ಮನೆಗೆ ನುಗ್ಗಿ ಬಿಎಸ್‌ಎಫ್ ಯೋಧನ ಕಗ್ಗೊಲೆ: ಮತ್ತೆ ಉಗ್ರರ ಆಟ್ಟಹಾಸ

ಶ್ರೀನಗರ: ಕಣಿವೆ ರಾಜ್ಯದಲ್ಲಿ ಅಟ್ಟಹಾಸ ಮುಂದುವರಿಸಿರುವ ಉಗ್ರರು, ಕಳೆದ ರಾತ್ರಿ ಮನೆಗೆ ನುಗ್ಗಿ ಗಡಿ ಭದ್ರತಾ ಪಡೆ ಯೋಧರೋರ್ವರನ್ನು ಹತ್ಯೆಗೈದಿದ್ದಾರೆ.
ಮಹಮದ್ ರಂಜಾನ್ ಪ್ಯಾರಿ (23) ಉಗ್ರರ ಕ್ರೌರ್ಯಕ್ಕೆ ಬಲಿಯಾದ ಯೋಧರಾಗಿದ್ದು, ಘಟನೆಯಲ್ಲಿ ತಂದೆ ಮತ್ತು ಸಹೋದರರೂ ಗಾಯಗೊಂಡಿದ್ದಾರೆ.
ಬಾರಾಮುಲ್ಲಾ ಪಟ್ಟಣದಲ್ಲಿ ೭೩ನೇ ಬೆಟಾಲಿಯನ್‌ನಲ್ಲಿ ಸೇವೆಯಲ್ಲಿದ್ದ ಪ್ಯಾರಿ, ೨೦ ದಿನಗಳ ರಜೆ ಮೇಲೆ ತಮ್ಮ ಹುಟ್ಟೂರಿಗೆ ಬಂದಿದ್ದರು. ಈ ಸಂದರ್ಭ ನಾಲ್ವರು ಉಗ್ರರು ಮನೆಗೆ ನುಗ್ಗಿ ಯೋಧನನ್ನು ಭೀಕರವಾಗಿ ಥಳಿಸಿದ್ದಾರೆ. ಈ ಸಂದರ್ಭ ಸಹೋದರರಾದ ಜಾವೇದ್ ಮತ್ತು ಸಾಹೀಬ್, ತಂದೆ ಗುಲಾಂ ಮತ್ತು ಚಿಕ್ಕಮ್ಮ ಹಬಾ ಬೇಗಂ ವಿರೋಧಿಸಿದ್ದು, ಅವರನ್ನು ಬೆದರಿಸಿದ ಭಯೋತ್ಪಾದಕರು ಬಂದೂಕಿನಿಂದ ಗುಂಡು ಹಾರಿಸಿ ಪ್ಯಾರಿಯನ್ನು ಕೊಂದು ಪರಾರಿಯಾಗಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಶೋಪಿಯಾನ್‌ನಲ್ಲಿ ಮದುವೆ ಮನೆಗೆ ನುಗ್ಗಿ ಲೆಫ್ಟಿನೆಂಟ್ ಉಮರ್ ಫಯಾಜ್ ಅವರನ್ನು ಉಗ್ರರು ಹತ್ಯೆ ಮಾಡಿದ ಘಟನೆಯ ಬೆನ್ನಿಗೇ ಈ ಕೃತ್ಯ ನಡೆದಿದೆ. ಕೃತ್ಯ ನಡೆಸಿದ ಉಗ್ರರಿಗಾಗಿ ವ್ಯಾಪಕ ಶೋಧ ಮುಂದುವರಿದಿದೆ. ಈ ಘಟನೆ ನಂತರ ಕಾಶ್ಮೀರ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

LEAVE A REPLY