ಹದಿ ಹರೆಯದ ಬಾಲಕಿಯರ ಅತ್ಯಾಚಾರ : ಮತ್ತೊಬ್ಬ ಸ್ವಯಂಘೋಷಿತ ದೇವಮಾನ ಸೆರೆ

ಲಕ್ನೋ: ಸ್ವಯಂಘೋಷಿತ ದೇವಮಾನ ಬಾಬಾ ಸಿಯಾ ರಾಮ್ ದಾಸ್‌ನನ್ನು ಪೊಲೀಸರು ಬಂಧಿಸಿದ್ದು, ಆತ ಹದಿ ಹರೆಯದ ಬಾಲಕಿಯರನ್ನು ಅತ್ಯಾಚಾರ ಮಾಡುತ್ತಿದ್ದ ಆರೋಪ ಎದುರಿಸುತ್ತಿದ್ದಾನೆ.
ಬಾಬಾನ ವಿರುದ್ಧ ಆರೋಪ ಮಾಡಿರುವ ಬಾಲಕಿಯೋರ್ವಳು, ನಿರಂತರ 8 ತಿಂಗಳ ಕಾಲ ಪ್ರತಿದಿನ ಅತ್ಯಾಚಾರ ಮಾಡುತ್ತಿದ್ದ ಎಂದು ಹೇಳಿದ್ದಾಳೆ.
ಅತ್ಯಾಚಾರಕ್ಕೊಳಗಾಗಿರುವ ಬಾಲಕಿಯನ್ನು, ಆಕೆಯ ಸಂಬಂಧಿಗಳು 50 ಸಾವಿರ ರೂಪಾಯಿಗಳಿಗೆ ಬಾಬಾ ಸಿಯಾ ರಾಮ್ ದಾಸ್‌ಗೆ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರ ಸಂತ್ರಸ್ತೆಯನ್ನು ಮೊದಲು ಲಕ್ನೋಗೆ ಕರೆದೊಯ್ಯಲಾಯಿತು. ನಂತರ ಮಿಶ್ರಿಕ್ ಆಶ್ರಮಕ್ಕೆ ಕರೆದೊಯ್ದು ಬಾಬಾ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಬಾ ದಾಸ್ ಅತ್ಯಾಚಾರವನ್ನು ಚಿತ್ರೀಕರಣ ಮಾಡಿದ್ದಾನೆ. ಅಲ್ಲದೇ ಅತ್ಯಾಚಾರ ವಿಷಯವನ್ನು ಬಾಯಿಬಿಟ್ಟರೆ ವೀಡಿಯೋ ಚಿತ್ರೀಕರಣವನ್ನು ಜಗಜ್ಜಾಹೀರು ಮಾಡುವುದಾಗಿಯೂ ಬೆದರಿಸಿದ್ದಾನೆ ಎಂದು ಅತ್ಯಾಚಾರ ಸಂತ್ರಸ್ತೆ ಆರೋಪಿಸಿದ್ದಾಳೆ. ಮಿಶ್ರಿಕ್ ಆಶ್ರಮದ ನಂತರ ಬಾಲಕಿಯನ್ನು ಆಗ್ರಾ ಪ್ರದೇಶದಲ್ಲಿರುವ ಆಶ್ರಮಕ್ಕೆ ಕರೆದೊಯ್ಯಲಾಯಿತು. ಈ ಆಶ್ರಮದಲ್ಲಿ ಹಲವು ಜನರು ನಿರಂತರ 8 ತಿಂಗಳುಗಳ ಕಾಲ ಪ್ರತಿನಿತ್ಯ ಅತ್ಯಾಚಾರ ಎಸಗಿದರು ಎಂದು ಆಕೆ ಹೇಳಿದ್ದಾಳೆ.
ಆಗ್ರಾ ಆಶ್ರಮದ ನಂತರ ಆಕೆಯನ್ನು ಮತ್ತೊಮ್ಮೆ ಮಿಶ್ರಿಕ್ ಆಶ್ರಮಕ್ಕೆ ಕರೆತರಲಾಯಿತು. ಇಲ್ಲಿ ಮತ್ತೆ ಬಾಬಾ ಅತ್ಯಾಚಾರ ಕೈಗೊಂಡರು ಎಂದು ಬಾಲಕಿ ಹೇಳಿದ್ದಾಳೆ ಎನ್ನುವ ವಿಷಯವನ್ನು ಪೊಲೀಸರು ತಿಳಿಸಿದ್ದಾರೆ. ಬಾಬಾ ಸಿಯಾ ರಾಮ್ ದಾಸ್ ಸ್ವತಃ ಹೆಣ್ಣುಮಕ್ಕಳ ಶಾಲೆಯೊಂದನ್ನು ಸ್ಥಾಪಿಸಿದ್ದು, ಈ ಶಾಲೆಯಲ್ಲಿ ಸೆಕ್ಸ್ ರಾಕೆಟ್ ತೆರೆದಿದ್ದಾನೆ ಎಂಬ ಆರೋಪಗಳೂ ಇವೆ. ಅಲ್ಲದೇ ಈ ಶಾಲೆಯ ಬಾಲಕಿಯರನ್ನು ರಾಜಕಾರಣಿಗಳಿಗೆ ಹಾಗೂ ಉದ್ಯಮಿಗಳಿಗೆ ಸರಬರಾಜು ಮಾಡಲಾಗುತ್ತದೆ ಎನ್ನುವ ಅಂಶಗಳನ್ನೂ ಬಾಲಕಿ ತಿಳಿಸಿದ್ದಾಳೆ.
ಸ್ವಯಂಘೋಷಿತ ದೇವಮಾನವನ ಮೇಲೆ ಸೀತಾಪುರ ಪೊಲೀಸರು. ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಪ್ರಕರಣದ ವಿಚಾರಣೆಯನ್ನೂ ಕೈಗೊಳ್ಳುತ್ತಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ಮಾತನಾಡಿರುವ ಬಾಬಾ, ತಾನು ಇದುವರೆಗೂ ಕೂಡ ಆ ಬಾಲಕಿಯನ್ನು ಭೇಟಿ ಮಾಡಿಯೇ ಇಲ್ಲ ಎಂದು ತಿಳಿಸಿದ್ದಾನೆ.

LEAVE A REPLY