ಐಸಿಸಿಗೆ ಪತ್ರ ಬರೆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ : ಬಿಸಿಸಿಐನಿಂದ ೭೦ ದಶಲಕ್ಷ ಡಾಲರ್ ಪರಿಹಾರಕ್ಕೆ ಆಗ್ರಹ

ಕರಾಚಿ: ಪಾಕಿಸ್ತಾನದ ವಿರುದ್ಧ ದ್ವಿಪಕ್ಷೀಯ ಸರಣಿಯನ್ನು ಆಡದೇ ಇರುವ ಕಾರಣ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಪಾರ ನಷ್ಟವಾಗಿದೆ. ಇದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ 70 ದಶಲಕ್ಷ ಅಮೆರಿಕನ್ ಡಾಲರ್ ಪರಿಹಾರ ನೀಡಬೇಕು ಎಂದು ಪಿಸಿಬಿ ಆಗ್ರಸಿದೆ.
ಭಾರತವು ಹಲವು ವರ್ಷಗಳಿಂದ ಪಾಕಿಸ್ತಾನದ ಜೊತೆ ಕ್ರಿಕೆಟ್ ಪಂದ್ಯಗಳನ್ನು ಆಡಿಲ್ಲ. ಅಲ್ಲದೇ ಪಾಕಿಸ್ತಾನದಲ್ಲಿ ಅಥವಾ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿಯೂ ಕೂಡ ಭಾರತವು ಪಾಕಿಸ್ತಾನದ ವಿರುದ್ಧ ದ್ವಿಪಕ್ಷೀಯ ಪಂದ್ಯಗಳನ್ನು ಆಡಿಲ್ಲ. ಇದರಿಂದ ವಾರ್ಷಿಕವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುತ್ತಿದೆ. ಹೀಗಾಗಿ ಬಿಸಿಸಿಐ ಪಿಸಿಬಿಗೆ 70 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ ಪರಿಹಾರ ನೀಡಬೇಕು. ಈ ನಿಟ್ಟಿನಲ್ಲಿ ಐಸಿಸಿ ಪ್ರಯತ್ನಿಸಬೇಕು ಎಂದು ಪಿಸಿಬಿ ಪತ್ರ ಬರೆಯುವ ಮೂಲಕ ಆಗ್ರಸಿದೆ. ಭಾರತವು ಪಾಕಿಸ್ತಾನದ ಜೊತೆಗೆ ಆರು ದ್ವಿಪಕ್ಷೀಯ ಸರಣಿಗಳನ್ನು ಆಡುವುದಾಗಿ ೨೦೧೪ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಪ್ರಕಾರ ಮೊದಲ ಸರಣಿ ಪಾಕಿಸ್ತಾನದ ನೆಲದಲ್ಲಿ ನಡೆಯಬೇಕಿತ್ತು. ಆದರೆ ಇದುವರೆಗೂ ಯಾವುದೇ ಪಂದ್ಯಗಳನ್ನು ಭಾರತವು ಪಾಕಿಸ್ತಾನದ ವಿರುದ್ಧ ಆಡಿಲ್ಲ. ಅಲ್ಲದೇ 2008ರಿಂದ ಭಾರತವು ಪಾಕಿಸ್ತಾನದ ವಿರುದ್ಧ ಸರಣಿ ನಡೆಸಿಲ್ಲ. ಯಾವುದೇ ಕಾರಣ ಇಲ್ಲದೇ ಭಾರತವು ಪಾಕಿಸ್ತಾನದ ವಿರುದ್ಧ ಸರಣಿಯನ್ನು ನಡೆಸುತ್ತಿಲ್ಲ. ಇದರಿಂದಾಗಿ ಪಿಸಿಬಿಗೆ ಭಾರಿ ನಷ್ಟವಾಗಿದೆ. ಬಿಸಿಸಿಐ ಪಾಕಿಸ್ತಾನಕ್ಕೆ ಪರಿಹಾರವನ್ನು ನೀಡಬೇಕು ಎಂದು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ತಿಳಿಸಿದ್ದಾರೆ. ಬಿಸಿಸಿಐ ಹಾಗೂ ಪಿಸಿಬಿ ನಡುವೆ ನಡೆದ ಒಪ್ಪಂದದ ಪ್ರಕಾರ ೨೦೧೫ರಿಂದ 2023ರ ನಡುವೆ 6 ದ್ವಿಪಕ್ಷೀಯ ಸರಣಿಯನ್ನು ಆಡಬೇಕು. ಪಾಕಿಸ್ತಾನದ ನೆಲದಲ್ಲಿ ಸರಣಿ ಆಡುವ ಮೂಲಕ ಈ ಎರಡೂ ದೇಶಗಳ ನಡುವಿನ ಸರಣಿಗಳು ಆರಂಭಗೊಳ್ಳಬೇಕಿತ್ತು. ಆದರೆ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನು ಆಡಲು ಒಪ್ಪಿಗೆ ನೀಡಿಲ್ಲ ಎನ್ನುವ ಮೂಲಕ ಬಿಸಿಸಿಐ ಪಾಕ್ ವಿರುದ್ಧದ ಸರಣಿಯಿಂದ ಹಿಂದೆ ಸರಿದಿದೆ. ಪಾಕಿಸ್ತಾನದಲ್ಲಿ ಭಾರತವು ಕ್ರಿಕೆಟ್ ಆಡಲು ಒಪ್ಪದ ಕಾರಣ ತಟಸ್ಥ ಸ್ಥಳಗಳಲ್ಲಿ ಪಂದ್ಯಗಳನ್ನು ನಡೆಸುವ ನಿಟ್ಟಿನಲ್ಲಿಯೂ ಬಿಸಿಸಿಐಗೆ ನಾವು ಆಗ್ರಸಿದ್ದೆವು. ಶ್ರೀಲಂಕಾ ಅಥವಾ ಇನ್ಯಾವುದೇ ತಟಸ್ಥ ಸ್ಥಳಗಳಲ್ಲಿ ಪಂದ್ಯ ಹಮ್ಮಿಕೊಳ್ಳುವ ಕುರಿತಂತೆ 2016ರಲ್ಲಿ ಬಿಸಿಸಿಐ ಜೊತೆ ಮಾತುಕತೆ ನಡೆಸಿದ್ದರೂ ಬಿಸಿಸಿಐ ಒಪ್ಪಿಗೆ ಸೂಚಿಸಿಲ್ಲ ಎಂದು ಸೇಥಿ ತಿಳಿಸಿದ್ದಾರೆ. ಬಿಸಿಸಿಐ ಪರಿಹಾರ ನೀಡುವ ಕುರಿತಂತೆ ಶೀಘ್ರದಲ್ಲಿಯೇ ಐಸಿಸಿ ಎದುರು ಪ್ರಕರಣ ದಾಖಲಿಸಲಾಗುತ್ತದೆ. ದ್ವಿಪಕ್ಷೀಯ ಸರಣಿಗಳನ್ನು ಆಡದ ಕಾರಣ ಪಿಸಿಬಿಯ ಆದಾಯ ಗಣನೀಯವಾಗಿ ಇಳಿಕೆಯಾಗಿದೆ. ಅಲ್ಲದೇ 2009ರಲ್ಲಿ ಪಾಕಿಸ್ತಾನದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಉಗ್ರರ ದಾಳಿ ನಡೆದ ನಂತರ ಯಾವುದೇ ತಂಡ ಕೂಡ ಪಾಕ್ ಜೊತೆ ಸರಣಿ ಆಡಿಲ್ಲ. ಬಿಸಿಸಿಐ ಕೂಡ ಇದರಿಂದ ಹೊರತಾಗಿಲ್ಲ. ಹೀಗಾಗಿ ಬಿಸಿಸಿಐ ಪರಿಹಾರ ನೀಡಬೇಕು ಎಂದು ಸೇಥಿ ಆಗ್ರಸಿದ್ದಾರೆ.

LEAVE A REPLY