ಭಗವಂತನ ಸೇವೆಗೆ ಬದುಕನ್ನೇ ಸಮರ್ಪಿಸಿಕೊಂಡ ಮಹಾನ್ ಭಕ್ತೆ ರೂಪಾ ಗೋಸ್ವಾಮಿ

  • ಪ. ರಾಮಕೃಷ್ಣ ಶಾಸ್ತ್ರಿ

ಭಗವಂತನ ಸೇವೆಗೆ ಬದುಕನ್ನೇ ಸಮರ್ಪಿಸಿಕೊಂಡ ಮಹಾನ್ ಭಕ್ತರ ಸಾಲಿಗೆ ಸೇರುವ ರೂಪಾ ಗೋಸ್ವಾಮಿ ಮೂಲತಃ ಆಂಧ್ರದವಳು. ಭಾರದ್ವಾಜ ಗೋತ್ರದ, ಯಜುರ್ವೇದಿಗಳಾದ ಸಾರಸ್ವತ ಬ್ರಾಹ್ಮಣ ಪಂಗಡದ ಕುಮಾರದೇವ ಅವಳ ತಂದೆ. ಇಬ್ಬರು ಸಹೋದರರ ಬಳಿಕ ಅವಳ ಜನನ. ತಂದೆ ಇರಿಸಿದ ಹೆಸರು ರೂಪಾ ಮಂಜರಿ. 1489ರಲ್ಲಿ ಜನಿಸಿದ ಅವಳು ವಾಸುದೇವ ಸಾರ್ವಭೌಮ ಭಟ್ಟಾಚಾರ್ಯರೆಂಬ ಗುರುಗಳಿಂದ ಸಂಸ್ಕೃತ, ಅರೇಬಿಕ್ ಭಾಷೆಗಳಲ್ಲಿ ಪಾಂಡಿತ್ಯ ಸಂಪಾದಿಸಿದ್ದಳು. ನ್ಯಾಯಶಾಸ್ತ್ರದಲ್ಲಿ ನೈಪುಣ್ಯ ಗಳಿಸಿದ್ದಳು. ಕಾರಣಾಂತರದಿಂದ ಅವಳ ಹಿರಿಯರು ಇಂದು ಬಾಂಗ್ಲಾದೇಶದಲ್ಲಿರುವ ಜೆಸೋರ್‌ಗೆ ಹೋಗಬೇಕಾಯಿತು. ಅಲ್ಲಿ ಸುಲ್ತಾನ್ ಅಲ್ಲಾದೀನ್ ಷಾನ ಆಸ್ಥಾನದಲ್ಲಿ ಅವಳ ಒಬ್ಬ ಸಹೋದರನಿಗೆ ಸೇನೆಯಲ್ಲಿಯೂ ಇನ್ನೊಬ್ಬನಿಗೆ ಹಣಕಾಸಿನ ಖಜನೆಯಲ್ಲಿಯೂ ನೌಕರಿ ಸಿಕ್ಕಿತು. ನೌಕರಿ ನೀಡಿದ ಸುಲ್ತಾನ ಅವರ ಹೆಸರುಗಳನ್ನು ದೆಬಿರ್ ಖಾನ್ ಮತ್ತು ಸಪೀರ್ ಮಲ್ಲಿಕ್ ಎಂದು ಬದಲಾಯಿಸಿದ. ಇದರಿಂದ ಬ್ರಾಹ್ಮಣ ಸಮಾಜ ಅವರಿಗೆ ಬಹಿಷ್ಕಾರ ವಿಸಿತು.
ಬಾಲ್ಯದಿಂದಲೇ ಶ್ರೀಕೃಷ್ಣನ ಭಕ್ತೆಯಾದ ರೂಪಾ ಮುಸ್ಲಿಂ ಮತವನ್ನು ಒಪ್ಪಿಕೊಳ್ಳಲು ಸಿದ್ಧಳಿರಲಿಲ್ಲ. ಈ ಬಲೆಯಿಂದ ಪಾರಾಗಲು ಆಕೆ ಸಹೋದರರ ಜೊತೆಗೆ 1514ರಲ್ಲಿ ಸಂತ ಚೈತನ್ಯ ಪ್ರಭುಗಳನ್ನು ಭೇಟಿಯಾಗಿ ಮೆರೆಯಿಟ್ಟಳು. ಚೈತನ್ಯರು, ‘ಭಯಪಡಬೇಡಿ. ಭಗವಂತನ ಪ್ರೇರೇಪಣೆಯಿಂದ ನಿಮಗೆ ಹೊಸ ಬೆಳಕು ತೋರುತ್ತದೆ’ ಎಂದು ಅಭಯ ನೀಡಿದರು. ಸುಲ್ತಾನನ ಬಿಗಿಮುಷ್ಟಿಯಿಂದ ಪಾರಾಗಲು ರೂಪಾ ಗೋಸ್ವಾಮಿಯ ಸಹೋದರ ಖಜನೆಯಿಂದ ಹತ್ತು ಸಾವಿರ ಚಿನ್ನದ ನಾಣ್ಯಗಳನ್ನು ತೆಗೆದುಕೊಂಡ. ಈ ಅಪರಾಧಕ್ಕಾಗಿ ಸುಲ್ತಾನನು ಅವನನ್ನು ಸೆರೆಮನೆಗೆ ಹಾಕಿಸಿದ. ಸೆರೆಮನೆಯ ಪಹರೆ ಕಾಯುವವನಿಗೆ ಈ ನಾಣ್ಯಗಳನ್ನು ಕೊಟ್ಟು ಸಹೋದರರು ರೂಪಾಳ ಜೊತೆಗೂಡಿ ರಾತ್ರೆಯೇ ದೋಣಿಯಲ್ಲಿ ಕುಳಿತು ಬಹು ದೂರ ಸಾಗಿದರು.
ಪ್ರಯಾಗದಲ್ಲಿರುವ ಗಂಗಾನದಿಯ ಪವಿತ್ರ ಸ್ಥಳವೆನಿಸಿದ ದಶಾಶ್ವಮೇಧ ಘಾಟಿನಲ್ಲಿ ಅವರಿಗೆ ಚೈತನ್ಯರ ಭೇಟಿಯಾಯಿತು. ಭಕ್ತಿ ಸಿದ್ಧಾಂತದ ಹಾದಿಯಲ್ಲಿ ನಡೆಯುವುದು ಎಷ್ಟು ಕಷ್ಟವೆಂಬುದನ್ನು ಚೈತನ್ಯರು ವಿವರಿಸಿದ ಮೇಲೂ ವಿಚಲಿತರಾಗದೆ ಮೂವರು ಕೂಡ ಚೈತನ್ಯರ ಅನುಯಾಯಿಗಳಾದರು. ರೂಪಾಳಿಗೆ ಚೈತನ್ಯರು ವೈಷ್ಣವ ದೀಕ್ಷೆ ನೀಡಿ ತಮ್ಮ ಪ್ರಿಯ ಶಿಷ್ಯರ ಸಾಲಿಗೆ ಸೇರಿಸಿಕೊಂಡರು. ವೃಂದಾವನಕ್ಕೆ ಹೋಗಿ ಅಲ್ಲಿ ಅಗೋಚರವಾಗಿರುವ ಶ್ರೀಕೃಷ್ಣನ ದೇವಾಲಯಗಳನ್ನು ಹುಡುಕಲು ಹೇಳಿದರು. ರೂಪಾ ಯಮುನಾ ನದಿಯ ದಡದಲ್ಲಿ ಬಸವಳಿದು ಕುಳಿತಿದ್ದಾಗ ಅಪರಿಚಿತ ಬಾಲಕನೊಬ್ಬ ಅವಳ ಸನಿಹ ಬಂದು ಕೈ ಹಿಡಿದೆಳೆದ. ಬೆಟ್ಟವೊಂದರ ತುದಿಗೆ ಕರೆದುಕೊಂಡು ಹೋದ. ಅಲ್ಲಿ ಭೂಗತವಾಗಿದ್ದ ಗೋವಿಂದದೇವ ದೇವಾಲಯದ ಸ್ಥಳವನ್ನು ತೋರಿಸಿದ. ಶ್ರೀಕೃಷ್ಣನ ಮೆಮ್ಮಗ ವಜ್ರನಾಭನು ಕಟ್ಟಿಸಿದ್ದನೆಂದು ಹೇಳಲಾದ ಈ ದೇವಾಲಯವನ್ನು ಮುಸ್ಲಿಂ ಧಾಳಿಕೋರರಿಂದ ರಕ್ಷಿಸಲು ಮಣ್ಣಿನೊಳಗೆ ಹುದುಗಿಸಲಾಗಿತ್ತೆಂದು ತಿಳಿಯಿತು. ಸ್ಥಳೀಯರ ನೆರವಿನಿಂದ ರೂಪಾ ಈ ದೇವಾಲಯವನ್ನು ಹೊರಗೆ ತಂದು ಪೂಜದಿಗಳ ವ್ಯವಸ್ಥೆ ಮಾಡಿದಳು. ಬಾಲಕನ ರೂಪದಲ್ಲಿ ಬಂದವ ಭಗವಂತನೇ ಎಂಬುದು ಈ ಸಂದರ್ಭದಲ್ಲಿ ಎಂಬುದು ಅವಳಿಗೆ ಅರ್ಥವಾಯಿತು.
ವರ್ಷಾವ ರಥಾಯಾತ್ರಾ ಉತ್ಸವದ ಸಂದರ್ಭದಲ್ಲಿ ರೂಪಾ ಶ್ರೀಕೃಷ್ಣನ ಸ್ತುತಿಯೊಂದನ್ನು ಬರೆದು ಚೈತನ್ಯರ ಸಮುಖದಲ್ಲಿ ವಾಚಿಸಿದಳು. ಅದನ್ನು ಕೇಳಿ ತನ್ಮಯರಾದ ಚೈತನ್ಯರು, ‘ಇದರಲ್ಲಿ ವೈಷ್ಣವ ತತ್ತ್ವದ ಜೀವರಸವೇ ತುಂಬಿದೆ. ನೀನು ಮುಂದೆ ನನ್ನ ಪ್ರಮುಖ ಶಿಷ್ಯಳಾಗಿ ಭಗವಂತನ ಸೇವೆ ಮಾಡು’ ಎಂದು ಹರಸಿದರಂತೆ. 1534ರಲ್ಲಿ ಚೈತನ್ಯರು ಕಾಲವಾದ ಬಳಿಕ ಅವರ ಭಕ್ತಿಮಾರ್ಗವನ್ನು ಮುನ್ನಡೆಸಿದವರಲ್ಲಿ ಅವಳೂ ಪ್ರಮುಖಳಾಗಿದ್ದಾಳೆ.
ರೂಪಾಳ ಪರಿಶುದ್ಧ ಭಕ್ತಿಯ ವಿಧಾನ ಎಲ್ಲರಿಗೂ ಮಾರ್ಗದರ್ಶಕವಾಗಿತ್ತು. ಚೈತನ್ಯರ ಸೂಚನೆಯಂತೆ ಅವಳು ಶ್ರೀಕೃಷ್ಣನ ಕಥೆಯನ್ನು ನಾಟಕವಾಗಿ ಬರೆಯಲು ಮುಂದಾದಳು. ಅದರಲ್ಲಿ ಶ್ರೀಕೃಷ್ಣನಿಗೆ 16 ಸಾವಿರ ಮಡದಿಯರಿದ್ದರು ಎಂದು ಬರೆಯಲು ಮುಂದಾದಾಗ ಕನಸಿನಲ್ಲಿ ಸತ್ಯಭಾಮೆಯು ದರ್ಶನ ನೀಡಿ ಈ ಅನೃತ ವಾಕ್ಯವನ್ನು ಬರೆಯಬೇಡ. ಭಗವಂತ ಕಾಮಿಯಲ್ಲ, ನಿರ್ಮೋಹಿ. ಎಲ್ಲ ಗೋಪಿಕೆಯರಿಗೂ ಆತ ತನ್ನ ಚರಣಗಳಲ್ಲಿ ಆಶ್ರಯ ನೀಡಿದ್ದನೇ ಹೊರತು ಕಾಮಿಸಿರಲಿಲ್ಲ ಎಂದು ಹೇಳಿ ಪೂರ್ಣವಾಗಿ ಭಾಗವತದ ಕಥೆಯನ್ನು ಹೇಳಿ ಹೋದಳಂತೆ. ಈ ಕಥೆಯನ್ನಾಧರಿಸಿ ರೂಪಾ ಎರಡು ಸಂಸ್ಕೃತ ನಾಟಕಗಳನ್ನು ಬರೆದಳು. ಮೊದಲನೆಯದು ವಿದಗ್ಧ ಮಾಧವ. ಇದರಲ್ಲಿ ಭಗವಂತನು ಮಥುರೆಯನ್ನು ತೊರೆದು ತನ್ನ ಪಾದಗಳನ್ನು ಹೊರಗಿಡುವುದಿಲ್ಲ, ದ್ವಾರಕೆಗೆ ಹೋಗುವುದೇ ಇಲ್ಲ ಎನ್ನುತ್ತಾಳೆ. ಎರಡನೆಯ ನಾಟಕ ರಾಧಾ ಮಾಧವ. ಅದರಲ್ಲಿ ಅವನು ದ್ವಾರಕೆಯಲ್ಲಿ ನೆಲೆಸಿದ ಕಥೆಯ ವಿವರಗಳಿವೆ. ನಾಟಕದ ಒಂದು ಭಾಗದಲ್ಲಿ ರಾಧಾ ಮಾಧವರು ಪ್ರೀತಿಯಲ್ಲಿ ಮೈಮರೆತು ಕುಳಿತ ಪ್ರಸಂಗವಿದೆ. ಅವರನ್ನು ಎಚ್ಚರಿಸಲು ಸನಿಹವಿರುವ ಕದಂಬ ಮರ ಅವರ ಮೈಮೇಲೆ ಎಲೆಗಳನ್ನು ಉದುರಿಸಿತಂತೆ. ಇಬ್ಬರೂ ಎಚ್ಚತ್ತರು. ಇಬ್ಬರೂ ಬೇರ್ಪಟ್ಟ ಆ ನೋವಿನಲ್ಲೂ ಶ್ರೀಕೃಷ್ಣನು ಕದಂಬ ಮರದೆಡೆಗೆ ನೋಡಿದಾಗ ಮರವು ಹೊಸ ಚಿಗುರು, ಘಮಘಮಿಸುವ ಹೂಗಳಿಂದ ನಳನಳಿಸಿತೆಂಬ ಸುಂದರವಾದ ವರ್ಣನೆಯಿದೆ.
ರೂಪಾ ಭಕ್ತಿರಸವಷ್ಟೇ ಅಲ್ಲದೆ ತತ್ತ್ವಶಾಸ್ತ್ರ ಮತ್ತು ಕಾವ್ಯಗಳ ಗ್ರಂಥಗಳನ್ನೂ ರಚಿಸಿದ್ದು ಅವೆಲ್ಲವೂ ಪ್ರಸಿದ್ಧವಾಗಿವೆ. ಭಕ್ತಿ ರಸಾಮೃತ, ಉಜ್ವಲ ನೀಲಮಣಿ, ಸ್ತವಮಾಲಾ, ದಾನ ಕೇಳಿ ಕೌಮುದಿ, ರಾಧಾ ಮಾಧವ ಗಾನೋದ್ದೇಶ ದೀಪಿಕಾ, ಭಾಗವತಾಮೃತ, ಉಪದೇಶಾಮೃತ, ಉದ್ಧವ ಸಂದೇಶ, ಮಧುರಾ ಮಹಾತ್ಮೆ, ಹಂಸದೂತಮ್, ಚಂದ್ರಿಕಾ ಇತ್ಯಾದಿ ಅವಳು ರಚಿಸಿದ ಉದ್ಗ್ರಂಥಗಳು. ಆ ಕಾಲದ ಮಹಾನ್ ಸಂತರ ಜೊತೆಗೆ ಆಕೆ ನಿಕಟ ಸಂಪರ್ಕವಿರಿಸಿಕೊಂಡಿದ್ದಳು. ಭಕ್ತಿ ಎಂಬುದು ಅತೀಂದ್ರಿಯ ಲೋಕದ ದೊಡ್ಡ ಸಾಗರ. ಅದರ ಉದ್ದ, ಅಗಲ ಅಳೆದವರಿಲ್ಲ. ಆದರೂ ನಾನು ಅದರಿಂದ ಒಂದು ಹನಿಯನ್ನು ತೆಗೆದುಕೊಟ್ಟು ಭಕ್ತಿಯ ರುಚಿಯನ್ನು ತೋರಿಸಿಕೊಡುವ ಕೆಲಸ ಮಾಡಿದ್ದೇನೆ ಎಂದು ವಿನಮ್ರವಾಗಿ ಆಕೆ ಹೇಳಿಕೊಂಡಿದ್ದಾಳೆ.
ಗೋಪಿಕಾ ಸ್ತ್ರೀಯೊಬ್ಬಳು ಕಲಿಯುಗದಲ್ಲಿ ರೂಪಾ ಗೋಸ್ವಾಮಿಯಾಗಿ ಜನಿಸಿದಳೆಂಬ ಪ್ರತೀತಿ ಕೂಡ ಇದೆ. ಆಕೆ ಕಾಲವಶವಾದದ್ದು 1564ರಲ್ಲಿ. ರಾಧಾ- ದಾಮೋದರ ದೇವಾಲಯದ ಬಳಿ ಈ ಸಂತಶ್ರೇಷ್ಠಳ ಸಮಾಯನ್ನು ಕಾಣಬಹುದು.

LEAVE A REPLY