ಫರಂಗಿಪೇಟೆ ಗ್ಯಾಂಗ್‌ವಾರ್: ಇನ್ನು ಎರಡೇ ದಿನದಲ್ಲಿ ಹಂತಕರ ಬಂಧನ?

ಬಂಟ್ವಾಳ: ಫರಂಗಿಫೇಟೆಯಲ್ಲಿ ಸೋಮವಾರ ರಾತ್ರಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಕಲೆಹಾಕುವಲ್ಲಿ ಜಂಟಿ ಪೊಲೀಸ್ ತಂಡ ಯಶಸ್ವಿಯಾಗಿದೆ.
ಆರೋಪಿಗಳ ಸ್ಪಷ್ಟ ಸುಳಿವನ್ನು ಪಡೆದಿರುವ ಪೊಲೀಸ್ ತಂಡ, ಒಂದೆರಡು ದಿನಗಳಲ್ಲಿ ಆರೋಪಿಗಳನ್ನು ತಮ್ಮ ಬಲೆಗೆ ಕೆಡವಿ ಹಾಕುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.
ಆರೋಪಿಗಳ ಪತ್ತೆಗಾಗಿ ಡಿಸಿಐಬಿ, ಸಿಸಿಬಿ ಹಾಗೂ ಬಂಟ್ವಾಳ ಇನ್‌ಸ್ಪೆಕ್ಟರ್ ಅವರ ನೇತೃತ್ವದ ಮೂರು ತಂಡವನ್ನು ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ರಚಿಸಿದ್ದರು. ಕೃತ್ಯದ ಬಳಿಕ ಹಂತಕರು ಕಾಸರಗೋಡು ಮೂಲಕ ಕೇರಳಕ್ಕೆ ಪರಾರಿಯಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಂಡಿದ್ದ ಡಿಸಿಐಬಿ, ಸಿಸಿಬಿ ತಂಡವು ಆರೋಪಿಗಳ ಸುಳಿವನ್ನು ಪತ್ತೆಹಚ್ಚಿ ಬಂಧನ ಕಾರ್ಯಾಚರಣೆಗೆ ಬಲೆ ಬೀಸಿದೆ.
ಸೋಮವಾರ ರಾತ್ರಿ ಫರಂಗಿಪೇಟೆ ಪೊಲೀಸ್ ಹೊರಠಾಣೆಯ ಪಕ್ಕದಲ್ಲೇ ಅಡ್ಯಾರ್ ಕಣ್ಣೂರಿನ ನೌಫಲ್ ಸೇರಿದಂತೆ ೭ ಮಂದಿಯ ತಂಡ ಇನ್ನೋವಾ ಹಾಗೂ ಪಿಕಪ್‌ಲ್ಲಿ ಆಗಮಿಸಿ ಅಡ್ಯಾರ್‌ಕಟ್ಟೆಯ ಝಿಯಾ ಮತ್ತಾತನ ಸ್ನೇಹಿತರಿದ್ದ ಶಿಫ್ಟ್ ಕಾರನ್ನು ತಡೆದು ತಲವಾರು ದಾಳಿ ನಡೆಸಿದ್ದರು. ಪರಿಣಾಮ ಝಿಯಾ ಹಾಗೂ ಫಯಾಝ್ ಸಾವಿಗೀಡಾಗಿದ್ದರು. ಅನೀಸ್, ಮುಶ್ತಾಕ್,ಫಝಲ್ ಎಂಬವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಪೈಕಿ ಅನೀಸ್, ಮುಶ್ತಾಕ್ ಸ್ಥಿತಿ ಇನ್ನೂ ಕೂಡ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಗಾಯಾಳು ಫಝಲ್ ಚೇತರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

LEAVE A REPLY