ಹಫೀಜ್, ಎಲ್‌ಇಟಿ ದೇಶಕ್ಕೆ ದೊಡ್ಡ ಹೊರೆ: ಸತ್ಯ ಒಪ್ಪಿಕೊಂಡ ಖ್ವಾಜಾ

ಹೊಸದಿಲ್ಲಿ: ಉಗ್ರ ಹಫೀಜ್ ಸಯೀದ್ ಮತ್ತು  ಉಗ್ರ ಸಂಘಟನೆ ಲಷ್ಕರ್-ಎ-ತೊಬಾ(ಎಲ್‌ಇಟಿ) ನಮ್ಮ ದೇಶಕ್ಕೂ, ದಕ್ಷಿಣ ಏಶ್ಯಾ ಪ್ರದೇಶಕ್ಕೂ ದೊಡ್ಡ ಹೊರೆ ಎಂದು ಪಾಕಿಸ್ತಾನದ ವಿದೇಶ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.
ಆ ಮೂಲಕ ಪಾಕಿಸ್ತಾನ ಕೊನೆಗೂ ಸತ್ಯವೊಂದನ್ನು ಒಪ್ಪಿಕೊಂಡಂತಾಗಿದೆ. ಎಲ್‌ಇಟಿ ಬಹಿಷ್ಕೃತ ಸಂಘಟನೆಯಾದರೆ ಉಗ್ರ ಸಯೀದ್ ಗೃಹಬಂಧನಕ್ಕೊಳಗಾಗಿದ್ದಾನೆ. ಪಾಕಿಸ್ತಾನಕ್ಕೆ ಬಿಕ್ಕಟ್ಟಿನ ಕಾಲಗಳಲ್ಲಿ ಪಾತಕಿ ಸಯೀದ್‌ನಂತಹ ದೇಶಭ್ರಷ್ಟ ಹೊರೆ ಎನಿಸಿದ ಜನರು ಹಲವರು ಇದ್ದಾರೆ. ರಾಷ್ಟ್ರಕ್ಕೆ ಅವರು ಹೊರೆ ಎಂಬ ನಿಮ್ಮ ಅಭಿಪ್ರಾಯಕ್ಕೆ ತಾನು ಸಹಮತ ಹೊಂದಿದ್ದಾಗಿ ಖ್ವಾಜಾ ಆಸಿಫ್ ನ್ಯೂಯಾರ್ಕ್‌ನಲ್ಲಿ ಏಷ್ಯಾ ಸೊಸೈಟಿಯಲ್ಲಿ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಅಭಿಪ್ರಾಯಪಟ್ಟರು.
ಪಾಕಿಸ್ತಾನ ಭಯೋತ್ಪಾದನೆ ನಿಗ್ರಹಿಸುವ ಕಾರ್ಯಗಳನ್ನು ಮುಂದುವರಿಸುತ್ತದೆ ಎಂದಿರುವ ಆಸಿಫ್ ಇದೇನು ಸುಲಭದ ಕೆಲಸವಲ್ಲ. ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕಲು ಸಾಕಷ್ಟು ಅವಧಿ ಹಾಗೂ ಸಂಪತ್ತು ಅತ್ಯಗತ್ಯ ಎಂದರು.
ಭಯೋತ್ಪಾದನೆ ನಿಗ್ರಹ ಕಾರ್ಯದಲ್ಲಿ ಪಾಕಿಸ್ತಾನ ಸ್ತುತ್ಯರ್ಹ ಪಾತ್ರ ನಿರ್ವಹಿಸಿದೆ ಎಂದು ಹೇಳಿ ಆಸಿಫ್, ಭಾವಪೂರಿತರಾಗಿ ತನ್ನ ದೇಶವನ್ನು ಸಮರ್ಥಿಸಿದರು. ಕಳೆದ ೨೦ಕ್ಕೂ ಹೆಚ್ಚು ವರ್ಷಗಳಲ್ಲಿ  ಪಾಕಿಸ್ಥಾನದಲ್ಲಿ  ಭಯೋತ್ಪಾದನೆ ಬೆಳೆದು ಮಹಾಶಕ್ತಿಯಾಗಿ ಉದ್ದಗಲಕ್ಕೂ ಹರಡಿದೆ. ಇದನ್ನು ಥಟ್ಟಂತ ನಾಶಪಡಿಸುವುದು ಅಸಾಧ್ಯದ ಮಾತು. ಇದಕ್ಕೆ ಹೆಚ್ಚಿನ ಕಾಲಾವಕಾಶ ಮತ್ತು ಹೇರಳ ನಿ ಅಗತ್ಯವಾಗಿದೆ ಎಂದು ಆಸಿಫ್ ತನ್ನ ಸರಕಾರದ ನಿಲುವನ್ನು ಸಮರ್ಥಿಸಿದರು.
೧೯೮೦ರ ದಶಕದಲ್ಲಿ  ಸೋವಿಯತ್‌ಗಳ ವಿರುದ್ಧ ಅಫಘಾನಿಸ್ಥಾನ್‌ನಲ್ಲಿ  ನಡೆದ ಛಾಯಾ ಸಮರದಲ್ಲಿ  ಅಮೆರಿಕವನ್ನು ತಪ್ಪಾಗಿ ಬೆಂಬಲಿಸಿದ್ದರಿಂದ ಪಾಕಿಸ್ತಾನ ದುಬಾರಿ ಬೆಲೆ ತೆತ್ತಿದೆ. ಈ ಸಂಘರ್ಷದ ಕಾಲದಲ್ಲೇ ಜಿಹಾದಿ ಉಗ್ರರಿಂದ ತೀವ್ರ ಸ್ವರೂಪದ ಶಕ್ತಿ ಅಮೆರಿಕ ಮತ್ತು ಪಾಕಿಸ್ತಾನ ಉಭಯ ದೇಶಗಳಲ್ಲಿ  ಸಂಚಯವಾಗಿತ್ತೆಂದು ಆಸಿಫ್ ಹೇಳಿದರು.
ರಾತ್ರಿ ಬೆಳಗಾಗುವುದರೊಳಗೆ ಭಯೋತ್ಪಾದನೆಯ ಹುಟ್ಟಡಗಿಸಲು ಸಾಧ್ಯವಿಲ್ಲ ಎಂದ ಆಸಿಫ್ ಅದಕ್ಕಾಗಿ ಸಮಯಾವಕಾಶ ಬೇಕಾಗಿದೆ. ಪಾಕಿಸ್ತಾನ ಭಯೋತ್ಪಾದನೆ ಸರ್ವನಾಶ ಮಾಡಿಯೇ ತೀರುತ್ತದೆ ಎಂದರು.
ನಿಮ್ಮ ಪ್ರೀತಿಪಾತ್ರನಾಗಿದ್ದ!
ಹಫೀಜ್ ಸಯೀದ್‌ಗಾಗಿ ಈಗ ನಮ್ಮನ್ನು ದೂರಬೇಡಿ. ೨೦ ವರ್ಷಗಳ ಹಿಂದೆ ಇದೇ ಸಯೀದ್ ನಿಮ್ಮ ಪ್ರೀತಿಪಾತ್ರನಾಗಿದ್ದನೆಂದು ಆಸಿಫ್ ಅಮೆರಿಕದ ನಿಂದನೆಗೆ ವಿಶ್ವಸಂಸ್ಥೆಯಲ್ಲಿ ಕಿಡಿ ಕಾರಿದ್ದಾರೆ.
ರಷ್ಯಾವನ್ನು ಒದ್ದೋಡಿಸುವಲ್ಲಿ  ನಮ್ಮ ಮಿತ್ರ ಅಮೆರಿಕಕ್ಕೆ ಇದೇ ಜಿಹಾದಿಗಳು ಅಂದು ಬೇಕಾಗಿತ್ತು. ಈಗ ನಮ್ಮತ್ತ ಬೆರಳು ತೋರಿಸಿ ನೀವೇ ಜಿಹಾದಿಗಳಿಗೆ ಆಶ್ರಯ ನೀಡಿ ನೀರೆರೆದು ಪೋಷಿಸಿದ್ದೀರಿ ಎಂದು ನಮ್ಮನ್ನೇ ಅಮೆರಿಕ ಜರೆಯುತ್ತಿದೆ. ಇಂದು ಅದೇ ತಿರುಗು ಮುರುಗಾದ ಪರಿಸ್ಥಿತಿಗೆ ನಾವು ಕೊರಳೊಡ್ಡಬೇಕಾಗಿದೆ ಎಂದು ಆಸಿಫ್ ಹೇಳಿದ್ದಾರೆ.

LEAVE A REPLY