ಅಸಿಡಿಟಿ ಕ್ಲೆನ್ಸ್: ಅಸ್ತಮಾ ಸಮಸ್ಯೆ ಪರಿಹಾರಕ್ಕೆ ಜೀವರಸ

  • ಪ್ರಹ್ಲಾದ್

ಯಾವುದೇ ಉಸಿರಾಟದ ತೊಂದರೆಯಿರಲಿ ಮೊದಲು ಉಪ್ಪಿನ ಬಳಕೆಯನ್ನು ತುಂಬ ಕಡಿಮೆ ಮಾಡಬೇಕು. ಮತ್ತು ಪ್ಯಾಕೆಟ್ ಸಾಲ್ಟ್ ಬದಲು ಸಮುದ್ರಲವಣ ಅಥವಾ ಸೈಂಧವಲವಣವನ್ನು ಬಳಸಬೇಕು. ಆದರೆ ಸೈಂಧವಲವಣವನ್ನು ಅಡುಗೆಗೆ ನೇರ ಹಾಕದೆ ಊಟ ಮಾಡುವಾಗ ಸ್ವಲ್ಪವೇ ಸ್ವಲ್ಪ ಉದುರಿಸಿಕೊಂಡು ಸೇವಿಸಬೇಕು. ನೇರ ಅಡುಗೆಗೆ ಹಾಕಿದರೆ ಆ ಪದಾರ್ಥವು ನಿಧಾನವಿಷದಂತೆ ಕೆಲಸ ಮಾಡುತ್ತದೆ. ಎಣ್ಣೆಯನ್ನು ಪರೋಕ್ಷವಾಗಿ ಉಪಯೋಗಿಸಬೇಕು. ಪ್ಯಾಕೆಟ್‌ನಲ್ಲಿ ಸಿಗುವಂತಹ ನೇರಎಣ್ಣೆಯನ್ನು ಉಪಯೋಗಿಸಬಾರದು. ಪರೋಕ್ಷ ಎಣ್ಣೆಯು ಹಸಿಕಾಯಿತುರಿ, ಕರಿಎಳ್ಳಿನಪುಡಿ, ಕಡಲೆ
ಕಾಯಿಪುಡಿಗಳಲ್ಲಿ ಲಭ್ಯವಿದೆ. ಬಿಳಿಸಕ್ಕರೆಯು ಉಸಿರಾಟದ ತೊಂದರೆ ಇರುವವರಿಗೆ ಮಹತ್ತಾದ ಹಾನಿಯನ್ನು ಮಾಡುವುದರಿಂದ ತಕ್ಷಣವೇ ಇದರ ಸೇವನೆಯನ್ನು ನಿಲ್ಲಿಸಬೇಕು. ಇದರ ಜಗದಲ್ಲಿ ಸಾವಯವ ಬೆಲ್ಲ ಅಥವಾ ಖರ್ಜೂರವನ್ನು ಬಳಸಬೇಕು. ಇಷ್ಟು ಮಾಡಿದರೆ ನಿಮ್ಮ ಖಾಯಿಲೆ 33% ವಾಸಿಯಾದಂತೆ.
ಇಂದು ಮಕ್ಕಳು ಮತ್ತು ಯುವಕ-ಯುವತಿಯರು ಯಥೇಚ್ಛವಾಗಿ ಇಷ್ಟಪಟ್ಟು ಮೆಲ್ಲುವ ಚಾಕೋಲೇಟ್ ಮತ್ತು ಬೇಕರಿ ತಿಂಡಿ-ತಿನಿಸುಗಳನ್ನು ದೂರವಿಟ್ಟರೆ ಇನ್ನು 33% ಖಾಯಿಲೆ ವಾಸಿಯಾದಂತೆ, ಅದೂ ಕೂಡಾ ಕೇವಲ 21 ದಿನಗಳಲ್ಲಿ. ಇನ್ನುಳಿದ 33% ಖಾಯಿಲೆಯನ್ನು ಪ್ರಾಣಾಯಾಮ ಹಾಗೂ ತರಕಾರಿ ರಸದ ಮೂಲಕ ಪರಿಹರಿಸಿಕೊಳ್ಳಲು ಖಂಡಿತಾ ಸಾಧ್ಯವಿದೆ.
ಭಸ್ತ್ರೀಕಾ, ಕಪಾಲಭಾತಿ ಮತ್ತು ಅನುಲೋಮ ವಿಲೋಮ ಪ್ರಾಣಾಯಾಮಗಳು ಈ ವಿಚಾರದಲ್ಲಿ ಮಹದುಪಕಾರ ಮಾಡುತ್ತವೆ. ಇವುಗಳ ಬಗ್ಗೆ ಬಹುಹಿಂದೆಯೇ ವಿಸ್ತತವಾಗಿ ತಿಳಿಸಲಾಗಿದೆ. ಮತ್ತು ಅನೇಕ ಹೊತ್ತಿಗೆಗಳಲ್ಲಿ ಮಾಹಿತಿಯೂ ಲಭ್ಯವಿದೆ. ಈಗ ನಾವು ತರಕಾರಿ ರಸ ತಯಾರಿಯ ಬಗ್ಗೆ ಗಮನ ಹರಿಸುವಾ.
ಉಸಿರಾಟದ ತೊಂದರೆ ನಿವಾರಣೆಗೆ ಜೀವರಸ ತಯಾರಿ ಹೇಗೆ?
ಒಬ್ಬರಿಗೆ ಬೇಕಾಗುವ ತರಕಾರಿ: ಸೋರೆಕಾಯಿ-50 ಗ್ರಾಂ, ಹೀರೆಕಾಯಿ-150 ಗ್ರಾಂ, ಹಸಿಶುಂಠಿ- ಒಂದು ಇಂಚು ಉದ್ದ, ಈರುಳ್ಳಿ-1 (ಮಧ್ಯಮ ಗಾತ್ರದ್ದು), ಘಮ್ಮೆನ್ನುವ ತಾಜ ಕರಿಬೇವು- 1 ಹಿಡಿ, ಕೊತ್ತಂಬರಿ ಸೊಪ್ಪು- ಅರ್ಧ ಹಿಡಿ, ಸಬ್ಬಸ್ಸಿಗೆ ಸೊಪ್ಪು- 2 ಹಿಡಿ, ತುಳಸಿ ಎಲೆ- 10, ಅಮೃತಬಳ್ಳಿ ಎಲೆ- 4, ಬಿಲ್ವ ಎಲೆ- 10, ಗರಿಕೆ-1 ಹಿಡಿ; ಲೋಳೇಸರ (ಅಲೊವೆರಾ) – 3 ಗ್ರಾಂ; ಬೆಟ್ಟದ ನೆಲ್ಲಿಕಾಯಿ-1, ಶುದ್ಧ ಜೇನುತುಪ್ಪ – 1 ಚಹಾಚಮಚ.
ತಯಾರಿಸುವ ವಿಧಾನ: ತರಕಾರಿ, ಸೊಪ್ಪು ಮತ್ತು ಎಲೆಗಳನ್ನು ಹುಣಸೆನೀರಿನಲ್ಲಿ ೧೦ ನಿಮಿಷ ತೊಳೆದು ಚಿಕ್ಕದಾಗಿ ಕತ್ತರಿಸಿ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಲೋಟಕ್ಕೆ ಸೋಸಬೇಕು. ಸಕ್ಕರೆ ಕಾಯಿಲೆಯವರು ಒಂದು ಚಮಚ, ಸಕ್ಕರೆ ಖಾಯಿಲೆ ಇಲ್ಲದವರು ೨ ಚಮಚ ಶುದ್ಧ ಜೇನುತುಪ್ಪ ಬೆರೆಸಿ. ನಂತರ ಲೋಳೆಸರದೊಳಗಿನ ಲೋಳೆಯನ್ನು ತೆಗೆದು ಚಿಕ್ಕದಾಗಿ ಕತ್ತರಿಸಿ ಲೋಟಕ್ಕೆ ಸುರಿದುಕೊಳ್ಳಿ. ಬೆಟ್ಟದ ನೆಲ್ಲಿಕಾಯಿಯನ್ನು ತುರಿದು ಕೈಯಿಂದ ಹಿಂಡಿ ರಸವನ್ನು ಈ ಲೋಟಕ್ಕೆ ಬೆರೆಸಿ. ಈಗ ಎಲ್ಲವನ್ನು ಚಮಚದಿಂದ ಚೆನ್ನಾಗಿ ಕಲೆಸಿ ತುಂಬ ನಿಧಾನವಾಗಿ ಚಪ್ಪರಿಸುತ್ತಾ 10 ನಿಮಿಷ ಕುಳಿತೇ ಕುಡಿಯಿರಿ. ಸಾವಯವ ಬಾಳೆದಿಂಡು ಸಿಕ್ಕ ಪಕ್ಷದಲ್ಲಿ 30 ಮಿ.ಲೀ. ನಷ್ಟು ರಸ ತೆಗೆದು ಬೆರೆಸಿಕೊಳ್ಳಿ.
ಈ ರಸವನ್ನು ಬೆಳಿಗ್ಗೆ ತಿಂಡಿಗಿಂತ ಒಂದು ಗಂಟೆ ಮುಂಚೆ ಮತ್ತು ಸಂಜೆ ಊಟಕ್ಕಿಂತ ಒಂದೂವರೆ ಗಂಟೆ ಮುಂಚೆ ಅಂದರೆ 4 ರಿಂದ 5 ಗಂಟೆಯ ಒಳಗೆ ಬೆಳಗಿನ ಪ್ರಮಾಣದ ಅರ್ಧಭಾಗ ಸೇವಿಸಿ. ತಡವಾದ ಪಕ್ಷದಲ್ಲಿ ಸೇವಿಸಬೇಡಿ. ಸಂಜೆಯ ತರಕಾರಿ ರಸದಲ್ಲಿ ಸೊಪ್ಪು, ಎಲೆ, ಶುಂಠಿ ಮತ್ತು ಈರುಳ್ಳಿಯನ್ನು ಸೇರಿಸಬೇಡಿ. ಪ್ರತಿಬಾರಿಯೂ ತಾಜ ತಯಾರಿಸಿಕೊಂಡು ತಕ್ಷಣವೇ ಸೇವಿಸಿ. 21 ದಿನಗಳ ತರುವಾಯ ಬೆಳಿಗ್ಗೆ ಒಂದು ಹೊತ್ತು ಸೇವಿಸುವುದನ್ನು ಖಂಡಿತಾ ಮುಂದುವರೆಸಿ. ಎರಡು ಹೊತ್ತು ಸೇವಿಸಬಯಸುವವರು ಸಂಜೆಯ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಿ.
ಸೂಚನೆ: ಇದನ್ನು ಸೇವಿಸುತ್ತಿರುವ ದಿನಗಳಲ್ಲಿ ತಪ್ಪದೆ ಬೆಳಿಗ್ಗೆ ಶೌಚಾದಿಗಳ ತರುವಾಯ ಭಸ್ತ್ರೀಕಾ, ಕಪಾಲಭಾತಿ ಮತ್ತು ಅನುಲೋಮ ವಿಲೋಮ ಪ್ರಾಣಾಯಾಮವನ್ನು ಎಲ್ಲವೂ ಸೇರಿ 30 ನಿಮಿಷ ಕಾಲ ಅಭ್ಯಸಿಸಿ ಮತ್ತು ರಾತ್ರಿ ಮಲಗುವ ಮುನ್ನ 20 ನಿಮಿಷ ಕಾಲ ಅನುಲೋಮ ವಿಲೋಮ ಅಭ್ಯಸಿಸಿ. ಇದರಿಂದ ದೇಹದಲ್ಲಿ ಆಹಾರದ ಹೀರುವಿಕೆ ಚೆನ್ನಾಗಿ ಜರುಗುವುದು.
ಆಹಾರ ನಿಯಮ
ಸಮಯಕ್ಕೆ ಸರಿಯಾಗಿ ಊಟ ಮಾಡಿ. ಆ ಸಮಯಕ್ಕೆ ಹಸಿವಾಗುವಂತೆ ಹಿಂದಿನ ಆಹಾರದ ಪ್ರಮಾಣವಿರಲಿ. ನೀವು 3 ರೊಟ್ಟಿ ತಿನ್ನುವಿರಾದರೆ 2ಕ್ಕೇ ನಿಲ್ಲಿಸಿ. ನಿಮಗೆ ಹೊಟ್ಟೆ ಅರ್ಧ ತುಂಬಿರುವಾಗ ಮೆದುಳಿನಿಂದ ನಿಮಗೆ ಸೂಚನೆ ಬರುತ್ತದೆ. ಆಗ ನೀವು ನೀರು ಮಜ್ಜಿಗೆಯೊಂದಿಗೆ ನಿಮ್ಮ ಊಟ ಮುಗಿಸಿಬಿಡಿ.
ಏನು ತಿನ್ನಬೇಕು?
ಉಸಿರಾಟದ ತೊಂದರೆ ಇರುವವರು ನಾರಿನಂಶ ಹೆಚ್ಚಾಗಿರುವ ಸಿರಿಧಾನ್ಯಗಳಾದ ಹಾರಕ, ನವಣೆ, ಸಾಮೆ, ಊದಲು ಮತ್ತು ಕೊರಲೆ ಅಕ್ಕಿಯಿಂದ ಏನಾದರೂ ತಯಾರಿಸಿಕೊಂಡು ಚೆನ್ನಾಗಿ ಅಗಿದು ಅಗಿದು ಸ್ವಲ್ಪವೇ ಸ್ವಲ್ಪ ತಿನ್ನಿ. ಇದರಿಂದ ಮಲಶೋಧನೆಯು ಚೆನ್ನಾಗಿ ಆಗಿ ಕಫದ ಉತ್ಪತ್ತಿ ನಿಲ್ಲುತ್ತದೆ. ದೊಡ್ಡಕರುಳಿನಲ್ಲಿ ಮಲಸಂಗ್ರಹಣೆಯೇ ಕಫವಾಗಲು ಮೂಲಕಾರಣ. ಅಕ್ಕಿ, ಗೋ ಮತ್ತು ಮಾಂಸದ ಸೇವನೆ ನಿಲ್ಲಿಸಿ ಸಿರಿಧಾನ್ಯಗಳನ್ನು ಆ ಜಗದಲ್ಲಿ ತಂದು ಕೂರಿಸಿದರೆ ನಿಮ್ಮ ಉಸಿರಾಟದ ತೊಂದರೆ ಅದು ಹೇಗೆ ಕಡಿಮೆಯಾಗುವುದಿಲ್ಲವೋ ಒಂದು ಕೈ ನೋಡೇಬಿಡಿ.
ಋಜುವಾತು: ನನಗೂ ಕಫದ ಬಾಧೆ ವಿಪರೀತವಿzಗ ನಾನು ಮನೆಯಲ್ಲಿ ಮಾಡಿದ್ದು ಈ ಚಿಕಿತ್ಸೆಯೇ ಕೇವಲ ೩ ವಾರಗಳಲ್ಲಿ ನಾಮಾವಶೇಷವಾಯ್ತು ನನ್ನ ಖಾಯಿಲೆ.
ಸ್ನಾನ ಮಾಡುವ ಮುಂಚೆ ಎಳ್ಳೆಣ್ಣೆ ಸ್ವಲ್ಪ ಬಿಸಿಮಾಡಿ ಮೈಗೆಲ್ಲ ಹಚ್ಚಿಕೊಂಡು ಎಲ್ಲ ಅಂಗಗಳನ್ನು ಮಾಲೀಶ್ ಮಾಡಿಕೊಂಡು ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.
ನೀರು ಕುಡಿಯುವ ವಿಧಾನ
ಬೆಳಿಗ್ಗೆ ಎದ್ದ ತಕ್ಷಣ 3 ಲೋಟ ಉಗುರುಬೆಚ್ಚಗಿಂತ ಸ್ವಲ್ಪ ಬಿಸಿಯಾಗಿಯೇ ಇರುವ ನೀರು ಕುಡಿಯಿರಿ. ಶೌಚಾದಿಗಳ ನಂತರ ಯೋಗ, ಧ್ಯಾನ, ಪ್ರಾಣಾಯಾಮ ಅಭ್ಯಸಿಸಿ. ಮೊದಲ ಬಾರಿ ನೀರು ಕುಡಿದು ಸುಮಾರು ಒಂದೂವರೆ ಗಂಟೆ ಆದ ಬಳಿಕ ಪುನಃ 3 ಲೋಟ ಬಿಸಿನೀರು ಕುಡಿಯಿರಿ. ಒಟ್ಟಿನಲ್ಲಿ ದಿನದಲ್ಲಿ 3 ರಿಂದ 4 ಲೀಟರ್ ನೀರು ಕುಡಿದಿರಬೇಕು. ಊಟ ಮಾಡುವಾಗ ನೀರು ಕುಡಿಯಬೇಡಿ. ಊಟ ಮಾಡಿ ಒಂದೂವರೆಗಂಟೆಯ ಬಳಿಕ ಕುಡಿಯಿರಿ. ನಿಮ್ಮ ತೂಕ ಜಸ್ತಿಯಿದ್ದ ಪಕ್ಷದಲ್ಲಿ ಒಂದು ಕೇಜಿ ತೂಕಕ್ಕೆ 50 ಮಿ.ಲೀ.ನಂತೆ ನೀರು ಸೇವಿಸಿ.
ಹೀಗೆ ಅನುಸರಿಸಿದರೆ ನಿಮಗೆ ಮೂರ್ನಾಲ್ಕು ವಾರಗಳಲ್ಲಿ ನಿಮ್ಮ ಸಮಸ್ಯೆಯ ತೀವ್ರತೆ ಕಡಿಮೆಯಾಗಲು ತೊಡಗುವುದು. ತುಂಬ ಹಳೆಯ ತೊಂದರೆಯಾಗಿದ್ದಲ್ಲಿ ವಾಸಿಯಾಗಲು ಇನ್ನು ಕೆಲವು ವಾರಗಳು ಬೇಕಾಗಬಹುದು. ಖಂಡಿತ ಈ ಚಿಕಿತ್ಸೆಯು ತುಂಬ ಪರಿಣಾಮಕಾರಿಯಾಗಿದೆ. ಅಡುಗೆಮನೆಯೇ ಆಸ್ಪತ್ರೆ ಮತ್ತು ಆಹಾರವೇ ಔಷಯಾಗಿ ಪರಿಣಮಿಸುವುದರಿಂದ ಇದನ್ನು ಮನೆಯ ಪ್ರಯತ್ನಿಸಿ, ಲಾಭ ಪಡೆಯಿರಿ ಮತ್ತು ನಿಮ್ಮ ಸುತ್ತಮುತ್ತಲಿನ ಬಂಧು-ಭಗಿನಿಯರಿಗೆ ವಿಷಯ ಮುಟ್ಟಿಸುವ ಒಳಿತಿನ ಕೆಲಸ ಮಾಡಿ. ಇದುವೇ ನಿಮ್ಮ ಜೊತೆ ಬರುವ ನಿಜವಾದ ಆಸ್ತಿ. ಅಧ್ಯಾತ್ಮ ಎಂದರೆ ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವುದು ಮತ್ತು ಇನ್ನೊಬ್ಬರ ಒಳಿತು ಬಯಸುವುದೇ ಆಗಿದೆ.
ಇಲ್ಲಿ ತರಕಾರಿ ಮತ್ತು ಸೊಪ್ಪುಗಳ ಒಂದು ಅಂದಾಜಿನ ಪ್ರಮಾಣ ಕೊಡಲಾಗಿದೆ ಅಷ್ಟೆ. ಇಲ್ಲಿ ಕೊಟ್ಟಿರುವ ತರಕಾರಿಯನ್ನು ನಿಮ್ಮ ದೇಹದ ಅವಶ್ಯಕತೆಗನುಗುಣವಾಗಿ ಸೇರಿಸಿಕೊಳ್ಳಿ. ಸಾವಯವ ತರಕಾರಿ ಆದರೆ ಒಳ್ಳೆಯದು.
ಪ್ರಮಾಣ: ಒಂದು ಬಾರಿಗೆ ಸುಮಾರು 200 ರಿಂದ 250 ಮಿ.ಲೀ. ರಸ ಸೇವಿಸಿ.

 

LEAVE A REPLY