ವಂಶಾಡಳಿತವೇ  ಕಾಂಗ್ರೆಸ್ ಮೂಲ ಸಿದ್ಧಾಂತವಾಗಿ ಈಗಲೂ  ಉಳಿದಿದೆ!

  • ಎಸ್. ಶಾಂತಾರಾಮ್
ರಾಷ್ಟ್ರೀಯ ವಿಚಾರಗಳಿಲ್ಲದೇ ಇದ್ದರೆ  ಯಾವುದೇ ರಾಜಕೀಯ ಪಕ್ಷಕ್ಕೆ  ಕುಟುಂಬ ರಾಜಕಾರಣವೇ  ಅನಿವಾರ್ಯವಾಗುತ್ತದೆ ಎನ್ನಲು  ಇತ್ತೀಚೆಗೆ  ರಾಹುಲ್ ಗಾಂಧಿ ವಂಶಪಾರಂಪರ್ಯ ರಾಜಕಾರಣವನ್ನು ಸಮರ್ಥಿಸಿಕೊಂಡಿರುವುದೇ ಸಾಕ್ಷಿಯಾಗಿದೆ.ರಾಹುಲ್ ಗಾಂಧಿ ಅವರು  ಇದನ್ನು  ಸಮರ್ಥಿಸಿಕೊಳ್ಳಲು ಉದ್ಯಮ ಮತ್ತು  ಚಿತ್ರೋದ್ಯಮದಲ್ಲಿನ  ವಂಶಾಡಳಿತವನ್ನು  ಪ್ರಸ್ತಾಪಿಸಿ ರುವುದಂತೂ  ಹಾಸ್ಯಾಸ್ಪದವೇ ಸರಿ. ಅಂಬಾನಿ, ಅಮಿತಾಬ್ ಬಚ್ಚನ್ ಮುಂತಾದ ನಿದರ್ಶನಗಳನ್ನು ನೀಡಿ ಕಾಂಗ್ರೆಸ್ ಪಕ್ಷದೊಳಗಿರುವ ಕುಟುಂಬ ರಾಜಕಾರಣವನ್ನೇ  ವೈಭವೀಕರಿಸಲು  ರಾಹುಲ್ ಯತ್ನಿಸಿದ್ದಾರೆ. ಭವಿಷ್ಯದಲ್ಲಿ  ದೇಶದ ಅತ್ಯುನ್ನತ ಸ್ಥಾನಕ್ಕೇರುವ ಹಂಬಲದೊಂದಿಗೆ ಹೊರಟಿರುವ ರಾಹುಲ್, ಅಕಸ್ಮಾತ್ ಆ  ಹುದ್ದೇಗೇರಿದ್ದೇ ಆದಲ್ಲಿ  ದೇಶವನ್ನು  ಯಾವ ದಾರಿಯಲ್ಲಿ  ಒಯ್ಯುತ್ತಾರೆ ಎನ್ನುವುದು  ಈಗ ಸ್ಪಷ್ಟವಾಗಿದೆ. ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ  ಎಲ್ಲಾ ಸಮುದಾಯದ ಪ್ರತಿನಿಧಿತ್ವ ಹೊಂದಿರಬೇಕಾದ ರಾಷ್ಟ್ರೀಯ ಪಕ್ಷವೊಂದು ಕುಟುಂಬ ರಾಜಕೀಯ ಅನಿವಾರ್ಯ ಎಂದು ಪ್ರತಿಪಾದಿಸುವುದೇ  ದೊಡ್ಡ ದುರಂತ.
ಅತ್ಯಂತ ಹಿರಿಯ ಪಕ್ಷ ತಮ್ಮದು  ಎಂದು  ಹೇಳಿಕೊಳ್ಳುವ ಕಾಂಗ್ರೆಸ್ಸಿನ  ಇತರ ನಾಯಕರೂ ಕೂಡ ರಾಹುಲ್ ಅವರ ಮಾತಿಗೆ  ಆಕ್ಷೇಪವನ್ನು ಎತ್ತದೇ  ಮೌನ ವಹಿಸಿರುವುದಂತೂ  ಅಚ್ಚರಿಯ ಸಂಗತಿ.ಕಾಂಗ್ರೆಸ್ ಪಕ್ಷದಲ್ಲಿ  ರಾಹುಲ್ ಅವರಿಗಿಂತ ಅರ್ಹತೆಯಿರುವ ಅದೆಷ್ಟೋ  ನಾಯಕರಿದ್ದಾರೆ ಎನ್ನುವ ಅಂಶವನ್ನು ಆ ಪಕ್ಷವೇ  ಗುರ್ತಿಸಲು  ಸಿದ್ಧವಿಲ್ಲ.ಮೇಲಾಗಿ  ಕುಟುಂಬ ರಾಜಕಾರಣದಿಂದ ಹೊರಬರಲು  ಆ ಪಕ್ಷದ ಮುಖಂಡರಿಗೇ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ.ರಾಹುಲ್ ಬದಲು  ಕಾಂಗ್ರೆಸ್ ಅಧ್ಯಕ್ಷನಾಗುವ ಸಾಮರ್ಥ್ಯ ತನಗಿದೆ ಎಂದು  ಧೈರ್ಯವಾಗಿ  ಹೇಳುವ ಒಬ್ಬ ನಾಯಕನೂ  ಈ ದೇಶದ ಜನರಿಗೆ ಕಾಣುತ್ತಿಲ್ಲ.ಅರ್ಧ ಶತಮಾನಕ್ಕೂ  ಹೆಚ್ಚು ಆಡಳಿತ ನಡೆಸಿ  ಇದಕ್ಕಿಂತ ಶೋಚನೀಯ ಪರಿಸ್ಥಿತಿ  ಎದುರಿಸುತ್ತಿರುವ   ರಾಜಕೀಯ ಪಕ್ಷವೊಂದು  ಅಸ್ತಿತ್ವದಲ್ಲಿರುವುದು ಸಾಧ್ಯವಿದೆಯೇ?
ಇದುವರೆಗೂ  ನೆಹರೂ ಕುಟುಂಬದಿಂದ ಹೊರಬರುವುದು  ಕಾಂಗ್ರೆಸ್ ಪಕ್ಷಕ್ಕೆ  ಅಸಾಧ್ಯ ಎನ್ನುವುದು  ಜನರಿಗೆ ತಿಳಿದೇ ಇತ್ತು.ಆದರೆ  ವಂಶಪಾರಂಪರ್ಯದ ವ್ಯವಸ್ಥೆಯನ್ನೇ ಕಾಂಗ್ರೆಸ್ ಗಟ್ಟಿಯಾಗಿ  ಅಪ್ಪಿಕೊಂಡಿದೆ, ಅದೇ  ಆ ಪಕ್ಷದ ಮೂಲ ಧ್ಯೇಯ ಎನ್ನುವ ಅಂಶವನ್ನು  ರಾಹುಲ್ ಗಾಂಧಿ ಈಗ ಸ್ಪಷ್ಟಪಡಿಸಿದ್ದಾರೆ. ಇಂದು ರಾಷ್ಟ್ರೀಯ ಪಕ್ಷವೊಂದು  ನರೇಂದ್ರ ಮೋದಿ  ಅವರ ನಾಯಕತ್ವದ ಮುಂದೆ  ಅತ್ಯಂತ ಕಳಾಹೀನವಾಗಿ  ಗೋಚರವಾಗಲು  ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತ ಕಾಲಬಾಹಿರವಾಗಿರುವುದೇ ಕಾರಣ.
ಹಿಂದೆ  ಒಮ್ಮೆ ಮಾತ್ರ  ಸೀತಾರಾಂ ಕೇಸರಿ ಅವರಂತಹ ನೇತಾರನನ್ನು  ಕಾಂಗ್ರೆಸ್ ಪಕ್ಷ ತನ್ನ  ರಾಷ್ಟ್ರೀಯ ಅಧ್ಯಕ್ಷನನ್ನಾಗಿ  ಮಾಡಿತ್ತು.ಅದಾದ ನಂತರ ನೆಹರು ಕುಟುಂಬದ ಕುಡಿಗಳಿಗೆ  ಆ  ಹುದ್ದೆಯನ್ನು  ಮೀಸಲಿಡಲಾಗಿದೆ.ಈಗಲೂ  ರಾಹುಲ್ ಅವರ ಪಟ್ಟಾಭಿಷೇಕಕ್ಕೆ ಕಾಂಗ್ರೆಸ್‌ನಲ್ಲಿ  ರಾಜಕೀಯ ಜೋರಾಗಿಯೇ ನಡೆಯುತ್ತಿದೆ.ಮೋದಿ  ಅವರ ಮುಂದೆ  ರಾಹುಲ್ ಅದೆಷ್ಟು  ಪ್ರಭಾವಿಯಾಗಿ  ಪಕ್ಷವನ್ನು  ಸಂಘಟಿಸಬಲ್ಲರು ಎನ್ನುವುದನ್ನು  ದೇಶದ ಜನರು ಈಗಾಗಲೇ  ನೋಡಿದ್ದಾರೆ,ನೋಡುತ್ತಲೂ  ಇದ್ದಾರೆ.ಈಗ ರಾಹುಲ್ ಅವರನ್ನೇ ಕಾಂಗ್ರೆಸ್ ಪಕ್ಷ  ತನ್ನ  ಸರ್ವಸಮ್ಮತದ ನಾಯಕನೆಂದು  ಘೋಷಿಸಿದರೆ  ದೇಶದಲ್ಲಿ  ಅಧಿಕಾರ ಗಳಿಸುವ ಆ ಪಕ್ಷದ ಕನಸು  ನನಸಾದಂತೆಯೇ  ಸರಿ!
ಜಾತ್ಯತೀತತೆಯೇ  ತನ್ನ  ಮೂಲಭೂತ ನಂಬಿಕೆ ಎಂದು  ನಿಜ ವಾಗಿಯೂ  ಕಾಂಗ್ರೆಸ್ ಪಕ್ಷವಿಂದು  ಹೇಳಲು  ಸಾಧ್ಯವಿದೆಯೇನು? ಜಾತೀಯತೆಯಿಂದ ದೂರವಿರುವ ಪಕ್ಷವು   ನಾಯಕತ್ವವೊಂದನ್ನು  ಬಿಟ್ಟು  ಬೇರೆಲ್ಲವನ್ನೂ ಎಲ್ಲಾ ಜಾತಿಗಳಿಗೆ ಹಂಚಿದೆ ಎನ್ನುವುದನ್ನೂ ಒಪ್ಪೋಣ. ಆದರೆ ಪಕ್ಷವು  ಅತ್ಯಂತ ಕಳಾಹೀನವಾಗಿ ಜನರಿಗೆ  ಕಾಣಿಸುತ್ತಿರುವ ಈ ಸಂದರ್ಭದಲ್ಲಾದರೂ  ಪಕ್ಷಕ್ಕೆ ಪುನಶ್ಚೇತನ ನೀಡುವ ಪ್ರಯತ್ನ  ನಡೆಯಬೇಕಾಗಿತ್ತು. ಅಂತಹ ಯಾವುದೇ  ಪ್ರಯತ್ನವೂ  ಕಾಂಗ್ರೆಸ್‌ನಲ್ಲಿ  ನಡೆಯುತ್ತಿಲ್ಲ.
ಹೊಸ ಪೀಳಿಗೆಯ ಜನರನ್ನು  ಗಮನದಲ್ಲಿಟ್ಟು  ಬಿಜೆಪಿ ರೂಪಿಸುತ್ತಿರುವ ರಾಜಕೀಯ ತಂತ್ರಗಾರಿಕೆಗೂ ಅದೇ  ಹಳೇ  ವ್ಯವಸ್ಥೆಯನ್ನೇ  ವೈಭವೀಕರಿಸುವ ಕಾಂಗ್ರೆಸ್ ಸಂಸ್ಕೃತಿಗೂ  ಇರುವ ಅಜಗಜಾಂತರ ವ್ಯತ್ಯಾಸ ಎಲ್ಲರಿಗೂ  ಸ್ಪಷ್ಟವಾಗಿ  ಗೋಚರಿಸುತ್ತಿದೆ.ಆದರೆ ಕಾಂಗ್ರೆಸ್ ಪಕ್ಷದ ಇತರ ನಾಯಕರು ಅದೇಕೆ  ವಾಸ್ತವಾಂಶ ವನ್ನು ಮಾತನಾಡುವ ಧೈರ್ಯ ತೋರುತ್ತಿಲ್ಲ ಎನ್ನುವುದು  ಅರ್ಥವಾಗುತ್ತಿಲ್ಲ.
ಜೈರಾಮ್ ರಮೇಶ್ ಅವರಂತಹ ನಾಯಕರು  ಹೊಸ ಬಗೆಯ ರಾಜಕಾರಣಕ್ಕೆ  ಕಾಂಗ್ರೆಸ್ ಪಕ್ಷ ತೆರೆದುಕೊಳ್ಳಬೇಕು ಎಂದು  ಬಹಿರಂಗ ಹೇಳಿಕೆ ನೀಡುತ್ತಾರೆ.ಆದರೆ  ಅದಾದ ನಂತರ ಅಂತಹ ಧ್ವನಿಯನ್ನು  ಉಡುಗಿಸಲು  ಆ ಪಕ್ಷದಲ್ಲಿ  ಪೈಪೋಟಿ  ನಡೆಯುತ್ತದೆ! ಪರಿಣಾಮವಾಗಿ ರಾಹುಲ್ ಗಾಂಧಿಯವರೇ  ಕುಟುಂಬ  ರಾಜಕಾರಣ ಭಾರತದಲ್ಲಿ  ಅತ್ಯಂತ ಸಾಮಾನ್ಯ ಎನ್ನುವ ಷರಾ ಬರೆಯುತ್ತಾರೆ.ಇನ್ನು ಭಾರತ  ರಾಷ್ಟ್ರೀಯ ಕಾಂಗ್ರೆಸ್  ಭಾರತೀಯರಿಗೆ ಹತ್ತಿರವಾಗಿ  ಉಳಿಯುವ ಪ್ರಶ್ನೆ ಎಲ್ಲಿ ಉದ್ಭವವಾಗುತ್ತದೆ?
ಕಾಂಗ್ರೆಸ್ಸಿನ ಒಳತುಮುಲಗಳೇ  ಇಂದು  ಬಿಜೆಪಿಗೆ  ಒಂದೊಂದೇ ರಾಜ್ಯವನ್ನು ತನ್ನ  ಒಡಲಲ್ಲಿ  ಹಾಕಿಕೊಳ್ಳುವ ಸನ್ನಿವೇಶ ಸೃಷ್ಟಿಸುತ್ತಿದೆ.  ಭಾರತೀಯ ಜನತೆಗೆ ಬಿಜೆಪಿ ಹತ್ತಿರವಾಗುತ್ತಿದ್ದರೆ ಕಾಂಗ್ರೆಸ್ ಜನರಿಂದ ದೂರವಾಗಿ  ಕೇವಲ ನಾಯಕರ ಪಕ್ಷವಾಗುತ್ತಿದೆ. ವಂಶಾಡಳಿತವನ್ನು ಸಮರ್ಥಿಸುವವರೇ  ಪಕ್ಷವನ್ನು ಜನರಿಂದ ದೂರ ಮಾಡುತ್ತಿದ್ದಾರೆ.ಕುಟುಂಬಕ್ಕೆ  ಮಾತ್ರವೇ  ಆದ್ಯತೆ ಎಂದ ಮೇಲೆ  ಕಾಂಗ್ರೆಸ್ ಪಕ್ಷದಲ್ಲಿ  ತಮಗೇನು ಕೆಲಸ ಎಂದು  ಆ ಪಕ್ಷದಲ್ಲಿರುವ ಕಾರ್ಯಕರ್ತರು ಭಾವಿಸಿದರೆ ಅಚ್ಚರಿಯೇನೂ ಇಲ್ಲವಷ್ಟೇ.
ಕಾಂಗ್ರೆಸ್ ಪಕ್ಷವಿಂದು  ಶಾಸನಸಭೆಗಳಲ್ಲಿ ಮಾತ್ರವೇ  ದುರ್ಬಲವಾಗುತ್ತಿಲ್ಲ. ಪಕ್ಷದ ಸಂಘಟನೆಯ ದೃಷ್ಟಿಯಿಂದಲೂ  ದುರ್ಬಲಗೊಳ್ಳುತ್ತಲೇ  ಸಾಗುತ್ತಿದೆ. ಇದಕ್ಕೆ  ಗಂಭೀರ ಕಾರಣವನ್ನು ಹುಡುಕಬೇಕಾದ ಅಗತ್ಯವೂ ಇಲ್ಲ. ಪಕ್ಷಕ್ಕೆ ಹೊಸ ಸ್ವರೂಪ ನೀಡುವ ನಾಯಕರ ಕೊರತೆಯಿಂದ ಕಾಂಗ್ರೆಸ್ ದಿನೇ ದಿನೇ ಸೊರಗುತ್ತಲೇ ಇದೆ.ರಾಹುಲ್ ಗಾಂಧಿ  ಅವರು  ಆ ಪಕ್ಷಕ್ಕೆ ಪುನಶ್ಚೇತನ ನೀಡುತ್ತಾರೆ ಎನ್ನುವ ನಂಬಿಕೆ  ಆ ಪಕ್ಷದೊಳಗಿರುವವರಿಗೇ  ಇಲ್ಲ. ಇನ್ನು  ದೇಶದ ಜನರು ಕಾಂಗ್ರೆಸ್ ಪುನಶ್ಚೇತನಗೊಳ್ಳುತ್ತದೆ ಎಂದು  ನಂಬುವ ಪ್ರಶ್ನೆಯೇ ಅಪ್ರಸ್ತುತ.
ಜನರ ಮುಂದೆ  ಯಾವುದಾದರೂ  ಗಂಭೀರ ವಿಷಯಗಳನ್ನು  ಪ್ರಸ್ತಾಪಿಸಿದರೆ  ಅದರಿಂದ ಪ್ರಭಾವಿತರಾಗುವ ವಾತಾವರಣ
 ಈಗಲೂ ಇದೆ.ಆದರೆ  ಕಾಂಗ್ರೆಸ್ ಪಕ್ಷ  ಕೇವಲ ವಂಶಾಡಳಿತದ ಪ್ರತಿಪಾದನೆಯ ಮೂಲಕವೇ  ಪಕ್ಷದ ಏಳಿಗೆ  ಕಾಣುವ ವಿಫಲ ಯತ್ನ  ನಡೆಸಿದೆ.

LEAVE A REPLY