ರಾಷ್ಟ್ರ ಸೇವಿಕಾ ಸಮಿತಿ ಸದ್ದಿಲ್ಲದ ದೃಢ ಹೆಜ್ಜೆಗಳ ಸಾಲು

81 ವರ್ಷಗಳ ಹಿಂದೆ ವಿಜಯದಶಮಿಯಂದು ನಾಗಪುರದ ವಾರ್ಧಾದಲ್ಲಿ ಲಕ್ಷ್ಮೀಬಾಯಿ ಕೇಳ್ಕರ್ ಅವರು ಆರಂಭಿಸಿದ ‘ರಾಷ್ಟ್ರ ಸೇವಿಕಾ ಸಮಿತಿ’ ದೇಶದಲ್ಲಿ ಮಹಿಳೆಯರ ನಡುವೆ ಮೌನ ಕ್ರಾಂತಿ ನಡೆಸುತ್ತಿರುವ ಅತಿ ದೊಡ್ಡ ಸಂಘಟನೆ. 16 ವಿದೇಶಗಳಲ್ಲೂ ಸಮಿತಿಯ ಚಟುವಟಿಕೆಗಳು ನಡೆಯುತ್ತಿವೆ. ತೆರೆಯ ಮರೆಯಲ್ಲಿ ಅದ್ಭುತ ಕಾರ್ಯ ನಿರ್ವಹಿಸುತ್ತಿರುವ ಸಮಿತಿಯ ಕುರಿತ ಪುಟ್ಟ ಚಿತ್ರಣವಿದು.

 • ಶಾರದಾ ವಿ. ಮೂರ್ತಿ
  ಕ್ರಿಸ್ತಶಕ 1919ರ ಸಂದರ್ಭ. ವರದಕ್ಷಿಣೆಯ ಪಿಡುಗು ಸಮಾಜದಲ್ಲಿ ವಿಜೃಂಭಿಸುತ್ತಿದ್ದ ಕಾಲ. ಆಗ ಹದಿಮೂರರ ಹುಡುಗಿ ತಾಯಿಯ ಹತ್ತಿರ ಖಡಾಖಂಡಿತವಾಗಿ ಹೇಳಿಬಿಡುತ್ತಾಳೆ. ವರದಕ್ಷಿಣೆ ತೆಗೆದುಕೊಂಡು ಮದುವೆಯಾಗುವ ಸಂಬಂಧ ನನಗೆ ಬೇಡವಮ್ಮ.
  ಮತ್ತೊಂದು ಘಟನೆ. 1924ರಲ್ಲಿ ವಾರ್ಧಾದಲ್ಲಿ ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ದೊಡ್ಡ ಸಭೆ. ಆ ದಿನಗಳಲ್ಲಿ ಹೆಚ್ಚಿನ ಮನೆಗಳಲ್ಲಿ ಮಹಿಳೆಯರಿಗೆ ಹೊರಗೆ ಹೋಗುವುದಕ್ಕೆ ಅನುಮತಿ ಇರುತ್ತಿರಲಿಲ್ಲ. ಹಾಗಿರುವಾಗ ಮನೆಯವರನ್ನೆಲ್ಲಾ ಸ್ನೇಹ ಹಾಗೂ ಪ್ರೀತಿಯಿಂದ ಗೆದ್ದು ಆ ಸಭೆಗೆ ಹೋಗಲು ಒಪ್ಪಿಗೆ ಪಡೆದುಕೊಳ್ಳುತ್ತಾರೆ. ಅಲ್ಲಿಯ ಸ್ಫೂರ್ತಿದಾಯಕ ಭಾಷಣಗಳಿಂದ ಪ್ರಭಾವಿತರಾಗಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಸ್ವಾತಂತ್ರ್ಯ ನಿಗಾಗಿ ಅರ್ಪಿಸಿಬಿಡುತ್ತಾರೆ. ಜೊತೆಯಲ್ಲಿದ್ದ ಬಾಲಕಿಯೂ ಚಿಕ್ಕಮ್ಮನನ್ನೇ ಅನುಸರಿಸುತ್ತಾಳೆ.
  ಮತ್ತೊಂದು ಸಂದರ್ಭ. ಭಾರತದ ಪ್ರತಿಯೊಬ್ಬ ಸ್ತ್ರೀಯೂ ಸೀತೆಯಾಗಬೇಕು. ಸೀತೆಯ ಪಾವಿತ್ರ್ಯ, ಆತ್ಮಬಲ, ನಿಷ್ಠೆ ಮತ್ತು ಪ್ರೇರಣಾ ಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಸ್ತ್ರೀ ಸೀತೆಯಾದಾಗ ಪುರುಷ ರಾಮನಾಗೇ ಆಗುತ್ತಾನೆ ಎಂಬ ಗಾಂಧೀಜಿ ಮಾತು ಆಕೆಯ ಮನಸ್ಸಿನಲ್ಲಿ ಗಾಢ ಪರಿಣಾಮ ಬೀರುತ್ತದೆ. ಸೀತೆಗೆ ರಾವಣನಿಂದ ಕಿರುಕುಳ, ಅಪಮಾನವಾದಾಗಲೆಲ್ಲಾ ತನ್ನ ಆತ್ಮಬಲದಿಂದಲೇ ಸ್ವರಕ್ಷಣೆ ಮಾಡಿಕೊಂಡಳಲ್ಲ… ಅಂತಹ ಆತ್ಮಬಲ ಸಮಾಜದಲ್ಲಿ ಎಲ್ಲರಲ್ಲೂ ಜಾಗೃತವಾಗಬೇಕು ಎಂಬ ದೃಢ ನಿರ್ಧಾರ ಮನದಲ್ಲಿ ಗಟ್ಟಿಗೊಳ್ಳುತ್ತದೆ.
  ಎಲ್ಲರ ಒಳಿತಿಗಾಗಿ ಶ್ರಮಿಸುವ ಕಾಳಜಿ ಇರುವ ವಂದನೀಯ ಲಕ್ಷ್ಮೀಬಾಯಿ ಕೇಳ್ಕರ್ ಅಂತಹವರಿಗೆ ಮಾತ್ರವೇ ಇಂತಹ ಚಿಂತನೆಗಳು, ಆಲೋಚನೆಗಳು ಮನದಲ್ಲಿ ದಾಂಗುಡಿಯಿಡಲು ಸಾಧ್ಯ. 1936ರ ಅಕ್ಟೋಬರ್ 25ರ ವಿಜಯದಶಮಿಯ ಶುಭದಿನ ರಾಷ್ಟ್ರೀಯ, ಸಾಮಾಜಿಕ, ಸಾಸ್ಕೃತಿಕ ಚಿಂತನೆಯುಳ್ಳ ಮಹಿಳಾ ಸಂಘಟನೆಯಾದ ‘ರಾಷ್ಟ್ರ ಸೇವಿಕಾ ಸಮಿತಿ’ ಸ್ಥಾಪಿಸಿದರು. ಇದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕರಾದ ಡಾ. ಹೆಡ್ಗೇವಾರರ ಮಾರ್ಗದರ್ಶನ ಪಡೆದರು. ಮಹಿಳೆಯರಿಗೆ ಉತ್ತಮ ಸಂಸ್ಕಾರ ಕೊಟ್ಟು ದೇಶಸೇವೆಗಾಗಿ ಅಣಿಗೊಳಿಸುವ ಮಹತ್ತರ ಹೊಣೆಯನ್ನು ಹೊಂದಿದ್ದರು ವಂದನೀಯ ಲಕ್ಷ್ಮೀಬಾಯಿಯವರು. ಶಾಖಾ ಮಾಧ್ಯಮದ ಮೂಲಕ ಸಮಿತಿಯು ವ್ಯಕ್ತಿನಿರ್ಮಾಣ ಮಾಡಬೇಕು. ರಾಷ್ಟ್ರಭಕ್ತಿ, ಆತ್ಮವಿಶ್ವಾಸ, ಆತ್ಮೀಯತೆ, ಪರಸ್ಪರ ಸ್ನೇಹಭಾವ, ಹಾಗೂ ಸಮರಸತೆಯಂತಹ ಉನ್ನತ ಗುಣಗಳು ಶಾಖೆಯ ಮೂಲಕ ಸೇವಿಕೆಯರಿಗೆ ಲಭ್ಯವಾಗಬೇಕು. ಇಂತಹ ಧ್ಯೇಯವನ್ನು ಹೊಂದಿದ್ದ ಲಕ್ಷ್ಮೀಬಾಯಿಯವರ ಶ್ರಮ ಸಾಫಲ್ಯಗೊಂಡಿತು. ಅವರ ಕರ್ತೃತ್ವ ಶಕ್ತಿ, ಆತ್ಮ ಸ್ಥೈರ್ಯ, ಆತ್ಮವಿಶ್ವಾಸ, ಪರಿಶ್ರಮ ದಿಂದಾಗಿ ಯೋಜನೆ ಯಶಸ್ವಿಯಾಗತೊಡಗಿತ್ತು. ಪ್ರೀತಿಯ ‘ಮೌಂಶೀಜಿ’ಯಾಗಿ ಸಂಘಟನೆಯನ್ನು ಮುನ್ನಡೆಸಿದರು.
  ಮೃದು-ಮಧುರ ಸ್ವಭಾವ, ನಯವಾದ ಮಾತು, ಗುಣಗ್ರಾಹಿತ್ವ, ಸ್ನೇಹಪೂರ್ಣ ನಡವಳಿಕೆಯಿಂದಾಗಿ ದೇಶ ವಿದೇಶಗಳಲ್ಲಿ ಸಮಿತಿಯ ಕಾರ್ಯವಿಸ್ತಾರವನ್ನು ಮಾಡಿದರು.
  ಸಮಯ ಪಾಲನೆಯನ್ನು ಗಂಭೀರವಾಗಿ ಪರಿಗಣಿಸದ ಮಹಿಳಾ ಸಮಾಜದ ಕಾರ್ಯಕ್ರಮಕ್ಕೆ ಮೌಂಶೀಜಿ ಅಧ್ಯಕ್ಷರಾಗಿ ಹೋಗಿದ್ದರು. ಸಮಾಜದ ಸದಸ್ಯೆಯರು ವೇಳೆ ಮೀರಿ ಬಂದಾಗ ಅವರು ಕಂಡಿದ್ದೇನು? ಅಂದಿನ ಅಧ್ಯಕ್ಷೆಯಾಗಿರುವವರೇ ಸ್ಥಳವನ್ನು ಶುದ್ಧೀಕರಿಸಿ, ಜಮಖಾನೆ ಹಾಸಿಟ್ಟಿರುವುದನ್ನು ನೋಡಿ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದರು.
  ೧೯೪೭ರ ದೇಶ ವಿಭಜನೆಯ ಸಮಯದಲ್ಲಂತೂ ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ಕರಾಚಿಯ ಸಿಂಧ್ ಪ್ರಾಂತಕ್ಕೆ ಹೋಗಿ ಅಲ್ಲಿ ಭಯಾನಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಸೋದರಿಯರಿಗೆ ಧೈರ್ಯ ತುಂಬಿ ಬಾರತಕ್ಕೆ ಬರುವಂತೆ ಕರೆಕೊಟ್ಟರು. ಹಾಗೆ ಬಂದವರಿಗೆ ಸಂಪೂರ್ಣ ರಕ್ಷಣೆಯನ್ನೂ ಕೊಡಲಾಯಿತು.
  1937 ರಲ್ಲಿ ವಾರ್ಧಾದಲ್ಲಿ 40 ದಿನಗಳ ಸಮಿತಿಯ ಪ್ರಶಿಕ್ಷಣ ವರ್ಗವನ್ನು ಅಚ್ಚುಕಟ್ಟಾಗಿ ನಡೆಸಲಾಯಿತು. ಅನೇಕ ಸೇವಾ ಪ್ರಕಲ್ಪಗಳೂ ನಡೆಯತೊಡಗಿದವು. ಮೌಂಶೀಜಿಯವರ ಸಮಾನ ಮನಸ್ಕರಾದ ವಂದನೀಯ ಸರಸ್ವತಿ ತಾಯಿ ಆಪ್ಟೆ ಸಂಘಟನೆ ಬೆಳೆಸುವುದರಲ್ಲಿ ಸಂಪೂರ್ಣ ಸಹಕಾರ ನೀಡಿದರು. ಮೌಂಶೀಜಿ ಹಾಗೂ ತಾಯೀಜಿಯವರು ರಾಷ್ಟ್ರೋನ್ನತಿಗಾಗಿ ಸಮಿತಿಯನ್ನು ಮುನ್ನಡೆಸಿದರು. ಮಹಿಳೆಯರ ಅಂತಶಕ್ತಿಯನ್ನು ದೇಶಕಾರ್ಯದಲ್ಲಿ ತೊಡಗಿಸುವಂತೆ ಮಾಡಿದರು. ಪ್ರಶಸ್ತಿ, ಪ್ರಚಾರದ ಹಂಗಿರದೆ, ಎಡರು-ತೊಡರುಗಳಿಗೆ ಅಂಜದೆ ನಿಸ್ವಾರ್ಥವಾಗಿ ದುಡಿಯುತ್ತಾ ಸೇವಿಕೆಯರನ್ನು ಹುರಿದುಂಬಿಸಿದರು.
  ಸ್ತ್ರೀ ರಾಷ್ಟ್ರದ ಆಧಾರ ಶಕ್ತಿ ಎಂಬ ಸಂಘಟನೆಯ ಮೂಲ ಸೂತ್ರವನ್ನು ಒಳಗೊಂಡಂತೆ ನಮ್ಮ ಗೌರವಶಾಲೀ ಇತಿಹಾಸ, ಹಾಗೂ ಸಮಿತಿಯ ಪ್ರತೀಕಗಳ ಕುರಿತು ಬೌದ್ಧಿಕ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿತ್ತು. 1978ರಲ್ಲಿ ವಂ. ವಶೀಜಿಯವರು ಸ್ವರ್ಗಸ್ಥರಾದ ಬಳಿಕ, ವಂ.ಸರಸ್ವತಿ ತಾಯಿ ಆಪ್ಟೆಯವರು ದ್ವಿತೀಯ ಪ್ರಮುಖ ಸಂಚಾಲಿಕಾ ಆಗಿ ಸಂಘಟನೆಯ ನೇತೃತ್ವ ವಹಿಸಿದರು.
  ಅಸ್ಸಾಂ ಉಗ್ರಗಾಮಿ ಚಟುವಟಿಕೆಗಳಿಗೆ ಅಂಜದೆ, ತಾಯೀಜಿಯವರು ಅಲ್ಲಿಯೂ ಸಮಿತಿಯ ಕಾರ್ಯವನ್ನು ವಿಸ್ತರಿಸಿದರು. ಸಮರ್ಥ ಮಾರ್ಗದರ್ಶನದಿಂದಾಗಿ, ಸಮಿತಿಯ ಕಾರ್ಯಕರ್ತೆಯರ ಪರಿಶ್ರಮದಿಂದಾಗಿ ಅಸ್ಸಾಂನಲ್ಲಿ ಸಮಿತಿಯ ಕಾರ್ಯ ಅತ್ಯಂತ ಸ್ತುತ್ಯರ್ಹವಾಗಿದೆ. ಅಸ್ಸಾಂನ ಮಹಿಳೆಯರಲ್ಲಿ ಜಾಗೃತಿ, ಕೆಚ್ಚು, ಸ್ವರಕ್ಷಣೆಯ ಪಾಠವನ್ನು ಬಿತ್ತಿರುವುದಕ್ಕೆ ಸರಸ್ವತಿ ತಾಯೀಜಿಯವರ ಧೈರ್ಯ ಹಾಗೂ ಸಮಯೋಚಿತ ನಿಲುವು ಕಾರಣವಾಗಿದೆ.
  ಚಟುವಟಿಕೆಗಳು
  ನಮ್ಮ ದೇಶದಲ್ಲಿ 950 ಕ್ಕೂ ಹೆಚ್ಚು ಸೇವಾ ಚಟುವಟಿಕೆಗಳನ್ನು ಸಮಿತಿಯ ವತಿಯಿಂದ ನಡೆಸಲಾಗುತ್ತಿದೆ. ದೇಶದಾದ್ಯಂತ ವಿದ್ಯಾರ್ಥಿನಿಯರಿಗಾಗಿ ಉಚಿತ ವಸತಿ ನಿಲಯಗಳು, ಗ್ರಾಮಗಳ ಪುನರ್ನಿರ್ಮಾಣ, ಮಹಿಳೆಯರಿಗೆ ವಿದ್ಯೆ, ಆರೋಗ್ಯ, ನೈರ್ಮಲ್ಯ, ಸ್ವಾವಲಂಬನೆ, ಸಂಸ್ಕಾರ, ಪರಿಸರದ ಬಗ್ಗೆ ಕಾಳಜಿ, ಸಾಂಸ್ಕೃತಿಕ-ಆಧ್ಯಾತ್ಮಿಕ ಚಟುವಟಿಕೆಗಳು, ಕೊಳೆಗೇರಿಗಳಲ್ಲಿ ಸಂಸ್ಕಾರ ಕೇಂದ್ರಗಳು, ಶಿಶು ವಿಹಾರಗಳು, ಬುದ್ಧಿಮಾಂದ್ಯ ಮಕ್ಕಳಿಗೆ ಶಿಕ್ಷಣ, ಹೀಗೆ ವಿವಿಧ ಪ್ರಕಲ್ಪಗಳನ್ನು ನಡೆಸುತ್ತಿದೆ. ಗುಜರಾತ್ ಭೂಕಂಪ, ಅಸ್ಸಾಂ ಪ್ರವಾಹ, ಚೆನ್ನೈ ಸುನಾಮಿ, ನೇಪಾಳದಲ್ಲಿ ಪ್ರವಾಹ, ಕೇದಾರನಾಥದಲ್ಲಿ ಮೇಘಸೋಟದಂತಹ ಪ್ರಕೃತಿವಿಕೋಪದ ಸಂದರ್ಭಗಳಲ್ಲಿ ಸಮಿತಿ ತಕ್ಷಣ ಸ್ಪಂದಿಸಿದೆ. ಸದಭಿರುಚಿಯ ಪ್ರೇರಣಾದಾಯಕ ಸಾಹಿತ್ಯ ಹಾಗೂ ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಸೇವಿಕಾ ಪ್ರಕಾಶನದ ಮೂಲಕ ನಾನಾ ಭಾಷೆಗಳಲ್ಲಿ ಪ್ರಕಟಿಸಲಾಗುತ್ತಿದೆ. ದೇಶಕ್ಕೆ ಮಾರಕವೆನಿಸುವ, ರಾಷ್ಟ್ರ ಘನತೆಗೆ ಕುಂದುಂಟುಮಾಡುವ ವಿಷಯಗಳ ವಿರುದ್ಧವಾಗಿ ಸಮಿತಿಯು ಅಭಿಯಾನವನ್ನು ಕೈಗೊಳ್ಳುತ್ತಿದೆ.

LEAVE A REPLY