ಪಾಕ್ ಅಧಿಕಾರಿಗಳ ಮನೆ, ಜಮೀನು ಟಾರ್ಗೆಟ್ : ಭಾರತೀಯ ಸೈನಿಕರಿಂದ ಆಪರೇಷನ್ ಅರ್ಜುನ್

ಹೊಸದಿಲ್ಲಿ : ಗಡಿಯಾಚೆಗಿಂದ ಜಮ್ಮು-ಕಾಶ್ಮೀರದ ನಿವಾಸಿಗಳ ಮೇಲೆ ಗುಂಡಿನ ದಾಳಿ ನಡೆಸಿ, ಮುಗ್ಧ ನಾಗರಿಕರನ್ನು ಹತ್ಯೆ ಮಾಡುತ್ತಿರುವ ಪಾಕಿಸ್ತಾನದ ಸೈನಿಕರ ವಿರುದ್ಧ ತೊಡೆತಟ್ಟಿ ನಿಂತಿರುವ ಗಡಿ ಭದ್ರತಾ ಪಡೆ, ಆಪರೇಷನ್ ಅರ್ಜುನ ಎಂಬ ವಿಶಿಷ್ಟ ದಾಳಿಯ ಮೂಲಕ ಪ್ರತ್ಯುತ್ತರ ನೀಡಿದೆ.
ಲೈನ್ ಆಫ್ ಕಂಟ್ರೋಲ್ ಆಚೆ ಇದ್ದ ಪಾಕಿಸ್ತಾನದ ಸೈನ್ಯಾಧಿಕಾರಿಗಳ ಮನೆಗಳು ಹಾಗೂ ಜಮೀನುಗಳನ್ನು ಗುರಿಯಾಗಿರಿಸಿಕೊಂಡು ಗಡಿಭದ್ರತಾ ಪಡೆ ತೀವ್ರ ಸ್ವರೂಪದ ದಾಳಿಯನ್ನು ಕೈಗೊಂಡಿದೆ.
ಆಪರೇಷನ್ ಅರ್ಜುನ ಹೆಸರಿನ ಈ ದಾಳಿಯು ಪಾಕಿಸ್ತಾನದ ನಿವೃತ್ತ ಅಧಿಕಾರಿಗಳ ನಿವಾಸ, ಐಎಸ್‌ಐ ಹಾಗೂ ಪಾಕಿಸ್ತಾನಿ ರೇಂಜರ್‌ಗಳನ್ನು ಗುರಿಯಾಗಿ ಇರಿಸಿಕೊಂಡು ನಡೆಸಲಾಗುತ್ತಿದೆ. ಗಡಿಯಲ್ಲಿ ಶಾಂತಿಯನ್ನು ಕದಡುವ ನಿಟ್ಟಿನಲ್ಲಿ ಪದೇ ಪದೇ ಕಿರಿಕಿರಿ ಮಾಡುವ ಹಾಗೂ ಸ್ನೈಪರ್‌ಗಳನ್ನು ಬಳಕೆ ಮಾಡುವ ಮೂಲಕ ಭಾರತೀಯ ನಾಗರಿಕರು ಹಾಗೂ ಜವಾನರನ್ನು ಹತ್ಯೆ ಮಾಡುತ್ತಿರುವ ಪಾಕಿಸ್ತಾನಿ ಸೈನ್ಯಕ್ಕೆ ಈ ಮೂಲಕ ತಕ್ಕ ಉತ್ತರವನ್ನು ಗಡಿ ಭದ್ರತಾ ಪಡೆಯ ಯೋಧರು ನೀಡುತ್ತಿದ್ದಾರೆ. ಭಾರತದ ಗಡಿಭದ್ರತಾ ಪಡೆಗಳ ಪ್ರತ್ಯುತ್ತರದಿಂದ ಕಂಗಾಲಾಗಿರುವ ಪಾಕಿಸ್ತಾನ ತಾತ್ಕಾಲಿಗವಾಗಿ ಗಡಿಯಲ್ಲಿ ಕಿರಿ ಕಿರಿ ಮಾಡುವುದನ್ನು ನಿಲ್ಲಿಸಿದೆ.
ಪಾಕಿಸ್ತಾನದ ಸೈನ್ಯದ ನಿವೃತ್ತ ಅಧಿಕಾರಿಗಳಿಗೆ, ಐಎಸ್‌ಐ ಅಧಿಕಾರಿಗಳಿಗೆ ಹಾಗೂ ರೇಂಜರ್ಸ್‌ಗೆ ಲೈನ್ ಆಫ್ ಕಂಟ್ರೂಲ್ ಪ್ರದೇಶದಲ್ಲಿ ಪಾಕಿಸ್ತಾನವು ಜಮೀನನ್ನು ನೀಡಿದೆ. ಜಮೀನುಗಳಲ್ಲಿರುವವರು ಮನೆ ಕಟ್ಟಿಕೊಂಡಿದ್ದಾರೆ. ಜೊತೆಗೆ ವಿವಿಧ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಇದನ್ನು ಗುರಿಯಾಗಿಸಿ ಇರಿಸಿಕೊಂಡು ಭಾರತೀಯ ಸೈನ್ಯವು ದಾಳಿ ಮಾಡಿದೆ. ಗಡಿಯ ತನಕ ಮನೆ ಕಟ್ಟಿಕೊಂಡಿರುವ ಸೈನಿಕರು ಭಾರತದೊಳಕ್ಕೆ ಉಗ್ರರು ನುಸುಳುವುದಕ್ಕೆ ಸಹಾಯ ಮಾಡುತ್ತಿದ್ದರು. ಉಗ್ರ ನಿಗ್ರಹ ಕಾರ್ಯದ ಒಂದು ಭಾಗವಾಗಿ ಈ ಕಾರ್ಯಾಚರಣೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಭಾರತದ ಸೈನಿಕರ ಮೇಲೆ ಪಾಕಿಸ್ತಾನ ನಡೆಸಿದ ದಾಳಿಯನ್ನು ನಿಲ್ಲಿಸುವಂತೆ ಪಾಕಿಸ್ತಾನದ ಪಂಜಾಬ್ ರೇಂಜರ್ಸ್ ಡಿಜಿಯಾಗಿರುವ ಜನರಲ್ ಅಸ್ಗರ್ ನವೀದ್ ಹಯಾತ್ ಖಾನ್ ಅವರಿಗೆ ಬಿಎಸ್‌ಎಫ್ ನಿರ್ದೇಶಕ ಕೆ. ಕೆ. ಶರ್ಮಾ ಅವರಿಗೆ ಕಳೆದೊಂದು ವಾರದಿಂದೀಚೆಗೆ ಎರಡು ಸಾರಿ ದೂರವಾಣಿ ಕರೆ ಮಾಡಿ ಆಗ್ರಹಿಸಿದ್ದರು. ಅಲ್ಲದೆ, ಪಾಕಿಸ್ತಾನದ ಗುಂಡಿನ ದಾಳಿಯ ವಿರುದ್ಧ ಭಾರತ ಪ್ರತಿಭಟನೆಯನ್ನೂ ಕೈಗೊಂಡಿತ್ತು. ಇದಕ್ಕೆ ಯಾವುದೇ ಸ್ಪಂದನೆ ನೀಡದ ಕಾರಣ ಭಾರತ ಆಪರೇಷನ್ ಅರ್ಜುನ್ ಮೂಲಕ ಪ್ರತ್ಯುತ್ತರ ನೀಡಿದೆ.
ದಾಳಿ ಪರಿಣಾಮ ಏನು ?
ಆಪರೇಷನ್ ಅರ್ಜುನ್ ದಾಳಿಯಲ್ಲಿ ಭಾರತದ ಸೈನಿಕರು ಚಿಕ್ಕ, ಮಧ್ಯಮ ಹಾಗೂ ಪ್ರಾದೇಶಿಕ ಆಯುಧಗಳನ್ನು ಬಳಕೆ ಮಾಡಿದ್ದಾರೆ. ಭಾರತದ ದಾಳಿಯಿಂದಾಗಿ ಗಡಿಯಾಚೆ ಭಾರೀ ಹಾನಿಯಾಗಿದೆ. ಪಾಕ್‌ನ 7 ಸೈನಿಕರು ಹಾಗೂ 11 ನಾಗರಿಕರು ಸಾವಿಗೀಡಾಗಿದ್ದಾರೆ. ಪಾಕಿಸ್ತಾನ ಸೈನ್ಯದ ಹಾಗೂ ರೇಂಜರ್ಸ್‌ನ ಹಲವು ಔಟ್‌ಪೋಸ್ಟ್ ಗಳು ನಾಶವಾಗಿದೆ. ಇವುಗಳನ್ನು ದೂರಗಾಮಿ ೮೧ಎಂಎಂ ಮೂಲಕ ನಾಶಪಡಿಸಲಾಗಿದೆ ಎಂದು ಹೇಳಲಾಗಿದೆ.
ಕದನ ವಿರಾಮ ಉಲ್ಲಂಘನೆ
ಆಪರೇಷನ್ ಅರ್ಜುನ್ ಮೂಲಕ ಭಾರತವು ಗಡಿಯಾಚೆಗಿರುವ ಪಾಕ್ ಸೈನಿಕರ ಹೆಡೆಮುರಿ ಕಟ್ಟುತ್ತಿದ್ದರೆ ಜಮ್ಮು-ಕಾಶ್ಮೀರದ ಪೂಂಛ್ ವಲಯದಲ್ಲಿ ಬುಧವಾರ ಪಾಕ್ ಮತ್ತೊಮ್ಮೆ ಭಾರತದ ಸೈನಿಕರ ಪೋಸ್ಟ್ ಮೇಲೆ ದಾಳಿ ನಡೆಸುವ ಮೂಲಕ ಕ್ಯಾತೆ ತೆಗೆದಿದೆ. ಲೈನ್ ಆಫ್ ಕಂಟ್ರೂಲ್‌ನಲ್ಲಿ ಪಾಕ್ ಸೈನಿಕರು ಮುಂಜಾನೆ 8.15ರ ಸಮಯದಲ್ಲಿ ಅಪ್ರಚೋದಿತವಾಗಿ ಗುಂಡನ್ನು ಹಾರಿಸಿದ್ದಾರೆ. ಇದರಲ್ಲಿ ಇಬ್ಬರು ಭಾರತೀಯ ಯೋಧರು ಗಾಯಗೊಂಡಿದ್ದಾರೆ. ಪಾಕ್‌ನ ಗುಂಡಿನ ದಾಳಿಗೆ ಭಾರತ ತಕ್ಕ ಉತ್ತರವನ್ನು ನೀಡಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

LEAVE A REPLY