ವಿಶ್ವಸಂಸ್ಥೆ ಕಾಯಂ ಸದಸ್ಯತ್ವ: ಭಾರತ ಪರ ಅಮೆರಿಕ ಸಂಸದರಿಂದ ನಿರ್ಣಯ

ಹೊಸದಿಲ್ಲಿ: ಭಾರತವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ)ಯ ಕಾಯಂ ಸದಸ್ಯ ರಾಷ್ಟ್ರವನ್ನಾಗಿ ಮಾಡಬೇಕೆಂಬುದನ್ನು ಬೆಂಬಲಿಸಲು ಅಮೆರಿಕದ ಇಬ್ಬರು ಪ್ರಭಾವಿ ಸಂಸದರು ಸತತ ೨ನೇ ವರ್ಷ ಪ್ರತಿನಿಧಿ ಸಭೆಯಲ್ಲಿ ನಿರ್ಣಯವೊಂದನ್ನು ಮಂಡಿಸಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಬಹುತ್ವಕ್ಕೆ ಸಂಬಂಧಪಟ್ಟಂತೆ ಸದಸ್ಯ ರಾಷ್ಟ್ರಗಳು ಮಿಲಿಟರಿ ಶಕ್ತಿಯನ್ನು ಒಂದಾಗಿಸುವ ಮತ್ತು ಧೂರ್ತ ದೇಶಗಳು ಹಾಗೂ ಭಯೋತ್ಪಾದಕ ಗುಂಪುಗಳಿಂದ ಎದುರಾಗಿರುವ ಅಪಾಯಗಳನ್ನು ಗ್ರಹಿಸಬಲ್ಲ ವಿಶ್ವಸಂಸ್ಥೆ ಭದ್ರತಾ ಮಂಡಳಿಯೊಂದನ್ನು ಹೊಂದುವುದು ಅಮೆರಿಕ ಮತ್ತು ಜಗತ್ತಿನ ಹಿತದೃಷ್ಟಿಯಿಂದ ಉತ್ತಮ ಎಂದು ಈ ವಾರ ಮಂಡಿಸಲಾದ ನಿರ್ಣಯ ಹೇಳುತ್ತದೆ.
ಈ ನಿರ್ಣಯವು ಭಾರತದ ಪ್ರಯತ್ನಕ್ಕೆ ಬೆಂಬಲವಾಗಿ ಅಮೆರಿಕದ ಪ್ರತಿನಿಧಿ ಸಭೆಯನ್ನು ಅಧಿಕೃತವಾಗಿ ದಾಖಲೆಗೆ ಸೇರಿಸಲಿದೆ. ಅದು ಏಳು ಮೂಲ ಸಹ ಪ್ರಾಯೋಜಕರನ್ನು ಹೊಂದಿದೆ. ಪ್ರಸಕ್ತ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಐದು ಕಾಯಂ ಸದಸ್ಯ ರಾಷ್ಟ್ರಗಳಿವೆ. ಅವೆಂದರೆ, ಅಮೆರಿಕ, ಬ್ರಿಟನ್, ರಶ್ಯಾ, ಚೀನಾ ಮತ್ತು ಫ್ರಾನ್ಸ್.
ಡೆಮೊಕ್ರೆಟಿಕ್ ಪಾರ್ಟಿಯ ಸಂಸದರಾದ ಫ್ರಾಂಕ್ ಪಲ್ಲೋನ್ ಮತ್ತು ಅಮಿ ಬೆರಾ ೨೦೧೬ ಜೂನ್‌ನಲ್ಲಿ ಕೂಡಾ ಅಮೆರಿಕ ಸದನದಲ್ಲಿ ಇದೇ ರೀತಿಯ ಪದಗಳನ್ನು ಒಳಗೊಂಡ ಅದೇ ರೀತಿಯ ನಿರ್ಣಯವೊಂದನ್ನು ಮಂಡಿಸಿದ್ದರು. ಪಲ್ಲೋನ್ ಅವರು ಭಾರತ ಮತ್ತು ಭಾರತೀಯ ಅಮೆರಿಕನರಿಗೆ ಸಂಬಂಧಿಸಿದ ಕಾಂಗ್ರೆಸ್‌ನ ಕೂಟದ ಸ್ಥಾಪಕರಾಗಿದ್ದಾರೆ. ಬೆರಾ ಅವರು ಸದನದ ವಿದೇಶಾಂಗ ವ್ಯವಹಾರಗಳ ಸಮಿತಿಯಲ್ಲಿ ಉಪ ದರ್ಜೆಯ ಸದಸ್ಯರಾಗಿದ್ದಾರೆ ಮತ್ತು ಸಂಸತ್ತಿನಲ್ಲಿ ಸುದೀರ್ಘ ಸಮಯದಿಂದ ಇರುವ ಭಾರತೀಯ ಅಮೆರಿಕನ್ ಆಗಿದ್ದಾರೆ.

LEAVE A REPLY