ಅಮೆರಿಕ ರಕ್ಷಣ ಕಾರ್ಯದರ್ಶಿ ಟಾರ್ಗೆಟ್: ವಿಮಾನದ ಮೇಲೆ ‘ಉಗ್ರ’ ರಾಕೆಟ್ ದಾಳಿ

ಕಾಬೂಲ್: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟೀಸ್ ಅಪ್ಘಾನಿಸ್ತಾನದ ಕಾಬೂಲ್‌ನ ಹಮೀಜ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಇಳಿದ ಕೆಲ ಕ್ಷಣಗಳಲ್ಲಿಯೇ ವಿಮಾನದ ಮೇಲೆ ಉಗ್ರರು ರಾಕೆಟ್ ದಾಳಿ ನಡೆಸಿದ್ದಾರೆ.
ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹಲವಾರು ರಾಕೆಟ್ ದಾಳಿ ನಡೆದಿರುವ ವಿಷಯವನ್ನು ವಿಮಾನ ನಿಲ್ದಾಣದ ಅಕಾರಿಗಳು ದೃಢಪಡಿಸಿದ್ದಾರೆ ಎಂದು ಟೋಲೋ ವಾರ್ತಾ ವಾಹಿನಿ ದೃಢಪಡಿಸಿದೆ. ಈ ದಾಳಿಯ ನಂತರ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ 12ಕ್ಕೂ ಹೆಚ್ಚಿನ ವಿಮಾನಗಳ ಪ್ರಯಾಣವನ್ನು ರದ್ದು ಮಾಡಲಾಗಿದೆ. ದಾಳಿಯಿಂದ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಅಫ್ಘಾನಿಸ್ತಾನದ ಮಾಧ್ಯಮ ಮೂಲಗಳ ಪ್ರಕಾರ ಕಾಬೂಲ್ ವಿಮಾನ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ೨೦-೩೦ರಷ್ಟು ರಾಕೆಟ್ ದಾಳಿ ನಡೆದಿದೆ. ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೇ ಇರುವ ನ್ಯಾಟೋದ ನೆಲೆಯೇ ಈ ರಾಕೆಟ್ ದಾಳಿಯ ಪ್ರಮುಖ ಗುರಿಯಾಗಿತ್ತು ಎನ್ನಲಾಗಿದೆ. ಈ ಘಟನೆಯ ನಂತರ ವಿಮಾನ ನಿಲ್ದಾಣದ ಅಕಾರಿಗಳು ಹಾಗೂ  ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಿದ್ದಾರೆ.
ಗಿಲಾನಿ ಜೊತೆ ಮಾತುಕತೆ 
ಮ್ಯಾಟೀಸ್ ತಮ್ಮ ಭೇಟಿಯ ಸಂದರ್ಭದಲ್ಲಿ ನ್ಯಾಟೋದ ಕಾರ್ಯದರ್ಶಿ ಜನರಲ್ ಜೇನ್ಸ್ ಸ್ಟೋಲ್ಟೆನ್‌ಬರ್ಗ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಉಗ್ರ ಸಂಘಟನೆಗಳ ವಿರುದ್ಧ ಅಪ್ಘಾನ್ ಸೈನ್ಯದ ಯುದ್ಧನೀತಿಗಳ ಕುರಿತಂತೆ ಅಪ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಗಿಲಾನಿ ಜೊತೆ ಮಾತುಕತೆ ನಡೆಸಿದ್ದಾರೆ.
ದಾಳಿಕೊರರಿಗಾಗಿ ಹುಡುಕಾಟ 
ರಾಕೆಟ್ ದಾಳಿಯ ನಂತರ ವಿಮಾನ ನಿಲ್ದಾಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಗುಂಡಿನ ಚಕಮಕಿಯ ಶಬ್ದ ಕೇಳಿಸಿದೆ. ಸಣ್ಣ ಪ್ರಮಾಣದಲ್ಲಿ ಬೆಂಕಿಯೂ ಕಾಣಿಸಿಕೊಂಡಿದೆ. ತದನಂತರದಲ್ಲಿ ಮಿಲಿಟರಿ ಹೆಲಿಕಾಪ್ಟರ್‌ಗಳು ಈ ಪ್ರದೇಶದಲ್ಲಿ ಹಾರಾಟ ಕೈಗೊಂಡು ಪರಿಸ್ಥಿತಿಯನ್ನು ಅವಲೋಕಿಸಿವೆ ಎಂದು ಹೇಳಲಾಗಿದೆ. ಇನ್ನು ಭದ್ರತಾ ಪಡೆಗಳು ದಾಳಿ ನಡೆಸಿದವರಿಗಾಗಿ ಹುಡುಕಾಟವನ್ನು ಕೈಗೊಂಡಿವೆ. ಯಾವುದೇ ಉಗ್ರ ಸಂಘಟನೆಗಳು ಈ ದಾಳಿಯ ಹೊಣೆಯನ್ನು ಇದುವರೆಗೂ ಹೊತ್ತುಕೊಂಡಿಲ್ಲ.
ಗೌಪ್ಯವಾಗಿದ್ದ ಭೇಟಿ 
ದಾಳಿಯ ಸಂಭಾವ್ಯತೆಯನ್ನು ಅರಿತ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟೀಸ್ ಯಾವುದೇ ಮಾಹಿತಿಯನ್ನು ನೀಡದೆ ಅಪ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದರು. ಆದರೂ ಕೂಡ ನಿಲ್ದಾಣದ ಮೇಲೆ ದಾಳಿ ನಡೆದಿದೆ. ಎರಡು ದಿನಗಳ ಅವಗೆ ಭಾರತಕ್ಕೆ ಭೇಟಿ ನೀಡಿದ್ದ ಜೇಮ್ಸ್ ಮ್ಯಾಟೀಸ್, ಅಮೆರಿಕಕ್ಕೆ ಹಿಂತಿರುಗುವ ಸಂದರ್ಭದಲ್ಲಿ ಅಪ್ಘಾನಿಸ್ತಾನಕ್ಕೆ ಭೇಟಿ ನೀಡಿ, ಅಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ನ್ಯಾಟೋದ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸುವ ಹಾಗೂ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಗಿಲಾನಿ ಜೊತೆ ಮಾತನಾಡುವ ಯೋಜನೆ ಹಾಕಿಕೊಂಡಿದ್ದರು. ಅಮೆರಿಕದ ರಾಜತಾಂತ್ರಿಕರು ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಗ್ರರು ದಾಳಿ ನಡೆಸಬಹುದು ಎನ್ನುವ ಅನುಮಾನದ ಮೇಲೆ ಈ ವಿಷಯವನ್ನು ಗೌಪ್ಯವಾಗಿ ಇರಿಸಲಾಗಿತ್ತು.

LEAVE A REPLY