ಇಷ್ಟಕ್ಕೂ ನಾವು ನೂತನರೇ ಇಲ್ಲಾ ಪುರಾತನರೇ?

  • ರವಿ ತಿರುಮಲೈ

ಭೂಮಿಯ ನೀರಿಗೆ ಆಗಸದ ಮಳೆಯ ನೀರು ಇಳಿದು ಬೆರೆಯುವಂತೆ, ಮನುಷ್ಯನ ಪುರಾತನತೆಗೆ ನೂತನತ್ವ ಬೆರೆತು ನಿರಂತರವಾಗಿ ಹರಿಯುವುದು ಈ ಜೀವನದ ಲಹರಿ, ಹಾಗಾಗಿ ಹಳತು ಮತ್ತು ಹೊಸತರ ನಿರಂತರ ಸಮ್ಮಿಲನವೇ ಈ ಜಗತ್ತು ಮತ್ತು ಇದರ ವೈವಿಧ್ಯತೆ.
ಆಕಾಶದ ನೀರು ಆಕಾಶದಲ್ಲಿ ಇತ್ತೇ? ಇಲ್ಲ, ಅದು ಈ ಭೂಮಿಯ ಮೇಲಿನ ನೀರೇ ಆವಿಯಾಗಿ, ಮೋಡವಾಗಿ ಮತ್ತೆ ಧರೆಗೆ ಇಳಿಯುತ್ತದೆ. ಆಗ ನಾವು ಅದನ್ನು ಹೊಸ ಮಳೆ ಎಂದು ಕರೆಯುತ್ತೇವೆ. ಆ ರೂಪ ಹೊಸತಾದರೂ ಅದರ ಮೂಲ ಹಳತಲ್ಲವವೇ ? ಆದರೂ ಅದಕ್ಕೊಂದು ಹೊಸ ಬಣ್ಣ. ಅದರ ಆಗಮನ ಹೊಸ ಭಾವವನ್ನು ತರುತ್ತದೆ. ಹೊಸ ಸಂಭ್ರಮದ ಸ್ವಾಗತವಿರುತ್ತದೆ. ಆ ಭಾವವು ನಮ್ಮಲ್ಲಿ ಹಿಂದೆಯೂ ಬಂದಿತ್ತು, ಹಾಗಾಗಿ ಅದು ಪುರಾತನ, ಇಂದೂ ಬಂದಿದೆ. ಹಾಗಾಗಿ ನೂತನ.
ಈ ಜಗತ್ತಿನ ಎಲ್ಲವೂ ಹೀಗೇ! ಹಳತಿನ ಆಧಾರದ ಮೇಲೆ ಹೊಸ ಹೊಸ ವಿಚಾರಗಳು, ಆವಿಷ್ಕಾರಗಳು, ಭಾವಗಳು, ಸಾಹಿತ್ಯ, ಸಂಗೀತ, ಸಂಸ್ಕೃತಿ ಎಲ್ಲವೂ ಸಹ ಹಳೆಯದರಿಂದಲೇ ಹೊಸ ರೂಪ ತಾಳುತ್ತದೆ. ಅದನ್ನು ನಾವು ನೂತನವೆನ್ನುತ್ತೇವೆ. ಏನೋ ಹೊಸದನ್ನು ಕಂಡುಹಿಡಿದ ಹಾಗೆ ಅಥವಾ ಕಂಡ ಹಾಗೆ ಸಂಭ್ರಮಿಸುತ್ತೇವೆ. ಆದರೆ ಹಳತು ಹೊಸದರ ಮೂಲ. ಹಳತಿಗೆ ಅದಕ್ಕಿಂತ ಹಳತಿನದು ಮೂಲ.
ಹೀಗೆ ಹಳತು ಹೊಸತುಗಳ ಪ್ರವಾಹದ ಚಲನೆ ಈ ಜಗತ್ತಿನಲ್ಲಿ ನಿರಂತರವಾಗಿ ನಡೆದೇ ಇರುತ್ತದೆ. ನಮ್ಮ ಕನ್ನಡ ಭಾಷೆಯನ್ನೇ ತೆಗೆದುಕಳ್ಳೋಣ. ಭಾಷೆ ಒಂದು ದಿನದಲ್ಲಿ ಉಗಮವಾಗಲಿಲ್ಲ. ಒಂದು ವಿಕಸನ ಪ್ರಕ್ರಿಯೆಯಲ್ಲಿ ಹರಿದು ಹಲವಾರು ರೂಪಗಳನ್ನು ತಳೆದು, ಪಡೆದು ಮತ್ತೆ ಆ ವಿಕಸನ ಪ್ರಕ್ರಿಯೆಯ ರೂಪಾಂತರಗೊಳ್ಳುತ್ತಾ, ಇಂದಿನ ರೂಪ ಪಡೆದಿದೆ. ಓದುವ ಬರೆಯುವ ಮತ್ತು ಆಡುವ ಎಲ್ಲ ರೂಪಗಳಲ್ಲೂ ಅದು ಬದಲಾಗುತ್ತಾ ಇದೆ. ಹಳತಿನ ಆಧಾರದ ಮೇಲೆ ಹೊಸ ಹೊಸ ರೂಪ ಪಡೆಯುತ್ತದೆ. ಇಂದು ನಾವು ಹಳೆಗನ್ನಡವನ್ನು ಓದಲು ಸಮರ್ಥರಲ್ಲ. ಈಗಿನ ಹೊಸ ಕನ್ನಡ ಓದುತ್ತೇವೆ. ಆದರೆ ಇಂದಿನ ಭಾಷೆಯು ಅಂದಿನ ಭಾಷೆಯ ರೂಪಾಂತರಿತ ರೂಪವೆಂದು ಅರಿಯಬೇಕು.
ಒಂದು ಮರ ನೂರಾರು ವರ್ಷಗಳ ಕಾಲ ಜೀವಂತವಾಗಿರುತ್ತದೆ. ಅದರ ಬೇರುಗಳು ಭೂತಲದಲ್ಲಿ ಸುತ್ತಲೂ ಬಹಳ ಕಾಲದಿಂದ ಹರಡಿಕೊಂಡಿರುತ್ತವೆ. ಅದರ ಕಾಂಡ ಭದ್ರವಾಗಿ ಭೂಮಿಯಲ್ಲಿ ನಾಟಿಕೊಂಡು ಇರುತ್ತದೆ. ಪ್ರತೀ ವರ್ಷವೂ ಆ ಮರ ತನ್ನ ದೇಹವನ್ನು ಕೊಡವಿಕೊಂಡಂತೆ ತನ್ನ ಎಲೆಗಳನ್ನೆಲ್ಲ ಉದುರಲು ಬಿಟ್ಟು ಮತ್ತೆ ಹೊಸ ಚಿಗುರನ್ನು ಹೊತ್ತು ಅದರ ಮೂಲಕ ಹೊಸ ಹೂ, ಕಾಯಿ, ಹಣ್ಣುಗಳನ್ನು, ತಳೆಯುವುದಿಲ್ಲವೇ? ಈ ಪ್ರಕ್ರಿಯೆಯನ್ನು ನಾವು ಜಗತ್ತಿನ ಪ್ರತೀ ವಸ್ತುವಿಗೂ ಅನ್ವಯಿಸಿಕೊಳ್ಳಬಹುದು. ನಮ್ಮ ಯೋಚನೆ ಎಷ್ಟು ದೂರ ಹೋಗಬಲ್ಲದೋ ಅಷ್ಟೂ ದೂರ ಹರಿಸಿ ನೋಡಿದಾಗ, ನಮಗೆ ಈ ಹಳತು ಹೊಸತುಗಳ ಸಮ್ಮಿಲಿತ ರೂಪದ ಪರಿಚಯ ಖಂಡಿತ ಆಗುತ್ತದೆ. ನಮ್ಮ ಎಲ್ಲ ಹೊಸತೂ ಸಹ ಹಳತಿನ ಅಡಿಪಾಯದ ಮೇಲೆ ನಿಂತ ಹೊಸ ರೂಪ ಎಂದು ನಾವು ಅರ್ಥಮಾಡಿಕೊಂಡಾಗ ಈ ಜಗಜ್ಜೀವನದ ನಿರಂತರತೆಯ ರೂಪ ನಮಗೆ ಗೋಚರವಾಗುತ್ತದೆ. ನಾವೆಷ್ಟು ನವೀನರು ಅಥವಾ ಪುರಾತನರು ಎಂದು ಅರ್ಥವಾಗುತ್ತದೆ.

LEAVE A REPLY