹಲದಿಂದ ಆ ಭಾವನೆಗಳಿಗೆ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಗಮನಿಸಿ. ‘ಕುತೂಹಲ’ ನಮ್ಮನ್ನು ನಮ್ಮ ಹಳೆಯ, ಭಯವನ್ನು ಆಧರಿಸಿದ, ತತ್‌ಕ್ಷಣ ಸಿದ್ಧ ಪ್ರತಿಕ್ರಿಯೆ ನೀಡುವ ರೀತಿಗಳಿಂದ ಹೊರಬರುವ ಧೈರ್ಯ ನೀಡುತ್ತದೆ. ಸಂಶೋಧನೆಗಳ ಪ್ರಕಾರ ನಮ್ಮ ಸಿದ್ಧ ಪ್ರತಿಕ್ರಿಯೆಗಳನ್ನು ತತ್‌ಕ್ಷಣ ನೀಡುವಂತೆ ಮಾಡುವ ಮಿದುಳಿನ ‘ಸಿಂಗ್ಯುಲೇಟ್ ಕಾರ್ಟೆಕ್ಸ್’Cingulate Cortex ಅನ್ನು ಈ ‘ಕುತೂಹಲ’ ಸುಮ್ಮನಾಗಿಸುತ್ತದೆ. ಅಂದರೆ ಕೋಪವನ್ನು ನಾವು ತತ್‌ಕ್ಷಣ ಮಾಡುವಲ್ಲಿ ಮಾಡದಿರುವಂತೆ ಕುತೂಹಲದಿಂದ ಕೂಡಿದ ‘ಧ್ಯಾನ’ ನಮ್ಮನ್ನು ತಯಾರು ಮಾಡುತ್ತದೆ. ‘ಕುತೂಹಲ’ವೇ ಧ್ಯಾನದ ಪೂರ್ತಿ ಮನಸ್ಸು ಹರದಾಡಿದರೂ ಈ ‘ಹರಿದಾಡುವಿಕೆ’ಯೂ ಉಪಯುಕ್ತ ಅಂಶಗಳನ್ನು ಕಾಣುವಂತೆ ಮಾಡುತ್ತದೆ. ಎಷ್ಟೋ ಕವಿಗಳು-ಕಲಾವಿದರಿಗೆ ಧ್ಯಾನವೆಂಬುದು ಬಂದು ಕುಳಿತು ಮಾಡುವ ಅಧ್ಯಾತ್ಮದ ಕಾರ್ಯವಲ್ಲ. ಬದಲಾಗಿ ಏಕಾಗ್ರತೆಯಿಂದ ಹೊಸತನ್ನು ಸೃಷ್ಟಿಸುವ ಕಾರ್ಯ. ಜನಸಾಮಾನ್ಯರಿಗೂ ಇದು ಅನ್ವಯಿಸುತ್ತದೆ. ‘ಧ್ಯಾನ’ ಮಾಡುತ್ತಲೇ ಮನಸ್ಸಿನ ಬಗ್ಗೆ, ಸಂಬಂಧಗಳ ಬಗ್ಗೆ, ಹೊಸ ಹೊಸ ಹೊಳಹುಗಳನ್ನು ಕಂಡುಕೊಳ್ಳುವುದೂ ಒಂದು ರೀತಿಯಲ್ಲಿ ಮನಸ್ಸು ಕ್ರಿಯಾಶೀಲವಾಗಿರುವುದೆಂಬ ಸೂಚನೆಯೇ. ಅದು ತೀವ್ರವಾದ ಮನಸ್ಸಿನ ಭಾವನೆಗಳನ್ನು ಶಮನಗೊಳಿಸಿ ಮಾನಸಿಕ ಆರೋಗ್ಯದೆಡೆಗೆ ನಮ್ಮನ್ನು ಮುನ್ನಡೆಸುತ್ತದೆ. ಹಾಗಾಗಿ ಬೆಳಿಗ್ಗೆ ೫ ಗಂಟೆಗೆ ಎದ್ದು ಒಂದು ಗಂಟೆ ಧ್ಯಾನ ಮಾಡಿ ದಿನವಿಡೀ ಕೋಪ ಮಾಡಿ ಕೂಗುವುದರಿಂದ ದೂರವಿರಿ. ನಿಮ್ಮ ಪ್ರತಿ ಕಾರ್ಯವನ್ನೂ ಪ್ರೀತಿಯಿಂದ, ಕುತೂಹಲದಿಂದ ಮಾಡುವ ಮೂಲಕ ನಿಜ ಅರ್ಥದಲ್ಲಿ ಧ್ಯಾನಸ್ಥರಾಗಿ!!

LEAVE A REPLY